Wednesday, July 31, 2013

ಮಳೆಬಿಲ್ಲಿನವಳು..

ನನ್ನವಳ ಕರೆದು ನಾ ಮಳೆಬಿಲ್ಲು ತೋರುವುದು
ಈ ಮಳೆಯ ದಿನಗಳಲಿ ಸುಲಭವಲ್ಲ;
ಮಳೆಬಿಲ್ಲಿನಾಸೆಗೆ, ಮೋಡ ಮುಸುಕಿದ ಸಂಜೆ
ಆಗಸದಿ ಬಣ್ಣಗಳು ಕಾಣಲಿಲ್ಲ.

ನಿನ್ನೆ ಬಂದಿಹ ಮಳೆಗೆ ಇಂದು ಕಾಮನಬಿಲ್ಲು
ಹುಡುಕುವುದು ಸಾಧ್ಯವೇ? ಪ್ರಶ್ನೆ ಸಲ್ಲ!
ಮಳೆಬಿಲ್ಲು ನೆಪವಾಗಿ ನನ್ನವಳ ಜೊತೆಜೊತೆಗೆ
ಈ ಸಂಜೆ ಕಳೆಯುವುದು ತಪ್ಪು ಅಲ್ಲ!

ಮುನಿಸಿನಲಿ ಬೈದಾಳು ನನಗಲ್ಲ, ಮುಗಿಲಿಗೆ
ಹನಿಮಳೆಗೆ ಮುಖವೊಡ್ಡಿ ಕಾಯುವವಳು
ಬಿರುಬಿಸಿಲು ರಾಚಿದರೆ ಕೈಬೆರಳ ಕೊಡೆಯೊಳಗೆ
ಮುಗಿಲನ್ನೆ ಬರಲೆಂದು ಕರೆಯುವವಳು

ಕೊನೆಗೊಮ್ಮೆ ಕಂಡೀತು ಮಳೆಬಿಲ್ಲ ಸಿರಿಹೊನಲು
ಆ ಕಣ್ಣ ಮಿಂಚಿನಲಿ ನಾ ಹೊಳೆಯುವೆ;
ಇಂಥವಳು ಜೊತೆಗಿರಲು ಮಳೆಬಿಲ್ಲು ಬೇರೇಕೆ
ಇವಳು ನನ್ನವಳೆಂದು ನಾ ಮೆರೆಯುವೆ.

೦೧-೦೮-೨೦೧೩

Thursday, July 25, 2013

ಯಾರು? ನನ್ನ ರಾಧೆಯನ್ನು ನೋಯಿಸಿದವರು ಯಾರು?

ಯಾರು? ನನ್ನ ರಾಧೆಯನ್ನು
ನೋಯಿಸಿದವರು ಯಾರು?
ಕಾರಿರುಳೋ ಕರಿಮುಗಿಲೋ
ಧಾರೆಯೆರೆವ ಮಳೆಯೋ?

ಬೆನ್ನಹಿಂದೆ ಕರೆದರೇನೆ
ಹೆದರುವವಳು ಅವಳು!
ಏರುದನಿಯ ಗುಡುಗು ಸಿಡಿಲು
ದನಿಯು ಸಾಕು ನಡುಗಲು!
ಇಂಥ ರಾಧೆಯನ್ನು ಹೀಗೆ
ಕಾಡಿದವರು ಯಾರು?

ಮುಂಗುರುಳಿನ ಸಿಕ್ಕು ಬಿಡಿಸಿ
ಹುಸಿಮುನಿಸೊಳು ಬೈಯ್ಯುವಳು
ಮತ್ತೇನನೋ ಮರೆತುಕೊಂಡು
ಮಾತುಗಳನು ಹುಡುಕುವಳು
ಇಂಥ ರಾಧೆಯಲ್ಲಿ ಹೀಗೆ
ನಿಜದ ನೋವು ಬಂತು ಹೇಗೆ?

ಯಾರ ಕರುಬಿಗಿವಳ ನೋವು
ಅರಿಯದಾದೆ ನಾನು;
ಓ ಸಖಿಯರೆ ನೀವೆ ಹೇಳಿ
ನೋಯಿಸಿದವರು ಯಾರು?

17/07/2013