Sunday, December 29, 2013

ನಾಯಿಯಿದೆ ಎಚ್ಚರಿಕೆ.

ನಮ್ಮೂರ ಓಣಿಯಲಿ ಇತ್ತು ದಾಂಡಿಗ ನಾಯಿ
ಪರವೂರ ಗಲಭೆಗೇ ಬೊಗಳುತಿತ್ತು;
ಸ್ವಂತ ಓಣಿಯ ಜಗಳ ಇದರ ಪರಿಧಿಯದಲ್ಲ
ಎಂದೆನುತ ಪರಜನರ ಮೂಸುತಿತ್ತು.

ದೂರದೂರಲಿ ಸತ್ತ ಕಾಗೆ ನರಿಗಳ ಹೆಣವ
ಅಗೆದಗೆದು ಊಳಿಡುತ ಸಾರುತಿತ್ತು
ಸ್ವಂತ ಓಣಿಯಲಿರುವ ಯಜಮಾನ ಸತ್ತರೂ
ಮೂಲೆಯೊಳು ಮುದುರಿ ತಾ ಮಲಗುತಿತ್ತು.

ಹಿಂದೊಮ್ಮೆ ಪರವೂರ ನಾಯಿಗಳ ಓಲೈಸಿ
ಓಣಿಯಲಿ ಕ್ರಾಂತಿಯೆನೆ ಬೊಗಳಿ ರಾಗ;
ತನ್ನ ಕಜ್ಜಿಯ ತುರಿಕೆ ಸಾರ್ವಜನಿಕರಿಗೆಂದು
ಕರೆಕರೆದು ತೋರುವುದು ತನ್ನ ರೋಗ.

ಇಂತ ನಾಯಿಯ ಚಿತ್ರ ಮಾಧ್ಯಮದ ತುಂಬೆಲ್ಲ
ಪರರ ಕಾಳಜಿ ಚಿಂತೆ ನಾಯಿಗೆಂದು
ಪ್ರತಿಯೊಂದು ಸನ್ಮಾನ ಪಾರಿತೋಷಕ ಕೊಟ್ಟು
ದೊಡ್ಡ ಪೀಠವ ಬಿಟ್ಟು ಕೊಟ್ಟರಿಂದು.

ಪರರನ್ನು ಹೊಗಳುವುದು ತಮ್ಮವರ ಬೊಗಳುವುದು
ಈ ನಾಯಿ ವ್ಯವಹಾರ ತಿಳಿಯಲಿಲ್ಲ;
ನಾಯಿ ಕಚ್ಚುವ ದಿನಕೆ ಆಸ್ಪತ್ರೆ ಹುಡುಕಿದರು
ರೋಗ ಮಾಡಿದ ಕೇಡು ಗ್ರಹಿಸಲಿಲ್ಲ.

Tuesday, December 24, 2013

ನಿನ್ನ ಸ್ನೇಹದ ಸವಿಯ ನಾನರಿವ ಮೊದಲಿಗೇ

ನಿನ್ನ ಸ್ನೇಹದ ಸವಿಯ ನಾನರಿವ ಮೊದಲಿಗೇ
ನೋವು ಬರಬೇಕಿತ್ತು ನಮ್ಮ ಜೊತೆಗೆ;
ಸುಖದ ಸಖ್ಯಕ್ಕಾಗಿ ನಲ್ಮೆ ಮರೆಯುವುದೇನೆ?
ತಪ್ಪೊಪ್ಪು ವ್ಯವಹಾರ ಪ್ರೀತಿಗಿಹುದೇ?

ನೀನಪ್ಪುವೆಡೆಯಲ್ಲಿ ಸುಖದ ಕ್ಷಣಗಳ ಹುಡುಕಿ
ಅನುದಿನವು ಬದುಕುವುದ ಕನಸು ಕಂಡೆ;
ಯಾವುದೋ ತೋಳರಸಿ ನೀನು ಸುಖದಲಿ ನಕ್ಕೆ
ನಾನಿಂತು ಬಾಳರಸಿ ನೋವನುಂಡೆ.

ಮಳೆಗೆ ಬೇರನು ಬಿಟ್ಟು ಮೇಲೇರಿದಾ ಲತೆಗೆ
ಬಿಸಿಲು ತಾಕಿದ ದಿನಕೆ ಬಂತು ಕೋಪ
ನೀನು ಸುಖದಲಿ ನಕ್ಕು, ನೋವಲ್ಲಿ ನೆನಪಿಸಿದೆ
ಸ್ವಚ್ಚಂದ ಬದುಕಿನಲಿ ಯಾರ ಶಾಪ?

ನಿನ್ನ ನಲಿವಿನ ಲೆಕ್ಕ ನಾನು ಕೇಳುವುದಿಲ್ಲ
ಹಂಚಿಕೊಳ್ಳಲೆ ನೋವು? ಬೇಡ ನನಗೆ
ನಿನಗೆ ನೀನೇ ಮದ್ದು ನನಗೆ ನಾನೇ ಮುದ್ದು
ಎಲ್ಲ ಮುಗಿಯಲಿ ನೆನಪು ಸಾವಿನೊಳಗೆ.

Friday, December 20, 2013

ನಾವಿಬ್ಬರೊಂದಾಗಿ ಸಾಗಿ ದೂರಕೆ ಬಂದು

ನಾವಿಬ್ಬರೊಂದಾಗಿ ಸಾಗಿ ದೂರಕೆ ಬಂದು
ಇಲ್ಲೆಲ್ಲೋ ಬಚ್ಚಿಟ್ಟ ಮಾತುಗಳನು
ಬೇರಾರೂ ಬಯಸದೆಯೆ ನಕ್ಕು ತಲೆದೂಗುವರು
ಓ ಕವಿಯೆ ಕೇಳುತಿಹೆ ಯಾಕೆ ನೀನು?

ಮೊದಲ ಮಾತುಗಳೆಲ್ಲ ಆ ಹೊಳೆಯ ಸ್ಪರ್ಧಿಗಳು
ತೆರೆಯ ಮೇಲಿನ ತಾನ ಅದರ ಬಿರುಸು
ಹಾಲ್ನೊರೆಗೆ ಎದೆಹಿಗ್ಗಿ ಏರಿ ಬರುತಲ್ಲಿತ್ತೋ
ಅದರಾಚೆಗೆ ಇನ್ನೂ ಏರು ಕನಸು

ಅಂದೊಂದು ದಿನ ಮೌನ ಬಿಸಿಲಗಾಲದ ನದಿಯು
ಕಾದ ಮರಳಿಗೆ ಬಿತ್ತು ಕಣ್ಣನೀರು
ಯಾವುದೋ ಹೂವಿಂದ ಬರುವ ಗಂಧದ ಗಾಳಿ
ಮತ್ತೆ ಬೆರೆಸುತ್ತಿತ್ತು ನಮ್ಮ ಉಸಿರು.

ನಿನ್ನೆ ಬಂದವಳಿನ್ನು ಬರದೆ ಹೋದಾಳೆಂದು
ಈ ಹೊಳೆಯ ಹರಿವಿಗೂ ಅರಿದಂತಿದೆ
ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ ದಂಡೆ
ನಲ್ಲ ನಲ್ಲೆಯ ಪ್ರೇಮ ಸುಳಿಯಲ್ಲಿದೆ.

ಬಚ್ಚಿಟ್ಟ ಮಾತುಗಳ ಹೂತುಬಿಡು ಓ ಕವಿಯೆ
ಇಂತ ಮಾತುಗಳನ್ನು ಹಾಡಬೇಡ
ಅವಳನ್ನು ತಲುಪಿದರೆ ಈ ನೋವು ಮೆರವಣಿಗೆ
ನನ್ನ ಸೇರುವಳವಳು ; ಕೊಲ್ಲಬೇಡ.

Thursday, December 19, 2013

ಮದುವೆಯಲ್ಲಿ ಸಿಕ್ಕಿದವಳಿಗೆ!

ಯಾರದೋ ಮದುವೆಯಲಿ ರಾಶಿಯಿದ್ದವು ಹೆಣ್ಣು
ಮೀಸಲಾಗಿದ್ದವಳು ಕಣ್ಣುಗಳಿಗೆ;
ಮಳೆಗೆದ್ದ ಲತೆಯಂತೆ ಬಳುಕಿಯಾಡುತಲಿರಲು
ಆಸೆಯಾದಳು ಮನಕೆ, ಒಂದೆ ಕ್ಷಣಕೆ.

ಮದುವೆಯಾಗುವ ಸಖಿಯ ಬಳಿಯಿದ್ದು ಮನಗೆದ್ದು
ಏನನೋ ಹೇಳುವೊಲು ಕಣ್ಣು ತಿರುಗಿ
ನನ್ನ ನೋಡುತ ಹೀಗೆ ಮಾತನಾಡುವೆಯಲ್ಲ
ಈ ಚಂದ ಮುಚ್ಚುಮರೆ ಏಕೆ ಹುಡುಗಿ?

ಮುತ್ತು ಪೋಣಿಸಿ ನಿಂತ ನಿನ್ನ ಹಲ್ಲಿನ ಸಾಲು
ನಕ್ಕಂತೆ ಕರೆದಂತೆ ಕಂಡೆಯೇನ?
ಮಾತುಗಳನಾಡಲು ಕಾತರದ ಜೊತೆ ಭಯಕೆ
ಬೆಳಕು ಬೀರುವ ಜ್ಯೋತಿ ಕೂಡ ಮೌನ.

ಮದುವೆ ಮುಗಿಯಿತು ಇಂದು, ನಾನು ಮರೆವೆನೆ ನಿನ್ನ
ಅಂತರಂಗದ ಭಾವ ದಾಟಿದವಳೆ!
ಇನ್ನೆಲ್ಲೋ ಜೊತೆಬಂದು, ಪ್ರಶ್ನೆಗುತ್ತರವಾಗಿ
ನೀನು ಬರೆಯಲೆ ಬೇಕು ಸೊಗಸಿನವಳೆ.

Monday, December 2, 2013

ಮಲ್ಲೆಯಿಲ್ಲದ ದಿನ!

ಅವಳ ಕಣ್ಣೀರನ್ನು ಕಾಣದವನೇನಲ್ಲ;
ಕಣ್ಣೀರಿಗೂ ಉಂಟು ಮಲ್ಲೆ ಮಾತು.
ಮಲ್ಲಿಗೆಯ ದಂಡೆಯಲಿ ಹೂ ವಿರಳವಾದಂತೆ
ಕೇಳ್ದರೆನ್ನಯ ದನಿಗೆ ಏನಾಯಿತು?

ಹೂದಂಡೆ ಕಟ್ಟುವುದು ಸುಲಭಸಾಧ್ಯವೆ ಹೇಳಿ
ಎಲ್ಲದಿಕ್ಕಿಗೆ ಹೂವು ಒಲಿಯಬೇಕು;
ಹೂವರಳದ ದಿನಗಳಲಿ ಒಡಕು ಸೊಪ್ಪುಗಳಲ್ಲಿ
ಮಾಲೆಯನು ಹಣೆಯುವುದು ಒಂದು ಸೊಕ್ಕು!

ಎಂಥ ಮಾಲೆಯೊ ನಲ್ಲ! ಎನ್ನುತಲಿ ಮುತ್ತಿಡುವ
ಆತ್ಮತೋಷವ ಮಾಲೆ ತೋರಬೇಕು.
ಇಲ್ಲವಾದರೆ ಹೀಗೆ ಮಲ್ಲಿಗೆಯು ಇಲ್ಲೆನುತ
ಅವಳ ಕಣ್ಣೀರನೇ ಸುಖಿಸಬೇಕು.

Thursday, October 10, 2013

ಸಂಜೆಯ ಹಾಡು.

