Friday, October 28, 2011

ಸೌಗಂಧಿಕಾ ಪ್ರಸಂಗ .!


ಬಿರಿದ ಕಣ್ಣು ಸೆಳೆವ ಮೋಹದೂಟ!
ಬೆಚ್ಚಿಬಿದ್ದಳಾಕೆ ಭೀಮನ ನೋಟಕೆ
ಕದಿಯುವಾಸೆ ಅವನ ಸಂಗ
ಸೋತು ಗೆಲ್ಲಬಲ್ಲ ನಲ್ಲನವನು !

ಸೌಗಂಧಿಕಾ ! ಕಲ್ಪನೆಯೇ ? ಅಲ್ಲ
ಗಾಳಿಗೆಲ್ಲೋ ಹಾರಿ ಬಂದ ಹೂವು ಅದು
ಬಿಳಿ ಹಳದಿ ಗುಲಾಬಿ ಬಣ್ಣ
ಸೆಳೆದುದೇಕೆ ಕಣ್ಣ ಬಣ್ಣ ?

ನೋಡಿದೊಡನೆ ಸುಮದ ಚಂದ
ಒಡಲೊಳ್ ಹರಿದ ಪ್ರೇಮಗಂಧ
ಒಡನೆ ಬಳಿಗೆ ಬಂದ ಭೀಮ
ಸುಡುವ ಸತಿಯ ಬಯಕೆ ಏನು?

ಹೌದು ಭೀಮ ಹುಡುಕಿ ತಾ
ದುಶ್ಶಾಸನ ಹಿಡಿದೆಳೆದಿಹ
ಹೆರಳನೆಲ್ಲ ಮತ್ತೆ ಹೆಣೆದು
ಅಂಥ ಹೂವ ಮುಡಿಸಬೇಕು

ನಗುವ ಮಡದಿಗಿಂದು ಹೂವ
ಬಿಗಿದು ಅಪ್ಪಿ ಮುಡಿಸುವಾಸೆ ಅವಗೆ !
ಜಗದ ಚೆಲುವೆಯವಳು
ಮುಗುದ ಭೀಮ ಸೇನ ಇವನು !

ಗಂಧಮಾದನ ಪರ್ವತವೋ
ಸುಂದರಾಂಗಿಯರ ಕೊಳವೋ
ಬೆಂದು ಬೇಯುತಿದ್ದ ಭೀಮನೆದೆಗೆ
ಮುಂದೆ ಒಂದು ಸರೋವರ !

ದೂರದಿಂದ ಭೀಮ ಕಂಡ
ಮಾರ ಎಸೆದ ಹೂವ ಬಾಣ
ಕರುಬುತಿತ್ತು ಯಕ್ಷ ಬಳಗ
ಸಿರಿಯೇನ್ ದ್ರೌಪದಿಯದು ?

ತಲೆಯ ತುರುಬುಗಟ್ಟಿ ಹೂವ ಮುಡಿಸುವ
ಕಲೆಯ ಎಲ್ಲಿ ಕಲಿತ ಕಲಿಭೀಮ ?        
ಒಲ್ಲೆ ಎಂದಳೇನೆ ಅವಳು
ಸುಳ್ಳೆ ಮುನಿದಳು !

ಹೂವ ನೆಪದಿ ಭೀಮನ  ತೆಕ್ಕೆಯೊಳು ಬಂಧಿ
ನೋವಿತ್ತೆ ಮೊದಲು ! ಈಗಿಲ್ಲ ಮನದಿ !

೨೮-೧೦-೨೦೧೧

Thursday, October 6, 2011

ಸೂತ ಸಂವಾದ .


ಮಗನೆ,
ಬಿಲ್ಲು ಕಲಿಯುವ ಚಟವೋ
ಏನದು ದೊಡ್ಡ ಮಾಟ,
ಅಲ್ಲಿ ಬ್ರಾಹ್ಮಣರು ಹೇಳಿಕೊಟ್ಟದ್ದಕ್ಕೆ !
ಭೂಭುಜರು ಮಾರಾಮಾರಿ ಕಾದಿ
ಕಾರಿದ ನೆತ್ತರೆ ಸಾಕ್ಷಿ.

ಹೌದು ಮಗೂ.
ಬ್ರಾಹ್ಮಣರು ಹೇಳಿಕೊಡಬಹುದಂತೆ !
ಉಪಯೋಗಿಸುವಂತಿಲ್ಲ,
ಹಾಗೇ ಕ್ಷತ್ರಿಯರೂ !
ಬಳಸಬಹುದು ! ಭೋಧನೆ ನಿಶಿದ್ಧ.

ಕೇಳು,
ನಾನಂತೂ ಸೂತ ಮಗು!
ಅಪ್ಪ ಬ್ರಾಹ್ಮಣನೋ ಕ್ಷತ್ರಿಯನೋ ?
ಬಿಲ್ಲೋಜರ ನಡುವೆ ರಥ ಓಡಿಸುವುದು
ಬಿಲ್ಲುವಿದ್ಯೆಗಿಂತ ಗೆಲ್ಲುವ ವಿದ್ಯೆ!

ನಿನ್ನಬ್ಬೆ ಯಾರು ಮಗು ?
ಗಂಗೆಯೇ , ಅಲ್ಲ ಮಬ್ಬುಕತ್ತಲಿನಾಟಕ್ಕೆ
ಹೊಕ್ಕಳ ಬಳ್ಳಿ ಕತ್ತರಿಸಿದ ಮತ್ತೊಬ್ಬಳಿಹಳೇ.?

ನಿನ್ನ ಯೋಗಕ್ಕೆ, ಒಬ್ಬ!
ಬೆನ್ನುತಗ್ಗಿರುವ ಪರಶುರಾಮನಿದ್ದಾನೆ .
ಕಲಿಕೆ ನಿನ್ನ ಪ್ರಾಣ ....
.....ತೆಗೆಯದಿರಲಿ !

೦೭-೧೦-೧೧