Sunday, October 28, 2012

ನಾನು ಮತ್ತು ಬೆಳಕು


ನಾನು ಮತ್ತು ಬೆಳಕು ಎದುರಾಗಿದ್ದು ಇತ್ತೀಚೆಗೆ
ಅದು ಬೆಳಗುತ್ತಿತ್ತು.
ಎಣ್ಣೆ ಸುಡುವ ವಾಸನೆಗೆ
ಮತ್ತು ಬಂದಂತೆ ನಾನು ಕುಳಿತಿದ್ದೆ.

ಹಿಂದೆ ಬೆಂಕಿ ಕಂಡವ ಉಳಿಸಿದ್ದನ್ನು
ನಾನು ನೋಡುವುದೇ?
ಅಲ್ಲ. ಅವನಂತೆಯೇ
ನನಗೂ ಒಂದು ಬೆಳಕಿನ ಪರೀಕ್ಷೆ ಅಷ್ಟೆ.

ಅಪ್ಪ ಹೇಳಿದ ಬೆಳಕು,
ಅಮ್ಮ ಹೇಳಿದ ಬೆಳಕು
ಎರಡೂ ಬೇರೆ ಬೇರೆ, ಆದರೂ
ಈ ಬೆಳಕು ಅದೆರಡೂ ಅಲ್ಲ. ಭಿನ್ನ.

ಸುಡುವುದು ಬೆಂಕಿ,
ಸುಟ್ಟದ್ದನ್ನು ತೋರಿಸುವುದು ಬೆಳಕು
ಎಂದು ಅರಿವಾಗುವ ವೇಳೆಗೆ
ಎಣ್ಣೆ ಮುಗಿಯುವುದು
ಪದ್ಧತಿ.

6 comments:

sunaath said...

ಕವಿ ತನ್ನನ್ನು ಸುಟ್ಟುಕೊಂಡು ಬೆಳಕನ್ನು ಕೊಡುತ್ತಾನೆ ಎಂದು ಹೇಳಬಹುದೆ?!

Swarna said...

ಬೆಂಕಿ ಬೆಳಕಿನ ಭಿನ್ನತೆ ಏಕತೆ ಅರಿವಾದಾಗ
ಒಳಗಿನ ಬೆಳಕು ಹತ್ತಿ ಹೊರಗಿನ ಎಣ್ಣೆ ಮುಗಿವುದು
ಎನ್ನೋಣವೇ ?
ಸ್ವರ್ಣಾ

Badarinath Palavalli said...

ಒಳಾಂಗಣ ಬೆಳಗುವ ಜ್ಞಾನ ದೀವಿಗೆಯನ್ನು ಅಮೋಘವಾಗಿ ಚಿತ್ರಿಸಿದ ಕವನ.

ಅವರವರ ಭಾವಕ್ಕೆ ಬೆಳಕಿನ ಉಪಯುಕ್ತತೆ ಮತ್ತು ಬಳಕೆ ವಿಭಿನ್ನ.

ಕಾವ್ಯಾ ಕಾಶ್ಯಪ್ said...

ಅಮ್ಮ ದೀಪ ಹಚ್ಚಿದ ಬೆಳಕು, ಅಪ್ಪ ಮನೆ ಮಂದಿಗೆ ತೋರಿದ ಬೆಳಕು, ಎರಡೂ ಸುಟ್ಟ ಗಾಯವನ್ನು ತೋರಿದ ಬೆಳಕಿಗಿಂತ ಭಿನ್ನ ಎನಬಹುದೇ....?!

KALADAKANNADI said...

ಅಧ್ಬುತ ಭಾವಸ್ಫುರಣ... ಭಟ್ಟರೇ! ಹ್ಯಾಟ್ಸಾಫ್.. ಅಪರೂಪವಾಗಿ ಅನುಭಾವದ ಉಧ್ಬವಕ್ಕೆ ಕಾರಣವಾಯಿತು!
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Banavasi Somashekhar.ಬನವಾಸಿ ಮಾತು said...

ಸೊಗಸಾದ ಕವಿತೆ.ಅಂತಃಸತ್ವಕ್ಕೆ ಸಾರಭರಿತ ಕವಿತೆಯ ಲೇಪನ.ಜೀವನ್ಮುಖಿ ಕವಿತೆ.
.................................