ಸಂಜೆಬಾನಂಗಳದಿ ಕೆಂಪು ಏರುತ್ತಲಿದೆ
ನಿನ್ನನ್ನೇ ನೆನೆಯುತ್ತ ದಿನವು ಸಖಿಯೆ,
ಯಾವುದೋ ನೋಟಕನ ಉಪಮೆಗೂ ಆಹಾರ
ನಿನ್ನ ಕೆನ್ನೆಯ ಬಣ್ಣ ಸೂರ್ಯನೆರೆಯೆ!

ಬಂದ ತಂಗಾಳಿಯೂ ಒಂದಿಷ್ಟು ತಂಪೆರೆದು
ನೀನಿರದ ಅಸಹನೆ ತುಂಬುತಿಹುದು
ಯಾವುದೋ ರಸಿಕನಾ ಎದೆಕಿಚ್ಚು ಹೆಚ್ಚುವುದು
ನಿನ್ನ ಸಾಮೀಪ್ಯವನು ಹಾಡುತಿಹುದು

ಮಲ್ಲಿಗೆಯ ಪೇಟೆಯಲಿ ನೀರ್ತಳಿದ ಹೂವುಗಳು
ನಿನ್ನ ಮುಡಿಗೇ ಎಂದು ಮರುಗುವಂತೆ
ಯಾವುದೋ ವರ್ತಕನ ನಿರೀಕ್ಷೆ ಮೀರುತಿದೆ
ನಿನ್ನೆ ಉಳಿದಿಹ ಮಲ್ಲೆ ಇಂದಿಗಂತೆ.

ರಾತ್ರಿಯಾಣತಿಯಾಯ್ತು ಇನ್ನೆಷ್ಟು ಹೊತ್ತಿಹುದೊ
ನಿನ್ನ ಕಾಯುವ ನಾನು ಹೀಗೆ ನೆನೆದು
ಯಾವುದೋ ಹಾಡಿಗೆ ನಿನ್ನ ನೆನಪಿನ ಸಾಲು
ನೀ ಬರುವ ಹಾದಿಯಲಿ ಕಣ್ಣು ಹಿರಿದು.

Wednesday, September 11, 2013

ವಿಪರ್ಯಾಸ

ಇಲ್ಲೊಬ್ಬಳು ಹುಡುಗಿ;
ಜಾರುವ ಸೀರೆಯುಟ್ಟು
ಸೊಂಟದೊಲೊಂದು ಕೊಡವಿಟ್ಟು
ನೀರಿಗೆಂದು ಬಂದುದ ಕಂಡೆ.

ತೊಟ್ಟಿಕ್ಕುವ ನಲ್ಲಿಯಲ್ಲಿ
ಅಚಾನಕ್ಕಾಗಿ ಧಾರೆಯಂತೆ ನೀರು!
ಕೊಡ ತುಂಬಿದುದನ್ನು
ಅವಳ ಕಣ್ಣಲ್ಲಿ ಕಂಡೆ;

ನಜೂಕು ನಡೆಯವಳು
ಕೊಡವನ್ನು ಏರಿಸಿ;
ನಡೆಯುವಾಗ ಎಡವದಂತೆ
ಸೀರೆಯನ್ನೆತ್ತಿ ಕಟ್ಟಿದಳು!

ಇದುವರೆಗೆ ರಮ್ಯವಾಗಿದ್ದ ನೋಟಕ್ಕೆ
ಕೃತಕ ಕಾಮದ ಅಡ್ಡಗಾಲು!
ಅವಳು ಬಿದ್ದಳು
ಕೊಡದಲ್ಲಿದ್ದ ಚಿಮ್ಮಬೇಕಿದ್ದ ನೀರು
ಚೆಲ್ಲಿದ್ದು ಕಂಡೆ.

Tuesday, August 27, 2013

ಅಷ್ಟಮೀ ಗೀತ!

ಅತ್ತಿಮರದಿಣುಕಿನಲಿ ಕಾಣುವನು ಶ್ರೀಕೃಷ್ಣ
ಅವನ ಶಲ್ಯದ ಜೊತೆಗೆ ಅವಳ ಗೆಜ್ಜೆ!
ಹಿಡಿಯಹೋದೆಯ ಸಖಿಯೆ ಅವನಂತ ನಲ್ಲನ
ಹುಡುಕಲಾರಿರಿ ನೀವು ಮೀನ ಹೆಜ್ಜೆ.
~
ಕೊಳಲ ಬಿಡು ಕನ್ನಿಕೆಯೆ, ಕೃಷ್ಣ ಹೋಗಲಿ ಸಾಗಿ
ಅವನಿಗೇನವಸರವು ತಿಳಿಯುತಿಹುದು!
ಅವನ ಪ್ರೀತಿಯ ಸಖಿಯು ಕಾಯುತ್ತಲಿಹಳಲ್ಲಿ
ರಾಧೆಗೂ ಈಗೀಗ ಜಂಭ ಹೌದು.
~
ನನ್ನರಸ ಏನಾಯ್ತು? ಯಾರೋ ಚಿವುಟಿಹರಲ್ಲ
ಈ ಊರ ಹುಡುಗಿಯರಿಗೆಷ್ಟು ಸೊಕ್ಕು?
ನಿನ್ನ ಕೆನ್ನೆಯ ಕೆಂಪು ಎಂತ ಸೋಜಿಗ ಚೆಲುವ
ನಾನಿನ್ನ ರಾಧೆ, ನೀ ನನ್ನ ಹಕ್ಕು.
~
ನಂದಗೋಕುಲದೊಳಗೆ ಮುರಳಿಲೋಲನ ಕರೆದು
ನಂದಭೂಪನ ಮಡದಿ ಮುದ್ದಿಸಿದಳು;
ಓರೆನೋಟದ ಹುಡುಗಿ ಹಾಳುಮಾಡಿದಳಲ್ಲ
ನನ್ನ ಕಂದನ ತುಟಿಯ ರಂಗುಗಳನು!
~
ಸಖಿಯು ಸಿಂಗರಿಸಿಹಳು ನಿನ್ನ ಮನೆಯಂಗಳವ
ಓ ರಾಧೆ ನಿನಗಿಂದು ಹಬ್ಬವೇನೆ?
ಗೋಪಾಲ ಬಂದಿಹನು ಹುಟ್ಟುಹಬ್ಬದ ನೆವದಿ
ಅವನ ಮನಸಲಿ ನಿಂತ ನೀರೆ ನೀನೆ!
~
~
ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು..

Sunday, August 25, 2013

ನಲ್ಲೆ ನೀ ಹೋಗದಿರು ನನ್ನ ತೊರೆದು

ನಲ್ಲೆ ನೀ ಹೋಗದಿರು ನನ್ನ ತೊರೆದು;
ಹೊರಟುದೇತಕೆ ನೀನು ಹೀಗೆ ಮುಳಿದು!
ದಾರಿಯಲಿ ಬಿದ್ದಿರುವ ಮಲ್ಲೆಹೂವಿನ ರಾಶಿ
ಕಂಡಾದರೂ ಬಾರೆ, ನನ್ನ ನೆನೆದು.

ಹೂವಂತ ಸಖಿಯರು ಇದ್ದಾರು ನನಗೆಂದು
ನಿನ್ನ ಅಂಜಿಕೆಯೇನು? ಓ ಮಲ್ಲಿಗೆ
ಇದ್ದವರು ಹೂವಂತ ಮನಸಿನಾ ಗೆಳತಿಯರು
ನೀನು ಹೂವಿನ ರಾಣಿಯಂತೆ ನನಗೆ.

ಇಂತಹಾ ಮಾತುಗಳನಾಡುವುದು ಕೆಣಕಲು
ನಿನ್ನ ಹುಸಿಮುನಿಸಿಗೆ ನಾನು ನಗಲು;
ಈ ಹುಚ್ಚು ಪ್ರೀತಿಯನು ನೀನೂ ತಿಳಿದಿರುವೆ
ಆದರೂ ಇನ್ನೇಕೆ ಮುಳಿಸಿನೊಡಲು?

ಬಾರೆನ್ನ ಹೂವೊಲವೆ; ನನ್ನ ನಗೆ ಮಲ್ಲಿಗೆಯೆ
ನಿನ್ನ ದಾರಿಗೆ ನಾನು ಮಲ್ಲೆಯಂತೆ
ಎರಡು ಜೀವದ ಬದುಕು ಒಂದಾಗಿ ಸಾಗಲು
ಮನಬಿಚ್ಚಿ ನೀ ಬಾರೆ ತೊರೆದು ಚಿಂತೆ.

ಚಿತ್ರ :ಗೋವಿಂದ ಭಟ್ ಬಲ್ಲೆಮೂಲೆ

Friday, August 16, 2013

ಅವನೋ ಅಲ್ಲ ಇವನೋ...

ಅವ ಪೇಟೆಯ ಹುಡುಗ
ಇವ ಹಳ್ಳಿಯ ಹುಡುಗ.

ಅವನೆಂಟನೆ ಸ್ಟಾಂಡರ್ಡು
ಇವನೆಂಟನೆ ಎರಡು!

ಅವನ ಬಣ್ಣ ಬೆಣ್ಣೆ
ಇವನ ಬಣ್ಣ ಎಣ್ಣೆ

ಅವನಿಗಿತ್ತು ಸಾಕ್ಸು
ಇಂವ ಭೂಮಿಯ ಜೆರಾಕ್ಸು!

ಅವನು ಹಾಲು ಕುಡಿಯುವವ
ಇವನು ಹಾಲು ಕರೆಯುವವ

ಅವನಿಗೆ ಚೇಳು ಕಚ್ಚುವುದು;
(ಸರ್ ಚೇಳು ನೋಡಿದವರು)
ಇವನಿಗೆ ಚೇಳು ಕುಟುಕುವುದು;
(ಮಾಸ್ತರು ನೋವುಂಡವರು)

ಮುಂದೆ?

ಅವನು ಎಲ್ಲ ಗಳಿಸುವವನು
ಇವನು ಎಲ್ಲ ಉಳಿಸುವವನು.

Wednesday, August 14, 2013

ಮಲ್ಲಿಗೆ ಬೇಕೇ?

ಈ ದಾರಿಯಲಿ ಬರುವ ಜನಕೆಲ್ಲ ಗೊತ್ತಿಹುದು
ಇಲ್ಲಿ ಹೂವಿನ ಹಾಡು ಕೇಳುತಿತ್ತು;
ನಲ್ಲೆಗೋ ನಲ್ಲನಿಗೋ ಮಲ್ಲಿಗೆಯ ಮಾತುಗಳು
ಮೆಲ್ಲ ಪಿಸುದನಿಗಳಲಿ ತಿಳಿಯುತಿತ್ತು.

ನಸುಬೆಳಗು ಅರಳಿರುವ ಮಲ್ಲೆ ಹೂಬನದಿಂದ
ಗಾಳಿಯಲಿ ಬೆರೆತು ಹೊಸ ಕಂಪು ನೀಡಿ,
ಹಾದಿಹೋಕನ ಮನಸು ಪ್ರೀತಿಯಿಂದಲಿ ಬೆಳಗಿ
ದಾರಿ ನಲಿವಾದುದು ನೋವು ದೂಡಿ.

ಸಂಜೆಯಾಗುತ ಹೀಗೆ ನಲ್ಲನಲ್ಲೆಯರೆಲ್ಲ
ಈ ದಾರಿಯನು ಹಿಡಿದು ನಡೆಯಬೇಕು
ಮಲ್ಲೆ ಹೂವಿನ ಹಾಡು ಕೇಳಬೇಕೆನ್ನುವರೆ
ಮೊದಲು ಹೂವಿನ ಬಳ್ಳಿ ಬೆಳೆಸಬೇಕು.

Wednesday, August 7, 2013

ನಿನ್ನ ನೆನಪು ಹೀಗೆ ಬಂದು

ನಿನ್ನ ನೆನಪು ಹೀಗೆ ಬಂದು ನನ್ನನಿಂದು ಕಾಡಿದೆ
ನೀನಿಲ್ಲದ ಈ ಸಂಜೆಯು, ಎಲ್ಲ ಹೂವೂ ಬಾಡಿದೆ.

