Tuesday, December 27, 2011

ಚಂದ್ರ ಶಿಕಾರಿ .


೧
ನಾನು ಚಂದಿರ ಮತ್ತೆ ಅವಳು
ಅವಳೆಂದರೆ ನನ್ನದೇ ನೆರಳು !!
೨
ನಾನು ಕಿರಣಗಳನ್ನ ತಡೆಯುತ್ತೇನೆ
ಚೆಂದುಟಿ ಒಣಗದಂತೆ
ಅವಳು ಕಿರಣಗಳನ್ನ ಸೆಳೆಯುತ್ತಾಳೆ
ಚಂದಿರನೂ ಕರಗುವಂತೆ
೩
ಇಂದಾದರೂ ಪೂರ್ಣ ಚಂದಿರನ
ಕಾಣಬೇಕೆಂಬ ಬಯಕೆ!
ಅವಳ ಮುಂಗುರುಳಿನಲ್ಲೇ ಸಿಲುಕಿ
ಚಂದಿರ ಒದ್ದಾಡುವನೇನೋ ?
೪.
ಎಲ್ಲರೂ ಅಂದರು ಚಂದಿರ
ಇದ್ದಾಗ ರಾತ್ರಿ ತಂಪೆಂದು.
ಹೆಮ್ಮೆ ನನ್ನಲ್ಲಿ ! ನನಗೆ
ಚಂದಿರ ಬೆಚ್ಚನೆಯ ಆಶ್ವಾಸ !

೨೭-೧೨-೨೦೧೧

Monday, December 26, 2011

ಬಿದಿರು


ಅಪ್ಪನೋಡಿದ ಆಕಾಶಕ್ಕೆ ಬಿಳೆದ ಬಿದಿರಿನ ಮಹಲು
ಕುಡುಗೋಲನ್ನಿಕ್ಕಿ ಒಂದೊಂದೇ ಎಳೆದ
ಅವಧಿ ಮೀರಿದ ದುಡಿತ, 
ಕೊನೆಗಾಯ್ತು ಬುಟ್ಟಿ ಮತ್ತೆ ನಿಚ್ಚಣಿಕೆ !
ಹೊಟ್ಟೆಗೆ ಹಿಟ್ಟಿನ ಪೂರಯಿಕೆ !


ಅಮ್ಮ ಅದೇ ಬಿದಿರ ಕೊಳವೆಯಿಂದ 
ಊದಿದಳು ಒಲೆಯ, ಬೆಂಕಿ ಬಿದಿರ ಪುಳ್ಳೆಗೆ!
ಏನೋ ಬೇಯುವುದು 
ಏನೋ ಸುಡುವುದು 
ಅಮ್ಮಂದಿರಿಂದ ಸಾಧ್ಯವೆಂದೇ , 
ಅಲ್ಲ. ಬಿದಿರ ಬಳಕೆ.


ಮಗ ಇನ್ನೊಂದು ಭಾವುಕ ಜೀವಿ
ತನ್ನಂತೆಯೇ ಉಸಿರಾಡುವ ಮರದ ಬುಡ ಕಡಿಯಲಾರ !
ಕೈ ಕಾಲು ಕತ್ತರಿಸಿದ,
ಮೋಹನ ಮುರಳಿಯ ವಯಸು ನೆನಪಿಸಿ
ತೂತು ಕೊರೆದ , ಕೊಳಲಂತೆ ಅದು !
ಮಂದಾನಿಲದ ನಡುವೆ ಬಿದಿರ ಶಬ್ದ ಈಗ.


ಮೊಮ್ಮಗನೂ ಅದೇ ಹಾದಿ, 
ಉಳಿದ ಬಿದಿರಿನ ಮೆಳೆಗೆ ಕಟ್ಟೆ ಕಟ್ಟಬೇಕಂತೆ!
ಪುಟ್ಟನಾಗಿರುವಷ್ಟು ಬಿದಿರು ಬೆಳೆದೀತು !

(ಪ್ರೇರಣೆ, ಹೃದಯ ಶಿವರವರು ಬಿದಿರು ಎಂದು ಒಂದು ಸಣ್ಣ ಕವನ ಬರೆದಿದ್ದರು .)

Friday, November 25, 2011

ನಾನು ಮತ್ತ ಅವಳು ಎತ್ತ?


ಬಾರೆ ಸಖಿ ಬಾರೆ ಸಖಿ ನೀನು ಬಾರೆ ಇಲ್ಲಿ
ತೇರಿಹುದು ಎದೆಯಲ್ಲಿ, ದೇವಿಯಿರದೂರಿನಲ್ಲಿ

ಮುಡಿದದ್ದು ಮಲ್ಲಿಗೆ ಮಾತೆಷ್ಟು ಕಡೆಯಲ್ಲಿ
ಪರಿಮಳವು ಹೋದ ಕಡೆ ಗಾಳಿಯಲ್ಲಿ
ಎನಿತು ಮುದವಿತ್ತು ಎಷ್ಟೊಂದು ಸೊಬಗಿತ್ತು
ನಲ್ಲೆ ನೀನಿರುವಾಗ ಬಾಳಿನಲ್ಲೆ

