Monday, August 18, 2014

ಮತ್ತೆ ದ್ವೈಪಾಯನದಿ..

ಅಂದು ದ್ವೈಪಾಯನದಿ ಮುಳುಗೆದ್ದ ಹಂಸಕ್ಕೆ
ಮೀನಿನಂತೆಯೆ ಕಂಡ ಮಣಿಯ ಮಾಲೆ;
ತರಲದೋ ಮೇಲಕ್ಕೆ ಕಂಡ ಬೆಸ್ತರ ಹುಡುಗ
ಹಂಸ ಬಾಣಕೆ ಗುರಿಯು ವಿಧಿಯ ಲೀಲೆ!
ಮಣಿಯ ಕೊರಳಿಗೆ ತೊಟ್ಟು, ಹಂಸ ಬುಟ್ಟಿಯಲಿಟ್ಟು
ಹುಡುಗ ನಡೆದನು ಮನೆಯ ಜಾಡು ಹಿಡಿದು;
ಮನೆಯ ಒಳಕೋಣೆಯಲಿ ಅಪ್ಪನಿದ್ದನು ಮೌನಿ
ಕತ್ತರಿಸಿ ಹೋದಂತ ಕಾಲನೆಳೆದು!
ಮಾಲೆಯನು ಕಂಡವನು ಒಕ್ಕಣ್ಣು ಅರಳಿಸಿದ
ಹಳೆಯ ನೆನಪಲಿ ತೊಗಲು ಗೊಂಬೆಯಾದ!
ತನ್ನೊಡೆಯ ಕೌರವನ ವರದ ಕಂಠಾಭರಣ
ಮಗನ ಕೊರಳೊಳು ಕಂಡು ಮೌನವಾದ.
ಆ ಯುದ್ಧ ಆ ಸಾವು ಹಿಂಸೆ ಶಾಂತಿಯ ಮಂತ್ರ
ಎಲ್ಲವೂ ಬದುಕಿನಲಿ ಬಂತು ನನಗೆ;
ಕಾಲ ಜಾರಿತು ಹೀಗೆ ಕಾಲಪುರುಷನ ನೆವಕೆ
ಕಾಲುಹೀನಗೆ ಬಂತೆ ಬಲ್ಮೆಯುಡುಗೆ?
ಮಾಲೆ ತೆಗೆದಿರಿಸಿಟ್ಟು ಅಡುಗೆ ಕೋಣೆಗೆ ಸರಿಯೆ
ಹಂಸವಾಯಿತು ಪಾಕ ಎಂದಳಮ್ಮ!
ಮುಳುಗಿದವ ಏನಾದ? ಕೊಂದವನು ಏನಾದ?
ಹಸಿವು ಹೊಟ್ಟೆಯದಲ್ಲ; ನಿಜದ ಬ್ರಹ್ಮ.

~
೧೮-೦೮-೨೦೧೪

Sunday, April 27, 2014

ಸೀತಾಲತೆಯ ಕತೆ!

ಹೀಗೊಂದು ಸಂಜೆಯಲಿ ನದಿಯ ತೀರದಳೊಂದು
ಜಲದಿ ತೇಲುವ ಬಳ್ಳಿ ಕಾಣುತಿರಲು;
ಯಾವ ಕತೆಗೋ ಏನೋ ಅದನೆ ನೋಡುತ ಕರಗಿ
ಮನೆಗೆ ಬಂದಿತು ಬಳ್ಳಿ ಪ್ರೇಮದವೊಲು!

ಕಾಡಿನೊಲುಮೆಯ ಜೊತೆಗೆ ಮಣ್ಣು ಮಮತೆಯ ಕರೆಗೆ
ಬಳ್ಳಿ ಚಿಗುರಿತ್ತೆಂದು ರಾಮನಲ್ಲಿ,
ಹೇಳುವುದೆ ಸಂಭ್ರಮವು, ಅಹಾ ಬಳ್ಳಿ ಚಿಗುರೊಲವು
ಮಣ್ಣಿನಣುಗಿಗೆ ಲತೆಗೆ ಬೇಧವೆಲ್ಲಿ?