ಹರಿವ ತೊರೆಯು ಉಸುರಲಿಲ್ಲ ನಿನ್ನ ನಡೆಯ ಸದ್ದು
ಸುರಿವ ಮಳೆಯ ದನಿಯಲಿಲ್ಲ ನಿನ್ನ ಮಾತು, ಮುದ್ದು!
ಮರಳಿ ಇರುಳು ತೊನೆಯುತಿಹುದು ನಿನ್ನಾ ಹೆರಳ ಕದ್ದು
ಕರಗದೇನಾ ಮರುಗುತಿಹೆನಾ ನಿನ್ನ ನೆನಪು ಹೊದ್ದು!

ಸುಳಿವ ತಂಗಾಳಿಗಿಲ್ಲವಲ್ಲ ನಿನ್ನ ನೆನಪು ಗೆಳತಿ
ಉಳಿಸಿ ಹೋಗುತಿಹುದು ಹುಸಿಯ! ನೀ ಸೋಕದ ರೀತಿ
ಗಳಿಗೆಗೊಮ್ಮೆ ನೆನಪಿಸುವುದು ಚಳಿಯು ನಿನ್ನ ಸವತಿ
ಸುಲಭವೇನೆ ಮರೆಯುವುದು? ನನ್ನ ಹೇಗೆ ಮರೆತಿ?

ಬಾರೆ ಗೆಳತಿ ಸನಿಹವಿದ್ದು ಈ ಮಳೆಯನು ಸೋಲಿಸು
ಕಾರಿರುಳಿನ ಹುಚ್ಚುತನಕೆ ಶಾಂತತೆಯನು ಕಲಿಸು.

ಸುಮ್ಮನಿರುವ ಸಮಯದಲ್ಲಿ ನೀನು ನನ್ನ ಕಾಡುವೆ

ಸುಮ್ಮನಿರುವ ಸಮಯದಲ್ಲಿ ನೀನು ನನ್ನ ಕಾಡುವೆ
ಕಾಡಿದರೂ ನೋವಾದರೂ ನಾನು ಹಾಡು ಹಾಡುವೆ!

ದೂರದಲ್ಲಿ ಯಾರೋ ಪ್ರೇಮಿ ಎಡವಿದಂತೆ ವೀಣೆಯ
ಮೀರಿ ಬರುತಲಿಹುದು ಗೆಳತಿ ಒಂದೇ ಎಳೆಯ ರಾಗವು
ನನ್ನನೇ ಕರೆದಂತಿದೆ ನನಗಾಗಿಯೆ ಮೊರೆದಂತಿದೆ!
ಬರೆದೆನಿದೋ ಹಾಡುತಲಿರು ಈ ನೋವಿನ ಹಾಡನು

ಮಳೆಗೆ ಹೊಟ್ಟೆಕಿಚ್ಚು ಬಂದು ಆ ರಾಗವ ಕೆದಕಿದೆ
ಈ ಬೇಸರ ಕಣ್ಣೀರೊಲು ಹನಿಯ ಜೊತೆಗೆ ಬೆರೆತಿದೆ
ಹಾಡು ಕಾಯಬಹುದೆ ನನಗೆ ಮುಂದಿನ ದಿನ ಹುಟ್ಟಲು?
ನೋವು ಒಂದು ಸಹಜ ಪ್ರಾಸ! ಎಲ್ಲಾ ಕಾವ್ಯ ಕಟ್ಟಲು.

ಹಳೆಯ ನಮ್ಮ ನಗೆಗಳೆಲ್ಲ ಹೊಳೆವ ಮಳೆಯ ಹನಿಗಳಂತೆ
ಬೆಳಕಿನ ಕೋಲ್ಮಿಂಚಿಗಾಗಿ ಕಾಯಬೇಕು ನಾನು!
ಸಿಡಿಲಾಗಿಯೆ ಬರಬಾರದೆ ನನ್ನ ಪ್ರೀತಿ ಬೆಳಕೆ
ಬೇಸರವನೆ ಕೊನೆಯಾಗಿಸಿ ನಾ ಸೇರುವೆ ಬಾನು!


Wednesday, July 31, 2013

ಮಳೆಬಿಲ್ಲಿನವಳು..

ನನ್ನವಳ ಕರೆದು ನಾ ಮಳೆಬಿಲ್ಲು ತೋರುವುದು
ಈ ಮಳೆಯ ದಿನಗಳಲಿ ಸುಲಭವಲ್ಲ;
ಮಳೆಬಿಲ್ಲಿನಾಸೆಗೆ, ಮೋಡ ಮುಸುಕಿದ ಸಂಜೆ
ಆಗಸದಿ ಬಣ್ಣಗಳು ಕಾಣಲಿಲ್ಲ.

ನಿನ್ನೆ ಬಂದಿಹ ಮಳೆಗೆ ಇಂದು ಕಾಮನಬಿಲ್ಲು
ಹುಡುಕುವುದು ಸಾಧ್ಯವೇ? ಪ್ರಶ್ನೆ ಸಲ್ಲ!
ಮಳೆಬಿಲ್ಲು ನೆಪವಾಗಿ ನನ್ನವಳ ಜೊತೆಜೊತೆಗೆ
ಈ ಸಂಜೆ ಕಳೆಯುವುದು ತಪ್ಪು ಅಲ್ಲ!

ಮುನಿಸಿನಲಿ ಬೈದಾಳು ನನಗಲ್ಲ, ಮುಗಿಲಿಗೆ
ಹನಿಮಳೆಗೆ ಮುಖವೊಡ್ಡಿ ಕಾಯುವವಳು
ಬಿರುಬಿಸಿಲು ರಾಚಿದರೆ ಕೈಬೆರಳ ಕೊಡೆಯೊಳಗೆ
ಮುಗಿಲನ್ನೆ ಬರಲೆಂದು ಕರೆಯುವವಳು

ಕೊನೆಗೊಮ್ಮೆ ಕಂಡೀತು ಮಳೆಬಿಲ್ಲ ಸಿರಿಹೊನಲು
ಆ ಕಣ್ಣ ಮಿಂಚಿನಲಿ ನಾ ಹೊಳೆಯುವೆ;
ಇಂಥವಳು ಜೊತೆಗಿರಲು ಮಳೆಬಿಲ್ಲು ಬೇರೇಕೆ
ಇವಳು ನನ್ನವಳೆಂದು ನಾ ಮೆರೆಯುವೆ.

೦೧-೦೮-೨೦೧೩

Thursday, July 25, 2013

ಯಾರು? ನನ್ನ ರಾಧೆಯನ್ನು ನೋಯಿಸಿದವರು ಯಾರು?

ಯಾರು? ನನ್ನ ರಾಧೆಯನ್ನು
ನೋಯಿಸಿದವರು ಯಾರು?
ಕಾರಿರುಳೋ ಕರಿಮುಗಿಲೋ
ಧಾರೆಯೆರೆವ ಮಳೆಯೋ?

ಬೆನ್ನಹಿಂದೆ ಕರೆದರೇನೆ
ಹೆದರುವವಳು ಅವಳು!
ಏರುದನಿಯ ಗುಡುಗು ಸಿಡಿಲು
ದನಿಯು ಸಾಕು ನಡುಗಲು!
ಇಂಥ ರಾಧೆಯನ್ನು ಹೀಗೆ
ಕಾಡಿದವರು ಯಾರು?

ಮುಂಗುರುಳಿನ ಸಿಕ್ಕು ಬಿಡಿಸಿ
ಹುಸಿಮುನಿಸೊಳು ಬೈಯ್ಯುವಳು
ಮತ್ತೇನನೋ ಮರೆತುಕೊಂಡು
ಮಾತುಗಳನು ಹುಡುಕುವಳು
ಇಂಥ ರಾಧೆಯಲ್ಲಿ ಹೀಗೆ
ನಿಜದ ನೋವು ಬಂತು ಹೇಗೆ?

ಯಾರ ಕರುಬಿಗಿವಳ ನೋವು
ಅರಿಯದಾದೆ ನಾನು;
ಓ ಸಖಿಯರೆ ನೀವೆ ಹೇಳಿ
ನೋಯಿಸಿದವರು ಯಾರು?

17/07/2013

Saturday, June 22, 2013

ಉದ್ದಾರದವರು

ಉದ್ಧಾರದವತಾರಿ ತೋರಿದನು ಮೈಯ್ಯನ್ನು
ಇದು ವಸ್ತ್ರ, ಇದು ದಾರ, ಇಲ್ಲಿಲ್ಲ ದಾರಿ;
ಪರಂಪರೆಯೆ ಚರ್ಮ ಕಳೆದುಕೊಂಡೆಯ ಮಗನೆ?
ಹೊಲಿವುದಿದು ಕಷ್ಟ; ವಕ್ರ ಸೂಜಿ.

ಗುದ್ದಿದರೆ ಚಿಮ್ಮುವುದು ಹೊಸತನದ ನೆತ್ತರು
ಆಗೊಮ್ಮೆ ಬಿಸಿಬಿಸಿಯು; ಹೆಪ್ಪುಗಟ್ಟುವುದು
ಕೆಂಪು ಕಪ್ಪಾಗಿ ನರವ ಸೆಳೆತಕೆ ದೂಡಿ
ಮತ್ತೆ ಬಿಸಿಯಾಗಿಸುವ ತೆವಲು ಯುದ್ಧ

ಶಾಂತಿ! ಶಾಂತಿ!!; ಊದಿದವ ಮಲಗಿದನು
ಎದ್ದವನೆ ಪರಚಿದನು ಬೆವರ ಕೊಳೆಯ
ಅವತಾರಿ ಬಂದನಿದೋ, ಸರಿದು ಪಕ್ಕಕೆ ನಿಂತು
ಸಾಬೂನು ಶಾಂಪುಗಳ ಕೊಟ್ಟು ಬನ್ನಿ.

ನಿರೀಕ್ಷೆಗಳ ತಿರುವುಗಳು ಹಣೆಯಲ್ಲಿ ನೆರಿಗೆಗಳ
ಮೂಡಿಸುತ ತಂತಾನೆ ನೆವನದೊಳಗೆ
ಎದ್ದು ಗುಡಿಸಿದ ಬಯಲು ಅಂಗಳ ಕೂಡ
ಶುದ್ಧವಾಗಿಯೆ ಕಂಡು; ಎಲೆಯ ರಾಶಿ

ಸರಿ ತಪ್ಪುಗಳ ಕುಣಿಕೆಗಳ ಕುಣಿತಕ್ಕೆ
ಇರುಳೆಷ್ಟೊ ಹಗಲೆಷ್ಟೊ ಒದ್ದಾಡಿದೆ
ಉದ್ಧಾರಿಗೂ ಹಾಗೆ ತಪ್ಪು ಇರುಳಿನ ಕೊಡುಗೆ
ಬೆಳಗು ಆಶೆಯ ತೆರದಿ ಕಾಲ್ ಹಿಡಿದಿದೆ.

ರೇಶಿಮೆಯ ದಾರಗಳು ಅಪ್ಪಿ ಕಾವಿಯ ಪಂಚೆ
ತುಪ್ಪಗಳು ಒದಗೀತು ಹೋಮಕೆ
ಸುಸ್ತಾದ ಮೇಲ್ ಮತ್ತೆ ನಿಷ್ಕಾಮ ವಿಪರೀತ
ದೇವ ಮಲಗಿದ ತಾನು ವೇದದುಘ್ಗೋಷಕೆ

ಊರುಗೋಲಲಿ ಕೂಡ ಮಣ್ಣು ಚುಚ್ಚಿದ ಗುರುತು
ಧೂಳಿಯಲಿ ಬರೆಯುತಿರಲೆನ್ನ ಹೆಸರು,
ಎಂದೆನುವ ವೇಳೆಯಲೆ ಅಸ್ತಮದ ಆಲಾಪ
ನಿಂತು ಮರಳಿತೆ ಮತ್ತೆ ಹೊರಳಿನುಸಿರು.

