Friday, December 31, 2010

ಬಾಲಿಶ ಕವನಗಳು !! 12 ಒಂದು ನೀರವ ಸಂಜೆ

ಒಂದು ನೀರವ ಸಂಜೆ
ಮೋಡ ಚದುರಿದ ಗಗನ
ಕತ್ತಲೆಯ ಛಾಯೆಯಿದೆ ಬೆಳಕ ಹಿಂದೆ
ಮರದ ಗೂಡುಗಳಿಂದ
ಹಕ್ಕಿಗಳ ಉಲಿಯಿಲ್ಲ
ಬೇಸರದ ಭಾವವಿದೆ ಮನದ ಮುಂದೆ
 
ಎಲ್ಲೋ ಮಿಂಚಿನ ಬೆಳಕು
ಎಲ್ಲೋ ಮನಸಿನ ಅಳುಕು
ಬಾರನೇ ಶಶಿ ಇರುಳು ಸಂಜೆ ದೂಡಿ
ಕಾಯುತಿಹೆ ಪ್ರತಿ ದಿನವು
ನೆನಪೆಂಬ ಜಿನಿ ಮಳೆಗೆ
ಮನಸಿನೊಳ ಬಯಕೆ ರಾಡಿ
 
ಹಳೆಯ ಪುಟಗಳ ನಡುವೆ
ಹೊಸದೊಂದು ಅಧ್ಯಾಯ
ಈಗ ನಾ ಬರೆಯಲಾರೆ
ನಿನಗಾಗಿ ಹಂಬಲಿಸೋ
ಈ ಹುಚ್ಚು ಮನಸಿಗೆ
ನಾ ಬೇಡಿ ತೊಡಿಸಲಾರೆ
 
 
ISHWARA BHAT K
08.12.2004

ನನ್ನ ಹಾಡು ..

ಅಚಾನಕ್ಕಾಗಿ ಭೂಮಿಗೆ ಬಿದ್ದ ಬೀಜ..
ಪ್ರೀತಿ ತುಂಬಿದ ಕಪ್ಪು ಮಣ್ಣಿನ ಕಂಪು
ರೋಷ ತುಂಬಿದ ಮುಗಿಲಿಗೆ ತಂಪು ಗಾಳಿಯ ತೀಡಿ 
ಬರಸೆಳೆದು, ನನ್ನನ್ನು ಇಲ್ಲಿಯೇ ಬಚ್ಚಿಟ್ಟಿತು.
ನಾನಾದೆ ಮೂಕ , ಪ್ರೀತಿಯಪ್ಪುಗೆಗೆ ಸಿಲುಕಿ 
ಆ ಮಣ್ಣ ಕಂಪಲ್ಲಿ ಆ ಮುಗಿಲ ಕೆಂಪಿಂದ
ಉಸಿರೊಡೆದೆನು, ಹಾಗೆಯೇ ಹಸಿರೊಡೆದೆನು.

ಅದೆ ಮಣ್ಣು ಅದೆ ಮುಗಿಲು ಮತ್ತೆಯೂ ನನ್ನನ್ನು
ಪ್ರೀತಿಸಿತು ಬದುಕಿಸಿತು ಬೆಳೆಯಲಂತೆ.
ಬಾಗಿದರೆ ಸಣ್ಣ ಕೋಲೆತ್ತಿ ನಿಲಿಸಿದಳು 
ಪ್ರೀತಿ ತುಂಬಿದ ಗೀತೆ ಮತ್ತೆ ಮತ್ತೆ .


ಬಂದ ಬೇರುಗಳೆಲ್ಲ ಅಮ್ಮನಾ ಎದೆಯೊಳಗೆ 
ಆಳದಾಳಕೆ ಇಳಿದು ಸೇರಿಬಿಟ್ಟೆ .
ಕಾಂಡ ಬಲಿಯಿತು , ಹಳೆಯ ಕೊಳೆಗಳ ತೊಳೆದೆ 
ಮತ್ತೆ ಮುಗಿಲಿನ ಕಡೆಗೆ ನೋಟವಿಟ್ಟೆ.


ಬೇರು ಮಣ್ಣಲೇ ಬಿಟ್ಟು ಮೇಲೇಳುತಿಹೆ ನೋಡು 
ಅಲ್ಲೇ ಇರಬೇಕೆನ್ನ ಮುಂದಿನ ಮರೆ.
ಗಾಳಿ ಹೊಯ್ದಾಡಿದರೆ ನಾನು ಹೊಯ್ದಾಡುವೆನು
ಕೇಳಲಾರೆನು ಮತ್ತೆ ಕೋಲಿನ ಸೆರೆ .


ಮಣ್ಣು ಬಯಸಿತು ಪ್ರೀತಿ ಮುಗಿಲಂತೆ ಮಳೆಯಂತೆ 
ಈ ಮರವು ನನಗಿನ್ನು ನೆರಳಾಗಲಿ.
ನನ್ನ ಸತ್ವದ ಫಲವ ಬೇರುಗಳ ಮೂಲಕವೇ
ಹೀರಿದುದು ಸಾಕಿನ್ನು ಕೊನೆಯಾಗಲಿ. 


ನನಗೋ ಬೆಳೆಯುವ ಆಸೆ ಮಣ್ಣೇನು ಮುಗಿಲೇನು 
ನಾನು ಬೆಳೆಯುವೆ ನಿಮ್ಮ ಹೀರಿಕೊಂಡೇ.
ನನಗೊಂದು ಕನಸುಂಟು ಆ ಮುಗಿಲ ಧರೆಗೆಳೆದು 
ಇರಿಸುವೇನು ಇಲ್ಲಿಯೇ ಓಡದಂತೆ.


