Tuesday, August 30, 2011

ಓ ಕವಿಯೇ..


ಓ ಕವಿಯೆ, ಪ್ರಕೃತಿ ಪ್ರೇಮಿಯೆ ನೋಡು
ನೀರಿಲ್ಲಿ ಹರಿಯುವುದೆ ಹಾಲಿನಂತೆ ?
ನಿಲ್ಲಿಸು ನಿನ್ನ ಅರಚಾಟ ಕಿರುಚಾಟ
ನೀರೆ ಇರದಿರೆ ಏಕೆ ಹಾಲ ಚಿಂತೆ ?

ನಿನ್ನ ಆಭಾಸಕ್ಕೆಲ್ಲ ಉತ್ತರಿಸುವುದ್ಯಾರು
ಹಾಲು ನೀ ಹುಡುಕು ನನಗೆ ಬೇಡವಿಲ್ಲಿ !
ಮುನಿದು ಮೈಯ್ಯನು ಮುಚ್ಚುವಾಟವು ಬೇಡ
ಎಳೆಯುವುದು ನಿನ್ನ ಕೈ ಸೆರಗನಿಲ್ಲಿ

ಮೂಕವದು ಭಾವಗಳು ಎಂದೆಲ್ಲ ಒದರದಿರು
ಭಕ್ತಿ ಪ್ರೀತಿಗಳೆಲ್ಲ ನಿನ್ನ ಒಳಗೆ !
ನಿನಗೆ ನೆಪ ಬೇಕೆಂದು ಬರೆವ ತೆವಲು ಇದಲ್ಲ
ಕಣ್ಣೀರು ಕರಗುವುದೆ ಜೇನಿನೊಳಗೆ ?

ಬತ್ತಲಲಿ ಕತ್ತಲಲಿ ಬರಿಯ ಬಟ್ಟಲಲೆಲ್ಲಾ
ನೀ ಬರೆವ ಘನತರದ ಕಾವ್ಯ ಕವನ !
ಇದರ ಮೇಲೊಂದಿಷ್ಟು ಕಸವೊ ಬೆಂಕಿಯೊ ಹಾಕಿ
ಮತ್ತೆ ತೋರುವುದೇನು ನಿನ್ನ ಜತನ ?

ಸಾಕು ಕವಿ , ನೀನೆ ಗುರು ! ದೈವ ನಮಗೆ
ಬರೆಯದಿದ್ದರು ಕೊಡಿಸು ಸ್ವಲ್ಪ ಬೆಲ್ಲ!
ಮತ್ತೆ ಕೊಪ್ಪರಿಗೆ ಚಿನ್ನ ನಾನು ಕೇಳುವುದಿಲ್ಲ
ಉತ್ತರಿಸು ಪ್ರಶ್ನೆಗಳ ಬರಿಯ ಕನಸು ಅಲ್ಲ !

೩೦-೦೮-೨೦೧೧

Saturday, August 27, 2011

ಬೆಳಗು.


ಹಸಿಬಿಸಿಯಿರೆ ವಸುಮತಿಯಧರವ ಚುಂಬಿಸಿದನು ಭಾನು
ಹುಸಿಕೋಪದ ಬಿರುಮಾತುಗಳಿರೆ ಮರು ಹಾಡಿದನವನು
ಮುಸಿಮುಸಿಯೆನೆ ನಗುತಿರ್ದನು ಕಳೆದಾ ಚಂದಿರನು
ನಸುನಾಚಿಕೆಯಲಿ ಸುಖಸೌಖ್ಯದಿ ರಂಗೇರಿದೆ ಬಾನು.