ಇದು ಸರಿಯು;ಗುರಿಗೆ ಉರವೇ ಬೇಕು
ಹೊಡೆಯೆ ಮೇಲೇರಿದರೆ ನಾಭಿ ಚೂರು!
ಇಳಿದರೂ ಹಾರುವುದು ಕೊರಳು ಪಟ್ಟಿಯ ಜೊತೆಗೆ

ನಿನ್ನ ಎದೆಯಲಿ ಮರೆತ ಹೆಸರು ನೂರು.

Friday, April 26, 2013

ಮಲ್ಲಿಗೆಯ ಸ್ವಗತ!


ಗೋಣಿಚೀಲದ ಒಳಗೆ ತುಂಬಿ ತುರುಕಿದರೆನ್ನ
ಬಸ್ಸುಗಳ ಮೇಲುಗಡೆ ಪೇರಿಸಿದರು;
ಬಂತು ಬೆಂಗಳೂರೆಂದು ಎತ್ತಿ ರಸ್ತೆಗೆ ಹಾಕಿ
ಮಲ್ಲಿಗೆಗೆ ರೇಟೆಸ್ಟು ಎನ್ನುತಿಹರು

ನೂರು ಗೋಣಿಗೆ ಕೊಡು; ಇಪ್ಪತ್ತು ನಿನಗೆ
ಎಂದೊಂದು ವ್ಯವಹಾರ ಕುದುರಿಸಿದರು
ದರದರನೆ ಎಳದೆನ್ನ ಸಂತೆಪೇಟೆಗೆ ತಂದು
ಕೇಜಿಗಿನ್ನೂರೆಂದು ಕೂಗುತಿಹರು.

ಸಣ್ಣ ಹುಡುಗಿಯು ತನ್ನ ಮೃದುವಾದ ಕೈಯ್ಯಲ್ಲಿ
ಎತ್ತಿ ನನ್ನನು ಚುಚ್ಚಿ ಬಂಧಿಸಿದರು
ಮೊಳಕೆ ಮೂವತ್ತಂದು ಹದಿನಾರು ಕಂಠದಲಿ
ಕೂಗಿ ನನ್ನನು ಮಾರಿ ಖುಷಿಪಟ್ಟರು.

ನನ್ನ ಸಂಬಂಧಿಕರು ದೇವರಿಗೆ ಮುಡಿಪಂತೆ
ನಾನಿರುವೆ ಮಂಚದಲಿ ಸುಖಿಪರಾರು?
ಇನ್ನೆಷ್ಟು ಗಳಿಗೆಯೋ ನನ್ನ ಜೀವನಯಾತ್ರೆ
ನನ್ನ ಕನಸನು ಅರಿತ ಜೀವನಾರು?

Tuesday, April 9, 2013

ಬೆಟ್ಟ ಕಣಿವೆಯ ನಡುವೆ ಪುಟ್ಟ ದಿಬ್ಬದ ಬಳಿ


ಬೆಟ್ಟ ಕಣಿವೆಯ ನಡುವೆ ಪುಟ್ಟ ದಿಬ್ಬದ ಬಳಿಯೆ
ಚಿಕ್ಕ ಕಲ್ಲಿನ ರಾಶಿ ಏಕೆ ಗೊತ್ತೇ?
ಅವಳ ನಾ ಕಾದಿರುವ ಗುರುತನ್ನೇ ಇಟ್ಟಿರುವೆ
ಕಲ್ಲು ಹೆಚ್ಚಾದಂತೆ ಹೆಚ್ಚು ಮುತ್ತೆ!

ನಾ ದಿನವು ವೇಗದಲಿ ಬೆಟ್ಟ ದಿಬ್ಬದಿ ಕುಳಿತು
ಕಾಯುವುದು ಅವಳಿಗೆ ತಿಳಿದಂತಿದೆ
ಮುತ್ತ ಹೆಕ್ಕುವ ನೆಪದಿ ತಡವಾಗಿಯೇ ಬಂದು
ಕಲ್ಲುಗಳ ಎಣಿಸುವಳು ಮುತ್ತನಿಕ್ಕಿ!

ಒಂದೊಮ್ಮೆ ಬಾರದಿರೆ ಮೊದಲ ಹನಿ ಬಿದ್ದಂತೆ
ದಿಬ್ಬ ಮಣ್ಣಿನ ಮೇಲೆ ನೋಡಿ ಗುರುತು
ಮಾರನೆಯ ದಿನದಲ್ಲಿ ಅಳುವ ಮುಖಮಾಡುವಳು
ಮತ್ತೆ ಕರಗುವೆ ನಾನು; ಲೆಕ್ಕ ಮುತ್ತು!

ಈ ಬೆಟ್ಟ ಈ ದಿಬ್ಬ ಈ ಎರಡು ಮನಸುಗಳ
ಮುತ್ತನ್ನೆ ತುಂಬಿರುವ ಈ ಕಲ್ಗಳು
ನಾಳೆಯಾ ಬಣ್ಣಗಳ ಆಸೆಗಳ ಹೊತ್ತಿರುವ
ಗುಟ್ಟು ಹೇಳದೆ ಉಳಿವ ಆ ಕಂಗಳು!

ಪ್ರಕೃತಿಗೂ ಪುರುಷನಿಗು ಈ ನೆಪಗಳು
ಅವಳು ನಾನೇ ಆಗಿ ನಾನು ಅವಳು!

ಪುಟ್ಟನ ಹಾಡು


ಬಾನಲಿ ಏರುತ ಮೋಡದಿ ಅಡುಗುತ
ಆಡುವ ಚಂದಿರ ನನಗಿಷ್ಟ
ಏತಕೆ ಸುಮ್ಮನೆ ಮಂಜಿಗೆ ತಿರುಗುವೆ
ಎಂದೆನೆ ಹೇಳಿದ ನಂ ಪುಟ್ಟ!

ಪುಟ್ಟನಿಗೇಕೋ ಚಂದಿರ ಕಾಣದೆ
ಹೋದರೆ ರಾತ್ರಿಗೆ ಹಸಿವಿಲ್ಲ
ಬೆಳಗಿನ ಜಾವದಿ ಬೇಗನೆ ಏಳುವ
ಸೂರ್ಯನ ಪ್ರೀತಿ ಸಾಲಲ್ಲ

ದಿನ ದಿನ ಹಿಗ್ಗುವ ಚಂದಿರ ಬೇಕು
ಕುಗ್ಗುವ ಚಂದಿರ ಬೇಡದವ!
ಸಿಟ್ಟದು ಬರುವುದು ಮೂಗಿನ ಮೇಲೆ
ತಿಂದರೆ ಚಂದ್ರನ ಮೋಡದವ.

ಪುಟ್ಟನ ಸುತ್ತಲೂ ಚಂದ್ರನು ಸುತ್ತುವ
ಪುಟ್ಟನ ಕಣ್ಣಲೆ ನಕ್ಷತ್ರ!
ಪುಟ್ಟನೆ ಭೂಮಿಯು ಆ ಚಂದಿರನಿಗೆ
ಪುಟ್ಟನು ಚಂದಿರನಾ ಮಿತ್ರ.

ಮನೆಗೆ ಮಲ್ಲಿಗೆ ಬಂತು


ಅಂಗಳದ ತುಂಬಾ ನಗುತಿದ್ದ ನಕ್ಷತ್ರ
ಬೆವರಿ ಬಿದ್ದಂತಿತ್ತು ಬೆಳಗಿನಲ್ಲೆ
ಈ ಕಾಡು ಮಲ್ಲಿಗೆಯ ಹೂವುಗಳು ಇಲ್ಲೇಕೆ
ಬಂತೆಂದು ಕೇಳಿದಳು ನನ್ನ ಮಲ್ಲೆ

ಕಾಲುದಾರಿಯ ಹಿಡಿದು ಮನೆಯಿಂದ ಹೊರಟರೆ
ಮೈಲುಗಳ ನಡೆಯಲಿದೆ ಕಾಡಿನಲ್ಲಿ
ಬೆಟ್ಟಗುಡ್ಡವ ಇಳಿದು ಸುತ್ತುತ್ತ ಹೋದರೆ
ಏನು ಸಿಕ್ಕಿತು ಹೇಳು ನಡಿಗೆಯಲ್ಲಿ?

ಕಾಡಿನಾ ಹಾದಿಗಳ ಈ ಮಲ್ಲೆ ಮರೆಸೀತು
ಯಾರಿಡದ ಗೊಬ್ಬರಕೆ ಮುಷ್ಟಿ ಹೂವು
ನಡೆಯುವುದ ಕಲಿಸೀತು; ಕಾಡನ್ನೆ ಉಳಿಸೀತು
ಮರೆಯಬಹುದೇ ಹೀಗೆ ಕಾಲುನೋವು!

ಹೀಗೆ ನಡೆಯುತ ಬರಲು; ತಂದೆ ನಾ ಈ ಲತೆಯ
ಕಾಡಿಂದ ಮನೆವರೆಗೆ ಬಂದಳವಳು
ನಾಡಿನಲು ಸೊಕ್ಕಿದಳು; ಸೊಕ್ಕಿ ಸಿಂಗರದಿಂದ
ಬೆಳಗು ಹೂವರಳಿಸಿ ನಕ್ಕಳವಳು!

ನಾಡು ಕಾಡೇನಿಲ್ಲ ಹೂಗಳಿಗೆ; ಪರಿಮಳಕೆ
ಬೇಲಿ ಕಟ್ಟುವುದೇಕೆ ಈ ಪ್ರೇಮಕೆ?
ನಿನ್ನ ಹಾಗೆಯೆ ನಗುವ ಈ ಪುಟ್ಟ ಮಲ್ಲೆ ಹೂ
ನಗುತಲಿರುವಳು ಹೀಗೆ; ನುಡಿ ಕೋರಿಕೆ.

ಶಿವರಾತ್ರಿಯ ಹಾಡು.


ನಿಲುವನೋ ಮನದೊಳಗೆ ಹರ-ತಾ
ಗೆಲುವನೋ ಜಗದೊಲವನು
ಚೆಲುವೆ ಗಿರಿಜೆಯ ಮನವ ಕದ್ದವ
ಬಿಲ್ವಕೇ ನಮಗೊಲಿವನು!

ನಂದಿವಾಹನನೀತನನು ಆ-
ನಂದದಿಂದಲಿ ಭಜಿಸಲು
ಬಂದು ಕಳೆಯುವ ಮನದ ಕ್ಷೇಷವ
ಇಂದಿನಾ ದಿನ ಹಾಡಲು

ನಾದದುಂದುಭಿ ಮೊಳಗುವೆಡೆಯಲಿ
ಮೋದದಿಂದಲಿ ಕುಣಿವನು
ಕಾಯ್ದು ಕರುಣದಿ ಪೊರೆವನೈ-ಕ
ಲ್ಲಾದ ರೂಪದಿ ತೋರ್ಪನು.

ಶಿವನು ಚರ್ಮಾಂಬರನು ಸಕಲರ
ಭವದ ಬಂಧನ ಕಳೆಯುಲಿ
ಶಿವನ ನುತಿಸುತ ದಿನವ ಕಳೆಯಲು
ಭುವನ ಅನುದಿನ ಬೆಳಗಲಿ.

ತಂಗಿಗೆ ಹಾಡು


ನಿನ್ನ ನಗುವಿನ ಹಿಂದೆ ನೋವುಗಳ ಸರಮಾಲೆ
ಇದ್ದೀತು ಬೇಸರವು ನಲಿವು ನುಂಗಿ!
ಬೇಸಿಗೆಯು ಉರಿಸೀತು; ಮಳೆಯೋ ಕೊಳೆಸೀತು
ಕಾಯದಿರು ನೋಯದಿರು ನನ್ನ ತಂಗಿ.