ತೋರಿ ನೀ ಚಂದ್ರಮ ನಾ ನೋಡಿ ನಿಂದಾಗ
ಕಂಡ ಚಂದಿರ ನಿನ್ನ ಕಂಗಳಲ್ಲಿ
ದೂರ ಸರಿದರು ಅವನ ಕಿರಣಗಳು ಮೀಟುವವು
ನಿನ್ನ ಮೋಹದ ನಗೆಯ ಬಿಗುವಿನಲ್ಲಿ

ಬಳಲಿಕೆಯೋ ಬಾಡುವುದೋ ಮತ್ತೆ ಅಳು ನೋವುಗಳೊ
ಸುಖದ ಸುದೀಪ್ತಿಗಳೊ ಈಗ ಇಲ್ಲಿ?
ಕಳೆಯುತಿದೆ ನೆನಪು ಎಳೆಯುವುದು ನಿನ್ನ ಬಳಿ
ಚಕಿತ ನಿನ್ನೀ ಬಗೆಯ ಮೋಡಿಯಲ್ಲಿ!

25-11-11

Tuesday, November 8, 2011

ಅವಳ ಕವನ

೧.
ನನಗಿರುವುದೆರಡೇ ಸ್ವತ್ತು
ಅವಳು ಮತ್ತವಳ ಮುತ್ತು !!
೨.
ಸರ್ವ ಜೀವಿಗೂ ನೀರೇ ಆಧಾರ !
ನನಗೋ ನೀರೆ ನಿನ್ನಧರ !
೩.
ಅವಳ ಚೆಂದುಟಿ ನೋಡಿ
ಕುಳಿತಿದ್ದೆ ನಾನು
ಹೀರಬಲ್ಲೆನೆ
ಕತ್ತಿಯಲಗಿನ ಜೇನು ?

Friday, October 28, 2011

ಸೌಗಂಧಿಕಾ ಪ್ರಸಂಗ .!


ಬಿರಿದ ಕಣ್ಣು ಸೆಳೆವ ಮೋಹದೂಟ!
ಬೆಚ್ಚಿಬಿದ್ದಳಾಕೆ ಭೀಮನ ನೋಟಕೆ
ಕದಿಯುವಾಸೆ ಅವನ ಸಂಗ
ಸೋತು ಗೆಲ್ಲಬಲ್ಲ ನಲ್ಲನವನು !

ಸೌಗಂಧಿಕಾ ! ಕಲ್ಪನೆಯೇ ? ಅಲ್ಲ
ಗಾಳಿಗೆಲ್ಲೋ ಹಾರಿ ಬಂದ ಹೂವು ಅದು
ಬಿಳಿ ಹಳದಿ ಗುಲಾಬಿ ಬಣ್ಣ
ಸೆಳೆದುದೇಕೆ ಕಣ್ಣ ಬಣ್ಣ ?

ನೋಡಿದೊಡನೆ ಸುಮದ ಚಂದ
ಒಡಲೊಳ್ ಹರಿದ ಪ್ರೇಮಗಂಧ
ಒಡನೆ ಬಳಿಗೆ ಬಂದ ಭೀಮ
ಸುಡುವ ಸತಿಯ ಬಯಕೆ ಏನು?

ಹೌದು ಭೀಮ ಹುಡುಕಿ ತಾ
ದುಶ್ಶಾಸನ ಹಿಡಿದೆಳೆದಿಹ
ಹೆರಳನೆಲ್ಲ ಮತ್ತೆ ಹೆಣೆದು
ಅಂಥ ಹೂವ ಮುಡಿಸಬೇಕು

ನಗುವ ಮಡದಿಗಿಂದು ಹೂವ
ಬಿಗಿದು ಅಪ್ಪಿ ಮುಡಿಸುವಾಸೆ ಅವಗೆ !
ಜಗದ ಚೆಲುವೆಯವಳು
ಮುಗುದ ಭೀಮ ಸೇನ ಇವನು !

ಗಂಧಮಾದನ ಪರ್ವತವೋ
ಸುಂದರಾಂಗಿಯರ ಕೊಳವೋ
ಬೆಂದು ಬೇಯುತಿದ್ದ ಭೀಮನೆದೆಗೆ
ಮುಂದೆ ಒಂದು ಸರೋವರ !

ದೂರದಿಂದ ಭೀಮ ಕಂಡ
ಮಾರ ಎಸೆದ ಹೂವ ಬಾಣ
ಕರುಬುತಿತ್ತು ಯಕ್ಷ ಬಳಗ
ಸಿರಿಯೇನ್ ದ್ರೌಪದಿಯದು ?

ತಲೆಯ ತುರುಬುಗಟ್ಟಿ ಹೂವ ಮುಡಿಸುವ
ಕಲೆಯ ಎಲ್ಲಿ ಕಲಿತ ಕಲಿಭೀಮ ?        
ಒಲ್ಲೆ ಎಂದಳೇನೆ ಅವಳು
ಸುಳ್ಳೆ ಮುನಿದಳು !

ಹೂವ ನೆಪದಿ ಭೀಮನ  ತೆಕ್ಕೆಯೊಳು ಬಂಧಿ
ನೋವಿತ್ತೆ ಮೊದಲು ! ಈಗಿಲ್ಲ ಮನದಿ !

೨೮-೧೦-೨೦೧೧