ಕಂಬನಿಯನು ಛೇಡಿಸುತಿದೆ ಮೊಗದಾ ರವಿಯರಳು
ಬೆಂಬಲದಲಿ ನಿಂತಿಹುದದು ಮಲ್ಲಿಗೆ ಮೊಗ್ಗರಳು
ಹಿಂಬಾಲಿಸಿ ಭೂಮಿಯ, ಸವರಿ ಮತ್ತೆ ಹೆರಳು
ಬೆಂಬಿಡದಹ ಕಿರಣವದು ಸೂರ್ಯನ ಕೈ ಬೆರಳು

ಲೀಲೆಯಹುದೆ? ಇದು ಪ್ರೇಮವೆ? ಅಲ್ಲ ಬೆಳಗಿನಾಟವೋ
ಮೇಲೆ ಮುತ್ತು ರತ್ನವಿಟ್ಟು ಸೆಳೆವ ಪ್ರಕೃತಿ ಬೇಟವೊ
ಜಾಲದೊಳಗೆ ಬಂಧಿಸಿರುವ ಜಗದ ಸೊಬಗಿನೋಟವೊ
ಕಾಲದೊಳಗೆ ಹೊಂದುವಂತ ನಮಗೆ ನಿತ್ಯ ಪಾಠವೋ

೨೫.೦೮.೨೦೧೧

Wednesday, August 24, 2011

ಹೋಟೆಲಿನ ಒಳಗೆ .


ಇವತ್ತು ಬರೆಯಲೇ ಬೇಕೆಂದು ಕವನ
ಹುಡುಕಿದ್ದೆ ಶಬ್ಧಗಳ, ಮತ್ತೆ ಪಾರ್ಕುಗಳ
ಸುಸ್ತಾಗಿ ಮರಕೊರಗಿ ಚಿಂತಿಸುತಲಿದ್ದೆ
ಹಸಿವಾಗಿ ಮನದೊಳಗೆ ಹೋಟೆಲಿನ ಸದ್ದು !

ಬಿಸಿ ಇಡ್ಲಿ ಪೂರಿಯದು ಎಂತಹಾ ಸ್ವಾದ
ನೆನಪಾಯ್ತು ಅಮ್ಮನದು ಪ್ರೀತಿ ಅಗಾಧ
ಮನೆಯಲ್ಲೆ ಕಣ್ಮುಚ್ಚಿ ತಿಂದಂತೆ ಕುಡಿದಂತೆ
ಎಲ್ಲೋ ಕಳೆದೋಗಿದ್ದೆ ರುಚಿಯ ಉನ್ಮಾದಕ್ಕೆ

ಇಂತ ಪ್ರೀತಿಯ ಇಲ್ಲಿ ಇಟ್ಟವರು ಯಾರು
ಅಬ್ಬ ಮನೆಯಂತೆಯೇ ಹೋಟೆಲಿನ ಸೂರು
ಯಾರು ಬೀಳಿಸಿದರಿಲ್ಲಿ ಪಾತ್ರೆಗಳ ?ಸದ್ದು
ತಂದಿತ್ತು ರಸಭಂಗ, ತಿರುಗೆ ಏನಾಯ್ತು ಎಂದು !

ಹೋಟೆಲಿನ ಕೆಲಸದವ ಬೀಳಿಸಿದ್ದೇನು ?
ಪಿಂಗಾಣಿ ಪಾತ್ರೆಗಳು , ಬೆಚ್ಚಿತ್ತು ಕಣ್ಣು
ಬಲುಕೋಪಿ ಒಡೆಯನವ ಗದರಲಿಲ್ಲವನ
ಒಡೆದಿತ್ತು ತುಟಿಯಂಚು, ಮುದುಡಿತ್ತು ವದನ !

ಅಯ್ಯೊ ಎಲ್ಲವು ಹೀಗೆ ಎಲ್ಲಕಡೆಯಂತೆ
ಪ್ರೀತಿ ಹಾಡಿನ ಹಿಂದೆ ನೋವುಗಳ ಸಂತೆ
ಹೋಟೆಲಿನ ರೂಮಿನೊಳು ಹುಟ್ಟಿತ್ತು ಗೀತೆ
ಮತ್ತೆ ಅಲ್ಲಿಯೆ ಉಸಿರುಗಟ್ಟಿತ್ತು! ಸತ್ತೆ !!

