Monday, September 26, 2011

ಏಳೆನ್ನ ನಲ್ಲೆ.


ಇಬ್ಬನಿಯ ಕಣ್ಣಲ್ಲಿ ನಿನ್ನ ನೋಡಿದ ನೆನಪು
ಮಬ್ಬಾದ ನಿನ್ನ ತುಟಿ ಬೆಳಗಿನಲ್ಲೆ
ತಬ್ಬಿದಾ ಚಂದಿರನ ಕುರುಹು ಹೆರಳಿನೊಳಿರಲು
ತಬ್ಬಿಬ್ಬುಗೊಂಡಿರುವೆ ಏಳು ನಲ್ಲೆ ......

ಹಕ್ಕಿಗಳ ಇಂಚರವು ನಿನ್ನ ಪಿಸುಮಾತಿನೊಳು
ಮಿಕ್ಕ ಪ್ರಣಯದ ಕಥೆಯ ಹೇಳಿದಂತೆ
ಪಕ್ಕದಲೆ ಬಿದ್ದಿರುವ ಚೆಂಗುಲಾಬಿಯ ಎಸಳು
ಸಿಕ್ಕಿಹುದು ಎನಗೀಗ , ಏಳು ನಲ್ಲೆ...

ಮಲ್ಲಿಗೆಯೊ ಸಂಪಿಗೆಯೊ ಮತ್ತೆ ಕೆಂದಾವರೆಯೊ
ಎಲ್ಲ ಮಾಯವೆ ,ಗೆಳತಿ ನಗುವಿನಲ್ಲೆ
ನಿಲ್ಲುವುದು ಹೃದಯದಲಿ ನಿನ್ನ ಪ್ರೇಮದ ಗೆರೆಯು
ನಲ್ಲೆ ನನ್ನನು ನೋಡೆ, ಏಳು ನಲ್ಲೆ !

26.09,2011

Wednesday, September 21, 2011

ಏನೋ ಬೇಕಾಗಿದೆ !

ಏನೋ ಬೇರೆ ಬೇಕಾಗಿದೆ !
ಎಂಜಲು ಹಾರಿದ್ದಕ್ಕೆಲ್ಲ
ಧ್ಯಾನಿಸಿ ಅನುಭವಿಸಿದ
ಗಾಯನ ಎನ್ನದಿರಿ !

ಕಲ್ಲಿಗೆ ಕಲ್ಲು ತಿಕ್ಕಿದರೂ ಬೆಂಕಿ ಸಿದ್ದ !
ಆದರೂ
ದಾರಿ ಸವೆಸಲಾರದ
ಕತ್ತಲ ಸೆರೆ ಒಡೆಯಲಾಗದ
ಮಿಣುಕು ಹುಳುವಿನಂತೆ !!
ಮಿಂಚೆಂದೊದರದಿರಿ !
ದೀಪವೂ ಅಲ್ಲವದು.
ಸುಮ್ಮನೆ ಹಾರಿದ ಕಿಡಿಗೆ ಬದುಕು ಅಷ್ಟೆ !

ಎರೆಹುಳು ಹೋದರೆ ಎರೆ ಅನ್ನಿ ! ಸಾಕು
ಬೊಬ್ಬಿಟ್ಟು ಕೂಗದಿರಿ ಹೆಬ್ಬಾವು ಎಂದು !
ನಿಮಗೆ ಹಾಗನಿಸಿದರೆ ಅದು
ನಿಮ್ಮ ದೃಷ್ಟಿದೋಷ !!

೨೨-೦೯-೨೦೧೧

Wednesday, September 14, 2011

ಸೂರ್ಯ ಶಿಕಾರಿ .

೧.
ಸೂರ್ಯನನ್ನು ನೋಡಬೇಕೇ ?
ಮುಖವನ್ನು ಕೈಯಿಂದ ಮುಚ್ಚಿ
ಸಣ್ಣ ತೂತುಗಳಿಂದ ಬೆಳಕಿನ ನಿಚ್ಚಳಿಕೆಯನ್ನೇರಿ
ಬೆಚ್ಚಿ ನೋಡಬೇಕು,
೨.
ಹಾಂ! ಕನ್ನಡಿ ತೆಗೆದು
ನಿನ್ನ ಬಿಂಬವನ್ನಲ್ಲದೆ ಸೂರ್ಯನನ್ನೂ ನೋಡು
ನೀ ಸೂರ್ಯನಿಗೆ ಕನ್ನಡಿ ಹಿಡಿ
ನಿನ್ನ ಮುಖಕ್ಕೆ ಬೆಳಕು !!
೩.
ನೀ ನೋಡು ಅವನನ್ನು ಅವ ನೋಡದಂತೆ
ಹಿಡಿದಿಡು, ಬಚ್ಚಿಡು ಮಳೆಮೋಡದಂತೆ !

೧೪.೦೯.೨೦೧೧

Saturday, September 10, 2011

"ಚೋಳ ಕಡಿತ"

ಹೀರಿ ಸಸ್ಯದ ಕಾಂಡ, ಕಚ್ಚಿ ಮಾಂಸದ ಖಂಡ
ತುಂಬಿದಾ ಉದರ ಭಾರಕೆ ಹೆದರಿ,
ಜಗದ ಚಾದರದೊಳಗೆ
ಮೌನ ನಿದ್ದೆಯ ಬಯಸಿ ಮೆಲ್ಲ ಜಾರಿದರೆ - ಕಡಿದಿತ್ತು ಚೇಳು

ಬೆಂಕಿ ಆರಿಸೊ ನೆಪದಿ ನೀರಿನಾ ಸೆರಗಿಂದ
ಶಂಕೆಯೋ ಅಂಕೆಯೋ ಇಲ್ಲದೆಯೆ,
ಬಿಂಕದಾ ಬೆಂಕಿಯನು
ಮೈಮೇಲೆ ಎಳೆದೆಳೆವ ಹುರುಪಿತ್ತು - ಮತ್ತೆ ಕಡಿದಿತ್ತು ಚೇಳು

ಮೆಚ್ಚಿತ್ತು, ಬೆಚ್ಚಿತ್ತು , ಸಿಕ್ಕಿತ್ತು ಕಾಳು
ಮತ್ತೆ ತಂಪಾಗೆಂದು ತುಟಿ ಬಯಸಿತ್ತು ಹಾಲು
ಕಾಮಹೋಮದ ಬೆಂಕಿ ಕಟ್ಟಿತ್ತು ಸಾಲು
ಎಲ್ಲ ಸೋಲಿಸಿ, ಗೆದ್ದಿತ್ತು ಸಂಸ್ಕಾರ ಚೇಳು !!

೧೭-೦೮-೨೦೧೧