Wednesday, August 14, 2013

ಮಲ್ಲಿಗೆ ಬೇಕೇ?

ಈ ದಾರಿಯಲಿ ಬರುವ ಜನಕೆಲ್ಲ ಗೊತ್ತಿಹುದು
ಇಲ್ಲಿ ಹೂವಿನ ಹಾಡು ಕೇಳುತಿತ್ತು;
ನಲ್ಲೆಗೋ ನಲ್ಲನಿಗೋ ಮಲ್ಲಿಗೆಯ ಮಾತುಗಳು
ಮೆಲ್ಲ ಪಿಸುದನಿಗಳಲಿ ತಿಳಿಯುತಿತ್ತು.

ನಸುಬೆಳಗು ಅರಳಿರುವ ಮಲ್ಲೆ ಹೂಬನದಿಂದ
ಗಾಳಿಯಲಿ ಬೆರೆತು ಹೊಸ ಕಂಪು ನೀಡಿ,
ಹಾದಿಹೋಕನ ಮನಸು ಪ್ರೀತಿಯಿಂದಲಿ ಬೆಳಗಿ
ದಾರಿ ನಲಿವಾದುದು ನೋವು ದೂಡಿ.

ಸಂಜೆಯಾಗುತ ಹೀಗೆ ನಲ್ಲನಲ್ಲೆಯರೆಲ್ಲ
ಈ ದಾರಿಯನು ಹಿಡಿದು ನಡೆಯಬೇಕು
ಮಲ್ಲೆ ಹೂವಿನ ಹಾಡು ಕೇಳಬೇಕೆನ್ನುವರೆ
ಮೊದಲು ಹೂವಿನ ಬಳ್ಳಿ ಬೆಳೆಸಬೇಕು.

Wednesday, August 7, 2013

ನಿನ್ನ ನೆನಪು ಹೀಗೆ ಬಂದು

ನಿನ್ನ ನೆನಪು ಹೀಗೆ ಬಂದು ನನ್ನನಿಂದು ಕಾಡಿದೆ
ನೀನಿಲ್ಲದ ಈ ಸಂಜೆಯು, ಎಲ್ಲ ಹೂವೂ ಬಾಡಿದೆ.

ಹರಿವ ತೊರೆಯು ಉಸುರಲಿಲ್ಲ ನಿನ್ನ ನಡೆಯ ಸದ್ದು
ಸುರಿವ ಮಳೆಯ ದನಿಯಲಿಲ್ಲ ನಿನ್ನ ಮಾತು, ಮುದ್ದು!
ಮರಳಿ ಇರುಳು ತೊನೆಯುತಿಹುದು ನಿನ್ನಾ ಹೆರಳ ಕದ್ದು
ಕರಗದೇನಾ ಮರುಗುತಿಹೆನಾ ನಿನ್ನ ನೆನಪು ಹೊದ್ದು!

ಸುಳಿವ ತಂಗಾಳಿಗಿಲ್ಲವಲ್ಲ ನಿನ್ನ ನೆನಪು ಗೆಳತಿ
ಉಳಿಸಿ ಹೋಗುತಿಹುದು ಹುಸಿಯ! ನೀ ಸೋಕದ ರೀತಿ
ಗಳಿಗೆಗೊಮ್ಮೆ ನೆನಪಿಸುವುದು ಚಳಿಯು ನಿನ್ನ ಸವತಿ
ಸುಲಭವೇನೆ ಮರೆಯುವುದು? ನನ್ನ ಹೇಗೆ ಮರೆತಿ?

ಬಾರೆ ಗೆಳತಿ ಸನಿಹವಿದ್ದು ಈ ಮಳೆಯನು ಸೋಲಿಸು
ಕಾರಿರುಳಿನ ಹುಚ್ಚುತನಕೆ ಶಾಂತತೆಯನು ಕಲಿಸು.

ಸುಮ್ಮನಿರುವ ಸಮಯದಲ್ಲಿ ನೀನು ನನ್ನ ಕಾಡುವೆ

ಸುಮ್ಮನಿರುವ ಸಮಯದಲ್ಲಿ ನೀನು ನನ್ನ ಕಾಡುವೆ
ಕಾಡಿದರೂ ನೋವಾದರೂ ನಾನು ಹಾಡು ಹಾಡುವೆ!

ದೂರದಲ್ಲಿ ಯಾರೋ ಪ್ರೇಮಿ ಎಡವಿದಂತೆ ವೀಣೆಯ
ಮೀರಿ ಬರುತಲಿಹುದು ಗೆಳತಿ ಒಂದೇ ಎಳೆಯ ರಾಗವು
ನನ್ನನೇ ಕರೆದಂತಿದೆ ನನಗಾಗಿಯೆ ಮೊರೆದಂತಿದೆ!
ಬರೆದೆನಿದೋ ಹಾಡುತಲಿರು ಈ ನೋವಿನ ಹಾಡನು

ಮಳೆಗೆ ಹೊಟ್ಟೆಕಿಚ್ಚು ಬಂದು ಆ ರಾಗವ ಕೆದಕಿದೆ
ಈ ಬೇಸರ ಕಣ್ಣೀರೊಲು ಹನಿಯ ಜೊತೆಗೆ ಬೆರೆತಿದೆ
ಹಾಡು ಕಾಯಬಹುದೆ ನನಗೆ ಮುಂದಿನ ದಿನ ಹುಟ್ಟಲು?
ನೋವು ಒಂದು ಸಹಜ ಪ್ರಾಸ! ಎಲ್ಲಾ ಕಾವ್ಯ ಕಟ್ಟಲು.

