Wednesday, July 31, 2013

ಮಳೆಬಿಲ್ಲಿನವಳು..

ನನ್ನವಳ ಕರೆದು ನಾ ಮಳೆಬಿಲ್ಲು ತೋರುವುದು
ಈ ಮಳೆಯ ದಿನಗಳಲಿ ಸುಲಭವಲ್ಲ;
ಮಳೆಬಿಲ್ಲಿನಾಸೆಗೆ, ಮೋಡ ಮುಸುಕಿದ ಸಂಜೆ
ಆಗಸದಿ ಬಣ್ಣಗಳು ಕಾಣಲಿಲ್ಲ.

ನಿನ್ನೆ ಬಂದಿಹ ಮಳೆಗೆ ಇಂದು ಕಾಮನಬಿಲ್ಲು
ಹುಡುಕುವುದು ಸಾಧ್ಯವೇ? ಪ್ರಶ್ನೆ ಸಲ್ಲ!
ಮಳೆಬಿಲ್ಲು ನೆಪವಾಗಿ ನನ್ನವಳ ಜೊತೆಜೊತೆಗೆ
ಈ ಸಂಜೆ ಕಳೆಯುವುದು ತಪ್ಪು ಅಲ್ಲ!

ಮುನಿಸಿನಲಿ ಬೈದಾಳು ನನಗಲ್ಲ, ಮುಗಿಲಿಗೆ
ಹನಿಮಳೆಗೆ ಮುಖವೊಡ್ಡಿ ಕಾಯುವವಳು
ಬಿರುಬಿಸಿಲು ರಾಚಿದರೆ ಕೈಬೆರಳ ಕೊಡೆಯೊಳಗೆ
ಮುಗಿಲನ್ನೆ ಬರಲೆಂದು ಕರೆಯುವವಳು

ಕೊನೆಗೊಮ್ಮೆ ಕಂಡೀತು ಮಳೆಬಿಲ್ಲ ಸಿರಿಹೊನಲು
ಆ ಕಣ್ಣ ಮಿಂಚಿನಲಿ ನಾ ಹೊಳೆಯುವೆ;
ಇಂಥವಳು ಜೊತೆಗಿರಲು ಮಳೆಬಿಲ್ಲು ಬೇರೇಕೆ
ಇವಳು ನನ್ನವಳೆಂದು ನಾ ಮೆರೆಯುವೆ.

೦೧-೦೮-೨೦೧೩

3 comments:

sunaath said...

ಈಶ್ವರ ಭಟ್ಟರೆ,
ನಿಮ್ಮ ಪ್ರೇಮಕವನಗಳನ್ನು ಓದಿದಷ್ಟೂ ನವಿರಾದ ಸುಖ ಸಿಗುತ್ತದೆ. ಎಲ್ಲ ಕವಿಗಳಿಗೂ ಈ ಮಾತನ್ನು ಹೇಳಲಾಗುವುದಿಲ್ಲ!

Badarinath Palavalli said...

ಭಟ್ಟರೇ, ಆಕೆಯೋ ನೀವೋ ಭಾಗ್ಯವಂತರು ಸಾಂಗತ್ಯದಲ್ಲಿ ಎಂಬುದೇ ನನ್ನ ಮೊದಲ ಪ್ರಶ್ನೆ. ಒಟ್ಟಾರೆ ಅಮೋಘ ಕವಿತೆ.

Swarna said...

ಅಬ್ಬಬ್ಬ, ನಿನ್ನ ಕಣ್ಣ ಮಳೆಬಿಲ್ಲಿರಲು ಮುಗಿಲ ಹಂಗೇಕೆ ?
ಹನಿಗೆ ಮುಖವೊಡ್ಡಿ ನಿಂತ ಅವಳೂ ಅವಳ ಕಣ್ಣ ಬಿಲ್ಲಿನಲ್ಲಿ ಕರಗಿದ ಕವಿಯೂ ...ಸ್ವರ್ಗಕ್ಕಿನ್ನೇನು ಬೇಕು ?
ಚೆನ್ನಾಗಿದೆ
I second Sunath Kaaka