ನನಗೀಗ ಹೊಸ ಹುರುಪು ತುಂಬೆಲ್ಲ ಹೊಸ ಚಿಗುರು 
ಮತ್ತೆಯೋ ನಾಳೆಯೋ ಹೊಸ ಹೂಗಳು .
ಕಾಯಿಗಳ ಹಣ್ಣುಗಳ ಉದುರಿಸುವೆ ನಿನಗಾಗಿ 
ನೀ ಬೆಳೆಸು, ಮತ್ತೆ ಕರೆ ಪ್ರೀತಿ ಮುಗಿಲು .


ನೀ ಕೊಟ್ಟೆ ನಾ ಬೆಳೆದೆ, ನಾ ಕೊಡದೆ ನೀ ಬೆಳೆವೆ 
ನಿನಗೇನೂ ಹೊರೆಯಲ್ಲ ಈ ನೊಗಗಳು
ಮತ್ತೆ ಚಕ್ರವ ತಿರುಗಿ, ಮತ್ತೆ ಪ್ರೀತಿಗೆ ಕರಗಿ 
ನಾ ಬಾರೆ ನಿನ್ನಲ್ಲಿ ಮಗುವಾಗಲು ..
ನಾ ಬಾರೆ ನಿನ್ನಲ್ಲಿ ಮಗುವಾಗಲು ..     


ISHWARA BHAT K
18 - 06- 2007

ಬಾಲಿಶ ಕವನಗಳು !! 11 ಭಗ್ನ ಪ್ರೇಮಿಗೆ !!

ಅವಳೊಲವು ಕಡಲಲ್ಲ ಬರೆ ಹರಿವ ನೀರು
ಮರೆತು ಬಿಡು ನೀನೆಳೆದ ಪ್ರೇಮದಾ ತೇರು
 
ಮಾವು ಪ್ರೀತಿಯ ಕರೆಗೆ ಬೇವು ಬೆರಸಿದೆ ವಿರಸ
ಹರಿಸಿದೆಯ ಕಣ್ಣೀರ ಕೋಡಿ ಮಳೆಯ .
ಇಲ್ಲಿ ಒಲವೀಗಿಲ್ಲ, ಮರೆಸುವುದು ಸಿಹಿ ಬೆಲ್ಲ
ಏಕೆ ಕಾಯುವೆ ನೀನು ಎಲ್ಲ ಸಮಯ ?

ಮನಸು ಕನ್ನಡಿ ಹಾಗೆ, ಒಡೆದು ಹೋಗಿದೆ ಬಿಂಬ
ಯಾಕಿಟ್ಟೆ ಎದೆಗೂಡ ಚಿಪ್ಪಿನೊಳಗೆ ?
ನಿನ್ನೊಲವ ಹಾದಿಯನು ಅವಳೆ ಮರೆತಿಹ ಮೇಲೆ
ಹಿತವಿಹುದೆ ಕಾಯುವಾ ಪ್ರೀತಿಯೊಳಗೆ ?

ಹಗಲು ಅರಳಿದ ಹೂವು ಅದೆ ಸಂಜೆ ಬಾಡುವುದು
ಪ್ರೇಮ ಅಮರವೆ ಹೇಳು ಬಾಳಿನಲ್ಲಿ ?
ನಿನ್ನ ನಲಿವನೆ ಕಿತ್ತು ನೋವ ಮುಳ್ಳಿರಿಸಿದ
ಆ ಪ್ರೇಮ ಮರೆತುಬಿಡು ನೋವಿನಲ್ಲಿ .

ಹರಿವ ನೀರದು ಮತ್ತೆ ಸಾಗರವ ಸೇರುವುದು
ಪ್ರೀತಿ ಬದುಕಿನ ಬದುಕು , ಪ್ರೀತಿಯೊಂದೇ.
ನಿನ್ನ ಕಾಯುವ ಕನಸು ವ್ಯರ್ಥವಾಗದೆ ಇರಲಿ
ಫಲಿಸಲಿ ನನ್ನೆದೆಯ ಹರಕೆಯಿಂದೇ .


ISHWARA BHAT K
೩೧-೦೧-೨೦೦೫

Thursday, December 30, 2010

ಬಾಲಿಶ ಕವನಗಳು !! 10 ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ
ಸುತ್ತುವರಿಯುತ ಅವಳ ಕಾಣಿಸುವುದು
ಅವಳೆದುರು ಬಂದಾಗ ಮಾತಿರದೆ ಮೌನದಲಿ
ಕಣ್ಣ ನೀಲಿಯೇ ನನ್ನ ಮೀಯಿಸುವುದು


ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ
ಮರೆತು ಹೋಗುವುದೆನ್ನ ಕನಸ ಬುತ್ತಿ
ಬೇಸರವೇ ಜಾರುವುದು ಅವಳ ಸಾಮೀಪ್ಯದಲಿ
ಮತ್ತೆ ಬರುವುದು ಕನಸು ಸುತ್ತಿ ಸುತ್ತಿ


ನಿಜವಾದ ಚೆಲುವನ್ನು ಹೊಗಳಲಾರದೆ ನಾನು
ಮರುಗುವೆನು ಅವಳಿರುವ ಎಲ್ಲಾ ಕ್ಷಣವು
ಜಲದ ನಾದದ ದನಿಯು ನನ್ನೆದುರು ಕುಣಿವಾಗ
ಎಲ್ಲಿಯೋ ಅಡಗುವುದು ನನ್ನ ಸ್ವರವು


ಹಾದಿಯಲಿ ನಡೆವಾಗ ಅವಳ ಹೆಜ್ಜೆಯ ಹುಡುಕಿ
ಹೋಗುವುದು ಅವಳಿರದ ವೇಳೆಯಲ್ಲಿ
ಜೊತೆಯಲ್ಲಿ ಇರುವಾಗ ಹೇಗೆ ನಡೆಯಲಿ ನಾನು
ಹಿಂದೆ ನಡೆವೆನು ಸೋತ ಭಾವದಲ್ಲಿ 


Ishwara Bhat (Kirana)

ಬಾಲಿಶ ಕವನಗಳು !! 9 ನಾನು ಮತ್ತು ಗಿಳಿ !!


ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ
ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ 
ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು 
ಈ ಹಕ್ಕಿ ಎಸ್ಟೊಂದು ಚೆನ್ನ
ಪ್ರಕೃತಿದೇವಿಗೆ ನನ್ನದೊಂದು ನಮನ


ಅಷ್ಟು ಸ್ನೇಹಿಯೇ ನಾನು ?
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕಿ
ಹೆದರದೇ ಕುಳಿತಿದೆಯಲ್ಲ
ಸವಿಯ ಭಾವವ ತುಂಬಿ ಹರಸುತ್ತಿದ್ದೇನೆ !!

                       ೨
ಸರಿಯಾಗಿ ನೋಡಿದರೆ 
ಸಣ್ಣ ಮೆಣಸಿನ ಬೀಜ ಕೊಕ್ಕಂಚಿನಲ್ಲಿ 
ನಾನು ಸಾಕಿದ ಗಿಡದ್ದೇ ಇರಬೇಕು .!
ಹಾಳು ಹಕ್ಕಿ ! ಬಿಡಲೇಬಾರದು ಇದನು
ಕೈಗೆ ಸಿಕ್ಕಿದ್ದನ್ನೆಸೆದೆ .

ಹಾರಿಹೋಯಿತೆ ಗಿಳಿ ಛೆ !?
ಸರಿಯಾಗಿ ಬೀಳಬೇಕಿತ್ತು ಪೆಟ್ಟು 
ಇನ್ನೊಮ್ಮೆ ಬರಲಿ ಎಂದು 
ಕಲ್ಲು ಕೈಯೊಳಗಿಟ್ಟು ಕಾಯುತ್ತಿದ್ದೇನೆ !!


ISHWARA BHAT K
೨೦-೦೨-೨೦೦೫

Wednesday, December 22, 2010

ಬಾಲಿಶ ಕವನಗಳು !! 8 ಬರಬೇಕೆಂದರೆ ಬರದಿಹ ಮನಸೇ

ಬರಬೇಕೆಂದರೆ ಬರದಿಹ ಮನಸೇ 
ಏಕೆ ಕಾಡುವೆಯೋ ಹೀಗೆ ?
ಇರಬೇಕೆನಿಸುವ ಕನಸುಗಳೆಲ್ಲ 
ಜಾರಿ ಹೋಗುವುದು ಹೇಗೆ?


ಮಾವಿನ ಮರದಲಿ ಹಾಡುವ ಕೋಗಿಲೆ 
ಮರೆಯಿತೆ ತನ್ನಯ ದನಿಯ?
ಹಾಡು ಮರೆತರೆ ಹಕ್ಕಿ ಬದುಕುವುದೇ ?
ತೊರೆಯಿತೆ ಮರದಾ ಪ್ರೀತಿಯ ?


ದುಂಬಿಯು ಮರೆತಿದೆ ಹೆಣ್ಣೂ ಮರೆತಿದೆ 
ಗಿಡದೀ ಮಲ್ಲಿಗೆ ಹೂವ 
ಅರಳುವ ಮೊದಲೇ ಮೊಗ್ಗೇ ಬಾಡಿದೆ 
ಇರದಿರೆ ಪ್ರೀತಿಯ ಜಾವ 


ಬಾರೆಯ ಮುಗಿಲೇ ಹರಿಸು ಕಣ್ಣೀರ 
ಶಾಂತವಾಗಲಿ ಬಾನು 
ನೀಡೆಯ ನೀನು ಕಡಲ ಒಡಲಿನಾ
ಕಹಿಗೆ ಒಂದು ಹನಿ ಜೇನು ?


೧೫/೦೧/೨೦೦೫ 

ಬಾಲಿಶ ಕವನಗಳು !! 7 ಮರೆಯದಿರು ಓ ದುಂಬಿ ಈ ಜೇನು ಹೂವು ..

ಮರೆಯದಿರು ಓ ದುಂಬಿ ಈ ಜೇನು ಹೂವು
ತೊರೆಯದಿರು ಎಂದಿಗೂ ಕೊಡದೆ ಇರು ನೋವು !

ಆ ಬೆಳಗು ಮೊಗ್ಗರಳಿ ನಾ ವಿಶ್ವ ನೋದಿರಲು
ನಿನ್ನ ಕಣ್ಣಿನ ನೋಟ ನನ್ನ ಸೆಳೆಯಿತು
ನಿನಗಾಗಿಯೇ ನಾನು ಎಂದೆನ್ನ ಮನದ ದನಿ
ಪ್ರೇಮ ಭಾವದಿ ನಕ್ಕು ನಿನ್ನ ಕರೆಯಿತು

ಒಮ್ಮೆ ಹೀರಿದ ಜೇನು ಆಯಿತೇ ಕಹಿ ಒಳಗೆ ?
ಮರೆತೆಯಾ ಈ ಹೂವ ಪ್ರೀತಿ ?
ನಿನಗೋ ಹಲಬಗೆ ಹೂವು ನನಗೊಬ್ಬನೇ ದುಂಬಿ
ಏನಿದರ ಇಬ್ಬಗೆಯ ನೀತಿ ?