ಪುಣ್ಯಪುರುಷರು ಇಲ್ಲ ಪಾಪಿಗಳೂ ಇಲ್ಲಿಲ್ಲ
ಸಿದ್ಧ ಔಷಧಿಯಿಲ್ಲ ನೋವುಜ್ವರಕೆ
ಗಟ್ಟಿಯಾಗಲೆ ಬೇಕು ಬಿಸಿಲಿಗೂ ಮಳೆಗಳಿಗೂ
ಬದುಕು ಹಸನಾಗುವುದು ತನ್ನತನಕೆ!

ಇಂಥ ಬರಗಾಲದಲು ತನ್ನೊಡಲ ಚಿಗಿಯುತಿಹ
ಮರದ ಬಳಿ ತೋರಿಕೊಳು ನಿನ್ನ ಗೋಳು!
ಬರಿಯ ಜೀವರು ನಾವು, ನಮಗೆ ಸ್ವಾರ್ಥವೆ ಮುಖ್ಯ
ಮಳೆಗಾಲಕ್ಕೊಂದೆ ಬೆಳೆ ಹೆಸರು ಕಾಳು.

ಎಂದೊ ಉರಿಸಿದ ಬೆಂಕಿ ಆರದೆಯೆ ಇಹುದೇಕೆ
ನಾಳೆ ಹೊಳೆಯುವ ತಾರೆಗೇಕೆ ಒಲವು?
ಇಂದಿನಲಿ ನನಗಿಷ್ಟು ನಿನಗಿಷ್ಟು ರಸನಿಮಿಷ
ಇದುವೆ ನಮ್ಮಯ ದಾರಿ; ಬಾಳ ಹರಿವು.

ಹಾದಿಹೋಕನ ಹಾಡು


ಹಾದಿಹೋಕನ ಹಾಡು ಏನನೋ ಕೊಟ್ಟೀತು
ನಾನು ಹಾಡುವ ಹಾಡು ನಿನ್ನದಲ್ಲ
ನಿನ್ನ ಹಾಡನು ಕೇಳಿ ಸ್ಪೂರ್ತಿಗೊಂಡವ ನಾನು
ಹಾಡದಿದ್ದರು ಬರೆವೆ ಕತೆಯನಲ್ಲ.

ಊರೂರು ತಿರುಗುವಾ ಅಲೆಮಾರಿ, ತಿರುಗಾಡಿ
ನಿನ್ನ ಹಾಡಲಿ ಹುಡುಕಲಾರೆ ತಪ್ಪು
ನಾನು ಬರೆವಂತಹದು ಬರಿಯ ಶಬ್ಧದ ಸಾಲು
ನಿನ್ನ ಹೂವಿನ ತನಕೆ ನನ್ನ ಸೊಪ್ಪು.

ಅನುಭವದ ಪಾಕದಲಿ ನೀನಂತೂ ನಳರಾಜ
ನಾನಿನ್ನೂ ತರಕಾರಿ ಹೆಚ್ಚುತಿಹೆನು
ಮೃಷ್ಟಾನ್ನವೈ ನಿನ್ನ ಕೈಯ್ಯಡುಗೆ ಓ ಸಖನೆ
ನಿನ್ನ ಪದಗಳಿಗೆಂದು ಶರಣ ನಾನು.

ಹರಸಿಬಿಡು ಕರುಣೆಯಲಿ ಸಾಮೀಪ್ಯ ಬರುವವೊಲು
ನಿನ್ನ ಪ್ರೀತಿಯೆ ನನ್ನ ಪೊರೆಯುತಿರಲಿ
ನಿನ್ನಂತೆ ನಾನಾಗಿ ಹಾಡುವೆನು ಎಂದಲ್ಲ
ನನ್ನ ಹಾಡುಗಳಲ್ಲೂ ತ್ರಾಣ ಬರಲಿ.

ಮಲ್ಲಿಗೆ ಹೇಳಿದ್ದು.


ಇಷ್ಟು ಹೂಗಳ ನಡುವೆ ನನ್ನನೇ ಆಯುವೆಯೆ
ಕೆಂಪು ಗುಲಾಬಿಯು ನಿನ್ನ ಕರೆದಳಲ್ಲ!
ನೀಳ ಜಡೆಯವಳ ಮುಂಗುರುಳು ಕಡೆವವಳ
ಕೇದಿಗೆಯ ಹೂವೂ ಹೊರಳಿತಲ್ಲ

ಮೂಗನ್ನೇ ನಾಚಿಸುವ ಸಂಪಿಗೆಯ ಹೂವಿತ್ತು
ರೇಶಿಮೆಯ ನುಣುಪಿರುವ ಕಮಲವಿತ್ತು
ಮಾದಕತೆ ತುಂಬಿದ್ದ ಬಕುಲ ಮಾಲೆಗಳಲ್ಲಿ
ನಿನ್ನ ಕರೆದಂತೇನೋ ಭಾವವಿತ್ತು.

ನನಗೆ ಮಲ್ಲಿಗೆಯೆಂದೆ, ಬಳಿಗೆ ನನ್ನನೆ ಕರೆದೆ
ನನ್ನ ಜಾತಿಯಲೆಷ್ಟು ಮಲ್ಲರಿಹರು!
ಅಷ್ಟೇಕೆ ಕಣ್ಣಿನಲಿ ಕಾಯುವರು ಓ ಗೆಳೆಯ
ಮಲ್ಲಿಗೆಯ ತೋಟಕ್ಕೆ ಬೇಲಿಯವರು.

ನಿನ್ನೊಂದಿಗಿಹೆನೆಂದು ಬಂದೆ ಬಳ್ಳಿಯ ತೊರೆದು
ಬೇರೆ ಹೂಗಳ ಕಡೆಗೆ ನೋಟಬೇಡ
ಅಕ್ಷಮ್ಯವಹುದು ನೀನೆಲ್ಲ ಕಡೆ ಹೊರಳಿದರೆ
ನಿನಗೆ ಮಲ್ಲಿಗೆಯೊಂದೆ; ಬಂಧ ಗಾಢ.

ಓಹೋ ನಿಮ್ಮನೆ ಹುಡುಗ!


ಓಹೋ ನಿಮ್ಮನೆ ಹುಡುಗ
ಎಷ್ಟೊದು ಬಿಳುಪು?
ಓದು ಹೀಗೆಯೆ ತಾನೆ?
ಎಂತಹಾ ಚುರುಕು!

ಪಟಪಟನೆ ಉದುರಿಸುವ
ಮಾತುಗಳ ಮುತ್ತು!
ಎಲ್ಲಿಂದ ಕಲಿತಿಹನೋ
ಹಲವಿಷಯ ಗೊತ್ತು!

ಕಾಲುಗಳು ಕೈಗಳೂ
ಎಷ್ಟೊಂದು ಚಂದ!
ಗಾಯಗಳು ಇಲ್ಲದೆಯೆ
ಬಾಲ್ಯದಾನಂದ?

ಓಹೊ ನಿಮ್ಮನೆ ಹುಡುಗ
ತುಂಬ ಡಿಫರೆಂಟು
ಸಣ್ಣ ವಯಸಿಗೇ ಅವಗೆ
ಇಂಗ್ಲೀಷು ಸೆಂಟು!

ಸ್ವಲ್ಪ ಬೊಜ್ಜಿದೆ ಬಿಡಿ
ಹಾಳು ಏನಲ್ಲ;
ಪರೀಕ್ಷೆಯಲಿ ನೂರು
ಆಟದಲಿ ಇಲ್ಲ.

ಓಹೋ ನಿಮ್ಮನೆ ಹುಡುಗ
ಇನ್ನೂನು ಸಣ್ಣ
ಬದುಕು ಕಲಿಸಿತೆ ಹೇಳಿ
ಬಗೆಬಗೆಯ ಬಣ್ಣ?

ಆವರ್ತಿತ.


ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು
ಕಿರಣಗಳು ಹೊಳಪಿಸಿದ ಬಣ್ಣಗಳನು
ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು?
ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು.

ಇದು ಕೆಂಪು ನಾಲಗೆಯು ಹೊರಳಿ ಕೇಸರಿಯಾಗಿ
ಮೂಡಿ ಕಾಮನಬಿಲ್ಲು ಹನಿಗಳೊಳಗೆ
ಮತ್ತೇನನೋ ತಂದು ತನ್ನ ವ್ಯಾಪ್ತಿಯ ಪರಿಧಿ
ಮೀರಿ ಸಾಗುವ ಮನಕೆ ಎಷ್ಟು ಘಳಿಗೆ?

ಸತ್ಯಕ್ಕೆ ಬಿಳಿಮುಖವೆ? ರವಿಯಕಿರಣವು ನೆಪವೆ?
ಆರಿಹೋಗುವುದೇನು ಖಚಿತ ಸಾವೆ?
ಮಂಜು ಹುಟ್ಟುವುದೆಂತು ಹನಿಯ ಹಡೆಯುವುದೆಂತು
ರಾತ್ರಿ ಬೆಳಗಿನ ವರೆಗೆ ಸುಖದ ನಾವೆ

ನಾಳೆ ನಾ ಕಾಯುವೆನು ಇನ್ನೊಂದು ಹನಿಗಾಗಿ
ಹನಿಗಳೊಳಗಿನ ಬಣ್ಣ ಕನಸಿಗಾಗಿ
ಸುಖದಮಲು ಕರಗೀತು, ಬಾಳು ನಿಜ ತೆರೆದೀತು
ಎದೆಯೊಳಗೆ ಉಳಿಯಲದು ಶಾಂತಿಯಾಗಿ.

ಧರ್ಮ!


ನೂರು ದಾರದ ಎಳೆಯ ಸೇರಿಸುತ ಬಂಧಿಸುತ
ಮಾಡುವೆವು ಧರಿಸುವಾ ವಸ್ತ್ರವೆಂದು
ಸಾರವಿಹ ನೂರಾರು ಅನುಭವದ ಮಾತುಗಳ
ರೂಢಿಯಲಿ ಕರೆದಿಹರು ಧರ್ಮವೆಂದು

ಬಿಳಿಯ ದಾರದ ನಡುವೆ ಕಪ್ಪು ಕೆಂಪಿನ ಬಣ್ಣ
ಧರಿಪ ವಸ್ತ್ರಗಳೆಲ್ಲ ಎಷ್ಟು ಭಿನ್ನ
ಸುಳ್ಳಿಹವು ಮುಳ್ಳಿಹವು ಫಲಬಿಡುವ ಮರದಲ್ಲಿ
ಆಯಬೇಕೋ ಗೆಳೆಯ ನಿಜದ ಹಣ್ಣ.

ಏನಾದರೇನ್ ಬಣ್ಣ ನಿಜದ ಬೆಂಕಿಯ ಬಿಸಿಗೆ
ಸುಟ್ಟು ಹೋಗದೆ ವಸ್ತ್ರ? ಬೂದಿ ಉಳಿಸಿ
ಧರ್ಮವೂ ಹೀಗಣ್ಣ ಮೇಲಿಲ್ಲ ಕೀಳಿಲ್ಲ
ನಾಳೆ ಏನಿಹುದಣ್ಣ? ಬಾಂಧವ್ಯ ಬೆಳೆಸಿ.

