Sunday, October 28, 2012

ನಾನು ಮತ್ತು ಬೆಳಕು


ನಾನು ಮತ್ತು ಬೆಳಕು ಎದುರಾಗಿದ್ದು ಇತ್ತೀಚೆಗೆ
ಅದು ಬೆಳಗುತ್ತಿತ್ತು.
ಎಣ್ಣೆ ಸುಡುವ ವಾಸನೆಗೆ
ಮತ್ತು ಬಂದಂತೆ ನಾನು ಕುಳಿತಿದ್ದೆ.

ಹಿಂದೆ ಬೆಂಕಿ ಕಂಡವ ಉಳಿಸಿದ್ದನ್ನು
ನಾನು ನೋಡುವುದೇ?
ಅಲ್ಲ. ಅವನಂತೆಯೇ
ನನಗೂ ಒಂದು ಬೆಳಕಿನ ಪರೀಕ್ಷೆ ಅಷ್ಟೆ.

ಅಪ್ಪ ಹೇಳಿದ ಬೆಳಕು,
ಅಮ್ಮ ಹೇಳಿದ ಬೆಳಕು
ಎರಡೂ ಬೇರೆ ಬೇರೆ, ಆದರೂ
ಈ ಬೆಳಕು ಅದೆರಡೂ ಅಲ್ಲ. ಭಿನ್ನ.

ಸುಡುವುದು ಬೆಂಕಿ,
ಸುಟ್ಟದ್ದನ್ನು ತೋರಿಸುವುದು ಬೆಳಕು
ಎಂದು ಅರಿವಾಗುವ ವೇಳೆಗೆ
ಎಣ್ಣೆ ಮುಗಿಯುವುದು
ಪದ್ಧತಿ.

Saturday, October 27, 2012

ಅತ್ತಕಡೆಯಿಂದ ಬರುವಾಗ ಇನ್ನೊಮ್ಮೆ


ಅತ್ತಕಡೆಯಿಂದ ಬರುವಾಗ ಇನ್ನೊಮ್ಮೆ
ಇಣುಕಿ ನೋಡದೆ ಹೋಗಳೆನ್ನ ಚೆಲುವೆ
ಸುತ್ತಮುತ್ತಲು ಯಾರೂ ಇರದಂತ ವೇಳೆಯಲಿ
ಕೆಣಕು ಮಾತಲಿ ನನ್ನ ಕರೆಯದಿಹಳೆ?

ಬಾಗಿಲಿನ ಬಳಿಯಲ್ಲಿ ನಿಂದು ಬಳಿ ಕರೆದಂತೆ
ಬಳೆಯ ದನಿಯನು ಮಾಡಿ ಓಡುತಿಹಳೇ
ಅಲ್ಲೆಲ್ಲೋ ಕಾಣಿಸುತ, ಇನ್ನೆಲ್ಲೋ ಮಾಯದಲಿ
ಬಳಿಗೆ ಬಂದರೆ ಮೂಕ, ಮತ್ತೆ ಅವಳೇ!

ಹಬ್ಬದಲಿ ಜಾತ್ರೆಯಲಿ ಪೇಟೆಯಲಿ ಬೀದಿಯಲಿ
ಅವಳ ಹೆಜ್ಜೆಯ ಹುಡುಕಿ ನಡೆವೆ ಎಂದು
ಅವಳೋ ಬಲುಜಾಣೆ, ನನಗಿಂತ ಬಲುಚುರುಕು
ಗುರುತುಗಳನಿಟ್ಟಿಹಳು, ನಾ ಬರುವೆನೆಂದು!

Tuesday, October 23, 2012

ಬರಿಯ ನಾನು!


ನನ್ನ ಕಾಯುವ ಅವಳು ಕರಿಮುಗಿಲೊ ಸುಳಿಮಿಂಚೊ
ಸುಮ್ಮನುರಿಯುವ ಹಗಲೊ ತಿಳಿಯದಾದೆ
ಸೆಳೆತವೇನೋ ತಿಳಿಯೆ, ಮತ್ತೇನೂ ಹೇಳದೆಯ
ಇನ್ನೂ ಕಾಯುತಲಿರಲಿ; ತಿರುಗಿ ಬಂದೆ!

ಹೇಗೆ ಹೇಳುವುದಿನ್ನು ಒಲವೆಂದೊ ಚೆಲುವೆಂದೊ
ಸಾಗಹಾಕುವ ಸಮಯ ಸಾಕು ಎಂದೋ?
ನೋಡನೋಡುತ್ತಲೇ ಬೆಳೆದ ಮಲ್ಲಿಗೆ ಬಳ್ಳಿ
ಹೂ ಬಿಡದೆ ಸೊರಗೀತೆ? ತಪ್ಪು ನಿನ್ನದೆಂದು?

ಮಳೆಯ ಹನಿ ಬರಬೇಕು, ಒಡೆದು ಆ ಮುಗಿಲುಗಳು
ಕರಗಬೇಕು ಅಲ್ಲಿ ಹಾಲು ಜೇನು!
ಇಲ್ಲವಾದರೆ ಸುಟ್ಟು ಕರಕಲಾಗುತ ಹೀಗೆ
ಇರಬೇಕು ಇನ್ನು ನಾನು ನೀನು!

Saturday, October 20, 2012

ಹೊಸ ಹುಟ್ಟು.


ಬಾಗಿಲು ತೆರೆದ ದನಿ ಕೇಳಿಸಿತು
ಒಳನಡೆದೆ, ಹಿತದ ಕತ್ತಲು
ಕೇಳಿದೆ; ಯಾರಿಲ್ಲಿ?

ಬಾ ಮಗನೇ ಬಾ, ನೋಡು
ಇದು ಕಂಬ, ಇದು ಮಾಡು,
ಇದು ನನ್ನ ಗೂಡು.

ಒಳಗಿದೆಯೊ ಒಂದಿಷ್ಟು ಹಳೆಯ ಮಡಕೆಯ ಚೂರು!
ಆರಿಲ್ಲವಿನ್ನೂ ನೆತ್ತರು. ಪುನಃ ಇಹುದೆ ಚಿಗುರು?
-
ಹೊರಗೆ ಮಳೆಯಾದಂತೆ ಸದ್ದು,
ಹನಿ ಬಿದ್ದರೆ ಸಾಕು, ಜಗ್ಗನೇಳುವ ಬೀಜ
ಇನ್ನೇನು ಕಳವಳಿಕೆ?
ಹೊರಗೆ ಬಂದೆ.
ನಾಳೆ ಬಂದೀತೆಂದು ಹೊಸತು ಮೊಳಕೆ!