೨೪-೦೮-೨೦೧೧

Monday, August 15, 2011

ವಿಷ ಯಾನ !!


ಹುಟ್ಟು ನಾ ಬಯಸಲಿಲ್ಲ
ಸಾವು ನಾ ಕಾಣಲಿಲ್ಲ
ನಡುವೆ ನೋವಿನೆಳೆಗಳಿಂದ ಇಳಿದ ಮೌನ

ಬೆಂಕಿಯೆದುರು ರೆಕ್ಕೆ ಸುಟ್ಟೆ
ಮಳೆಯ ಎದುರು ಕೊಚ್ಚಿ ಹೋದೆ
ಬೆಳೆಸಿ ಬೇಯಲಿಲ್ಲ ಬಿತ್ತದ ಗಾನ

ಪಡೆಯಲಾರೆ ಮೇಲೆ ಹೂವ
ಬಯಸಲಾರೆ ನೆಲದ ನೋವ
ಮಧ್ಯ ಸಿಲುಕಿ ಸುಮ್ಮಗುರಿವ ಯಾನ

ಚಿತ್ತದೊಳಗೆ ನೂರು ಭೀತಿ
ಭೀತಿಯೆನಿತೊ ಅಷ್ಟೆ ಪ್ರೀತಿ
ಸುಂದರತೆಯ ಭಾವವಿಲ್ಲಿ ವಿಷ ಯಾನ !!

೧೨-೦೮-೨೦೧೧

ಸೊಳ್ಳೆ ತತ್ವ !!!


ಸುಗ್ರಾಸ ಭೋಜನ,
ತಂಪಿದ್ದ ಉದರ, ಕಂಪಿನ ಕೋಣೆಯದು
ಮತ್ತೆ ಮೆಲ್ಲನೆ ಮೆತ್ತೆ, ಬಳಿಯಿತ್ತು ಕವನ
ಬೆಚ್ಚಿದ್ದೆ ಅದರೊಳಗೆ ಇರುವ ಹೂರಣ ಕಂಡು
ಎಲ್ಲೊ ಕಳೆದೋದಂತೆ ,
ತಲೆತಿರುಗಿ, ಕಣ್ ಮುಚ್ಚಿ ತಲ್ಲೀನನಾದೆ!
ಸತ್ಯದರ್ಶನವಾಯ್ತು, ತಿರುಗಿ ಎದ್ದೆ

ರಸಭಂಗ ಏಕಾಯ್ತು
ಹುಚ್ಚಿತ್ತು ಶಾಂತಿಯದು, ವಿಶ್ವಪ್ರೇಮದ ಒಲವು
ಮತ್ತೇನೋ ಮತ್ತೇರಿಸುವ ಒಳ್ಳೆ ಬದುಕಿನ ಕನಸು.
ಇಷ್ಟೆಲ್ಲ ಅಧ್ಯಯನ, ಮತ್ತೆ ಒಳ್ಳೆಯ ಚಿಂತೆ!
ತಿಳಿದೀತೆ ಸೊಳ್ಳೆಗದು ಕಚ್ಚಿತ್ತು ಮತ್ತೆ !

ಸತ್ಯದನ್ವೇಷ ಉನ್ಮಾದ ಎಲ್ಲ ನೆನೆಸುವ ಮುನ್ನ
ಹೊಡೆದ ಪೆಟ್ಟಿಗೆ,
ಸೊಳ್ಳೆ ಸತ್ತಿತ್ತು, ಹೀರಿದ ನೆತ್ತರ ಕಕ್ಕಿ..
ಕವನ ಮಡಿಚಿಟ್ಟೆ, ಚಾದರದೊಳಗೆ ನಾನೆ ಬಂದಿ

10-08-2011

ಕೆಂಪು ಮೇಫ್ಲವರು


ಕೆಂಪು ಮೇಫ್ಲವರು ಈ ಮರದ ಹೆಸರು
ಈ ಮನೆಯ ಎದುರಿತ್ತು ಬಿಗಿಯಿತ್ತು ಬೇರು !