ದೂರ ಚಾಚಿತು ಸೊಬಗು ಬಳುಕಿನಾಚೆಗೆ ಗೆಲ್ಲು
ತಬ್ಬಿ ಬೆಳೆಯಲು ಇರುವ ಕೋಲಾಸರೆ!
ಬಾಗಿಲಿನ ಬಳಿಯಲ್ಲಿ ಬೆಳಗು ನೋಡುವುದಲ್ಲ
ಬಳ್ಳಿ ಬಳುಕಿನ ನಡುವೆ ಸೀತಾ ಸೆರೆ!

ಹೂಬಿಡುವ ಕಾಲದಲಿ ಕಾನನದ ಮೂಲೆಯಲಿ
ಮಾರೀಚನೀಚತೆಯ ಜಿಂಕೆ ಬರಲು
ಮಲ್ಲಿಗೆಯ ಮರೆತವಳು ಹೊನ್ನಹರಿಣಕೆ ಮನವು!
ರಾಮಬಾಣದ ಕೊನೆಯು ಸೀತೆ ನಗಲು

ಸೆಳೆದು ಎಳೆಯುವ ನಡುವೆ ಬಳ್ಳಿ ಸೊರಗಿದರೇನು
ಸೀತೆ ಕೈಯ್ಯೊಳು ಮೊಗ್ಗು ಹರಿದು ಬಂತು!
ಹಿಂತಿರುಗಿ ರಘುರಾಮ ಬಂದು ಕಾಣುವುದೇನು
ಮಲ್ಲಿಗೆಯ ಬಳ್ಳಿಯಲಿ ಮೌನವಿತ್ತು!

Tuesday, April 15, 2014

ನನ್ನವಳು ನಕ್ಕಾಗ

ನನ್ನವಳು ನಕ್ಕಾಗ ಹಣತೆಗಳು ಬೆಳಗುವವು
ಯಾವುದನು ಹೋಲಿಸಲಿ? ಹುಡುಕಬೇಕು.
ಸಂಜೆಯೇರುತ ಕಪ್ಪು ಜಗವನ್ನೆ ಸುತ್ತಿರಲು
ತುಳಸಿ ಹೂವಿನ ಎದುರು ಕಂಡ ಬೆಳಕು;

ಎಣ್ಣೆ ಹೀರಿದ ಹಣತೆ, ಕರಿಯ ಬತ್ತಿಯನೆತ್ತಿ
ಹೀಗೊಮ್ಮೆ ಹಾಗೊಮ್ಮೆ ಹುಬ್ಬನೊರಸಿ;
ನನ್ನವಳು ಎದೆಗಾತು ಹಣತೆಯನು ಹಚ್ಚುವಳು
ನನ್ನ ಒಲವಿನ ಮಾತು ಹಿತದಿ ಬೆರೆಸಿ.

ಗಾಳಿಯಾಡುವ ದಿನಕೆ ಹಸ್ತದಲಿ ತಡೆಯುವಳು
ದೀಪವಾರದೆ ಇರಲಿ ಎಂಬ ಕನಸು;
ತುಳಸಿಬದಿಯಲಿ ನಿಂತು ದೇವರನು ಬೇಡುವಳು
ಅವಳ ಮೊಗದಲಿ ಕಾಂತಿ ಎಂತ ಸೊಗಸು!

ಯಾವ ಬಿಗುಮಾನವೂ ಸುಳಿಯಲಾರದು ಇಲ್ಲಿ
ನೋವಿರಲಿ ನಗೆಯಿರಲಿ ಹಣತೆಯಿರಲಿ;
ದಿನನಿತ್ಯ ಹರಸುವಾ ಒಲುಮೆಯಾಟದ ಬೆಳಕು
ಆರದೆಯೆ ಇರಲೆಂಬ ಪ್ರೀತಿಯಲ್ಲಿ!

Tuesday, April 1, 2014

ಅವಳ ಜೊತೆಗಿನ ಸಂಜೆ

ಈ ಸಂಜೆಯಾದಾಗ ಅವಳ ನೆನೆವೆನು ನಾನು
ಹಣೆಗಿಳಿವ ಹೆರಳನ್ನೆ ಸರಿಸಿ ಬರಲು;
ಆಗಸದಿ ಹೊಳೆಯುವಾ ಮುಳುಗು ಸೂರ್ಯನ ಹಾಗೆ
ಬಿಂದಿಯನು ಧರಿಸಿಹಳು ನಾನು ನಗಲು.