ನನ್ನ ಪಯಣ


ಹಾದಿಯಲಿ ನಡೆದದ್ದು ಬಹಳೆಂದುಕೊಂಡಿದ್ದೆ
ನನ್ನ ಚಪ್ಪಲಿ ಹಳತು; ಓಡಲಾರೆ
ವಿಶ್ವಾಸವೂ ಹಾಗೆ ಗುರಿತಲುಪುವಾ ವರೆಗೆ
ಹಿಂತಿರುಗಿ ನೋಡುವುದು ಮರೆಯಲಾರೆ

ಇರುವ ಗುರುತಿನ ಹೆಜ್ಜೆ ನನ್ನ ಪೂರ್ವಜರದ್ದು
ಎಂಬೆನುವ ಕಾರಣಕೆ ತೆಗಳಲಾರೆ
ಅವರ ನಡೆಗಳ ನಡುವೆ ನನದೊಂದು ಗುರುತೆಂದು
ಅವುಗಳನೆ ಮಹದೆಂದು ಹೊಗಳಲಾರೆ

ಹಿಂದೆ ಬರುವಂತವರ ಅಡ್ಡಗಟ್ಟಿಸಿ ಮತ್ತೆ
ದುರುಗುಟ್ಟುವಾಟಕ್ಕೆ ಇಳಿಯಲಾರೆ
ಮುಂದೆ ಹೋಗಲಿ; ಅವರ ಗುರಿಗಳನು ತಲುಪಲು
ನೆರವಾಗಲೇ? ಹಿಂದೆ ಸರಿಯಲಾರೆ.

ನಿನ್ನ ನೆನೆಯದೆ ಹೀಗೆ ಸುಮ್ಮನಿರುವುದು ಕಷ್ಟ..


ನಿನ್ನ ನೆನೆಯದೆ ಹೀಗೆ ಸುಮ್ಮನಿರುವುದು ಕಷ್ಟ
ಅದು ಹೇಗೆ ಇಣುಕುವೆಯೊ ಗೆರೆಗಳಲ್ಲಿ;
ನಾನೆಷ್ಟು ಬರೆದರೂ ಅದರ ಮುನ್ನುಡಿಯಂತೆ
ನೀನೆ ನಗುತಿಹೆ ಗೆಳತಿ ನಗೆಯಚೆಲ್ಲಿ!

ಪ್ರೇಮವಿಲ್ಲದೆ ನಾನು ಬರೆದೇನು ಗಳಿಸುವೆನೊ
ನೀನಿಲ್ಲದಾ ನಾನು ಅಂತೆ ಶೂನ್ಯ;
ಓರೆ ತಿದ್ದುವೆನೆಂದು ಜಗಕೆ ಕವಿ ಹೇಳುವುದೆ?
ಹುಬ್ಬು ತಿದ್ದಿದರಾಯ್ತು ನನ್ನ ಪುಣ್ಯ.

ಹೂಗಳಲಿ ಪ್ರಕೃತಿಯಲಿ ಸಂಜೆಯಲಿ ಹಣತೆಯಲಿ
ರಮ್ಯತೆಯ ಕಾಣುವುದು ಸಹಜವಂತೆ
ನಿನ್ನೊಲುಮೆಯಲಿ ನಾನು ಬರೆಯುವುದು ಕಳೆಯುವುದು
ನನಗಿಲ್ಲ ಜಗವ ಸರಿಮಾಡೊ ಚಿಂತೆ.

ಜಗವು ಬಳ್ಳಿಯ ಹಾಗೆ ಡೊಂಕುಗಳು ಕಂಡಾವು
ಲೋಪವಾದವೆ ಹೇಳು ಹೂವ ಗಂಧ?
ನನಗೆ ಪ್ರೀತಿಯು ಹಾಡು; ನನ್ನ ಭಾವವ ನೋಡು
ಜಗದ ಪ್ರೀತಿಯ ಜೊತೆ ನಿನ್ನಾತ್ಮಬಂಧ.

ನೀವು ಕುರಿಯನ್ನು ನೋಡಿದ್ದೀರಾ


ನೀವು ಕುರಿಯನ್ನು ನೋಡಿದ್ದೀರಾ?
ನೋಡಿದ್ದೇವೆನ್ನುವುದು ಸಿದ್ಧ ಉತ್ತರ!
ಸೊಂಪಾಗಿ ಉಣ್ಣೆಸೋಪಾನದಲಿ ಬೆಳೆದ ಕುರಿಯಲ್ಲ;
ಗೋಣಿನ ಮೇಲೆ ಇಷ್ಟುದ್ದ ಹಗ್ಗ ಕಟ್ಟಿ
ನಡೆದರಲ್ಲ; ಓಡದಿರೆ ತಟ್ಟಿ
ಬೆದರದೇ ಮುನ್ನುಗ್ಗುವ ಕುರಿಯನ್ನು ನೋಡಿದ್ದೀರಾ?

ಏನು? ಕನ್ನಡಿ ನೋಡಿ ಬರುತ್ತೀರಾ?
ಷರಟನ್ನು ಸ್ವಲ್ಪ ಮೇಲೆಳೆದು;
ಮೈಯ್ಯ ನೂಲಳೆದು ನೋಡಿ
ಅದರೊಳಗೆ ಬೊಮ್ಮನೋ ಅವನಪ್ಪನೋ ಇದ್ದಾನೆಂದು
ಇಷ್ಟರವರೆಗೆ ನಂಬಿದಂತಃಕರಣವೂ ಬಂಜೆ;
ಸೊನ್ನೆ ಸುತ್ತಿದವರೇ ಎಂಟು ಹೆತ್ತಿದ್ದಾರೆ ಸ್ವಾಮಿ.

ಒಲ್ಲೆ! ಕುರಿಯೆಂಬುದನ್ನು ವಿರೋಧಿಸುತ್ತೇನೆ
ಎಂದವರ ಹೆಡೆಮುರಿಕಟ್ಟಿ ಮಟನ್ನು ತಿನ್ನಿಸಿ;
ಸಾಧ್ಯವಾದರೆ ಇರಲಿ ಜೊತೆಗಿಷ್ಟು ಮದ್ಯ,
ಪನ್ನೀರು ಕೋಸಂಬರಿಗಳು ಹರಿತವಾಗಿಲ್ಲವೆಂದು
ಬೆಳಗ್ಗೆ ಇಷ್ಟುದ್ದ ಕೊಚ್ಚಿದವರಿಗೂ ತಂಪಾಗಲಿ;
ಅಪೌರಷ ವಿದ್ಯೆಗೆಲ್ಲಾ ಡಿಜಿಟಲ್ ಯುಗದ ಪ್ರೇಯರ್ ಹಚ್ಚಿ
ಬೆಳಗಿಸಿ ಬಿಡಿ ನಿತ್ಯನೂತನ ವಿದ್ಯುದ್ದೀಪ; ಆರದಂತೆ.

ಮುಂದೆ; ಗುರ್ರ್ ಎನ್ನುವ ನಾಯಿಗಳನ್ನು ಬಿಡಿ
ಹಿಂದಿನಿಂದಲ್ಲೂ ಕೋಲಿರಲಿ;
ಕೆಲವು ವೀರ ಕುರಿಗಳು ತಾನು ಸಿಂಹನೆಂದೇ ಬ್ಯಾ ಬ್ಯಾ
ಎಂದರೆ ಅವನ್ನು ಮೊದಲು ಮುಗಿಸಿಬಿಡಿ.
ನಿಟ್ಟುಸಿರು ಬೇಡ, ನಮ್ಮ ಪ್ರತಿಭಟನೆಯಾಗುವುದು
ನೆತ್ತರ ಕ್ರಾಂತಿಯಲ್ಲಿ; ಶಾಕಾಹಾರಿಗಳಿಗೇನು ಕೆಲಸ?
ನೀವು ಕುರಿಯನ್ನು ನೋಡಿದ್ದೀರಾ?
ನೋಡಿಲ್ಲ; ನಾನು ಎಂಬಷ್ಟೇ ಸ್ಪಷ್ಟ ಉತ್ತರ.

ಓ ಕವಿಯೆ ದಮ್ಮಯ್ಯಾ..


ನೆತ್ತರಿನ ಹಿಂಸೆಯನು; ಜಗ ಡೊಂಬರಾಟವನು
ಬರೆದ ಕವಿಗಳಿಗೆಲ್ಲ ಹೆಮ್ಮೆಯೇಕೆ?
ಅತ್ತವರ ಅಳಿಸುವ ತಪ್ಪೆಂದು ಬೈಯ್ಯುವ
ಕವಿಯ ಬರಹಕ್ಕೆಲ್ಲ ದೊಡ್ಡ ಟೀಕೆ.

ಯಾರು ಸತ್ತರು ಸರಿಯೆ ಕರುಣರಸ ಉಕ್ಕೀತು
ಹರಿದೀತು ಕವಿಯದನಿ ಸಾಲುಗಳಲಿ
ಸತ್ತವನ ಸಂಬಂಧಿ ಉಸಿರನಾಡುವುದೇಕೆ?
ಅವನ ಎಳೆದರು ಹಿಡಿ ಸಂತಾಪ ಚೆಲ್ಲಿ;

ಬಡತನದ ವರದಿಯನು ಸೊಗಸಾಗಿ ಪ್ರತಿಮೆಯಲಿ
ಹಿಡಿದಿಟ್ಟು ಗಳಿಸಿದನು ಸಭೆಯ ಸದ್ಧು
ಬಡವ ಬೇಡಲು ಬಂದ; ಕಣ್ಣೀರು ಗರೆದರೂ
ಕವಿ ತಾನು ತಿರುಗದವ, ಹೋದ ಎದ್ದು.

ಬೈಯ್ಯುವುದು ಬೇಯುವುದು ಕವಿಯ ಶಬ್ಧಗಳಲ್ಲಿ
ದೇಶದುದ್ದಾರಕ್ಕೆ ಕವಿಯೆ ದೇವ;
ಇವನ ಕಾಣ್ಕೆಯ ಕೊರತೆ ಇದ್ದಂದು ದೇಶದಲಿ
ಬುದ್ಧಿಯಾ ಶೂನ್ಯತೆ? ಹ್ಮ್ ಅಭಾವ.

ನಾಲ್ಕು ನಲ್ಮೆಯ ಮಾತು; ಜೊತೆಗೆ ಪ್ರೀತಿಯ ಮುತ್ತು
ಪಡೆವ ಬರೆಯುವ ಕವಿಗೆ ಜೀವ ಇತ್ತು!
ನಾನು ಟೀಕೆಯ ಬರೆವೆ ಆ ವಿಮರ್ಷೆಗೆ ದಣಿವೆ
ನನಗೆ ನವ್ಯದ ಕಾವ್ಯ ಸ್ವಾರ್ಥ ತುತ್ತು."

ಸಂಧ್ಯಾಸಮಯ


"ಸಂಜೆಯೇರುತ್ತಲೇ ನೆರಳು ಭೀಕರಗೊಂಡು
ನನ್ನ ನಾಳೆಯ ನನಗೆ ಹೇಳುತಿಹುದೇ?
ಸಾಮರ್ಥ್ಯಕ್ಕಿಂತಲೂ ತೋರುವುದು ಬೇರೊಂದು
ಸತ್ಯವನು ಹೇಳುವುದು ಸಂಧ್ಯೆ ತಾನೆ?

ಬೆನ್ನ ಹಿಂದಿನ ಸೂರ್ಯ ಬೆರಗು ಕಾಣುತ ಸುಳಿದು
ಭ್ರಮೆಯ ತಲೆಗೇರಿಸುತೆ ನಡೆದ; ಮುಗಿದ
ಇಳಿಯಿತದೋ ನಿಶೆಯಮಲು; ಮಂಕು ಕಮರಿತು ಧರೆಗೆ
ಕತ್ತಲೆಯಲಿ ಮಿನುಗುಹುಳು ಮಿಂಚುಕುಡಿದ.

ಇದು ಬೆಟ್ಟ ಇದು ಗುಡ್ಡ ಇದು ಮರದ ತಾಯ್ಬೇರು
ಇದು ಪರಮಪವಿತ್ರನದಿ ಎಂಬುದಿಲ್ಲ;
ಕಪ್ಪಡರಿ ಮೊರೆವಾಗ ಎಲ್ಲವೂ ಮಸಿಯಂತೆ
ಸತ್ಯ ಬತ್ತಲೆಯಂತೆ; ಕಾಣ್ಕೆಗಲ್ಲ.