ಮನೆಯೊಡತಿ ಬಲುಜಾಣೆ ಹೆಸರೇನೊ ಕಾಣೆ
ನೀರೆಯದಿದ್ದರೂ , ಪಾತ್ರೆ ತೊಳೆದವಳು ತಾನೆ

ನೆತ್ತರಿನ ಕೆಂಪು ಅದು ಗೊಂಚಲಿನ ಹೂವು
ಮೇ ತಿಂಗಳಲಿ ಮರವು ಮರೆಸುವುದು ನೋವು

ಮನೆಯ ಮಾಡನು ನೋಡೆ ಹುಳು ಹಿಡಿದ ಸಂತೆ
ಹೆಂಚಿನ್ನೂ ತರುಣ, ಮರದವುಗಳು ಮದುಕನಂತೆ

ಈ ಸಂಜೆ ಮನೆಯಾಕೆ ಮರದ ಬಳಿ ಬಂದು
ಇನ್ನೆರಡೆ ತಿಂಗಳಿವೆ, ಹೂಗಳನೆ ನೆನೆದು

ಬಂದಿದ್ದ ಸಂತಸದಿ ಆ ದಿನದಿ ಗಂಡ
ಮರನೋಡಿ ನಸುನಕ್ಕ ಬಲಿತಿತ್ತು ಕಾಂಡ

ಮರುದಿನವೆ ಕರೆತಂದ ಮರಕಡಿವ ಮಂದಿ
ಮರದ ತೋಳುಗಳೆಲ್ಲ ಬಡಗಿಯೊಳು ಬಂದಿ

ಈಗಿಲ್ಲ ಮರದಚ್ಚು ಆ ಮನೆಯ ಪರಿಸರದಿ
ಬಾಗಿಲೊಳು ಮರದ ಹೂ ನಗುತಿಹುದು ಮುದದಿ !

೦೮.೦೮.೨೦೧೧

ಅವನು- ಇವನು


---ಅವನು----
ಹೂ ಬಿಟ್ಟ ಗಿಡವನ್ನು
ಅವ ನೋಡುತಿದ್ದ
ಹುಟ್ಟಿಸಿದ ದೇವರನು
ಪುನಃ ಬೇಡುತಿದ್ದ
ಬೇಲಿಯಿಂದಾಚೆಗೇ ಮುಖ ಮಾಡಿ ನಿಂತಿರುವ
ಗುಲಾಬಿ ನೀನೆಂದು
ಬಹು ಇಷ್ಟಪಟ್ಟಿದ್ದ

---ಇವನು---
ಎಷ್ಟು ಗೊಬ್ಬರವಿದಕೆ?
ಇನ್ನೆಷ್ಟು ನೀರು
ಬಿಟ್ಟದ್ದು ಒಂದು ಹೂ
ಎಷ್ಟಿಹುದು ಮುಳ್ಳು
ಇದರ ಬೆಲೆ ಬಹು ಕಡಿಮೆ, ಮಲ್ಲಿಗೆಯೆ ಒಳ್ಳೆಯದು
ಕಿತ್ತ ಗಿಡವನು ಇವನು
ಬಹು ಕಷ್ಟಪಟ್ಟಿದ್ದ.

೦೮-೦೮-೨೦೧೧

ಬರೆಯುತ್ತೇನೆಂದರೆ ಬರೆ ಎಳೆದಂತಲ್ಲವೇ .?


ಕಾದು ನಿಗಿ ನಿಗಿ ಕೆಂಡದ ಮಧ್ಯೆ
ಬೂದಿ ಮುಚ್ಚಿಸಿಕೊಂಡು
ಮತ್ತೆ ಊದುವ ಹಿತವಾದ ಗಾಳಿಗೆ ಮೈತೆರೆದು
ಪುನಃ ಬೆಚ್ಚಗಾಗುವ ಕಬ್ಬಿಣ

ಬೆಚ್ಚಗಾಗುಗುವುದೇನು ಮಹಾ ?
ಕೈಗೆ ಕೈ ಒರಸೆ ಬಿಸಿಯೆಂಬರೆ ಅದನು
ಒಲೆಯ ಒಳಗಡೆ ಬಿದ್ದು
ಬೆಂಕಿಯಾಟದಿ ನೊಂದು
ಕಾಯಬೇಕು!

