Thursday, July 25, 2013

ಯಾರು? ನನ್ನ ರಾಧೆಯನ್ನು ನೋಯಿಸಿದವರು ಯಾರು?

ಯಾರು? ನನ್ನ ರಾಧೆಯನ್ನು
ನೋಯಿಸಿದವರು ಯಾರು?
ಕಾರಿರುಳೋ ಕರಿಮುಗಿಲೋ
ಧಾರೆಯೆರೆವ ಮಳೆಯೋ?

ಬೆನ್ನಹಿಂದೆ ಕರೆದರೇನೆ
ಹೆದರುವವಳು ಅವಳು!
ಏರುದನಿಯ ಗುಡುಗು ಸಿಡಿಲು
ದನಿಯು ಸಾಕು ನಡುಗಲು!
ಇಂಥ ರಾಧೆಯನ್ನು ಹೀಗೆ
ಕಾಡಿದವರು ಯಾರು?

ಮುಂಗುರುಳಿನ ಸಿಕ್ಕು ಬಿಡಿಸಿ
ಹುಸಿಮುನಿಸೊಳು ಬೈಯ್ಯುವಳು
ಮತ್ತೇನನೋ ಮರೆತುಕೊಂಡು
ಮಾತುಗಳನು ಹುಡುಕುವಳು
ಇಂಥ ರಾಧೆಯಲ್ಲಿ ಹೀಗೆ
ನಿಜದ ನೋವು ಬಂತು ಹೇಗೆ?

ಯಾರ ಕರುಬಿಗಿವಳ ನೋವು
ಅರಿಯದಾದೆ ನಾನು;
ಓ ಸಖಿಯರೆ ನೀವೆ ಹೇಳಿ
ನೋಯಿಸಿದವರು ಯಾರು?

17/07/2013

3 comments:

Badarinath Palavalli said...

ಸಖೆಯರನು ಕೇಳಬಾರದು, ಅದು ಮಾಧವನ ಗೈರು ಹಾಜರಿಯ ಪರಿಣಾಮ. ಆತನೇ ಇದ್ದಿದ್ದರೆ ತೆಕ್ಕೆಯಲಿ ಆಕೆಗಿರುತಿತ್ತೇ ಭಯ?

ಮೌನರಾಗ said...

ಈ ಕೃಷ್ಣನೇ ಇರಬೇಕು ಅನಿಸುತ್ತೆ...

sunaath said...

ತಾವೇ ಇರಬಹುದು ಎನಿಸುತ್ತದೆ!