Wednesday, February 9, 2011

ಬಾಲಿಶ ಕವನಗಳು !! 24,, ಕೆರೆಗೊಂದು ಕಲ್ಲು !


ತಿಳಿನೀರ ಮೇಲೊಂದು ಕಲ್ಲು

ಅಲೆ ಅಲೆಯಾಗಿ ಹೊರತ ನೀರು
ಇನ್ನೊಂದಲೆಯ ಮುಟ್ಟಿ .. ಸುಮ್ಮನೆ
ವೃತ್ತಾಕಾರವಾಗಿ ..

ಆಹಾರ ಬಿತ್ತೆಂದು ಏಳುವ ಮೀನು
ಸಾಮಾನ್ಯವೆ೦ಬ೦ತಿರುವ ದೊಡ್ಡ ಮೀನು
ಮೇಲೆ ಬರುವ ಮೀನನ್ನೇ ಕಾಯುವ ನೀರೊಳ್ಳೆ
ಮತ್ತೆ ಆ ಕಲ್ಲಿಗೆ ಕೃತಜ್ಞತೆಯ ನೋಟ

ಕೊನೆಯ ಮುಟ್ಟಿದ ಕಲ್ಲು
ಕೆರೆಯ ನೀಲಿಯ ಸ್ವಲ್ಪ ಕೆಸರಾಗಿಸಿ
ತಳದಲ್ಲಿಯೇ ಭದ್ರ
ಕೆಸರೋ ಅಲ್ಲಲ್ಲಿಯೇ ಚದುರಿ ಸ್ಥಳಾಂತರ
ನೋಡುಗರಿಗೆ ಕೆರೆ ಹಾಗೆಯೇ
ಶಾಂತ ,ಸಮಾಧಾನಿ

ಆಹಾರ ಹುಡುಕುವ ಮೀನು
ಮೀನು ಕಾಯುವ ಹಾವು
ಸ್ಥಳಾಂತರ ಬಯಸುವ ಕೆಸರು
ಕಾಯುವುದು
ಇನ್ನೊಂದು ಕಲ್ಲಿಗೆ !!

04/10/2004

Thursday, February 3, 2011

ಬಾಲಿಶ ಕವನಗಳು !! 23 ಮೊದಲ ನೋಟಕೆ !!

ಮೊದಲ ನೋಟಕೆ ಯಾವ ಭಾವವೋ
ಸುಳಿಯಿತೇನೋ ಮನಸಲಿ
ಒಡಲ ಮಾತನು ಬಯಸಿ ಹೇಳಿದೆ
ಪಡೆದೆ ಏನೋ ನೆನಪಲಿ

ಬರಿಯ ಆಸೆಗೆ ಹಗಲು ಕನಸಿಗೆ
ಗೆಲುವೆ ಹೊಸಕಿತೆ ನಗೆಯನು ?
ಕಳೆದೆ ಏತಕೆ ಪ್ರೀತಿ ಮಾತನು ?
ಒಲವೆ ಇರಿಯಿತೆ ನನ್ನನು?

ನೂರು ನೋವಿನ ಎಲ್ಲೆಯಾಚೆಗೆ
ಎಲ್ಲೋ ನಲಿವಿನ ನಗುವಿದೆ
ಮುನಿಸು ವಿರಸದ ತೋಟದಲ್ಲಿಯೇ
ಹೊಸತು ಪ್ರೇಮದ ಗಿಡವಿದೆ

ಹಾರೋ ಚಿಟ್ಟೆಯೇ ಏರು ಮೇಲಕೆ
ಹೂವ ತೊರೆ ಹಳೆ ನೆನಪನು
ಮೇಲೆ ಕಾಣುವ ತಾರೆಯೊಲುಮೆ
ಗಳಿಸು ;ಪ್ರೀತಿಯ ಬಾಳನು .


29/01/2005 

ಬಾಲಿಶ ಕವನಗಳು !! 22 ಹೂವಿಗೆ

ದುಂಬಿ ಮರೆತಿದೆಯೇನು ಈ ಹಳ್ಳಿ ಹೂವನ್ನು
ಗಾಳಿ ತೊರೆದಿದೆಯೇನು ಈ ಗಂಧವ ?
ಗಿಡವೆ ಮುನಿದಿದೆಯೇನು ಈ ಭೂಮಿ ತಾರೆಯಲಿ
ಕಡಿದಿದೆಯೆ ಮುಳ್ಳುಗಳು ಈ ಬಂಧವ?

ಎಳೆಬಿಸಿಲ ತೋರದೆಯೆ ಮೋಡ ಮರೆಯೊಳಗಿಂದ
ಬಂದಿಹನು ನೇಸರನು ನೆತ್ತಿಮೇಲೆ
ಹೂವು ಬಾಡಿಯೆ ಇಲ್ಲ , ಅಂದಕ್ಕೆ ಸಮನಿಲ್ಲ
ಏನಿದರ ಒಳಗುಟ್ಟು ? ಸೃಷ್ಟಿಲೀಲೆ !


ಬಯಕೆ ಸೊರಗಿದೆ ಮಲ್ಲೆ ;ಬೇಕು ಕಹಿ ಬಾಳಿನಲಿ
ಇಲ್ಲವಾದರೆ ಸಿಹಿಯ ರುಚಿಯು ಗೊತ್ತೇ?
ಏನಾದರೇನಂತೆ ಕೊರಗದಿರು ಓ ಹೂವೆ
ಕಡಲೊಳಿಹುದು ನೋವು , ಅದುವೆ ಮುತ್ತೇ !!

ನಿನ್ನ ತೊರೆದವರೆಲ್ಲ ಬಂದೆ ಬರುವರು ಬಳಿಗೆ
ಬರದಿದ್ದರೇನಂತೆ ಹೊಸ ದುಂಬಿ ಬರಲಿ !
ಗಗನ ದೀಪಿಕೆ ನೀನು ,ಹೊನಲ ಭೂಮಿಕೆ ನೀನು
ಎಂದೆಂದಿಗೂ ನಿನ್ನ ನಗೆ ಮೊಗ್ಗರಳಲಿ !

೦೭/೦೧/೨೦೦೫