ಮತ್ತೆ ಮೈ ತಾಕಿದರೆ,
ಚರ್ಮ ಉರಿದೇಳಲಿ
ಬೊಬ್ಬೆ ಕಣ್ಣೀರ್ ಬರಲಿ
ಸುಟ್ಟು ಸುಡಬೇಕೆಲ್ಲ , ಬೆಂಕಿಯಂತೆ

ಬರೆ ಎಳೆಯುವುದು
ಒಳ್ಳೆಯದಾಗಲಿ ಎಂದು
ಅದು ಬಿಟ್ಟು ಬರಿಯ ಸಿಟ್ಟೇನು ಇಲ್ಲ
ಹಾಗೆಯೇ, ಬರೆಯುತ್ತೇನೆಂದರೆ ಬರೆ ಎಳೆದಂತೆ ಅಲ್ಲವೇ ?

೦೬.೦೮.೨೦೧೧

ನನ್ನ ಬೆಂಕಿ ಸುಡಲಿಲ್ಲ



ಹಚ್ಚುತ್ತಿದ್ದೆ ಸಣ್ಣ ಕಾಗದ ಚೂರ
ಕೈ ಮೇಲೆ ಬಿದ್ದಾಗ ಉರಿಯಬಹುದೋ ಎಂದು
ಹೆದರಿಕೆ ಇದ್ದರೂ ಹಚ್ಚಿದೆ,
ಬಿದ್ದರೂ ಸುಡದೇ ಇದ್ದದ್ದಕ್ಕೆ ಬೆಚ್ಚಿದೆ.

ಅದೆ ಆಶ್ಛರ್ಯ,
ಬೆಳ್ಳಂಬೆಳಗೆ ನಡೆಯುವಾಗ
ನಡುಬಳುಕಿಸಿ, ಕೆಣಕಿ ನಡೆದ
ಮೋಹಗಾತಿ ಚೆಲುವೆಯನ್ನ ಕಂಡಾಗ
ಕಣ್ ಸುಟ್ಟಿತ್ತು,

ನಡುವೆಯೆಲ್ಲೋ ತಿರುಗುವಾಗ
ನಗೆಯ ನಡುವೆ ಹೊರಳಿದಂತ
ಅವಳ ಮಾತು ಮನವ ಸುಟ್ಟಿತ್ತು.

ಸೋಕಿದರೂ ಸೋಕದಂತೆ
ತಾಕಿದ ಮೈಬಿಸಿಯುಸಿರಿಗೆ
ಅವಳ ಕಾವು ಹೆಚ್ಚು ಎಂದು
ದೇಹ ಸುಟ್ಟಿತ್ತು,
ಬೂದಿಯಾಗೊ ಆಸೆ ಹುಟ್ಟಿತ್ತು.

೦೫-೦೮-೨೦೧೧

Monday, August 8, 2011

ಬಾಲಿಶ ಕವನಗಳು - ಎರಡು ಜಡೆ ...


ನಿನ್ನೆ ವರೆಗೆ ಈ ಹುಡುಗಿ
ಎರಡು ಜಡೆಯ ಪುಟ್ಟ ಬೆಡಗಿ
ಕಣ್ಣ ತುಂಬ ಹಗಲುಗನಸು
ತುಂಬಿ ನಿಂತ ಬಾಲಿಕೆ
ಇಂದು ಏಕೋ ನಾಚಿಕೆ


ಎರಡು ಜಡೆಗು ಹೂವ ಮುಡಿದು
ಹತ್ತು ಮೊಗದಿ ನಕ್ಕು ನಲಿದು
ಮೀರಿ ಬರುವ ಕೋಪದಿಂದ 
ತುಂಟತನದ ಬೈಗಳು
ಹೊಡೆವ ಪುಟ್ಟ ಕೈಗಳು


