Monday, July 9, 2012

ಹಕ್ಕಿ ಕಲಿಸಿದ್ದು.


ಹಕ್ಕಿನೋಡಿ ಮರುಳಾಗಿ
ಅಂತೆಯೇ ಹಾರಬಯಸಿದೆ
ಬಿದ್ದೆ, ಸಾವರಿಸಿಕೊಂಡು ಎದ್ದೆ.
ಕೈಗಳೇಕೋ ರೆಕ್ಕೆ ಆಗಲೇ ಇಲ್ಲ.

ಲೆಕ್ಕವಿರಿಸಿಕೊಂಡೆ
ಒಂದು ಎರಡು ಅಲ್ಲ ಮೂವತ್ತಮೂರು!
ಕೊನೆಗೆ ದಕ್ಕಿದ್ದೆಷ್ಟು?
ಬರಿಯ ಹಿಕ್ಕೆ!

ಅವು ಹಾಗೇ ಹಾರುವುದಿಲ್ಲ
ತತ್ತಿ, ಬಿರಿದೊಡೆಯಬೇಕು
ಮತ್ತೇನೋ ಬಿಸಿ ಮುಟ್ಟಿ
ಹೊಟ್ಟೆ ಚುರುಕ್ಕೆಂದಾಗ
ಗೂಡಿನ ಜಾಗ ಸಾಲುವುದಿಲ್ಲ
ಎನಿಸಬೇಕು.

ಅರಿವಾದಾಗ ಹಾರುವುದು
ಹಾರಿದಂತೆಯೇ ಅರಿವು.

Thursday, July 5, 2012

ಇಂದ್ಯಾಕೆ ತೊರೆದೆ ಹೇಳು


ಇಂದ್ಯಾಕೆ ತೊರೆದೆ ಹೇಳು
ನೀನಿರದೆ ಇಹುದೆ ಬಾಳು
ಒಂದೆ ಭಾವ ಒಂದೆ ಜೀವ
ಇಂದು ಎರಡು ಹೋಳು!

ಬಿತ್ತಿದಾಸೆ ಚಿಗುರುಗನಸು
ಮತ್ತೆ ಬೆಳೆಯೆ ಪ್ರೇಮಜಲದಿ
ಸುತ್ತ ಬರುವ ಬೆಂಕಿ ವಿರಸ
ಹಿತವಾಯಿತೆ ಹೇಳು?

ಒಲವು ಪಾಶ ನಾನೆ ಕೊರಳು
ನೀನೆ ಎಳೆವ ನೋವಿನಬಲ
ಕರಗಿ ಹೋಗಲೆಲ್ಲ ನೋವು
ವಶವಾಗಲಿ ಸಾವು!

Tuesday, July 3, 2012

ಬಾರೋ ಬೇಗ ಬಾರೋ


ಬಾರೋ ಬೇಗ ಬಾರೋ ಇಳೆಗಿಳಿವಾ ಮಳೆಯ ಹಾಗೆ
ಸೇರೋ ಈಗ ಸೇರೋ ನಿನ್ನ ಸೆಳೆವೆ ನನ್ನ ಕಡೆಗೆ.

ಈಟಿಯಂತೆ ದಾಟಿ ಬಾರೊ ಅಂತರಂಗ ಕುಲುಮೆಯ
ಮೀಟುವಂತ ನೋವಿನೊಳಗೆ ಬೆಳಗು ಪ್ರೇಮಜ್ವಾಲೆಯ
ಕೂಟವಾಗೆ ಮೆರೆದು ಪೂರ್ಣ ಫಲವ ಧರಿಪ ಇಳೆಯೊಲು
ಸಾಟಿಯಹುದೆ ಈ ಸೃಷ್ಟಿಗೆ ನಾನು ನೀನು ಬೆರೆಯಲು!

ಹರಿದು ಧಮನಿಯೊಡೆದು ಬರಲಿ ನಿನ್ನಾವೇಶ ಮೀರೆ
ಇಳಿದು ಸೆಳೆತಪಡೆದು ಕರಗಿ ನಿನ್ನ ಒಲವ ಧಾರೆ
ಮಿಂಚು ಬೆಳಕಿನಾಟದಂತೆ ಸಿಡಿದ ಪ್ರೇಮ ಮಾಲೆ
ಪಡೆದು ನಾನು ಹಡೆವೆ ಚಿಗುರ ನಿನ್ನಕರುಣೆ ಲೀಲೆ

ಹಳೆಯ ಗುಣವು ಜಾರಿ ಹೋದರೇನು ಜಾವದಂತೆಯೆ
ಹೊಸತು ಸೃಷ್ಟಿ ಸೃಜಿಸಿ ಮೆರೆವ ವೇಳೆ ಮೀರದಂತೆಯೆ
ಬಾರೊ ಬೇಗ ಬಾರೋ ನಾವು ಜಗಕೆ ಮೊದಲ ದೇವರು
ಸೇರೊ ಒಲಿದು ಸೇರೋ ನಾವೆ ಇದಕು ಅದಕು ಜೀವರು!

೦೩-೦೭-೨೦೧೨