Monday, January 31, 2011

ಬಾಲಿಶ ಕವನಗಳು !! 21 ಪ್ರೀತಿಯಿರದೆ..?

ಪ್ರೀತಿಯಿರದೆ ಬಾಳು ಇದೆಯೇ 
ಬರಿಯ ಕತ್ತಲಲ್ಲವೇ ?
ಉಸಿರೆ ಇರದ ಜೀವವಿಹುದೆ
ಬರಿಯ ಮಾತಿದಲ್ಲವೇ?


ಎಷ್ಟೋ ನೋವು ಕೊಟ್ಟೆ ನೀನು 
ಪ್ರೀತಿ ಹೂವ ಮುಡಿದಳವಳು
ಬೇಸರದಾ ಬೆಂಕಿಯೆದೆಗೆ
ಒಲುಮೆ ಹಸಿರ ತುಂಬಿದವಳು 
    ಮರೆತೆಯೇನು ನಿನ್ನ ಋಣವ
    ತೊರೆದೆಯೇನು  ಬಾಳ ಗೆಲುವ
    ಎಲ್ಲ ಶೂನ್ಯವಲ್ಲವೇ?


ನೀನೋ ಬಯಕೆ ಬುತ್ತಿ ನೀಡಿ 
ಮರೆತು ಸುಮ್ಮನೋಡಿದೆ
ಅವಳೋ  ಕಾಯುತಿಹಳು 
ಒಲಿಯದೆ ನಿನ್ನ ಕಲ್ಲೆದೆ ?
    ನಿಲಿಸು ನಿನ್ನ ಕೆಟ್ಟ ಛಲವ
    ಹರಿಸು  ನೀನು ಪ್ರೀತಿ ನಗುವ 
    ಎಲ್ಲ ಬದುಕು ಬೆಲ್ಲವೇ 


ಚಂದ್ರನಿರಲಿ ತಾರೆಯಿರಲಿ
ಬೆಳಗುತಿರಲಿ ಮೆಲ್ಲಗೆ 
ಹರಸುತಿರಲಿ ಪ್ರಕೃತಿಯೊಲವು 
ಗೆಲಲಿ ಪ್ರೀತಿ ಮಲ್ಲಿಗೆ 
    ಬರಲಿ ರಸದ ಜೀವ ನದಿಯು 
    ಇರಲಿ ಹೊನಲ ಬಾಲ ಕೆಲೆಯು
    ಎಲ್ಲ ಹರಕೆಯಲ್ಲವೇ .


೩೦/೦೧/೨೦೦೫ 

Monday, January 24, 2011

ಬಾಲಿಶ ಕವನಗಳು !! 20 ಮಾತು -ಮೌನ

ಮಾತಿನಿಂದೇನು? ಮೌನದಿಂದೇನು
ಮಾತು ಮೌನಗಳೆಲ್ಲ ನೆವವು ನಿನಗೆ
ಕಿರಣ ಮಾತಾಡುವುದೇ ಆ ಮಲ್ಲೆ ಹೂವಲ್ಲಿ ?
ಪ್ರೇಮ ಕರೆದಿಹುದೆನ್ನ ನಿನ್ನ ಬಳಿಗೆ !

ಮನಸೊಳಗೆ ಕನಸಾಗಿ ನೀ ಹರಿಯುತಿರುವಾಗ
ಮಾತೆಂಬ ನದಿಗಿಲ್ಲಿ ಬರಿ ಮೌನವೆ
ನಿನ್ನ ಪ್ರೇಮದ ಮಾತು ಕೇಳುವುದು ನನ್ನೆದೆಗೆ
ಮತ್ತದೇ ಮೌನದಲಿ ನಾ ಹೇಳುವೆ

ಆಗೊಮ್ಮೆ ಈಗೊಮ್ಮೆ ಮಾತು ಉರುಳಾಡಿತ್ತು
ಹಾರಿತ್ತು ಬಾನಕ್ಕಿ ಸಾಲು ಸಾಲೆ
ಹೊಸತು ಮೌನದ ಹಾಡ ನೀ ಮುಡಿಯುತಿರುವಾಗ
ಮುಂಗಾರು ಮೋಡಕ್ಕೆ ಬೆಳ್ಳಿ ಮಾಲೆ