ನಿಜದ ಸೂರ್ಯನು ನಾಳೆ ಹುಟ್ಟುವಾಶೆಯು ಸತ್ತು
ಕಪ್ಪು ಕತ್ತಲೆಯಲ್ಲಿ ಹುಡುಕುತಿಹೆನು;
ಸಂಜೆ ಭ್ರಾಂತಿಯ ಚಿತೆಗೆ ಇನ್ನಷ್ಟು ಸುಳ್ಳುಗಳ
ರಾತ್ರಿ ಚಂದಿರ ತಂದು ತುಂಬುತಿಹನು.

ಹಾಡು ಜೀವನ ಪ್ರೀತಿ.


ನನಗೆ ನೋವಿನ ಎಳೆಯು ಮಂಜಾಗಿ ಕಾಣುವುದು
ನಲಿವೇನೋ ಹೊಮ್ಮುವುದು ಬೆಳಕಿನಂತೆ
ನಾನು ಬರೆಯುವ ಹಾಡಿಗಿನ್ನೆಷ್ಟು ತುಂಬುವುದು?
ಬದುಕು ನೋವ್ ನಲಿವುಗಳ ದೊಡ್ಡ ಸಂತೆ

ಕವನ ಜನಿಸುವ ಸಮಯ ನಿಶ್ವಿಂತನಾಗುವೆನು
ಕವನ ಕೇಳುವ ನೆಪದಿ ಮಾತು ಮರೆವೆ
ಕಚ್ಚುವುದು ಬೆಚ್ಚುವುದು ನುಡಿಯ ಆವೇಶಕ್ಕೆ
ಕವಿಗೇನ್ ಮಣಿಯುವುದು; ನುಡಿಗೆ ಮಣಿವೆ

ಪೂರ್ವಸೂರಿಗಳೆಲ್ಲ ರಮ್ಯದಲಿ ನವ್ಯದಲಿ 
ಹೇಳಿದ್ದು ಬಹಳಷ್ಟು ಗಳಿಕೆ ಶೂನ್ಯ!
ನೋಟುಗಳ ಕಟ್ಟಿನಲಿ ಮನುಜ ನಿದ್ರಿಪನೇನು
ಮರಣದಲಿ ಸಾಕೇನು ಕೀರ್ತಿ ಮಾನ್ಯ.

ಉದ್ಧರಿಸುವಾಸೆ ಕವನಕ್ಕೊ ಕವಿಗಳಿಗೊ
ಇರುವುದೇ? ಹಸಿ ಸುಳ್ಳು ಎಂಬೆ ನಾನು
ಕವಿಯು ಬರೆಯುವ ಹಾಡು ಕನ್ನಡಿಯ ಗಂಟಹುದು
ತೋರಬಹುದಷ್ಟೆ;ಪಡೆಯಲಾರೆ ನೀನು.

ಬಡತನಕೆ ಮರುಗಿದರು ಕ್ರೌರ್ಯಕ್ಕೆ ಉಗುಳಿದರು
ಅಕ್ಷರಕೆ ಉತ್ತರವ ಕೊಡುವನಾರು?
ಇಂತ ಕಾವ್ಯವನೋದಿ ಮೇಜು ಕುಟ್ಟಿದ ಸದ್ದು
ಬರೆದವಗೆ ಸದ್ಗತಿಯು;ಗಾಜು ಚೂರು

ಅನುಭವದ ಮಾತುಗಳ ಬರೆದು ಸೃಷ್ಟಿಸಿದಾತ
ನೆರೆಮನೆಯ ಜನಕೆಲ್ಲ ಕಟ್ಟುಕತೆಯು;
ತನ್ನ ವಿಷಯದ ಹೆಮ್ಮೆ; ನುಡಿಗಟ್ಟಿಗಿಹ ಬಲ್ಮೆ
ಓದುಗನ ತೋಟದಲಿ ಬೆಳೆದ ಕಳೆಯು.

ಕಾವ್ಯ ಜೀವನಪ್ರೀತಿ; ನನ್ನ ನೋಟದ ಕಾಣ್ಕೆ
ನಿಮಗೂ ಪ್ರೀತಿಯೆ ಗುರುತು ಬದುಕಿನಲ್ಲಿ
ನೋವ ಹಂಚುವುದೇನು ಖಾರ ತೆಗಳುವುದೇನು
ಹಾಯಾದ ಸೊಗದುಸಿರು ಕಾವ್ಯದಲ್ಲಿ.

ರಮ್ಯವೂ ಸುಂದರವೂ ಮನಸಹಜದಾಪೇಕ್ಷೆ
ಹಕ್ಕಿನೋಟವು ಇರಲಿ ನನ್ನ ಕಾವ್ಯ
ಸಹಜತೆಯ ಒಪ್ಪುವುದು; ಪ್ರೀತಿಯನು ಹೊದ್ದುವುದು
ಹಿತಕೆ ನಿಜಮಾನಸಕೆ ಇಳಿಯೆ ಧನ್ಯ.

Wednesday, January 30, 2013

ನಾನು ಉಳಿಸಿಕೊಂಡದ್ದು!


ನನ್ನಿಂದ ದೂರಾಗಿ ಹೋದವರು ಯಾರಿಲ್ಲ
ನಾನಾಗಿ ದೂರಕ್ಕೆ ನಡೆದು ದಣಿದೆ.
ಬಂದ ದಾರಿಯ ಮತ್ತೆ ನೋಡಲಾಗುವುದಿಲ್ಲ
ನೆನಪುಗಳ, ನೋವುಗಳ ತುಳಿದು ಬಂದೆ.

ಕರೆಯದಿರಿ ನನ್ನನ್ನು ನಿಮ್ಮ ಹಿರಿತನದೊಳಗೆ
ನನ್ನ ಸಣ್ಣನೆ ಬದುಕು ತುಂಬದಲ್ಲಿ!
ಬೆಳಕಾದರೂ ನೀವು, ನನಗೆ ಕತ್ತಲೆ ಬೇಕು
ಬದುಕು ಸುಖಿಸಲಿ ನಿಮ್ಮ ಬೆಳಕಿನಲ್ಲಿ

ಜಗವು ಕಲಿಸಿದೆ ನನಗೆ ನೋವುಗಳ ನಗಿಸಲು
ನಕ್ಕು ಉಗುಳಲು ದ್ವೇಷ ಕಿಚ್ಚುಗಳನು
ಎಲ್ಲಿಯೋ ಕಾಣುವುದು ನನ್ನ ಬಾಳಿನ ಒಲುಮೆ
ಯಾವುದೊ ಲತೆಗಳಲಿ ಹೂವುಗಳನು

ಆ ದಿನಕೆ ಕಾಯುವೆನು ಹೊಣೆಯ ಬೆನ್ ಬಾಗಿದರು
ಹಿಡಿಯಲಾರೆನು ಮುಳ್ಳು ಊರುಗೋಲು!
ಎದೆಯ ಒಳಗಡೆ ಉರಿವ ಆ ಆತ್ಮವಿಶ್ವಾಸ
ಬರಿಸಲಾರದು ನನಗೆ ಎಂದು ಸೋಲು.

Monday, January 28, 2013

ಮಲ್ಲಿಗೆಯ ಜೊತೆಗೆ


ನಿಶೆಯ ಮಂಪರಿನೊಳಗೆ ಬಿದ್ದ ಸೂರ್ಯನ ಕಣಕೆ
ಮಲ್ಲೆ ಮೈಮುರಿದೆದ್ದು ಅರಳಿತೇನು?
ಅರಳಿ ಹೊರಳಿದ ಮಲ್ಲೆ ನನ್ನವಳ ಕರೆದಂತೆ
ಎದ್ದು ಹೊರಟಲು ಅವಳು ಯಾಕೊ ಏನೊ!

ಅಚ್ಚಬಿಳಿಯದು ಚೆಲುವು ಪಚ್ಚೆಲತೆಯೊಳು ಬಳುಕಿ
ಮುತ್ತಿಟ್ಟು ನಿಂತಿತ್ತು ಒಂದು ಘಳಿಗೆ!
ನನ್ನವಳು ಬಂದವಳು ಹೂ ಕಂಡು ನಕ್ಕವಳು
ತಲೆಯ ತುರುಬನು ನೋಡಿ ಬಂದಳೊಳಗೆ.

ಇಂದೇಕೋ ಮಲ್ಲೆ ಹೂ ಮುಡಿಸಿಲ್ಲ ಎಂದೆನುತ
ನನ್ನವಳು ಮುನಿಸನ್ನು ತೋರಬೇಕು
ಮಲ್ಲಿಗೆಯ ಹೂಗಳನು ಪ್ರೀತಿದಾರಕೆ ಹೆಣೆದು
ಅವಳ ಬಳಿ ಕರೆದು, ನಾ ಮುಡಿಸಬೇಕು,

ಒಂದು ದಿನದಲಿ ಅರಳಿ ನನ್ನವಳ ಜೊತೆಮಾಡಿ
ಪ್ರೇಮ ಹೂವಾದಂತೆ ಅಲ್ಲವೇನು?
ಅದೆ ಸಂಜೆ ಬಾಡಿತ್ತು; ಬದುಕು ಮುಪ್ಪಡರಿತ್ತು
ರಾತ್ರಿ ತಾರೆಯತೇರು ಸೇರಿತೇನು?

೨೮-೦೧-೨೦೧೩

Saturday, January 26, 2013

ಮೈಸೂರು ಮಲ್ಲಿಗೆಯ ಕವಿಗೆ ಅರ್ಪಣೆ.


ಓ ಹಿರಿಯ ಕವಿವರ್ಯ; ನೀನು ಮಲ್ಲಿಗೆ ತಂದೆ
ಅದನೆ ನಂಬುತ್ತಿರುವೆ ನಾನು ಇಂದು
ಕೋಲು ಕಹಳೆಗಳಲಿ ನನಗೆ ಪ್ರೀತಿಯೆ ಇಲ್ಲ
ಬಾಳಪ್ರೀತಿಯೆ ಕವನ ನನಗೆ ಎಂದೂ!

ನೀನೆ ಬೆಳೆಸಿದ ಗಿಡದಿ ಹೂವ ಕೊಯ್ಯಲು ಬಂದೆ
ನೀ ಕೊಟ್ಟ ಮಲ್ಲಿಗೆಗೆ ಸಾಟಿಯಲ್ಲ!
ನೀನೆ ಬೆಳೆದುಕೊ ಎಂದು ಗದರದಿರಿ ನನ್ನನ್ನು
ನಾನೇನು ನಿನ್ನಂತ ಮೇಟಿಯಲ್ಲ.

ನಿನ್ನ ಮಲ್ಲಿಗೆ ಗುರುವೆ, ಮೈಸೂರ ಪೇಟೆಯದು
ನಾನು ನೋಡುವ ಮಲ್ಲೆ ಕಾಡುಗಳದು
ನಾಡುಮಲ್ಲಿಗೆಗಿಂತ ಕಾಡುಮಲ್ಲಿಗೆ ದಂಟು!
ಪರಿಮಳವು ಅತಿಯಲ್ಲ; ಗಟ್ಟಿಯೆಂದು!

ಸುಣ್ಣದುಂಡೆಗಳಂತೆ ಮಲ್ಲಿಗೆಯು ಎಂದವರು
ಬೆಣ್ಣೆಯನು ಮೊದಲೆಂದೂ ಕಾಣಲಿಲ್ಲ!
ಬಣ್ಣಮಾತುಗಳಲ್ಲಿ ಅವರ ಹೊಗಳುವುದಿಲ್ಲ
ಅಣ್ಣ ನೀ ಸರಿ ಎಂದು ಕಾಲ್ಗೆರಗುವೆ.

