ಈ ಕೆರೆಯ ದಂಡೆಯಲಿ ಹೀಗೆ ಕುಳಿತಿರುವಾಗ
ಹಳೆಯ ದಿನಗಳ ನೆನಪು ಹೀಗೆ ಬಂದು,
ಏನೋ ಹೇಳಲು ನೀನು ಕಾತರಿಸಿ ಕರೆದಂತೆ
ಅಂದು ನೀ ಬಂದಿದ್ದೆ ಹೇಳಲೆಂದು.
ನಿನ್ನ ಹೆಜ್ಜೆಯಲೆಲ್ಲ ಇಣುಕುತಿದ್ದವು ಭಾರ
ಹೃದಯದೊಳಗಿನ ಭಾವ; ಮಾತು ಹುದುಗಿ!
ಮಾತಿನಲಿ ಹೇಳದೆಯೆ ಆಗ ಅಡಗಿದ ದನಿಯ
ಕಣ್ಣುಗಳು ಹೇಳಿತ್ತು! ಹೌದೆ ಹುಡುಗಿ?
ಒಲವ ಹೇಳದೆ ನೀನು ಹೀಗೆಲ್ಲ ಮರುಗಿದರೆ
ನನಗೇಕೋ ನೋವಿತ್ತು; ಹೇಳದಾದೆ!
ನೀನೆ ಹೇಳಿದ ಮೇಲೆ ಇನ್ನೇನು ಸಂಕೋಚ
ಕಾಯುವಿಕೆ, ಬೇಸರವ ಮರೆತುಹೋದೆ.
ಈಗ ಧನ್ಯತೆ ತುಂಬಿ ನಿನ್ನ ಸಾಮೀಪ್ಯದಲಿ
ಒಲವು ಆರದೆ ಇರಲಿ, ಬತ್ತದಿರಲಿ
ಎತ್ತರದ ಬದುಕಿಗೆ ನಿನ್ನ ಕಾಣ್ಕೆಯು ಜೊತೆಗೆ,
ನಿನ್ನ ಒಲವಿಗೆ ನನ್ನ ಬಾಳು ಇರಲಿ.
೧೭-೧೨-೧೨
2 comments:
"ಒಲವು ಆರದೆ ಇರಲಿ, ಬತ್ತದಿರಲಿ"
ಒಳ್ಳೆಯ ಆಶಯ ಕವಿಯೇ. ತಥಾಸ್ತು ಎಂದರು ದೇವತೆಗಳೂ ಕೇಳದೇ ನಿಮಗೆ?
ಒಲವನ್ನೇ ಚೆಲುವಿನ ಪ್ರತಿಮೆಯನ್ನಾಗಿ ಮಾಡಿದೆ ಈ ಕವನ. ದೇವತೆಗಳು ತಥಾಸ್ತು ಎನ್ನದೇ ಇರರು!
Post a Comment