ದಡದಲ್ಲಿ ಮಿನುಗುತಿಹ ಮರಳುಕಣ ಕಣದೊಳಗೆ
ಅವಳ ನಗುವಿನ ರೀತಿ ಹೊಳೆವ ಮಿಂಚು;
ಚಿಪ್ಪುಗಳ ಸರಿಸುವುದು ತೆರೆಯ ನೆಪದಲಿ ಕಡಲು
ನನ್ನವಳ ಪಾದದಲಿ ಅಂತ ಹೊಳಪು.

ಅಬ್ಬರಿಸುತಿದ್ದವನು ಸಾಗರನು ಈ ದಿನದಿ
ಸುಮ್ಮನುಳಿದನು ಗೆಜ್ಜೆ ಸದ್ದು ಕೇಳಿ;
ನನ್ನವಳ ಜೊತೆ ನಾನು ನಡೆಯುತ್ತ ಬಂದಿರಲು
ನನ್ನ ಕೆಣಕುವನೇನು ನೀವೆ ಹೇಳಿ!

ಮುಳುಗುತಿದ್ದಾ ಸೂರ್ಯ ನನ್ನವಳ ಕಂಡೊಡನೆ
ಬಿಂದಿಯೂ ನಕ್ಕೀತು ಅವನ ಕಂಡು;
ಸೂರ್ಯ ಕೆಂಪೇರಿದನೆ ಈ ಹುಡುಗ ಯಾರೆಂದು?
ತಾನಾಗಬಯಸಿದನೆ ಮದುವೆ ಗಂಡು?

ನಡೆವೆ ನಾ ಕೈಹಿಡಿದು ಪಯಣ ಹೇಗೇ ಇರಲಿ
ಸಂಜೆಗಳು ಹೀಗೆಯೇ ನಗುತಲಿರಲಿ;
ನನ್ನವಳ ಜೊತೆಗಿಷ್ಟು ನಗುವನ್ನು ಹಂಚಲಿದೆ
ರಾತ್ರಿ ಕಳೆಯಲಿ, ಮರಳಿ ಸಂಜೆ ಬರಲಿ.

Thursday, January 23, 2014

ಸೀತಾ-ರಾಮ

ಜನಕನಾ ಪುರದೊಳಗೆ ಮಣ್ಣಣುಗಿ ಸಂಜೆಯೊಳು
ಉದ್ಯಾನದೊಳು ಬಂದು ನಿಂತಳಂತೆ;
ಊರ್ಮಿಳೆಯ ಕೈಪಿಡಿದು ಸಣ್ಣ ತೊರೆ ಹರಿವಲ್ಲಿ
ನೀರ್ಗಣ್ಣು ಚಂಚಲತೆ ಅವಳದಂತೆ!

ದೂರದಲಿ ಕಂಡದ್ದು ಬಾನುದ್ದ ರವಿಯಂದು
ಹತ್ತಿರದಿ ರವಿಕುಲದ ರಾಮನಂತೆ
ನಾಚಿಕೆಯ ಕೆಂಪಿಗೂ ಸಂಜೆ ಬಾನಂಗಳಕು
ವ್ಯತ್ಯಾಸವೇನೆಂದು ತಿಳಿಯದಂತೆ!

ಕಲ್ಲಾಗು ಶಿವಧನುವು ದಶಶಿರಗೆ ನಾಳೆಯೊಳ್
ಮಲ್ಲಿಗೆಯ ತೆರನಾಗು ರಾಮನಿಂಗೆ
ರಾಮಚಂದ್ರನ ಕನಸು ಲೋಪವಾಗದೆ ಇರಲಿ
ಬೇಡಿದಳು ಶಿವೆಯಲ್ಲಿ ಹರಿಸಿ ಗಂಗೆ!

