Sunday, April 27, 2014

ಸೀತಾಲತೆಯ ಕತೆ!

ಹೀಗೊಂದು ಸಂಜೆಯಲಿ ನದಿಯ ತೀರದಳೊಂದು
ಜಲದಿ ತೇಲುವ ಬಳ್ಳಿ ಕಾಣುತಿರಲು;
ಯಾವ ಕತೆಗೋ ಏನೋ ಅದನೆ ನೋಡುತ ಕರಗಿ
ಮನೆಗೆ ಬಂದಿತು ಬಳ್ಳಿ ಪ್ರೇಮದವೊಲು!

ಕಾಡಿನೊಲುಮೆಯ ಜೊತೆಗೆ ಮಣ್ಣು ಮಮತೆಯ ಕರೆಗೆ
ಬಳ್ಳಿ ಚಿಗುರಿತ್ತೆಂದು ರಾಮನಲ್ಲಿ,
ಹೇಳುವುದೆ ಸಂಭ್ರಮವು, ಅಹಾ ಬಳ್ಳಿ ಚಿಗುರೊಲವು
ಮಣ್ಣಿನಣುಗಿಗೆ ಲತೆಗೆ ಬೇಧವೆಲ್ಲಿ?

ದೂರ ಚಾಚಿತು ಸೊಬಗು ಬಳುಕಿನಾಚೆಗೆ ಗೆಲ್ಲು
ತಬ್ಬಿ ಬೆಳೆಯಲು ಇರುವ ಕೋಲಾಸರೆ!
ಬಾಗಿಲಿನ ಬಳಿಯಲ್ಲಿ ಬೆಳಗು ನೋಡುವುದಲ್ಲ
ಬಳ್ಳಿ ಬಳುಕಿನ ನಡುವೆ ಸೀತಾ ಸೆರೆ!

ಹೂಬಿಡುವ ಕಾಲದಲಿ ಕಾನನದ ಮೂಲೆಯಲಿ
ಮಾರೀಚನೀಚತೆಯ ಜಿಂಕೆ ಬರಲು
ಮಲ್ಲಿಗೆಯ ಮರೆತವಳು ಹೊನ್ನಹರಿಣಕೆ ಮನವು!
ರಾಮಬಾಣದ ಕೊನೆಯು ಸೀತೆ ನಗಲು

ಸೆಳೆದು ಎಳೆಯುವ ನಡುವೆ ಬಳ್ಳಿ ಸೊರಗಿದರೇನು
ಸೀತೆ ಕೈಯ್ಯೊಳು ಮೊಗ್ಗು ಹರಿದು ಬಂತು!
ಹಿಂತಿರುಗಿ ರಘುರಾಮ ಬಂದು ಕಾಣುವುದೇನು
ಮಲ್ಲಿಗೆಯ ಬಳ್ಳಿಯಲಿ ಮೌನವಿತ್ತು!

2 comments:

sunaath said...

ರಾಮಾಯಣಕ್ಕೊಂದು ಹೊಸ ನೋಟ.‘ಮಲ್ಲಿಗೆಯ ಮರೆತವಳು ಹೊನ್ನಹರಿಣಕೆ ಮನವು!’ ಸುಂದರವಾದ ಸಾಲು.

Badarinath Palavalli said...

ಸೀತಾ ಸೆರೆ ಮತ್ತು ಮಲ್ಲಿಗೆಯ ಬಳ್ಳಿಯ ಕಲ್ಪನೆ ತುಂಬ ಇಷ್ಟವಾದವು.
'ಬಾಗಿಲಿನ ಬಳಿಯಲ್ಲಿ ಬೆಳಗು ನೋಡುವುದಲ್ಲ
ಬಳ್ಳಿ ಬಳುಕಿನ ನಡುವೆ ಸೀತಾ ಸೆರೆ!'
ವಾವ್...