Monday, January 16, 2012

ಕೌರವನ ಸ್ವಗತ !

ಅಲ್ಲಿ ತೊಡೆಮುರಿದು ಬಿದ್ದ ಮೇಲೆ,
ಅಜ್ಜಾ ಭೀಷ್ಮ , ಜಲಸ್ಥಂಬನ ವಿದ್ಯೆ ಬೇಡವಿತ್ತು
ಮರಗಟ್ಟುವ ವಿದ್ಯೆ ಇರಲಿಲ್ಲವೇ ನಿನ್ನ ಬಳಿ ?

ಎಲ್ಲಿದೆ ಈಗ ಕಾಲನ ಕನ್ನಡಿ ?
ನೋಡಬೇಕಿತ್ತೊಮ್ಮೆ ಅದನು,
ಪ್ರಾಯಶ್ಚಿತ್ತದ ಗೆರೆಯಿದೆಯೆ ಹಣೆಯಲ್ಲಿ?
ತೊಡೆಯೇರು ಎಂದಿದ್ದೆ ದ್ರುಪದೆಗೆ
ಕುಸಿದಿತ್ತೆ ಧಾತು ?

ಭೀಮನ ಗದೆ ದೊಡ್ಡದೇನೂ ಅಲ್ಲ,
ಒಮ್ಮೆಗೇ ಗದೆಗೆ ಗದೆ ಸೇರಿ
ಠಣ್ ಎಂದಾಗಲೇ ಅರಿವಾಗಿತ್ತು ನನಗೆ,
ಪರಾಕ್ರಮದ ನನ್ನ ಕೈ ಜಡ್ಡುಗಟ್ಟಿ
ನೀರಿನ ಕ್ರಿಮಿಗಳ ನೆನೆಯುತ್ತಿತ್ತು !

ಇಲ್ಲ, ಸಾಯುವುದಿಲ್ಲ
ಇನ್ನೊಮ್ಮೆ ಸೂರ್ಯನ ಮುಖ ನೋಡಬೇಕು,
ಮೇಲೆ ಕ್ಯಾಕರಿಸಿ ಉಗಿದ ಎಂಜಲು
ಮೇಲಿಂದ ಸೀರ್ಪನಿದಾಗ
ಕಾಮನಬಿಲ್ಲನ್ನೊಮ್ಮೆ ಕಾಣಬೇಕು.

೧೬-೦೧-೨೦೧೨

ಕೌರವ - ಯಕ್ಷಗಾನ ಪಾತ್ರಧಾರಿ , ಕೆ ಗೋವಿಂದ ಭಟ್
ಫೋಟೊ - ದಿಗ್ವಾಸ್ ಹೆಗಡೆ

13 comments:

ರಾಘವೇಂದ್ರ ಜೋಶಿ said...

"ಮೇಲೆ ಕ್ಯಾಕರಿಸಿ ಉಗಿದ ಎಂಜಲು
ಸಿಂಪರಣೆಯಾಗುವಾಗ
ಕಾಮನಬಿಲ್ಲನ್ನೊಮ್ಮೆ ಕಾಣಬೇಕು."
-Liked very much.
A perfect and sure shot!
Thumbs up!
-RJ

Suvarnini Konale said...

ಕೌರವ ತನ್ನ ಅಂತಿಮ ಕ್ಷಣದಲ್ಲಿ ಮಾಡಿರಬಹುದಾದ ಆತ್ಮವಿಮರ್ಶೆಯ ಕಲ್ಪನೆ ಅದ್ಭುತ
.....

Badarinath Palavalli said...

ವಾವ್ ಈಶ್ವರಣ್ಣ,

ಅದ್ಭುತ ಕಾವ್ಯ ಕೌತುಕ! ಯುದ್ಧ ಹೇಡಿ ಕೌರವ, ಜಲಾಂತರ್ಗಾಮಿಯಾಗಿ ಭೀಮನಾಘಾತಕ್ಕೆ ಸಿಕ್ಕು ಸಾವನಪ್ಪುವ ಕಥನ ನಿಮ್ಮಿಂದ ಹೊಸ ಪರಿ ವಿಶ್ಲೇಷಣೆ.

ಕಡೆ ಚರಣವಂತೂ ಅಹಂಕಾರಕ್ಕೆ ಉತ್ತರದಂತಿದೆ.

Badarinath Palavalli said...

ವಾವ್ ಈಶ್ವರಣ್ಣ,

ಅದ್ಭುತ ಕಾವ್ಯ ಕೌತುಕ! ಯುದ್ಧ ಹೇಡಿ ಕೌರವ, ಜಲಾಂತರ್ಗಾಮಿಯಾಗಿ ಭೀಮನಾಘಾತಕ್ಕೆ ಸಿಕ್ಕು ಸಾವನಪ್ಪುವ ಕಥನ ನಿಮ್ಮಿಂದ ಹೊಸ ಪರಿ ವಿಶ್ಲೇಷಣೆ.

ಕಡೆ ಚರಣವಂತೂ ಅಹಂಕಾರಕ್ಕೆ ಉತ್ತರದಂತಿದೆ.

ಅನುರಾಧ. said...

ಕಿರಣ, ನಿನ್ನ ಬರಹದ ಮೋಡಿ ಅದ್ಭುತ. ಕಲ್ಪನೆ ಹೀಗೂ ಇರಬಹುದೆನಿಸಿದ್ದು ಈಗಲೆ...ನಿನ್ನ ಕಲಾ ಪ್ರೌಡಿಮೆಗೆ ತಲೆದೂಗಲೇ ಬೇಕು...