ಇಂದರಳಿ ನಾಳೆಯೊಳು ಸೊರಗಿ ಹೋಗುವೆ ನಾನು
ಆ ತನಕ ನಿನ್ನ ಪ್ರೀತಿ ಬೇಕು
ನಿನ್ನ ಪ್ರೇಮದ ಹೊರತು ಬೇರೇನೂ ನಾನೊಲ್ಲೆ
ಅಷ್ಟೆ ದಿನ ಬದುಕಿರಲು ಸಾಕು

ಮುಗಿದೇ ಹೋಯಿತು ಬದುಕು ಈ ದಿನದ ಸಂಜೆಯಲಿ
ನಿನ್ನ ಕನಸಿಗೆ ಇಲ್ಲಿ ಕಂಪಾಯಿತು
ನಿನ್ನೊಲವ ದಾರಿಯಲಿ ಸಾವು ನೋಡಲಿ ಜೀವ
ಒಟ್ಟಿನಲಿ ಈ ಬಂಧ ಇಂಪಾಯಿತು

೧೨/೦೧/೨೦೦೫

ಬಾಲಿಶ ಕವನಗಳು !! 6

ಅವಳೇಕೋ ಬರಲಿಲ್ಲ ಅವಳಿರದೆ ದನಿಯಿಲ್ಲ 
ಬರಿಯ ನೆನಪಿನ ಹಿಂದೆ ಹೊಳೆವ ಮಿಂಚು 
ನಿನ್ನೆಯೋ ಸವಿಮಾತು ಎಷ್ಟೊನಗೆ ಹೂಗನಸು 
ವಿರಹದೀ ನೋವಿಗೆ ಯಾರ ಸಂಚು ?


ಕಪ್ಪನೆಯ ಮೋಡದಲಿ ಮಿಂಚೊಂದು ಸುಳಿದಂತೆ 
ಮಲ್ಲೆ ಹೂವಿನ ದಂಡೆ ಮುಡಿಯಲಿತ್ತು
ಬೆಳ್ಳಿ ಬೆಳದಿಂಗಳನೆ ನಾಚಿಸುತಲಿರುವಂತೆ 
ಆ ಚಂದ್ರ ಮೊಗದ ನಗುವಿತ್ತು 


ಓ ದಿನವೇ ನೀ ಹೋಗು ವೇಗದಲಿ ಮುಂದಕೆ 
ನಾಳೆ ಬರುವಳೇ ನನ್ನ ಒಲವ ಗೆಳತಿ 
ಬಂದೆ ಬರುವಳು ಇಂದು ಕನಸಿನರಮನೆಯಲ್ಲಿ 
ಅಲ್ಲೇ ಕೊಡುವಳು ನನಗೆ ಎಲ್ಲ ಪ್ರೀತಿ 


೧೫/೦೫/೨೦೦೫ 

ಮೂರು ಲೋಕ !!!


೧. ಸುಳಿವ ಗಾಳಿ ಹೂಗಂಧ ಒಳ ಹೊರಗೆ
ಹಿಮಪಾತ ; ಎಳೆ ಬಿಸಿಲ ಕೊಡೆಯಾಸೆ.
ರುದ್ರಾಕ್ಷಿ ನೋಟ ಹದ್ದಿನ ಬೇಟೆ !
ಹೆಸರಿಡದ ಚಿತ್ರ ವಿಚಿತ್ರ ಆಕೃತಿ
ಬಹುಮುಖ ಪ್ರತಿಬೆ ಸಂತಾನ, ಹರಿದು ಹೋಗುವ ಭಾವ
ಅಂಬೆಗಾಲಿಟ್ಟು ನಡೆಯುವ ಮಗು .
೨.
ಸುತ್ತುವ ಗಾಳಿ , ಬಯಕೆ ಹೂ ಬಿಸಿಯೆದೆಗೆ
ಅರೆಗಟ್ಟಿದ ನೀರು, ಮೊಸರು; ಗೋಸುಂಬೆ 
ಬಾನ ನೀಲಿಯ ದೃಷ್ಟಿ , ಶೂನ್ಯದ ಕಾಟ  
ದೀರ್ಘ ಉಸಿರೆಳೆತದ ಹರಿವು 
ಹೆಸರಿಟ್ಟ ಭೂತದ ಮೂರ್ತಿ ; ಮುಖವಾಡ 
ಹೊರಳಿ ಮಿಡುಕುವ ತರುಣ .
೩.
ಒಡೆದ ದೀಪದ ಬಳಿ ಸುತ್ತುವ ಗಾಳಿ
ಮುಗಿದೂ ಮುಗಿಯದ ಎಣ್ಣೆ
ಆವಿ; ನಿಲ್ಲುವ ಮೋಡದ ಕನಸು
ಸಾರ್ಥಕ ನಿರರ್ಥಕ ನಿಚ್ಚಣಿಕೆಯ ಸಾಕಾರ
ನೂರು ಗೂಡಿನ ಹಕ್ಕಿ ಗರಿ ಉದುರಿ ಶೂನ್ಯ.
ಆಕಾಶದಾಚೆಯ ದೃಷ್ಟಿ ಹೊರಳುವ ಬಿಂಬ
ತೆರೆದ ಅವಕಾಶ ಕಾಯುವ ವೃಧ್ಧ.

ISHWARA BHAT K
೦೪.೦೨.೨೦೦೫ 

ಕತ್ತಲ ಹಾಡುಗಳು !!!

ನಿಮ್ಮ ಪಾಡಿಗೆ ನೀವಿದ್ದರೂ..
ಈ ಕತ್ತಲು ನಿಮ್ಮನ್ನ ಕಾಡುತ್ತದೆ ..

