Friday, June 29, 2012

ಕಾಯುವುದು ನಿನಗೆ ನಾ, ಬೇಯುವುದು ನೆನೆದು ನಾ

ಕಾಯುವುದು ನಿನಗೆ ನಾ, ಬೇಯುವುದು ನೆನೆದು ನಾ
ನೋಯುವುದು ಸರಿಯೆ ನಾ, ಹೇಳು ನೀನು
ನಿನ್ನ ಕನಸನು ಹೊತ್ತು, ಅವಕೆ ಆಸರೆಯಿತ್ತು
ಅದಕಿಷ್ಟು ಮೆರುಗು ನಾ ತುಂಬುತಿಹೆನು

ನಿನ್ನ ಜೊತೆಯಿರೆ ನಾನು ಬೆಟ್ಟಗಳ ಕುಣಿಸುವೆ
ಕಾಲುದಾರಿಗೆ ಹೂವ ಚೆಲ್ಲಬಲ್ಲೆ!
ಬರದೆ ಹೋದರೆ ನೀನು, ಇವು ಎನ್ನ ಕೆಣಕುವುದು
ಹೇಗೆ ನಾ ಏಕಾಂಗಿ ನಡೆಯಬಲ್ಲೆ?

ಹುಚ್ಚುಹಿಡಿಸುವ ನಗುವು;ಮಳೆಗರೆವ ಮಾತಿನೊಳು
ನನ್ನಂತರಂಗವನು ತುಂಬಬಲ್ಲೆ
ನಿನ್ನ ಸಾಮೀಪ್ಯದೊಳು ಪರಿಪೂರ್ಣ ನಾನೀಗ
ಎದೆಯ ಆನಂದಕ್ಕೆ ಇಲ್ಲ ಎಲ್ಲೆ

ಒಲವದೇನೆಂದು ಅರಿತು ನಾ ಹೇಳುವುದೆ?
ಪದದಿ ಭಾವದ ಸಾರ ತುಂಬಬಹುದೇ?
ನಿನ್ನ ಸಂಗವೆ ಒಲವೆ? ನೀನು ಇರದಿರೆ ಒಲವೆ?
ಮೋಡಗಳ ತೆರದಲ್ಲಿ ಹೊಂಚುತಿಹುದೇ?

೩೦-೦೬-೨೦೧೨

3 comments:

giri.kallare@gmail.com said...

ಸುಂದರ..! ಅತಿಸುಂದರ...!!

Badarinath Palavalli said...

ಸಂಗವೋ - ವಿರಹವೋ ಒಲ್ವಿನ ಸೂಚನೆ ಎನ್ನುವುದು ಅಮಿತ ಪ್ರೀತಿಯ ಸಂಕೇತ. ಒಂದು ಅರ್ಥದಲ್ಲಿ ದೈವಾರ್ಚನೆ ಇದ್ದಂತೆ.

ಪ್ರೀತಿ ಉತ್ಕಟ ಭಾವವು ಇಲ್ಲಿ ತುಂಬಾ ಚೆನ್ನಾಗಿ ಪಾಕವಿಳಿಸಿದ್ದೀರ.

ನಿಮ್ಮ ಒಲುಮೆಯು ಸಾಫಲ್ಯವಾಗಲಿ.

Swarna said...

ಒಲವು ಗೆಲ್ಲಲಿ.
ಸ್ವರ್ಣಾ