Tuesday, April 1, 2014

ಅವಳ ಜೊತೆಗಿನ ಸಂಜೆ

ಈ ಸಂಜೆಯಾದಾಗ ಅವಳ ನೆನೆವೆನು ನಾನು
ಹಣೆಗಿಳಿವ ಹೆರಳನ್ನೆ ಸರಿಸಿ ಬರಲು;
ಆಗಸದಿ ಹೊಳೆಯುವಾ ಮುಳುಗು ಸೂರ್ಯನ ಹಾಗೆ
ಬಿಂದಿಯನು ಧರಿಸಿಹಳು ನಾನು ನಗಲು.

ದಡದಲ್ಲಿ ಮಿನುಗುತಿಹ ಮರಳುಕಣ ಕಣದೊಳಗೆ
ಅವಳ ನಗುವಿನ ರೀತಿ ಹೊಳೆವ ಮಿಂಚು;
ಚಿಪ್ಪುಗಳ ಸರಿಸುವುದು ತೆರೆಯ ನೆಪದಲಿ ಕಡಲು
ನನ್ನವಳ ಪಾದದಲಿ ಅಂತ ಹೊಳಪು.

ಅಬ್ಬರಿಸುತಿದ್ದವನು ಸಾಗರನು ಈ ದಿನದಿ
ಸುಮ್ಮನುಳಿದನು ಗೆಜ್ಜೆ ಸದ್ದು ಕೇಳಿ;
ನನ್ನವಳ ಜೊತೆ ನಾನು ನಡೆಯುತ್ತ ಬಂದಿರಲು
ನನ್ನ ಕೆಣಕುವನೇನು ನೀವೆ ಹೇಳಿ!

ಮುಳುಗುತಿದ್ದಾ ಸೂರ್ಯ ನನ್ನವಳ ಕಂಡೊಡನೆ
ಬಿಂದಿಯೂ ನಕ್ಕೀತು ಅವನ ಕಂಡು;
ಸೂರ್ಯ ಕೆಂಪೇರಿದನೆ ಈ ಹುಡುಗ ಯಾರೆಂದು?
ತಾನಾಗಬಯಸಿದನೆ ಮದುವೆ ಗಂಡು?

ನಡೆವೆ ನಾ ಕೈಹಿಡಿದು ಪಯಣ ಹೇಗೇ ಇರಲಿ
ಸಂಜೆಗಳು ಹೀಗೆಯೇ ನಗುತಲಿರಲಿ;
ನನ್ನವಳ ಜೊತೆಗಿಷ್ಟು ನಗುವನ್ನು ಹಂಚಲಿದೆ
ರಾತ್ರಿ ಕಳೆಯಲಿ, ಮರಳಿ ಸಂಜೆ ಬರಲಿ.

3 comments:

ಚಿನ್ಮಯ ಭಟ್ said...

ನಮಸ್ತೆ :)...
ಸಂಜೆಯ ಸಲ್ಲಾಪ ಇಷ್ಟವಾಯ್ತು...ಧನ್ಯವಾದಗಳು :) :...
ಅದರಲ್ಲೂ ಮೂರನೇ ಪ್ಯಾರಾದಲ್ಲಿ ನಾ ಬಂದರೆ ಸಮುದ್ರವೇ ಸುಮ್ಮನಾಗುತ್ತದೆ ಎಂಬುದು ತೀರಾ ಛಂದದ ಕಲ್ಪನೆ ಅನಿಸಿತು :)....
ಕೊನೆಯ ಸಾಲೊಂದು ಅರ್ಥವಾಗಲಿಲ್ಲ :(...ತಿಳಿಸುವುರೆಂಬ ವಿಶ್ವಾಸದೊಂದಿಗೆ,
ಟಾಟಾ :)....

sunaath said...

ವಸಂತದ ಹೂಬಾಣ ನಿಮ್ಮ ಕವನ!

Badarinath Palavalli said...

"ಸೂರ್ಯ ಕೆಂಪೇರಿದನೆ ಈ ಹುಡುಗ ಯಾರೆಂದು?
ತಾನಾಗಬಯಸಿದನೆ ಮದುವೆ ಗಂಡು?"
ವಾವ್ ಎಂತಹ ಕಲ್ಪನೆ ಕವಿಯೇ ಉಧೋ ಉಧೋ...