ನಿಘೂಢ ಆಕಾಶದ ಕಪ್ಪಿನ ಬೆಳಕನ್ನು
ಭೇದಿಸುತ್ತಾ ನೆಗೆದ ಹೂಬಾಣಉರಿದು ಬೀಳುವಾಗ
ಮೇಲ್ನೋಡುತ್ತ ನಿಂತ ಮುಖ ಕಪ್ಪಾಗಿತ್ತು !!

ಕತ್ತಲ ಮಳೆಹನಿಗೆ ಎಲ್ಲವೂ ಕಪ್ಪಾಗಿದೆ
ಆದರೆ ಇಲ್ಲೊಬ್ಬ ಹೊಳೆಯಿತ್ತಿದ್ದಾನೆ.
ಇಂದು ಹಚ್ಚಿದ ಬಣ್ಣ ತೊಳೆಯದೇ
ನಾಳೆಗೆ ಕಾಯ್ದಿರಿಸಿದ್ದಾನೆ

“ನಿನ್ನನ್ನು ನಾನು ಚೆನ್ನಾಗಿ ಬಲ್ಲೆ ” ಎಂದಾತನಿಗೆ
ಒಬ್ಬ ಕೇಳಿದನಂತೆ …” ನಿನ್ನೆ ರಾತ್ರಿ ನಾನೇನು ಕನಸು ಕಂಡೆ ” ?

ಈ ಕತ್ತಲೆನ್ನುವುದು ಒಂದು ಬಿಂದು .
ಸಹಜವಾಗಿದ್ದಷ್ಟೂ ನಾವು ಬಿಂದು ಚಿಕ್ಕದಾಗಿರುತ್ತದೆ..

ಈ ಕತ್ತಲೆನ್ನುವುದು ಎಷ್ಟು ದೀರ್ಘವಿದೆ ಗೊತ್ತೇ ?
ಇಂದೊಂದು ಕಳೆಯಲಿ ಹೇಳುವೆನು ಮತ್ತೆ !!

ಬಾಲಿಶ ಕವನಗಳು !! 5

ಮೆಲ್ಲ ಮೆಲ್ಲ ಬರುವನಲ್ಲ
ಅವನಿಗಿಲ್ಲ ಕಾತರ
ಇಲ್ಲ ಬರಲೇ ಇಲ್ಲವಲ್ಲ
ಇಲ್ಲಿ ಏಕೋ ಬೇಸರ

ಮೊದಲ ನೋಟ ನಗೆಯ ಓಟ
ಮಾತೆ ಮಧುರವಾಯಿತು
ಮತ್ತೆ ಸ್ನೇಹ ತಿರುಗೆ ಪ್ರೇಮ
ಬರಿಯ ಕನಸದಾಯಿತು

ಅಂದು ನೀನು ಮನದ ಕೊಳಕೆ
ಪ್ರೀತಿಯೆಸೆದು ಅಲೆಯಿಸಿದೆ
ಇಂದು ಏಕೆ ಬರಿಯ ವಿರಸ
ಅಲೆಯ ಹೇಗೆ ಅಳಿಸಿದೆ ??

ನಿನ್ನ ಪ್ರೇಮ ನನ್ನೊಳೊ೦ದು
ಹೊಸತು ಹೂವ ಅರಳಿಸಿದೆ
ಪ್ರೀತಿ ಹೂವ ಮುನಿಸು ಬಿಸಿಲು
ಮುದುಡುವಂತೆ ಮಾಡಿದೆ

ಪ್ರೀತಿ ಅಮರವಿರಲು ಮಧುರ
ಬಾಳ್ವೆ ಪ್ರೇಮ ದರ್ಶನ
ನನ್ನ ಮನಸು ಹೇಗೆ ಇರಲಿ
ಎಂದೂ ನಿನಗೆ ಅರ್ಪಣ

೦೩/೧೨/೨೦೦೪

ಬಾಲಿಶ ಕವನಗಳು !! 4

ಕಡಲ ತೀರದಿ ನಾ ಬರೆದಿ ಉಸಿರಿನ ಹೆಸರ
ಹಾಲ್ನೊರೆಯ ಬೀರಿಸಿದೆ ಸೊಗಸಿನಿಂದ
ಅದೆ ತೆರೆಗೆ ಹೆಸರಳಿದು ಬರಿಯ ಮರಳಿನ ಮಿನುಗು
ಕದಡಿಹೋಗಿದೆ ನೋವ ನೆನಪಿನಿಂದ

ಯಾವ ಗಾಳಿಗೆ ಸಿಲುಕಿ ತೀರದಾಚೆಗೆ ಮುನಿದು
ಅಬ್ಬರಿಸುತಿಹೆ ನೀನು , ಏನು ಕೋಪ ?
ಎಲ್ಲಿ ಜಾರಿತು ಶಾಂತಿ ? ಬಾನಿನೊಂದಿನ ಮೈತ್ರಿ
ಯಾಕೆ ಪ್ರೀತಿಯ ನಡುವೆ ಮೃತ್ಯು ಕೂಪ ?