ಮಾತು ಬರಿ ಮಾತಿಗೆ ;ಮೌನ ನಿಜ ಪ್ರೀತಿಗೆ
ಎರಡರಲಿ ನನಗಿಷ್ಟ  ನಿನ್ನ ಮೌನ
ನಿನ್ನಂತರಾಳದಲಿ ಎರಡಕ್ಕೂ ಅರ್ಥವಿದೆ
ಹುಣ್ಣಿಮೆಯ ಬೆಳಕಿನಲಿ ಹೊಳೆವ ಗಗನ !

ಮಾತಿರಲಿ ನಗೆಯಾಗಿ , ವಿರಸ ಮೌನದಲಿರಲಿ
ಅದರಾಚೆಗೆ ಎಲ್ಲ ನೋವು ಇರಲಿ
ಮಾತು -ಮೌನದಿಂದಲ್ಲ ಪ್ರೀತಿಯ ಸಾರ
ಸಮರಸದಿ ಈ ಬಾಳು ಎಂದು ನಗಲಿ


೦೧/೦೨/೨೦೦೫  

Friday, January 21, 2011

ಬಾಲಿಶ ಕವನಗಳು !! 19 ಕತ್ತಲ ಪಯಣ


ಕವಿದ ಒಂದು ಕೆಟ್ಟ ಇರುಳು
ನನ್ನ ಬೇರೆ ಮಾಡಿದೆ
ಸಿರಿಯೇ ನಿನ್ನ ಒಲುಮೆ ಎಂಬ
ನೆನಪಿನಲ್ಲೇ ಕೊರಗಿದೆ

ಒಮ್ಮೆ ನೀನು ಒಮ್ಮೆ ನಾನು 
ಮನದಿ ಬರುವ ಚಿತ್ರ ನೂರು 
ಒಂದೇ ನೆನಪು ಒಂದೇ ಕನಸು 
?ಒಂಟಿ ಪಯಣ ಎಲ್ಲಿಗೋ
ಬಾನು ಕಡಲು ಕೋಟಿ ಚುಕ್ಕಿ
ಈಜುವಂತೆ ಮಾಡಿದೆ
ಚಂದ್ರನಿಲ್ಲ ! ಇರುಳು ಗಾಢ
ಬರಿಯ ಬೆಳಕು ಕಾಡಿದೆ

ನದಿಯು ಒಂದು ದಡಗಳೆರಡು
ಒಂದೆ ಮನಸು ದಾರಿ ಕುರುಡು 
ಬರಿಯ ನಗುವು ಮಾತ್ರ ಸಾಕು 
ಬರಡು ಬಾಳ ಸವಿಯುವೆ

ಪ್ರೇಮ ಸುಧೆಯು ಬತ್ತದಿರಲಿ 
ರಸದ ಗಂಗೆ ಆರದಿರಲಿ
ಬದುಕು ಎಂದೂ ಬೆಳಗುತಿರಲಿ
ಎಂಬ ಹರಕೆ ನಿತ್ಯವೂ ..

೧೫/೧೨/೨೦೦೪ 

ಬಾಲಿಶ ಕವನಗಳು !! 18 ಶಾಂತಿ ,ಪ್ರೀತಿ, ವಿಶ್ವಾಸ ಮತ್ತೆ ನಂಬಿಕೆ !

ಒಂದು ಕೋಣೆ, ನಾಲ್ಕು ಹಣತೆ 
ಶಾಂತಿ ,ಪ್ರೀತಿ, ವಿಶ್ವಾಸ ಮತ್ತೆ ನಂಬಿಕೆ !


ನಾನು ಶಾಂತಿಯ ರೂಪ 
ಈಗ ಯಾರಿಗೆ ಬೇಕು?
ಹಾರಿ ಹೋಗುತ್ತೇನೆ ಎಂದು ಆರಿಹೋಯಿತು.


