Tuesday, April 15, 2014

ನನ್ನವಳು ನಕ್ಕಾಗ

ನನ್ನವಳು ನಕ್ಕಾಗ ಹಣತೆಗಳು ಬೆಳಗುವವು
ಯಾವುದನು ಹೋಲಿಸಲಿ? ಹುಡುಕಬೇಕು.
ಸಂಜೆಯೇರುತ ಕಪ್ಪು ಜಗವನ್ನೆ ಸುತ್ತಿರಲು
ತುಳಸಿ ಹೂವಿನ ಎದುರು ಕಂಡ ಬೆಳಕು;

ಎಣ್ಣೆ ಹೀರಿದ ಹಣತೆ, ಕರಿಯ ಬತ್ತಿಯನೆತ್ತಿ
ಹೀಗೊಮ್ಮೆ ಹಾಗೊಮ್ಮೆ ಹುಬ್ಬನೊರಸಿ;
ನನ್ನವಳು ಎದೆಗಾತು ಹಣತೆಯನು ಹಚ್ಚುವಳು
ನನ್ನ ಒಲವಿನ ಮಾತು ಹಿತದಿ ಬೆರೆಸಿ.

ಗಾಳಿಯಾಡುವ ದಿನಕೆ ಹಸ್ತದಲಿ ತಡೆಯುವಳು
ದೀಪವಾರದೆ ಇರಲಿ ಎಂಬ ಕನಸು;
ತುಳಸಿಬದಿಯಲಿ ನಿಂತು ದೇವರನು ಬೇಡುವಳು
ಅವಳ ಮೊಗದಲಿ ಕಾಂತಿ ಎಂತ ಸೊಗಸು!

ಯಾವ ಬಿಗುಮಾನವೂ ಸುಳಿಯಲಾರದು ಇಲ್ಲಿ
ನೋವಿರಲಿ ನಗೆಯಿರಲಿ ಹಣತೆಯಿರಲಿ;
ದಿನನಿತ್ಯ ಹರಸುವಾ ಒಲುಮೆಯಾಟದ ಬೆಳಕು
ಆರದೆಯೆ ಇರಲೆಂಬ ಪ್ರೀತಿಯಲ್ಲಿ!

3 comments:

  1. ಇನಿಯಳ ನಗುವಿನಲ್ಲಿ ಚೆಲುವನ್ನು ಕಾಣುವುದು ರಸಿಕ ಕವಿಗೆ ಮಾತ್ರ ಸಾಧ್ಯ!

    ReplyDelete
  2. ಒಲುಮೆಯ ಹಣತೆ ಆರದಿರಲೆಂದು ನಮ್ಮದೂ ಬೇಡಿಕೆ ತುಳಸಿಯಲ್ಲಿ.

    ReplyDelete
  3. ಚೆಂದದ ಕವನ ಕಿರಣಣ್ಣ. ನಿಮ್ಮ ಒಲವ ಹಣತೆಗೆ, ಇದೋ ನನ್ನ ನಲ್ಮೆಯ ಪ್ರಣತಿ :-)

    - ಪ್ರಸಾದ್.ಡಿ.ವಿ.

    ReplyDelete