ಅಂದು ನೀನಿರುವಾಗ ಚಿಪ್ಪಿನೊಳು ಅವಿತಿದ್ದ
ಕನಸು ಕಲ್ಪನೆಗಳಿಗೆ ನೂರು ಗೆಲ್ಲು
ಅವಿತಿರುವ ಭಾಷೆಗಳ ಹೊರಗೆ ತೆಗೆಯಲಿ ಹೇಗೆ?
ಕಾಣದಿಹೆ ನಿನ್ನನ್ನು ಇಲ್ಲಿ ಎಲ್ಲೂ

ಸಾಗರವೇ ನೀ ಕೇಳು ಈ ನೋವ ಕಣ್ಣೀರು
ಆಗಿ ಹೋಗಲಿ ನಿನ್ನ ಲವಣ ಬಿಂದು
ನೀ ಶಾಂತ ನೀ ರೌದ್ರ ನಿನ್ನ ಮೇಲಿದೆ ನೌಕೆ
ಬಂದು ಸೇರಲಿ ದಡಕೆ ಸುಖದಿ ಎಂದು

೧೪/೦೩/೨೦೦೫

ಬಾಲಿಶ ಕವನಗಳು !! 3 ನಿನ್ನ ನಗುವು ಸೆಳೆಯಿತೆನ್ನ

ನಿನ್ನ ನಗುವು ಸೆಳೆಯಿತೆನ್ನ 
ನದಿಯ ಹಾಗೆ ಮೊರೆಯುವುದು 
ಮನದ ಶಬ್ದ ಅಡಗುವುದು ಇದೇನೇ ಪ್ರೇಮ ?
ನಿನ್ನ ನೋಟ ಇರಿಯಿತೆನ್ನ 
ಬನದಿ ಹೂಗಳರಳುವುದು
ಏನೋ ಭಾವ ಹೊರಳುವುದು ಇದೇನೇ ಪ್ರೇಮ ?


ಒಂದು ಸಂಜೆ ಏಕೋ ಗಾಳಿ ಬೀಸುತ್ತಿತ್ತು ಹೂಗಳೆಡೆಗೆ
ಮನದ ದೋಣಿ ವಾಲುತ್ತಿತ್ತು ಸರೋವರದ ಕಡೆಗೆ
ಕಂಡೆ ನಾನು ಅಲ್ಲೇ ಹೂವು ನೀರ ನಡುವೆ ತಾವರೆ 
ಕರೆಯಿತೆನ್ನ , ಒಲವಿದೆನ್ನ ಬಳ್ಳಿಗಿಲ್ಲಿ ಆಸರೆ 


ಮಾತು ಗಗನ , ಮೌನದಾಚೆ ಎಲ್ಲೋ ಮಿಂಚುತ್ತಿತ್ತು 
ಹೊಳೆವ ತಾರೆ ಪೂರ್ಣ ಶಶಿಗೆ ಕಣ್ಣು ಕರಗುತ್ತಿತ್ತು 
ಮನದ ಮಾತು ಹೇಳ ಬಯಸಿ ಬಂದೆ ನಾನು ಇಲ್ಲಿಗೆ
ಏಕೆ ಹೇಳೆ ಕಡಲ ಮೌನ ಇಲ್ಲವೇಕೆ ಕಿರುನಗೆ ?


ಹರೆಯ ಹೂವು ಪ್ರೀತಿಯುಸಿರ ಪಡೆದು ಹೀಗೆ ಬದುಕಿದೆ 
ನಿನ್ನ ಒಲವು ಕಾಯುವುದು , ಅಲ್ಲೇ ಏನೋ ಗೆಲುವಿದೆ 
ಹರಿವ ನದಿಯ ನಗುವ ನಡುವೆ ನಿನ್ನ ಪ್ರೇಮ ಕಂಡೆನು 
ಬಳಸಿ ಬರುವ ಅಲೆಗಳಿಂದ ಪ್ರೀತಿ ಮುತ್ತ ತಂದೆನು !


ಪ್ರೇಮವಿರದ ಬದುಕು ನರಕ , ಬಾಳಿಗಿಲ್ಲಿ ಬೇಸರ 
ಒಲಿದು ನೀನು ಬಾರೆ ,ಪ್ರೇಮ ಬರಲಿ ತೊಡೆದು ಕಾತರ 
ಇರಲಿ ಪಯಣ ಇರುವವರೆಗೆ ಪ್ರೇಮವಿಲ್ಲಿ ದೀಪವು 
ನೀನೆ ದೀಪ ನೀನೆ ಬೆಳಕು , ಬಾಳ ಕಾವ್ಯ ಅಮರವು 


೦೭/೧೨/2005

Tuesday, December 21, 2010

ಬಾಲಿಶ ಕವನಗಳು !! 2

ನಿನ್ನ ನೆನಪದು ಬಂದು ಮಂದಹಾಸದಿ ಮಿಂದು
ತೆರಳುವುದು ತಾವರೆಯ ತೇರಿನಲ್ಲಿ
ಸವಿಗನಸು ನೆನಪಲ್ಲಿ ಸಾಗರವೇ ಕಾಣುವುದು
ಮರೆಯುವುದು ನಸುಬೆಳಗ ಜಾವದಲ್ಲಿ !!

ಮೇಲೆ ಚಿಮ್ಮುವ ಮುಗಿಲು ಕಾಣದಿಹ ನಭದಾಚೆ
ಮೂಡಿಸಿದೆ ಈ ಕಿರಣ ಹೊಳೆವ ಬಿಲ್ಲು
ಹಾಡಿಸಿದೆ ಹಕ್ಕಿಗಳ ಕೊರಳಿಗಿ೦ಪಿನ ಗಾನ
ತೂಗಿಸಿದೆ ಮರ ಮರದ ಹೂವು ಗೆಲ್ಲು

ಮುನಿವ ಬಿಸಿಲಿನ ಳಕೆ ಆರಿ ಮುತ್ತಿನ ಮಂಜು
ಹೀರಿ ಸಾಗಿದೆ ನನ್ನ ಪ್ರೀತಿ ನುಡಿಯ
ಮರಳಿ ಹೂ ಅರಳಿದೆ ನೀ ನೆಟ್ಟ ಗಿಡದಲ್ಲಿ
ಸಿಂಗರಿಸುತಿಹುದಿಂದು ನಿನ್ನ ಮುಡಿಯ

