೧
ನಾನು ಚಂದಿರ ಮತ್ತೆ ಅವಳು
ಅವಳೆಂದರೆ ನನ್ನದೇ ನೆರಳು !!
೨
ನಾನು ಕಿರಣಗಳನ್ನ ತಡೆಯುತ್ತೇನೆ
ಚೆಂದುಟಿ ಒಣಗದಂತೆ
ಅವಳು ಕಿರಣಗಳನ್ನ ಸೆಳೆಯುತ್ತಾಳೆ
ಚಂದಿರನೂ ಕರಗುವಂತೆ
೩
ಇಂದಾದರೂ ಪೂರ್ಣ ಚಂದಿರನ
ಕಾಣಬೇಕೆಂಬ ಬಯಕೆ!
ಅವಳ ಮುಂಗುರುಳಿನಲ್ಲೇ ಸಿಲುಕಿ
ಚಂದಿರ ಒದ್ದಾಡುವನೇನೋ ?
೪.
ಎಲ್ಲರೂ ಅಂದರು ಚಂದಿರ
ಇದ್ದಾಗ ರಾತ್ರಿ ತಂಪೆಂದು.
ಹೆಮ್ಮೆ ನನ್ನಲ್ಲಿ ! ನನಗೆ
ಚಂದಿರ ಬೆಚ್ಚನೆಯ ಆಶ್ವಾಸ !
ಅಪ್ಪನೋಡಿದ ಆಕಾಶಕ್ಕೆ ಬಿಳೆದ ಬಿದಿರಿನ ಮಹಲು ಕುಡುಗೋಲನ್ನಿಕ್ಕಿ ಒಂದೊಂದೇ ಎಳೆದ ಅವಧಿ ಮೀರಿದ ದುಡಿತ, ಕೊನೆಗಾಯ್ತು ಬುಟ್ಟಿ ಮತ್ತೆ ನಿಚ್ಚಣಿಕೆ ! ಹೊಟ್ಟೆಗೆ ಹಿಟ್ಟಿನ ಪೂರಯಿಕೆ !
ಅಮ್ಮ ಅದೇ ಬಿದಿರ ಕೊಳವೆಯಿಂದ ಊದಿದಳು ಒಲೆಯ, ಬೆಂಕಿ ಬಿದಿರ ಪುಳ್ಳೆಗೆ! ಏನೋ ಬೇಯುವುದು ಏನೋ ಸುಡುವುದು ಅಮ್ಮಂದಿರಿಂದ ಸಾಧ್ಯವೆಂದೇ , ಅಲ್ಲ. ಬಿದಿರ ಬಳಕೆ.
ಮಗ ಇನ್ನೊಂದು ಭಾವುಕ ಜೀವಿ ತನ್ನಂತೆಯೇ ಉಸಿರಾಡುವ ಮರದ ಬುಡ ಕಡಿಯಲಾರ ! ಕೈ ಕಾಲು ಕತ್ತರಿಸಿದ, ಮೋಹನ ಮುರಳಿಯ ವಯಸು ನೆನಪಿಸಿ ತೂತು ಕೊರೆದ , ಕೊಳಲಂತೆ ಅದು ! ಮಂದಾನಿಲದ ನಡುವೆ ಬಿದಿರ ಶಬ್ದ ಈಗ.
ಮೊಮ್ಮಗನೂ ಅದೇ ಹಾದಿ, ಉಳಿದ ಬಿದಿರಿನ ಮೆಳೆಗೆ ಕಟ್ಟೆ ಕಟ್ಟಬೇಕಂತೆ! ಪುಟ್ಟನಾಗಿರುವಷ್ಟು ಬಿದಿರು ಬೆಳೆದೀತು !
(ಪ್ರೇರಣೆ, ಹೃದಯ ಶಿವರವರು ಬಿದಿರು ಎಂದು ಒಂದು ಸಣ್ಣ ಕವನ ಬರೆದಿದ್ದರು .)
೧.
ನನಗಿರುವುದೆರಡೇ ಸ್ವತ್ತು
ಅವಳು ಮತ್ತವಳ ಮುತ್ತು !!
೨.
ಸರ್ವ ಜೀವಿಗೂ ನೀರೇ ಆಧಾರ !
ನನಗೋ ನೀರೆ ನಿನ್ನಧರ !
೩.
ಅವಳ ಚೆಂದುಟಿ ನೋಡಿ
ಕುಳಿತಿದ್ದೆ ನಾನು
ಹೀರಬಲ್ಲೆನೆ
ಕತ್ತಿಯಲಗಿನ ಜೇನು ?