ಹಳೆಯ ನಮ್ಮ ನಗೆಗಳೆಲ್ಲ ಹೊಳೆವ ಮಳೆಯ ಹನಿಗಳಂತೆ
ಬೆಳಕಿನ ಕೋಲ್ಮಿಂಚಿಗಾಗಿ ಕಾಯಬೇಕು ನಾನು!
ಸಿಡಿಲಾಗಿಯೆ ಬರಬಾರದೆ ನನ್ನ ಪ್ರೀತಿ ಬೆಳಕೆ
ಬೇಸರವನೆ ಕೊನೆಯಾಗಿಸಿ ನಾ ಸೇರುವೆ ಬಾನು!


Wednesday, July 31, 2013

ಮಳೆಬಿಲ್ಲಿನವಳು..

ನನ್ನವಳ ಕರೆದು ನಾ ಮಳೆಬಿಲ್ಲು ತೋರುವುದು
ಈ ಮಳೆಯ ದಿನಗಳಲಿ ಸುಲಭವಲ್ಲ;
ಮಳೆಬಿಲ್ಲಿನಾಸೆಗೆ, ಮೋಡ ಮುಸುಕಿದ ಸಂಜೆ
ಆಗಸದಿ ಬಣ್ಣಗಳು ಕಾಣಲಿಲ್ಲ.

ನಿನ್ನೆ ಬಂದಿಹ ಮಳೆಗೆ ಇಂದು ಕಾಮನಬಿಲ್ಲು
ಹುಡುಕುವುದು ಸಾಧ್ಯವೇ? ಪ್ರಶ್ನೆ ಸಲ್ಲ!
ಮಳೆಬಿಲ್ಲು ನೆಪವಾಗಿ ನನ್ನವಳ ಜೊತೆಜೊತೆಗೆ
ಈ ಸಂಜೆ ಕಳೆಯುವುದು ತಪ್ಪು ಅಲ್ಲ!

ಮುನಿಸಿನಲಿ ಬೈದಾಳು ನನಗಲ್ಲ, ಮುಗಿಲಿಗೆ
ಹನಿಮಳೆಗೆ ಮುಖವೊಡ್ಡಿ ಕಾಯುವವಳು
ಬಿರುಬಿಸಿಲು ರಾಚಿದರೆ ಕೈಬೆರಳ ಕೊಡೆಯೊಳಗೆ
ಮುಗಿಲನ್ನೆ ಬರಲೆಂದು ಕರೆಯುವವಳು

ಕೊನೆಗೊಮ್ಮೆ ಕಂಡೀತು ಮಳೆಬಿಲ್ಲ ಸಿರಿಹೊನಲು
ಆ ಕಣ್ಣ ಮಿಂಚಿನಲಿ ನಾ ಹೊಳೆಯುವೆ;
ಇಂಥವಳು ಜೊತೆಗಿರಲು ಮಳೆಬಿಲ್ಲು ಬೇರೇಕೆ
ಇವಳು ನನ್ನವಳೆಂದು ನಾ ಮೆರೆಯುವೆ.

೦೧-೦೮-೨೦೧೩

Thursday, July 25, 2013

ಯಾರು? ನನ್ನ ರಾಧೆಯನ್ನು ನೋಯಿಸಿದವರು ಯಾರು?

ಯಾರು? ನನ್ನ ರಾಧೆಯನ್ನು
ನೋಯಿಸಿದವರು ಯಾರು?
ಕಾರಿರುಳೋ ಕರಿಮುಗಿಲೋ
ಧಾರೆಯೆರೆವ ಮಳೆಯೋ?

ಬೆನ್ನಹಿಂದೆ ಕರೆದರೇನೆ
ಹೆದರುವವಳು ಅವಳು!
ಏರುದನಿಯ ಗುಡುಗು ಸಿಡಿಲು
ದನಿಯು ಸಾಕು ನಡುಗಲು!
ಇಂಥ ರಾಧೆಯನ್ನು ಹೀಗೆ
ಕಾಡಿದವರು ಯಾರು?

ಮುಂಗುರುಳಿನ ಸಿಕ್ಕು ಬಿಡಿಸಿ
ಹುಸಿಮುನಿಸೊಳು ಬೈಯ್ಯುವಳು
ಮತ್ತೇನನೋ ಮರೆತುಕೊಂಡು
ಮಾತುಗಳನು ಹುಡುಕುವಳು
ಇಂಥ ರಾಧೆಯಲ್ಲಿ ಹೀಗೆ
ನಿಜದ ನೋವು ಬಂತು ಹೇಗೆ?

ಯಾರ ಕರುಬಿಗಿವಳ ನೋವು
ಅರಿಯದಾದೆ ನಾನು;
ಓ ಸಖಿಯರೆ ನೀವೆ ಹೇಳಿ
ನೋಯಿಸಿದವರು ಯಾರು?

17/07/2013