ನೀ ಬೆಳೆದ ಕಾಲದಲಿ; ಮಲ್ಲಿಗೆಯು ಬಹುಚಂದ
ಈಗ ಬೆಳೆಯುವುದೇನು ಕಷ್ಟ ಬಹಳ
ಗೊಬ್ಬರವನಿಡಬೇಕು; ಬರಬೆಂದ ಮಡಿಲಲ್ಲಿ
ಗಿಡ ಬಾಳಿ ಬದುಕುವುದು ತುಂಬ ವಿರಳ.

ನಿನ್ನ ಕಾಲದಿ ಜನರು ಮಲ್ಲಿಗೆಯ ಕೊಂಡವರು
ಸುಮದ ಚಂದವ ನೋಡಿ ಹೊಗಳಿದವರು.
ಈಗಲೂ ಇದ್ದಾರೆ ವಿಜ್ಞಾನ ಬುದ್ಧಿಯಲಿ
ಎಸಳು ತೆಳುವಾಯ್ತೆಂದು ಹಲಬುವವರು.

ಹಾರೈಕೆ ನಿನದಿರಲಿ; ಚೇತನವು ನನದಿರಲಿ
ಮಲ್ಲೆ ಹೂಗಳು ಎಂದು ಬಾಡದಿರಲಿ
ನನ್ನ ಜೀವನದಲ್ಲು ಹೂವ ನಗೆ ಶಾಶ್ವತವು
ನಿನ್ನ ಕನಸಿನ ತೋಟ ಅಳಿಯದಿರಲಿ.

೨೬-೦೧-೨೦೧೩

Monday, January 21, 2013

ನನ್ನೊಳಗಿನ ನಾನು


ನಡೆಯುತ್ತಾ ನಡೆಯುತ್ತಾ ಓಡುವುದ ಕಲಿತ
ಓಡುತ್ತಾ ಹೀಗಿರಲು ದಾರಿಯನೆ ಮರೆತ.
ವೇದಾಂತ ಓದದೆಯೆ ಗೊಡ್ಡೆಂದು ಜರೆದ
ತಲೆಕೆರೆದು ಚಿಂತಿಸಿದ;ಬಾಳ್ವೆಯನೆ ಹಳಿದ

ಮೂರುದಾರಿಯ ಬಲ್ಮೆ ನಿಂಬೆಮಂತ್ರದ ಮಾಟ
ಸೇರು ತುಪ್ಪದ ತೇಗು; ಕಾಲ್ದಾರಿ ಬೇಟ
ಇಷ್ಟೆಲ್ಲ ದೊರೆತಂದು; ಕಳೆದ ಧಾತುವಿನೊಳಗೆ
ಮತ್ಸರವ ತಾಳಿದನು;ಇತ್ತು ಅರೆಘಳಿಗೆ.

ಹಿಡಿಚೂರು;ಬಿಟ್ಟು ಬಿಡು, ದಾರಬಿಚ್ಚಿಡು ಮಗನೆ
ಬಡಿಮೆಲ್ಲ! ಓಡದೆಯೆ ಹರೆಯಲದು ಕೀಟ.
ತುಂಡರಿಸಿ ರೆಕ್ಕೆಯನು;ನಿನ್ನ ಬಲದಲಿ ಮೇಲ-
ಕ್ಕೇರಿಸುತ ಸಹಕರಿಸು,ಕೊಟ್ಟು ಕಾಟ

ಬೊಮ್ಮನಿಗೊ ಅಮ್ಮನಿಗೊ ಲಲಾಟಬರಹಕ್ಕೂ
ಸುಮ್ಮನೇ ಕಿವಿತುಂಬಿಸಿದ ಗುಗ್ಗುತುರಿಕೆ!
ಕದ್ದ ಮಾತುಗಳಿಗೆಲ್ಲ ಬಿಳಿಯ ಬಣ್ಣವನಿಟ್ಟು
ಮಾರುವುದು ತಾನ್ ಆತ್ಮದುದ್ದಾರಕೆ.

ಭಲೇ ಭೇಷ್ ಎನ್ನುತಲೆ ಬೆನ್ನಿಗಿಟ್ಟರು ಭಾರ
ಸ್ವಂತ ಚಿಂತೆಯ ಮರೆತ ಲೋಕದುದ್ಧಾರ
ನೆರೆಮನೆಯವನ ನರಸತ್ತುದಕೆ ಮದ್ಧು
ಹುಡುಕಿ ಸುಸ್ತಾದದ್ದೆ ಇವನ ಲಾಭ.

ಓಡಿದವ ಸುಸ್ತಾದನೆಂದು ಕೊಟ್ಟರು ನೀರು
ಇತ್ತರವನಿಗೆ ಸುರೆಯ; ವೀರನಾಗು!
ಮತ್ತೆ ಬೈದರು ಹಿಂದೆ ಓಡುತ್ತಿರಲಿ ಮುಂದೆ
ಬಳಲಿದೆಯೋ ಮಗನೆ? ದಾಸನಾಗು.

ಬೊಚ್ಚುಬಾಯಿಗಳಲ್ಲಿ ಅಣಕಿಸಿದ ತುಟಿಗಳಿಗೆ
ಬೆಂಕಿ ಹಚ್ಚುವೆನೆಂದು ಮಾತನಿತ್ತ
ಹಿಂತಿರುಗಿ ಬರಲಾರ, ದೂರದಡವಿಗೆ ಬಂದ
ಸುತ್ತ ಕತ್ತಲೆ ತುಂಬಿ ಮನೆಯ ನೆನೆದ.

ದೊಡ್ಡನೆಯ ಕೆಂಪು ಹಚ್ಚಿದ್ದ ಹಣೆಗಣ್ಣು
ಕರೆದಂತೆ ಕೇಳಿಸಿತು ಅಮ್ಮನೊಲವು
ಕೆನ್ನೆಯಾ ಅರಿಷಿಣಕೆ ರವಿಯು ತೆರೆಸರಿದಂತೆ
ಮಣ್ಣಾಯಿತು ಆಸೆ, ಜೀವ ಕಣವು.

೧೮-೧-೨೦೧೩

Friday, January 18, 2013

ನೆನೆದಾಗ ಕರೆವವಳು, ಚಂದಿರನ ನಗೆಯವಳು


ನೆನೆದಾಗ ಕರೆವವಳು, ಚಂದಿರನ ನಗೆಯವಳು
ಮುನಿಸು ತೋರಿದಳೊಮ್ಮೆ ಸಂಜೆಯಲ್ಲಿ!
ಈ ನಿಶೆಯು ಬಿರುಮೌನ; ಕೊರೆಯುತಿದ್ದವು ಮಾತು
ಮಲ್ಲೆ ಬಿರಿದಿತು ದಿನದ ಬೆಳಗಿನಲ್ಲಿ.

ಬೆಳಗಿನಲೆ ಕಂಡವಳು ಕಪ್ಪು ಮೋರೆಯ ಕಂಡು
ಕೇಳಿದಳು ಬೇಸರದ ಕಾರಣವನು!
ಏನಿಲ್ಲ ಎಂದೆನುತ ಅವಳ ಒಲುಮೆಗೆ ಮಣಿದು
ಅವಳನ್ನೇ ನೋಡುತಲಿ ನಿಂತೆ ನಾನು.

ಕಾರಣವು ಇಲ್ಲದೆಯೆ ಸಿಡುಕಿದರು ನನ್ನವಳು
ಕಾರಣವು ಬೇಡದೆಯೆ ಪ್ರೀತಿಸುವಳು!
ಹೀಗೆನುತ ನಾವಿರಲು; ಮತ್ತೇನು ಬೇಕೆಮಗೆ
ಅವಳಿಗಾಗಿಯೆ ನಾನು ನನಗೆ ಅವಳು.

Thursday, January 10, 2013

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ
ನಿನಗಾಗಿ ಹಾತೊರೆದ ಹಳೆಯ ಸರಕು!
ಕೆಣಕುತಲಿ ಕಾಡುವುದು, ನಿನ್ನನ್ನೇ ಬೇಡುವುದು
ನೆನಪು ಇಬ್ಬನಿಯಂತೆ ತೋಯ್ವ ಬಿರುಕು!

ಎದೆಯೊಳಗೆ ಕೆತ್ತಿಲ್ಲವಾದರೂ ಬಲು ಹೆಸರು
ಮರೆತಿಲ್ಲ ಗೆರೆಗಳನು,ಕೊರೆದವರನು
ಅಂತಹಾ ಗೀಚುಗಳ ಮತ್ತೆ ಫಳಫಳ ಹೊಳೆಸಿ
ಹಾಡಲಾರೆನು ನೋವ ಕತೆಗಳನ್ನು.

ಸೋತೆನೆಂದರೂ ಸರಿಯೆ, ಮತ್ತೇನೂ ಹೇಳೆನು
ಗೆದ್ದೆನೆಂದಾದರೂ ಮಾತು ಬೇಡ,
ಹೀಗೆ ನೋಡುತಲಿರುವೆ ಶಶಿಯ ಕಾಯುತಲಿರುವೆ
ಬರುವನೆಂದಾದರೂ ಸರಿಸಿ ಮೋಡ!

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ
ಹರಿಯುವುದು ಹೊಸತನದ ಒಲವ ನಡಿಗೆ!
ಅದನೆ ಪೋಷಿಸುತಿರಲಿ ಅದನೆ ಬೆಳೆಸುತ ಬರಲಿ
ನಿನ್ನೊಲವೆ ಹರಿಯಲೆನ್ನಾತ್ಮ ಗುಡಿಗೆ.

Tuesday, January 8, 2013

ನಂಬಿದ್ದು-ನಂಬಿದವರು


ಗಿಡದಲ್ಲಿ ಹೂವಿಲ್ಲ, ಹಣ್ಣಿಲ್ಲ ಎಂದೆಲ್ಲ ಮರುಗಿದವ
ಬಂದಿಲ್ಲಿ ನೀರೆರೆದ ನೆನಪು ಇಲ್ಲ!
ಅದಕೆ ಕಟ್ಟೆಯ ಕಟ್ಟಿ ಪೂಜೆ ಮಾಡಿದ ಮಂದಿ
ಹೇಳಿದರು ಆ ಗಿಡಕೆ ಯೋಗವಿಲ್ಲ!

ಮಳೆಗಾಲದೊಳು ಮಳೆಗೆ ಚಿಗುರುಕಟ್ಟಿದ್ದಕ್ಕೆ
ಹರುಷಗೊಂಡರು ಜನರು, ಚಿವುಟಿ ಚಿಗುರ!
ಕಂಡೀತು ಮತ್ತೇನೋ ಎಂದೆನುತ ಕೆರೆಕೆರೆದು
ಹಿರಿದು ಹಿಗ್ಗಿದವರು ಮೆರೆದು ಪೊಗರ!

ನೀರೆರೆಯ ಬಾರೆಂದು ಗೋಗರೆದ ಜನಕೆಲ್ಲ
ಬಿಸಿಲು ಕಾಲದಿ ತೋರೆ ಖಾಲಿ ಕೊಡವು!
ಅದರ ಮಧ್ಯದಿ ನರಕದೊಳು ಹೊಳಲುತಿದೆ
ಗಿಡಕೆ ಸಾವಿನ ಸುಖದ ಬೆವರಿನೊಲವು.

ಗಿಡವು ಹೀಗೆಯೆ ಸ್ವಾಮಿ, ಹೂವಾಗಲಾಗದೆಯೆ
ಹಣ್ಣಾಯಿತು ಹೇಗೋ ಹಿಚುಕಿದಂತೆ!
ನೆತ್ತರನೆ ಒಣಗಿಸಿ, ಅದಕೆ ಗೊಬ್ಬರ ಹೆಸರು!
ಮಾತಲ್ಲಿ ಬದುಕಿತು ನಾಳೆಗಂತೆ!!