ಲಂಕೆಗೆಳಸುವಳಲ್ಲ ಕೋಸಲೆಯ ಸೊಸೆ ತಾನು
ಕನಸು ನನಸಾಯಿತದೋ ಬೆಳಗಿನಲ್ಲಿ!
ಕೋಸಲಕೆ ಬಂದಿತೋ ಸಣ್ಣ ಮಲ್ಲಿಗೆ ಬಳ್ಳಿ
ಅರಳಿ ತುಂಬಿತು ಗಂಧ ಸೀತೆಯಲ್ಲಿ!

~
ವಿಷಕುಡಿದರೂ ತಾನು ಪೊಸದಾಗಿ ಮೈವೆತ್ತವನ
ಹೆಸರುಳ್ಳ ಸತ್ಕವಿಗೆ ಅರ್ಪಣೆ. 

Sunday, January 12, 2014

ಅಮ್ಮನವಳು..

ಅತ್ತು ಕರೆವಾಗೆಲ್ಲ ತುತ್ತಿತ್ತು ಮುದ್ದಾಡಿ
ಎತ್ತಿದಳು ತೋಳೆತ್ತಿ ಕಣ್ಣನೊರೆಸಿ
ಸುತ್ತಬೆಳದಿಂಗಳು ಹರಸಿದ್ದ ಚಂದ್ರಮನ
ಕತ್ತೆತ್ತಿ ತೋರಿದಳು ನಗುವ ಬರಿಸಿ

ತಟ್ಟೆಯಲಿ ಆಹಾರ ಕೊಟ್ಟುದಕ್ಕೇನಲ್ಲ
ಇಷ್ಟದಲಿ ಕೊಟ್ಟುದಕೆ, ಅಮ್ಮತನಕೆ
ಕಷ್ಟ ನೋವಿನ ಲೆಕ್ಕ ಅವಳ ಜೀವನಕೆಂದು
ಗುಟ್ಟಾಗಿ ಈ ತನಕ ಪೊರೆದುದಕ್ಕೆ!

ಬೇಲಿಯಾಚೆಗೆ ಕೊರಳು ದಾಟಿದ್ದು ತಿಳಿದರೂ
ಗಾಳಿಮಾತುಗಳೆಲ್ಲ ಹುಸಿಯೆಂದಳು
ನೂಲಾಗಿ ಇರುವವಳು ನನಗೆ ಬಟ್ಟೆಯ ಹೊದಿಕೆ
ಸೋಲಾಗದಿರಲೆಂದೂ-ಅಮ್ಮನವಳು.

Thursday, January 9, 2014

ಮೊಣಕಾಲ್ ಕವನಗಳು.

೧.
ಪಕ್ಕದ ಮನೆಯ ಗೃಹಸ್ಥನ ಫ್ಯಾನು;
ರಾತ್ರಿ ಹನ್ನೆರಡರವರೆಗೆ
ಏದುಸಿರು ಬಿಡುತ್ತದೆ,
ನಾನು ನಿದ್ರಿಸುತ್ತೇನೆ.


ಕಲ್ಲಿಗೆ ತಾಗಿದ ಕಾಲ್ಬೆರಳಿಗೆ
ಮುಲಾಮು ಹಚ್ಚುವವಳು;
ಮೊಣಕಾಲಿನ ಉರಿಗೆ
ಮುತ್ತನಿಟ್ಟಳು.

೩.
ಮೊನ್ನೆ ಮದುವೆಯಾದವನು
ಬಡವನೇ ಆಗಿದ್ದಾನೆ;
ಮೊಣಕಾಲಿಗೆ ತರಚುಗಾಯ ಕಂಡೆ.

೪.
ನಮ್ಮೂರಿನ ಹೊಸಾ ಮದುಮಗನಿಗೂ
ಅವನ ಅಪ್ಪನಿಗೂ
ಒಂದೇ ಖಾಯಿಲೆ.
ಮಂಡಿನೋವು.

೫.
ಕಾರು ತೊಳೆಯುತ್ತಿದ್ದ ದೊಡ್ಡ ಮನೆಯಾಕೆ
ತೋಟದ ಕೆಲಸದವನ
ಮಂಡಿ ಶ್ರೀಮಂತಿಕೆಗೆ ಬೆರಗಾದಳು.