ನಾನು ಪ್ರೀತಿಯ ಜ್ಯೋತಿ 
ನನ್ನ ಪ್ರೀತಿಸುವವರಿಲ್ಲ
ಆರಿ ಹೋಗಿ ಪ್ರೀತಿ ಹಾರಿಹೋಯಿತು !


ಶಾಂತಿ, ಪ್ರೀತಿಯಿಲ್ಲದೆ ನಾನಿಲ್ಲ
ಬದುಕುವ ವಿಶ್ವಾಸವೂ ಇಲ್ಲ 
ಎಣ್ಣೆಯ ಕಮಟಿನಿಂದ ಮಾಯವಾಯಿತು 


ಬಾಗಿಲು ತೆರೆಯಿತು 
ಪುಟ್ಟ ಮಗು ದಿಟ್ಟ ಹೆಜ್ಜೆಯಿಂದ ಬಂದು ..
ಅಳುತ್ತಾ ಕುಳಿತುಕೊಂಡಿತು !!
......  ನಾನಿಲ್ಲವೇ ನಂಬಿಕೆಯ ಜ್ಯೋತಿ ?
ಹಚ್ಚು ನಂದಿ ಹೋದ ಮೂರು ಹಣತೆಯನ್ನು !
ಸಮಾಧಾನದಿಂದ ಮೂರೂ ಹಣತೆ ಹಚ್ಚಿ 
ಮಗು ಕುಣಿಯಿತು ..


೨೦೦೫  

Tuesday, January 18, 2011

ಬಾಲಿಶ ಕವನಗಳು !! 17 ನನ್ನ ಪ್ರೀತಿ

ನನ್ನ ಪ್ರೀತಿ 


ಹರಿವಲ್ಲಿ ಕಂಡೆ ನಿಂತಲ್ಲಿ ಕಂಡೆ 
ನಾ ನಿನ್ನ ಮುದ್ದು ಮುಖವ 
ಹೂವಲ್ಲು ನಗುವು ನಗುವಲ್ಲು ಹಾಡು 
ಇದಾವ ಬಗೆಯ ವಿಭವ ?


ಮನದೊಳಗೆ ನಿಂತು ಪಟವಾಗಿ ಮೆರೆವ 
ಬಯಕೆಯಲಿ ಪ್ರೇಮ ಜನ್ಯ 
ಎದೆಯೊಲವು ಹರಿದು ಭಾವನೆಯ ಬಣ್ಣ 
ತುಂಬಿರಲು ಬದುಕು ಧನ್ಯ


ಕಣ್ಣೊಳಗೆ ಅಡಗಿ ಆಡುತಲೇ ಇರುವ 
ಕನಸೆಲ್ಲ ಹೊರಗೆ ಬರಲಿ 
ಉಸಿರಲ್ಲಿ ಬೆರೆತು ಹಾಡಾಗಿ ಇರುವ 
ಮಾತೆಲ್ಲ ಬಿರಿದು ನಗಲಿ 


ನೀಡುವುದು ಪ್ರೀತಿ , ಪಡೆಯುವುದು ಅಲ್ಲ
ನಾನೆಲ್ಲ ಕೊಟ್ಟೆ ನಿನಗೆ 
ಹಿಂತಿರುಗಿ ಕೊಟ್ಟು ಋಣಮುಕ್ತಳಾಗೆ
ನಾ ಕೊಟ್ಟ ಪ್ರೀತಿ ನನಗೆ !!


೨೦೦೫  

ಬಾಲಿಶ ಕವನಗಳು !! 16 ನಾನು - ಅವನು

ನಾನು - ಅವನು 


ಒಂದೇ ದೇಹ ಒಂದೇ ಮನಸು 
ಒಂದೇ ಬಯಕೆ ಒಂದೇ ಕನಸು 
ಆದರೇನು ನಾನು ನೆಪವು , ಅವನು ಅವನೇ 
ಎಲ್ಲ ಪ್ರೀತಿ ಪಾತ್ರನೆ .