ಹೂವು ಅರಳುವ ಮುನ್ನ ಚಿವುಟದಿರು ಮೊಗ್ಗನ್ನ
ಪ್ರೀತಿ ಗಂಧವ ಚೆಲ್ಲಿ ಬೆಳೆಸು
ಹೂವಿನೆದೆ ಕಾಯಾಗಿ ಆಗಲದು ಸಿಹಿಮಾಗಿ
ಒಲವು ಗೆಲ್ಲಲಿ ಹಾಡಿ ಹರಸು 

೦೧/೦೩/೨೦೦೫

ಬಾಲಿಶ ಕವನಗಳು !! 1

ಅಂದೆಂದೋ ನೀ ಕೊಟ್ಟ ಮಾತು ಮುದ್ರಿಕೆಯಂತೆ
ಅನುರಣಿತವೀ ನನ್ನ ಎದೆಯ ಒಳಗೆ
ನಿನ್ನ ಪ್ರೇಮದ ಮಾತು ಕಾಯುವುದು ನಾನೀಗ
ಬಾರೆಯಾ ನೀನೀಗ ನನ್ನ ಬಳಿಗೆ

ಎಲ್ಲ ಜೀವದ ಭಾಷೆ ಪ್ರೀತಿಯೇ ಧರೆಯೊಳಗೆ
ಕಲ್ಲಂತೆ ಒಲವಿರದ ಎದೆಗೋಪುರ !
ನೀನೆ ನನ್ನೊಲ ಜೀವ ನಿನ್ನುಸಿರೆ ನನ್ನುಸಿರು
ಈಗಿಲ್ಲ ನೀನಿರದೆ ಬಲು ಬೇಸರ

ನಿನ್ನ ಒದನಾಟವನು ಕಾತರಿಸುತಿಹೆನಿಂದು
ನಿನ್ನ ನೆನಪಿನ ಮಳೆಯ ಧಾರೆಯಲ್ಲಿ
ನೆನಪಿರಲಿ ನಿನಗೆಂದೂ ಈ ಪ್ರೀತಿ ನುಡಿಯೆಲ್ಲ
ಕಣ್ಣಂಚು ಮುತ್ತುಗಳೇ ಮಾಲೆಯಿಲ್ಲಿ

ಎಂದೋ ಅರಳಿದ ಹೂವು ಬಾಡದಿದೆ ಎದೆಯಲ್ಲಿ 
ಅಳುವಿನಲ್ಲಿ ನಗು ಹೊಮ್ಮಿಸೋ ಪ್ರೇಮವೇ
ನಗುವಿನೊಳನಗುವಾಗಿ ಹೂವಿನೊಳಮನಸಾಗಿ
ನೀ ಬಾರೋ ಅಳಿಸದಿರು ಓ ಜೀವವೇ

೨೮ / ೦೨ / 2005

Wednesday, July 14, 2010

ಹೊಸ ಹಾಡು

ಇಂದೇ ಕಂಡೆ ಕನ್ನಡಿಯಲಿ ನಾಳಿನಾ ಮುಖ
ಎಂದೂ ತೊರೆದು ಹೋಗದಂತ ತೀರದಾ ದುಃಖ
ಕೃಷ್ಣನೊಲುಮೆ ಕಾದಂತೆ ಚೆಲುವೆ ರಾಧಿಕ
ನಾನೂ ಕಾಯುತಿರುವೆ ನಲಿವಿನಮೃಥದಾ ಸುಖ !!

Monday, July 12, 2010

ನೀನು ದೂರಾದಾಗ ನಾನೇನು ಅಳುತಿಲ್ಲ !!

ನೀನು ದೂರಾದಾಗ ನಾನೇನು ಅಳುತಿಲ್ಲ
ಹೆಪ್ಪುಗಟ್ಟಿದೆಯಿಲ್ಲಿ ಕಣ್ಣ ನೀರು 
ಮತ್ತೆ ಜಾರಿದೆ ಧರೆಗೆ ನಳನಳಿಸುತಿಹ ಮರವು 
ಕಡಿದೆಯಲ್ಲೇ ಅದರ ತಾಯಿಬೇರು 


ಅಂದು ನೀ ಬಂದಾಗ ಬಂಧಗಳ ಬೆಸೆದಾಗ 
ನನ್ನ ನೋವಿನ ಗಿಡಕೆ ಪ್ರೀತಿ ಹೂವು 
ಎಲ್ಲೋ ಮರುಗಿದ ದನಿಯು ನಿನ್ನ ಸಾಮೀಪ್ಯದಲಿ 
ಗಾನವಾಯಿತು ಮರೆತು ಎಲ್ಲ ನೋವು 


ಸಾಯಲಾರದೆ ನೆನಪು ; ಮತ್ತೆ ಮರುಕಳಿಸುವುದು 
ಕಾಡುವುದು ಎಲ್ಲ ಕಡೆ ನಿನ್ನ ನೆನೆದು 
ಮರೆಯಲಾರದೆ ನಿನ್ನ ಸೇರಲಾರದೆ ನಿನ್ನ 
ಹೇಳಲಾರೆನು ಮನಕೆ ; ಮಾತೆ ಬರದು 


ನೀ ಕೊಟ್ಟ ಸ್ನೇಹವನು ಇಟ್ಟಿರುವೆ ಎದೆಯೊಳಗೆ 
ಕಾಯುತಿಹೆ ನಾನದನು ಹಿಂದೆ ಕೊಡಲು 
ನೀನದನು ಪಡೆದುಕೋ ಮತ್ತೆ ಹೋದರು ಸರಿಯೇ 
ಸ್ವೀಕರಿಸಲೇಬೇಕು ; ನಾನು ಮತ್ತೆ ನಗಲು 


ಕೆ ಈಶ್ವರ ಕಿರಣ 
೧೬.೦೮.೨೦೦೫ 

Wednesday, May 26, 2010

ನಾನೊಂದು ಮುತ್ತಲ್ಲ ಬರಿ ಹೊಳೆವ ಕಲ್ಲು !


