Showing posts with label ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ. Show all posts
Showing posts with label ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ. Show all posts

Thursday, January 10, 2013

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ
ನಿನಗಾಗಿ ಹಾತೊರೆದ ಹಳೆಯ ಸರಕು!
ಕೆಣಕುತಲಿ ಕಾಡುವುದು, ನಿನ್ನನ್ನೇ ಬೇಡುವುದು
ನೆನಪು ಇಬ್ಬನಿಯಂತೆ ತೋಯ್ವ ಬಿರುಕು!

ಎದೆಯೊಳಗೆ ಕೆತ್ತಿಲ್ಲವಾದರೂ ಬಲು ಹೆಸರು
ಮರೆತಿಲ್ಲ ಗೆರೆಗಳನು,ಕೊರೆದವರನು
ಅಂತಹಾ ಗೀಚುಗಳ ಮತ್ತೆ ಫಳಫಳ ಹೊಳೆಸಿ
ಹಾಡಲಾರೆನು ನೋವ ಕತೆಗಳನ್ನು.

ಸೋತೆನೆಂದರೂ ಸರಿಯೆ, ಮತ್ತೇನೂ ಹೇಳೆನು
ಗೆದ್ದೆನೆಂದಾದರೂ ಮಾತು ಬೇಡ,
ಹೀಗೆ ನೋಡುತಲಿರುವೆ ಶಶಿಯ ಕಾಯುತಲಿರುವೆ
ಬರುವನೆಂದಾದರೂ ಸರಿಸಿ ಮೋಡ!

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ
ಹರಿಯುವುದು ಹೊಸತನದ ಒಲವ ನಡಿಗೆ!
ಅದನೆ ಪೋಷಿಸುತಿರಲಿ ಅದನೆ ಬೆಳೆಸುತ ಬರಲಿ
ನಿನ್ನೊಲವೆ ಹರಿಯಲೆನ್ನಾತ್ಮ ಗುಡಿಗೆ.