ಅವನೋ ದೂರ ಬೆಟ್ಟದಲ್ಲಿ 
ಇಣುಕಿ ನನ್ನ ಕರೆಯುತ್ತಿದ್ದ 
ಒಲುಮೆ ಮಾತನಾಡುತ್ತಿದ್ದ 
ಹಾಡುತ್ತಿದ್ದ , ಓಡುತ್ತಿದ್ದ , ಗುರಿ ಸಿಗದೀ ಪಯಣದಿ 
ಬಿಸಿಯುಸಿರು ಬಿಟ್ಟು ಕರೆದು ಮೋಡಿ ಮಾಡುತ್ತಿದ್ದ 
ನಾನೋ ನೋಡುತ್ತಿದ್ದೆ ಬಿಟ್ಟ ಕಂಗಳಲ್ಲಿ 
ಆಸೆ ಬಿಸಿಲಿಗೇರಿ ನೆರಳಿನಾಳ ನೋಡಿ ಮತ್ತೆ 
ಬೇಡುತ್ತಿದ್ದೆ ! ಅದೇ ಬೆಟ್ಟ ನೋಡುತ್ತಿದ್ದೆ .


ಅಲ್ಲಿ ನೀರ ಮೇಲೆ ನಡೆಯುತಾನೆ 
ನೀರಿನೊಳಗೆ ಕುದಿಯುತಾನೆ
ಮತ್ತೆ ನೀರ ಬಗೆಯುತಾನೆ 
ಹುದುಕುತಿಹನು ಮುತ್ತನು ! ಕಳೆದ ಬಾಲ್ಯ ಸೊತ್ತನು!!
ಅದೇ ದಡದ ಮರದ ಹಿಂದೆ
ಅಡಗಿ ಕುಳಿತು ಕರೆಯುತಿರುವೆ, ಕೂಗುತಿರುವೆ 
ಕಾಯುತಿರುವೆ ಸುಮ್ಮನೇ, ಬಾರದಿರುವ ಅವನನೇ..


ಬಿದ್ದು ಗೆದ್ದು ಹೋದನವನು 
ಸೋತು ಬಿದ್ದು ಹೋದೆ ನಾನು 
ಮತ್ತೆ ಗೆಲ್ಲಲೆಣಿಸಿ ಬಂದನವನು 
ನಾನೋ ನೋಡಿ ನಗುವೆನು , ಅವನೆದುರು ಗೆಲ್ಲಲಾರೆನು 
ಸೋತು ಮಡಿದೆನು !!೨೦೦೫   

Monday, January 17, 2011

ಬಾಲಿಶ ಕವನಗಳು !! 15 ಕೊನೆಯ ಉಪದೇಶ .

ಕೊನೆಯ ಉಪದೇಶ 

ಅಜ್ಜಾ,
ನೀನು ಹಿಡಿದ ಕೊಡೆಯಂತೆ ,
ನಿನ್ನ ಊರುಗೋಲಿನಂತೆ
ಬಿಳುಪು ಕೂದಲಿನಂತೆ , ಸುಕ್ಕು ಚರ್ಮದಂತೆ ,
ನಿನಗೂ ವಯಸ್ಸಾಯಿತು !!
ಸುಮ್ಮನೆ ಇದ್ದು ಬಿಡು
ಸಾಕು ಉಪದೇಶ ಸಾರಗಳು
ನಾವು ನಮ್ಮ ಹಾಗೆ ಇರುತ್ತೇವೆ
ಹಾಗೆಯೇ ನೀವೂ .......

ಮೊಮ್ಮಗನೇ ..
ನಿನಗೆ ವಯಸ್ಸಾಗಿಲ್ಲ ,
ಊರುಗೋಲೂ ಬೇಡ , ಕೊಡೆಯೂ ಬೇಡ
ನಿನ್ನ ರೇಶಿಮೆ ಚರ್ಮವೂ ,
ಕಪ್ಪು ಕೂದಲೂ ದೀರ್ಘಾಯುವಾಗಲಿ !!
ಕೊನೆಗೆ ಒಂದು ಮಾತು !
ಬೆಳ್ಳಗಿರುವುದೆಲ್ಲಾ ಹಾಲಲ್ಲ , ಸರಿ
ಆದರೆ
ಹಾಲು ಮಾತ್ರ ಬೆಳ್ಳಗಿರಲೇಬೇಕು !!೩೦/೦೬/೨೦೦೫

ಬಾಲಿಶ ಕವನಗಳು !! 14 ಮೂಡಣದಿ ರವಿಕಿರಣ...