ಗಾಳಿಗೊಂದು ಮಾತುಕಟ್ಟಿ
ಮಾತಿಗೊಂದು ಹಾಡು ಕಟ್ಟಿ
ಸೋತು ಗೆಲುವ ಅವಳ ದನಿಗೆ
ಎಲ್ಲ ನುಡಿಯು ಚಂದವೇ
ಸೆಳೆವ ರಾಗ ಗಂಧವೇ


ನಿನ್ನೆ ಎನಿತೋ ಅಂದವಿತ್ತು
ಮಾಧುರ್ಯದ ಗಂಧವಿತ್ತು
ಇಂದು ಏಕೋ ನನ್ನೆದೆಯಲಿ 
ಚಿಂತೆ ತುಂಬಿ ಬಳಲಿದೆ
ಅವಳ ದಾರಿ ಕಾದಿದೆ


ಬಂದ ಸ್ನೇಹಕೆಂತ ಅಂತ್ಯ
ಬದಲಾವಣೆ ಎಂತ ಸತ್ಯ
ಎಲ್ಲಿ ಹುಡುಕಿ ಹೋಗಲಿ ನಾ
ನೀನು ಕೊಟ್ಟ ಸ್ನೇಹವ
ನಿನ್ನಂತ ಪ್ರೀತಿ ಜೀವವ ?


೧೪.೦೬.೨೦೦೫

Monday, August 1, 2011

ನಿನ್ನಂತರಾಳವನು ಹೇಗೆ ಅರಿಯಲಿ ನಾನು?

ನಿನ್ನಂತರಾಳವನು ಹೇಗೆ ಅರಿಯಲಿ ನಾನು
ಎಂದೆನ್ನ ಟೀಕಿಸಿದ ನನ್ನ ಸ್ನೇಹಿತನು

ಅವಳ ತುಟಿ ನೋಡಿದರೆ ಇದ್ದಿಲಿನ ನೆನಪಂತೆ !
ಇಷ್ಟ ಪಟ್ಟೆನು ಮೊದಲು ಕಪ್ಪು ಬಿಳುಪಿನ ಪರದೆ,
ಈಗೀಗ ಬಣ್ಣಗಳು , ಹೊಸ ಬಗೆಯ ನೋಟಗಳು
ಬಯಸಿದ್ದು ತಪ್ಪೇ , ಅವನ ಅರಿಯದೆ ಹೋದೆ.

ನಡು ಸಣ್ಣಗಿರಬೇಕೆಂದು ರಸಿಕನಾಗಿಯೆ ಹೇಳಿ
ಮೊದಲು ಕೆಣಕಿರಲಿಲ್ಲ , ಈಗ ವಿರಕ್ತಿಯ ಸೋಗು
ಬಯಸುವುದು ತಪ್ಪೆಂದು ಆಗಾಗ ಒದರುವನು
ಸುಂದರತೆ ಬದುಕಲ್ಲ ಎಂದೆನ್ನ ಗದರುವನು.

ಲತೆಯಂತೆ ಇರಲವಳು ನಾನೊ ಮರವಾಗುವೆನು
ಅಪ್ಪುಗೆಯೋ ಭೀಮನದು ಎಂದೆ ನಾನು
ಅಲ್ಲಿಯೋ ಇಲ್ಲಿಯೋ ಮರ ಸಾವು ಕಂಡಾಗ
 
ಇನ್ನೊಂದು ಮರಕೆರಗಿ ಬದುಕಲಾರದೆ ಲತೆಯು ?

ನಿನ್ನಂತರಾಳವನು ಹೇಗೆ ಅರಿಯಲಿ ನಾನು
ಎಂದೆನ್ನ ಟೀಕಿಸಿದ , ಈಗೆಲ್ಲ ಅವನು !



29.07.2011