ಗಿರೀಶ್.ಎಸ್ said...

Bhale aithappo ee kavana... super..

ಮಂಜಿನ ಹನಿ said...

ಇದು ನಿಮ್ಮ ಕವಿತೆ ಈಶ್ವರಣ್ಣ.. ಕಣ್ಣ ಮುಂದೆ ಮಹಭಾರತದ ಪಾತ್ರಗಳು ರಂಗೇರಿಸಿ ಕುಣಿದು ನರ್ತಿಸಿದವು.. ಕೌರವನ ಸ್ವಗತ ಅರ್ಥಗರ್ಭಿತವೆನಿಸುವಂತೆ ಮೂಡಿ ಬಂದಿದೆ.. ನಿಮ್ಮ ಭಾಷೆಯಲ್ಲಿನ ಕತ್ತಿಯಲಗಿನಂತಹ ಹರಿತ ಕವಿತೆಯ ತಿರುಳನ್ನು ಮನದಾಳಕ್ಕೆ ನುಗ್ಗಿಸುತ್ತದೆ..
ಎಲ್ಲಿದೆ ಈಗ ಕಾಲನ ಕನ್ನಡಿ ?
ನೋಡಬೇಕಿತ್ತೊಮ್ಮೆ ಅದನು,
ಪ್ರಾಯಶ್ಚಿತ್ತದ ಗೆರೆಯಿದೆಯೆ ಹಣೆಯಲ್ಲಿ?
ತೊಡೆಯೇರು ಎಂದಿದ್ದೆ ದ್ರುಪದೆಗೆ
ಕುಸಿದಿತ್ತೆ ಧಾತು ?
ಈ ಸಾಲುಗಳಲ್ಲಿನ ಹರಿತ ಕಂಡು ಆ ಕೌರವನೂ ಬೆಚ್ಚಿಯಾನು.. ಅದ್ಭುತವಾದ ಕವಿತೆ.. ತುಂಬಾ ಹಿಡಿಸಿತು..:)))

Mohan V Kollegal said...

ಒಂದು ಮನದ ಭಾವನೆಯನ್ನು ಕಲ್ಪನೆಯೆಂಬ ಗಾಳಕ್ಕೆ ಪೋಣಿಸಿಕೊಂಡು ಹೀಗೂ ಚಿಂತಿಸಬಹುದು. ಜಲಾಂತರ್ಗಾಮಿಯ ಮನದಲ್ಲಿ ಇಂತಹ ಪಶ್ಚಾತ್ತಾಪ ಗದ್ದಲ ಮೂಡಿರಬಹುದು. ಕೊನೆಯ ಚರಣವು ದಾರ್ಶನಿಕವಾಗಿ ನಿಲ್ಲುತ್ತದೆ. ಒಂದು ದಿಕ್ಸೂಚಿ....

ವೆಂಕಟೇಶ್ ಹೆಗಡೆ said...

ಎಲ್ಲಿದೆ ಈಗ ಕಾಲನ ಕನ್ನಡಿ ?
ನೋಡಬೇಕಿತ್ತೊಮ್ಮೆ ಅದನು,
ಪ್ರಾಯಶ್ಚಿತ್ತದ ಗೆರೆಯಿದೆಯೆ ಹಣೆಯಲ್ಲಿ?
ತೊಡೆಯೇರು ಎಂದಿದ್ದೆ ದ್ರುಪದೆಗೆ
ಕುಸಿದಿತ್ತೆ ಧಾತು ?
nice kirana ...

Savitha said...

wow .. ಸೊಗಸಾದ ಕಲ್ಪನೆ..
ಸುಂದರ ಬರವಣಿಗೆ .. ಹೀಗೇ ಮುಂದುವರಿಯಲಿ ..

ಮೌನರಾಗ said...

ಮಹಾಭಾರತದ ಈ ಪ್ರಸಂಗ ever green ಅನ್ನುತ್ತಾರಲ್ಲ ಹಾಗೆ.... ಯಕ್ಷಗಾನದ ಮೇಲೆ ಅದನ್ನು ನೋಡುವುದು ಇನ್ನೂ ಸೊಗಸಿನ ವಿಷಯ....
ದಿಗ್ವಾಸ್ ಅವರ ಫೋಟೋ...ನಿಮ್ಮ ಕವಿತೆ ಚೆನ್ನಾಗಿದೆ....

ಸೀತಾರಾಮ. ಕೆ. / SITARAM.K said...

ಕೌರವನ ಕನಲನ್ನು ತುಂಬಾ ಅರ್ಥಪೂರ್ಣವಾಗಿ ಕಲ್ಪನೆಯಲ್ಲಿ ಕವನಿಸಿದ್ದಿರಾ..

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಕೌರವನ ಬಗ್ಗೆ ಚಿ೦ತಿಸಿದಷ್ಟೂ ಕುತೂಹಲ ಹಾಗೆಯೇ ಉಳಿದು ಬಿಡುತ್ತದೆ.
ನನ್ನ ಕಲ್ಪನೆಗೆ ಬ೦ದದ್ದನ್ನು ದಾಖಲಿಸಿದ್ದೇನೆ .ಬಿಡುವಾದರೆ ಓದಿ,ಅಭಿಪ್ರಾಯಿಸಿ .
http://www.muliyala.blogspot.in/2010/02/blog-post_28.html