ಮೂಡಣದಿ ರವಿಕಿರಣ ಬರಸೆಳೆದು ಚುಂಬಿಸಲು
ಬಾನೆಲ್ಲ ನಸು ನಾಚಿ ಕೆಂಪಾಯಿತೆ?
ತಂಗಾಳಿ ಅಲೆಗಳಲಿ ಮಂಜಹನಿ ಮುದ್ದಿಸಲು
ಅರಳು ಮಲ್ಲಿಗೆಗೀಗ ಕಂಪಾಯಿತೆ ?


ಗುಡಿಯಲ್ಲಿ ಮೊಳಗುತಿಹ ವಾದ್ಯ ವೃಂದದ ಸೆಳೆತ
ಹಕ್ಕಿಗಳ ಗೂಡಿನಲ್ಲಿ ಹಾಡಾಯಿತೇ ?
ತುಡಿಯುತಿಹ ಎದೆಗಳಲಿ ಪ್ರೀತಿ ಪ್ರೇಮದ ಧ್ವನಿಯು
ಈ ಬೆರಗು ಕಣ್ಣಿನಲಿ ಮಾತಾಯಿತೆ ?

ಹಚ್ಚ ಹಸುರಿನ ವಸುಧೆ ಹುಚ್ಚು ಬೆಳಕಿನ ಹಿಂದೆ
ಶರವೇಗ, ಮೌನದಲಿ ತಾನೋಡಿತೆ?
ಈ ಕೆಚ್ಚು ಮನದೊಡತಿ ಬಿಚ್ಚು ಮಾತುಗಳಿಂದ
ಒಲವು ಗೆಲವಿನ ರಾಗ ತಾ ನೀಡಿತೇ?

ಪಡುವಣದ ರವಿಯೀಗ ಮುಳುಗಡೆಯ ಹಾದಿಯಲಿ
ಬಾನೆಲ್ಲ ಶೋಕದಲಿ ಕಪ್ಪಾಯಿತೆ?
ಇನ್ನು ಎಲ್ಲಿಯ ಪ್ರೀತಿ? ಯಾವ ರೀತಿಯ ಬಂಧ ?
ಈ ಚಂದ ಬದುಕಿಗೆ ಮುಪ್ಪಾಯಿತೆ ?

೨೦೦೫

Thursday, January 13, 2011

ಬಾಲಿಶ ಕವನಗಳು !! 13 ಒಂದು ಚಿತ್ರ !!

ಗಿರಿಯ ಸಾಲಿನ ನಡುವೆ ಪುಟ್ಟ ಕೊಳ 
ಹತ್ತು ಮರ ಮುಂದೆ ಮನೆ 
ಬೆಳಗ್ಗಿನ ಕಿಟಕಿಯಲ್ಲಿ ಕೆಂಪು ಸೂರ್ಯ 
ಕರಗುವ ಮಂಜು ಹಿತವಾದ ಚಳಿ 
ಹನಿಬಿದ್ದ ಸದ್ದು, ಹಕ್ಕಿಗಳ ಮುದ್ದು 
ಮಡುಗಟ್ಟಿದ ನೀರ ಮೇಲೆ ಹೊಳೆವ ತಾವರೆ !

