Saturday, June 25, 2011

ಕೃಷ್ಣಾಯಣ



ನಿನ್ನೆ ನಾನು ಕಂಡೆ ಕನಸ
ಪಾತ್ರ ಅದಲು ಬದಲು
ರಾಮನಿಲ್ಲ ತ್ರೇತಾಯುಗದಿ
ಕೃಷ್ಣ ಜನುಮವಾಗಲು

ಅಂತು ಇಂತು ಕೃಷ್ಣ ಕೂಡ
ರಾಮನಂತೆ ಕಾಡಿಗೋದನು
ಕೊಂದನೆಲ್ಲ ರಕ್ಕಸರ
ಮುನಿಗಳನ್ನ ಕಾಯ್ದನು

ಕೃಷ್ಣನಾದರೇನು ಇಲ್ಲಿ ಕೂಡ
ರಾವಣೇಂದ್ರ ಬಂದನು
ಸೀತೆಯನ್ನು ಆಗಿನಂತೆ
ಈಗಲೂ ಕದ್ದೊಯ್ದನು

ಮುಂದುವರೆದ ಕೃಷ್ಣ ಕೂಡ
ವಾನರರ ಕೂಡಿಕೊಂಡ
ಕೃಷ್ಣನಿಗೆ ಸೀತೆ ತರುವ ಭಾಷೆ
ಕೊಟ್ಟ ವಾನರ ಮುಖಂಡ

ಹನುಮ ಹೊರಟ ಸೀತೆಯನ್ನು
ಹುಡುಕೊ ಹುರುಪಿನಿಂದ
ಕಂಡು ಕರೆದುಕೊಂಡು ಬಾರೊ
ಎನುವ ಮಾತು ಕೃಷ್ಣನಿಂದ

ಕಂಡ ಸೀತಾಮಾತೆಯನ್ನು ಹನುಮ
ಪೇಳ್ದ ಕೊಟ್ಟು ಉಂಗುರ
ಮಾತೆಯನ್ನು ಹೊತ್ತು ಹಾರಿ
ಬಂದ ಕೃಷ್ಣನ ಹತ್ತಿರ.

ಕದ್ದ ಲಂಕಾಧೀಶನೆದುರು
ಯುದ್ಧ ಮಾಡಲಿಲ್ಲ
ವರ್ಷ ಮುಗಿಸಿ ರಾಜ್ಯ ಸೇರಿ
ಸುಖದಿ ಇದ್ದರೆಲ್ಲ.

೧೮.೦೬.೨೦೧೧

Tuesday, June 14, 2011

ಓಹ್ ಮಿಡತೆ


ಓಹ್ ಮಿಡತೆ.. ಈಗ ನಿನ್ನಂತೆ ನನ್ನ ನಡತೆ

ಮೊದಲು ಹೀಗಿರಲಿಲ್ಲ, ಈಗ ನಿನ್ನಂತೆ.
ಹಾಗೆಂದು ಹುಲ್ಲು ತಿನ್ನುವುದಿಲ್ಲ
ಅಡಗಿ ಕೂರುವುದಿಲ್ಲ
ಓಡಿ ಆಡುವುದಿಲ್ಲ

ಬರಿಯ ನೆಗೆದಾಟ ಅಷ್ಟೆ.
ನಿನ್ನಂತೆ ನನಗೂ ಗೊತ್ತಿಲ್ಲ
ಯಾರ ಬದುಕಿನ ಬೇಟ?
ಯಾವ ಕಪ್ಪೆಗೆ ಊಟ ?


೧೨.೦೬.೨೦೧೧ 



"ಚಿತ್ರ ಕೊಟ್ಟ ನರೇಶ್ ಭಾವ ಅವರಿಗೆ ಮತ್ತೆ ಫೋಸು ಕೊಟ್ಟ ಮಿಡತೆಗೆ " 

Sunday, June 12, 2011

ಕೆಲವು ಲೈನುಗಳು, ಕವನವಾಗದೇ ಉಳಿದದ್ದು ..

ಸವಾಲು ಇಲ್ಲದ ಜೀವನ
ಟವೆಲ್ಲು ಇಲ್ಲದ ಸ್ನಾನ - ಎರಡೂ ಒಂದೇ ರೀತಿ ಅಲ್ವಾ?
 
ಸವಾಲು ಬರಿಸೋದು ಕಣ್ಣೀರು
ಟವೆಲು ಒರೆಸೋದು ತಣ್ಣೀರು
ರಾಮನಿಗೆ ವನವಾಸ ಎಂದರಿತ ಸೀತೆ ಹೋದಳವನ ಜೊತೆ ಕಾಡಿಗೆ
ಇವಳು ತವರು ಮನೆ ಸೇರಿದ್ದಾಳೆ , ಅವ ತರಲಿಲ್ಲ ಸೆಂಟು ಪೌಡರು ಮತ್ತೆ ಕಾಡಿಗೆ !!
ರಾಮ ನಾನಾಗಲಿಲ್ಲ, ಏಕೆಂದರೆ
ಕಾಡಿಂದ ಬರುವ ಮೊದಲೇ ಸೀತೆ
ನಾನು ಇನ್ನೊಬ್ಬಳಿಗೆ ಸೋತೆ !
ಪ್ರಿಯೆ , ಕೊಡುವೆಯಾ ಒಂದು ಮುತ್ತು
ಉಹುಂ.. ಎಷ್ಟಿದೆ ನಿನ್ನ ಬಳಿ ಸೊತ್ತು?
ಸೊತ್ತಿಲ್ಲ ನನ್ನಲ್ಲಿ, ತೋರು ನಿನ್ನಯ ಕತ್ತು
ತಾಳಿ ಕಟ್ಟುವುದಷ್ಟೆ ನನ್ನ ತಾಕತ್ತು !!
ಗೆಳತಿ ,
ಹೃದಯದ ನೋವು ದೊಡ್ಡದಾಗಿತ್ತು ನೀನು ಬಿಟ್ಟಾಗ
ಅದಕಿಂತ ನೋವಿದೆ,ಗೊತ್ತಾಗದೇ ಕಾಲುಗುರು ಕಿತ್ತಾಗ !!
ಹಿಂದೆ ಎಷ್ಟು ಸಲ ಅತ್ತಿದ್ದೆ ನಿನಗಾಗಿ ನೊಂದು
ಈಗಲೂ ಅಳುತಿರುವೆ ಈರುಳ್ಳಿ ಕೊರೆದು !!
ಬಂದ ಭಾವಕ್ಕೆ ಬಂಧನವಿಲ್ಲ, ಬಿಡುಗಡೆ !
ಎ೦ದವನು ಒಬ್ಬನ ಕೊ೦ದ
ಇ೦ದವನ ಬಿಡುಗಡೆ !!