ನಾನೊಂದು ಮುತ್ತಲ್ಲ  ಬರಿ ಹೊಳೆವ ಕಲ್ಲು !

ಸಾವಿರ ಸಾವಿರ ಮುತ್ತು ಸಿಗುವುದು ಸಾಗರದಾಳದಲ್ಲಿ
ನನ್ನೇ ಏಕೆ ಆರಿಸಿದೆ ಮೋಹದ ಆತುರದಲ್ಲಿ ?

ಹೊಸ ಮುತ್ತ ಹುಡುಕಿನ್ನು ಹಳೆ ಕಲ್ಲ ಕಳೆದು
ಆಗದೀ ಸಾಗರವು ಎಂದಿಗೂ ಬರಿದು

ಹುಡುಕಾಡಿ ದಣಿದರೇ ಬಾ ಎನ್ನ ಕಡೆಗೆ
ಕಲ್ಲಾಗಿ ಇರಲಾರೆ ನಾ ಕೊನೆಯವರೆಗೆ

Ishwara Bhat K
Date : 20-05-2010, Thursday

Friday, March 19, 2010

ಮೂರು ಲೋಕ

೧. ಸುಳಿವ ಗಾಳಿ ಹೂಗಂಧ ಒಳ ಹೊರಗೆ
ಹಿಮಪಾತ ; ಎಳೆ ಬಿಸಿಲ ಕೊಡೆಯಾಸೆ.
ರುದ್ರಾಕ್ಷಿ ನೋಟ ಹದ್ದಿನ ಬೇಟೆ !
ಹೆಸರಿಡದ ಚಿತ್ರ ವಿಚಿತ್ರ ಆಕೃತಿ
ಬಹುಮುಖ ಪ್ರತಿಬೆ ಸಂತಾನ, ಹರಿದು ಹೋಗುವ ಭಾವ
ಅಂಬೆಗಾಲಿಟ್ಟು ನಡೆಯುವ ಮಗು .

೨.
ಸುತ್ತುವ ಗಾಳಿ , ಬಯಕೆ ಹೂ ಬಿಸಿಯೆದೆಗೆ
ಅರೆಗಟ್ಟಿದ ನೀರು, ಮೊಸರು; ಗೋಸುಂಬೆ 
ಬಾನ ನೀಲಿಯ ದೃಷ್ಟಿ , ಶೂನ್ಯದ ಕಾಟ  
ದೀರ್ಘ ಉಸಿರೆಳೆತದ ಹರಿವು 
ಹೆಸರಿಟ್ಟ ಭೂತದ ಮೂರ್ತಿ ; ಮುಖವಾಡ 
ಹೊರಳಿ ಮಿಡುಕುವ ತರುಣ .

೩.
ಒಡೆದ ದೀಪದ ಬಳಿ ಸುತ್ತುವ ಗಾಳಿ
ಮುಗಿದೂ ಮುಗಿಯದ ಎಣ್ಣೆ
ಆವಿ; ನಿಲ್ಲುವ ಮೋಡದ ಕನಸು
ಸಾರ್ಥಕ ನಿರರ್ಥಕ ನಿಚ್ಚಣಿಕೆಯ ಸಾಕಾರ
ನೂರು ಗೂಡಿನ ಹಕ್ಕಿ ಗರಿ ಉದುರಿ ಶೂನ್ಯ.
ಆಕಾಶದಾಚೆಯ ದೃಷ್ಟಿ ಹೊರಳುವ ಬಿಂಬ
ತೆರೆದ ಅವಕಾಶ ಕಾಯುವ ವೃಧ್ಧ.

೦೪.೦೨.೨೦೦೫

Thursday, March 18, 2010

ಅವಳ ಪ್ರೀತಿಗೆ ನನ್ನ ಬದುಕಿಗೆ .. !

೧. ಅವಳಿಗೆ
ಬಾಳ ಬಂಧನದ ಹೊರೆಗಾದೆ ನೀನು ನೊಗ
ಆಗಲಾರೆನು ನಾನು ನೊಗಕೆ ಹೊರೆಯು !!
೨. ಪ್ರೀತಿಗೆ
ಗುರಿಯಿರದೆ ಶರವೆಸೆದೆ !
ಮರಣ ತಪ್ಪಿತು , ಉಳಿಸಿಹೋಯಿತು ನೋವ
ಬಾರದೇ ಮರಳಿ ಬಾಣ ?!
೩.ನನಗೆ
ಮಾಸಿ ಹೋಗಿದೆ ನೆನಪು ಎಂದು
ಮೋಸಹೋಗಿದೆ ಮನಸು ,
ಮರೆತು ಮಲಗಿದೆ ಕನಸ ಗಾಯವು
ವಾಸಿಯಗದೆ ಉಳಿವೆ ಎಂದು !
೪. ಬದುಕಿಗೆ
ಕತ್ತಲನ್ನೇ ಸುಟ್ಟ ಬೆಳಕು
ಕಣ್ಣಿಗೆ ಬಿದ್ದಾಗ
ಬೆಳಕೇ ಸುಟ್ಟುಹೋಯಿತು.