ಮಧ್ಯಾಹ್ನದುರಿಗೆ ತಾವರೆ ಎಲೆಯಲ್ಲಿ
ಬೆವರ ಸಾಲು, ಕಂಬನಿ ಚಿಮ್ಮಿ ನಿಂತದ್ದು 
ಶುದ್ದ ಸ್ಪಟಿಕದ ನೀರು , ಕದಕಿದರೆ ಕೆಸರು 
ಹರಿವಿರದೆ ಜಾರುವ ಜೊಂಡು ಹುಲ್ಲು 
ಸಂಜೆಯ ಮಾನಸ ಸರೋವರ !
ಅಲ್ಲಲ್ಲಿ ಹಂಸ ನೀರಕ್ಕಿಗಳು 
ಮತ್ತೆ ಮರ, ಮತ್ತೆ ತರಗೆಲೆ ಸದ್ದು 
ಹೊಗೆಯ ಅಬ್ಬರ , ಸುಮ್ಮನುರಿವ ಬೆಂಕಿ 
ಮುಳುಗಡೆಯತ್ತ ಪಡುವಣದ ಸೂರ್ಯ 

ಚಂದಿರನ ತಂಪುರಾತ್ರಿ, ಕೆಲವೊಮ್ಮೆ 
ಮಾತಿರದ ಕತ್ತಲು 
ಕೆರೆತುಂಬ ನಕ್ಷತ್ರ ಚಂದ್ರರು !!
ಸುಮ್ಮನೆ ಕೂಗುವ ಗೂಬೆ , ಊಳಿಡುವ ನಾಯಿ 
ಮತ್ತೆ ಮೌನ 
ಬೆಚ್ಚನೆಯ ನಿದ್ದೆಯ ಲೋಕ 


೨೦೦೫ 
(ಇಲ್ಲಿ ನಾನು ಮಗು,ತರುಣ, ಮದ್ಯ ವಯಸ್ಕ ಮತ್ತೆ ವೃದ್ದನನ್ನು ಕಲ್ಪಿಸಿಕೊಂಡಿದ್ದೇನೆ )  

Wednesday, January 12, 2011

ಅಡಕೆಮರಕ್ಕೆ !!!


ಹಸೆ ಹತ್ತಿ, ಕತ್ತೆತ್ತಿ..ಫಲ ಉಡುವ ಸಿರಿಯೆತ್ತಿ


ಹಣ್ಣಾಗಿ ,ಕೊನೆಗೆ ಮಣ್ಣಾಗಿ,
ಬಂಗಾರ ಬಾಳ್ ನಿಂದು , ಸಿಂಗಾರ ತಾಯೇ ..ಅಗೆದಗೆದು ಉತ್ತೆ ನಾ ಪಡೆಯೆ ನಿನ್ನ ಫಲ,
ಮಣ್ಣೊಲವ ಮರೆತರೂ  ಬಿಡದೆ ನಿನ್ನಯ ಬೆನ್ನು ,
ಗರಿಕೆಯಂತಿದ್ದ ನೀನ್ , ಚಿಮ್ಮಿದಾ ಪರಿ ಏನು ?
ಬರಿ ಬೆಡಗು ನನಗಿನ್ನು; ಕುಬ್ಜ ನಾನು !!ವರುಷ ಎಷ್ಟಾಯ್ತೆಂದು ಯಾರು ಕೇಳಿದರಿಲ್ಲ ,
ನನಗೋ ದಿನವೆಷ್ಟೆಂದು ಕೇಳುವರು ಎಲ್ಲಾ!
ಅಪರೂಪಕ್ಕೋ ಏನೋ ನಮ್ಮಲ್ಲೂ ಒಬ್ಬ ನಿನ್ನಂತೆ!
ಬಾಹುಬಲಿಯಾದನವ; ನಾವ್ ಮಾತ್ರ ಬೆತ್ತಲೆ !


ನಿನ್ನ ಫಲ ಕೈಯಲ್ಲಿ , ನಾವು ಕತ್ತರಿಯಲ್ಲಿ !
ಉತ್ತರಿಸದಿಹ ಪ್ರಶ್ನೆ ಇನ್ನು ನೂರಾರು !
ನೋಡೋಣ ಮುಂದೆ ; ಈಗ ಬಣ್ಣದ ಲೋಕ 
ಕತ್ತಲಾದಂತೆ ಎಲ್ಲವೂ ಕಪ್ಪೇ !!


ಈಶ್ವರ ಭಟ್ "ಕಿರಣ"
೧೩/೦೧/೨೦೧೧