Friday, March 19, 2010

ಮೂರು ಲೋಕ

೧. ಸುಳಿವ ಗಾಳಿ ಹೂಗಂಧ ಒಳ ಹೊರಗೆ
ಹಿಮಪಾತ ; ಎಳೆ ಬಿಸಿಲ ಕೊಡೆಯಾಸೆ.
ರುದ್ರಾಕ್ಷಿ ನೋಟ ಹದ್ದಿನ ಬೇಟೆ !
ಹೆಸರಿಡದ ಚಿತ್ರ ವಿಚಿತ್ರ ಆಕೃತಿ
ಬಹುಮುಖ ಪ್ರತಿಬೆ ಸಂತಾನ, ಹರಿದು ಹೋಗುವ ಭಾವ
ಅಂಬೆಗಾಲಿಟ್ಟು ನಡೆಯುವ ಮಗು .

೨.
ಸುತ್ತುವ ಗಾಳಿ , ಬಯಕೆ ಹೂ ಬಿಸಿಯೆದೆಗೆ
ಅರೆಗಟ್ಟಿದ ನೀರು, ಮೊಸರು; ಗೋಸುಂಬೆ 
ಬಾನ ನೀಲಿಯ ದೃಷ್ಟಿ , ಶೂನ್ಯದ ಕಾಟ  
ದೀರ್ಘ ಉಸಿರೆಳೆತದ ಹರಿವು 
ಹೆಸರಿಟ್ಟ ಭೂತದ ಮೂರ್ತಿ ; ಮುಖವಾಡ 
ಹೊರಳಿ ಮಿಡುಕುವ ತರುಣ .

೩.
ಒಡೆದ ದೀಪದ ಬಳಿ ಸುತ್ತುವ ಗಾಳಿ
ಮುಗಿದೂ ಮುಗಿಯದ ಎಣ್ಣೆ
ಆವಿ; ನಿಲ್ಲುವ ಮೋಡದ ಕನಸು
ಸಾರ್ಥಕ ನಿರರ್ಥಕ ನಿಚ್ಚಣಿಕೆಯ ಸಾಕಾರ
ನೂರು ಗೂಡಿನ ಹಕ್ಕಿ ಗರಿ ಉದುರಿ ಶೂನ್ಯ.
ಆಕಾಶದಾಚೆಯ ದೃಷ್ಟಿ ಹೊರಳುವ ಬಿಂಬ
ತೆರೆದ ಅವಕಾಶ ಕಾಯುವ ವೃಧ್ಧ.

೦೪.೦೨.೨೦೦೫

Thursday, March 18, 2010

ಅವಳ ಪ್ರೀತಿಗೆ ನನ್ನ ಬದುಕಿಗೆ .. !

೧. ಅವಳಿಗೆ
ಬಾಳ ಬಂಧನದ ಹೊರೆಗಾದೆ ನೀನು ನೊಗ
ಆಗಲಾರೆನು ನಾನು ನೊಗಕೆ ಹೊರೆಯು !!
೨. ಪ್ರೀತಿಗೆ
ಗುರಿಯಿರದೆ ಶರವೆಸೆದೆ !
ಮರಣ ತಪ್ಪಿತು , ಉಳಿಸಿಹೋಯಿತು ನೋವ
ಬಾರದೇ ಮರಳಿ ಬಾಣ ?!
೩.ನನಗೆ
ಮಾಸಿ ಹೋಗಿದೆ ನೆನಪು ಎಂದು
ಮೋಸಹೋಗಿದೆ ಮನಸು ,
ಮರೆತು ಮಲಗಿದೆ ಕನಸ ಗಾಯವು
ವಾಸಿಯಗದೆ ಉಳಿವೆ ಎಂದು !
೪. ಬದುಕಿಗೆ
ಕತ್ತಲನ್ನೇ ಸುಟ್ಟ ಬೆಳಕು
ಕಣ್ಣಿಗೆ ಬಿದ್ದಾಗ
ಬೆಳಕೇ ಸುಟ್ಟುಹೋಯಿತು.