Monday, January 23, 2012

ಹೆಣ್ಣು-ಮಣ್ಣು


ದಿಕ್ಕು ತಪ್ಪಿಸುವ
...ಕಡೆಗೊಮ್ಮೆ ಗಮನ ಸುಳಿವ ಹೆಣ್ಣು.
ತಪ್ಪಿದ್ದೇ ಗುರಿ, ಎಚ್ಚರದ ಚಲನೆಯ ಕಣ್ಣು.

ಮುಗಿಬಿತ್ತು ದೃಷ್ಟಿ, ಅನಾಮತ್ತಾಗಿ
ತೊಡೆಯ ಮೇಲಿರಿಸಿಕೊಂಡಳು,
ಇನ್ನೂ ಹೀರಬಹುದೇ ?
ಮಧುವಿನಮಲು ಹೆಚ್ಚಾಗಿ
ಅವಳನ್ನು ಮುದುಕಿ ಎಂದೆನೇ?

ಅದೆಂತದೋ ಸುಳ್ಳು ಸಂಸಾರ !
ತುಟಿಗೆ ತುಟಿಯಂತೆ ,ಹೆಗಲಿಗೆ ಹೆಗಲಂತೆ
ನೆತ್ತರ ಹೀರುವ ಅವಕಾಶ ಕೊಡಲಿಲ್ಲವದು
....ಕಕ್ಕುವುದನ್ನೂ.

ಬಾಳೆಯ ವ್ಯವಹಾರ ಸ್ವಾಮಿ!
ಸತ್ತು ಹುಟ್ತುವುದು ನನ್ನ ಪರಿ,
ಎಲ್ಲ ಹುಟ್ಟಿದ ಹಿಳ್ಳೆಗಳನ್ನು ಅವಳು ಪೊರೆಯುತ್ತಾಳೆ
ಆಳಕ್ಕೆ ಬೇರೂಡದೆಯೆ,
ಮತ್ತೆ ಕಾಡುತ್ತಾಳೆ ಗಮನ

ವಿರಾಮದ ಕಾಲಕ್ಕೊಮ್ಮೆ
ಹೆರಳು, ಇಷ್ಟಗಲ ಬಿಂದಿ, ಮೂಗಿನ ನತ್ತು
ನೆನಪಾಗುವುದುಂಟು,
ಕೂಡೆ ಕನಿಕರಿಸಿದ ಕಣ್ಣುಗಳನ್ನೂ!
ಚಿತ್ತಕ್ಕೆ ನಿಲುಕದ ಅವಳ
ಪದ್ಮಪತ್ರದ ಭಂಗಿ,
ಅಲ್ಲೆಲ್ಲೋ ನನ್ನದೇ ಹೊಳೆವ ಬೆವರು !

೨೪-೦೧-೨೦೧೨

16 comments:

Badarinath Palavalli said...

ಒಮ್ಮೆಲೆ ಎಲ್ಲೋ ರುಧ್ರ ವೀಣೆ ಮೊರೆತಂತಾಯ್ತು.

ಹಲ ಭಾವಗಳಿಟ್ಟುಕೊಂಡು ಮೊದಲ ಓದಿಗೆ ಅರ್ಥ ಬಿಟ್ಟು ಕೊಟ್ಟಂತೆಯೇ ಮಾಡಿ ಮತ್ತೆ ಅದುಮಿಟ್ಟು ಬಿಡುವ ಕವನವಿದು.

ಪುಷ್ಪರಾಜ್ ಚೌಟ said...

ಕಾಮದ ಮಧುವಿನಮಲಿನಲಿ ಮುಳುಗುವಂತೆ ನಮ್ಮ ಮಣ್ಣ ದಾರಿಯ ಕಣ್ಣು ತಪ್ಪಿಸಿದರೂ ಅರ್ಥವಾಗದ ಬಾಳೆಯ ದಿಂಡಾಗುತ್ತಾಳೆ ಹೆಣ್ಣು ಕೆಲವೊಮ್ಮೆ. ಅರ್ಥಗಳ ಸಿಪ್ಪೆ ತೆಗೆದಷ್ಟೂ ಮತ್ತೆ ಒಳಸುಳಿ. ಇನ್ನು ಕೊರಡು ಬಾಳೆದಿಂಡಿಗೂ ನೆತ್ತರ ತುಂಬಿಕೊಳ್ಳುವ ಗುಣ ಅದು ಮಣ್ಣು. ನೆತ್ತರ ತುಂಬಲೇಬೇಕೆಂದೇನಿಲ್ಲ, ಹೀರಿ ಸುಟ್ಟು ಬಿಡಲೂ ಬಹುದು. ನನಗೆ ಇಂದಿಗೂ ಅರ್ಥವಾಗದ ದ್ವಂದ್ವ - ಹೆಣ್ಣು ಮಣ್ಣೂ!

ಹಣೆಯ ಮೇಲೆ ಬೆವರು ಮೂಡಿಸುವ ಭಾವ! ಹೆಣೆದ ಪರಿಯಂತೂ ನಿಮಗೆ ನೀವೆ ಸಾಟಿ

balasubramanya said...

ವಾವ್ ಸರ್ ಅದ್ಭ್ತವಾಗಿದೆ ಅರ್ಥ ಪೂರ್ಣ ಪದಗಳು ದಿಕ್ಕು ತಪ್ಪಿಸುವ
...ಕಡೆಗೊಮ್ಮೆ ಗಮನ ಸುಳಿವ ಹೆಣ್ಣು.
ತಪ್ಪಿದ್ದೇ ಗುರಿ, ಎಚ್ಚರದ ಚಲನೆಯ ಕಣ್ಣು.

ಮುಗಿಬಿತ್ತು ದೃಷ್ಟಿ, ಅನಾಮತ್ತಾಗಿ
ತೊಡೆಯ ಮೇಲಿರಿಸಿಕೊಂಡಳು,
ಇನ್ನೂ ಹೀರಬಹುದೇ ?
ಮಧುವಿನಮಲು ಹೆಚ್ಚಾಗಿ
ಅವಳನ್ನು ಮುದುಕಿ ಎಂದೆನೇ?
ಈ ಪದ ಪುಂಜ ಗಳೇ ಓದುಗರನ್ನು ಕಾಡಿಬಿಡುತ್ತವೆ. ಮುಂದೆಯೂ ಇಂತಹ ಒಳ್ಳೆಯ ಕವಿತೆಗಳು ನಿಮ್ಮ ಪುಟಗಳಲ್ಲಿ ಬರಲಿ ಓದಲು ಕಾಯುತ್ತೇನೆ.ಧನ್ಯವಾದಗಳು ನಿಮಗೆ.

Ragu Kattinakere said...

ನನಗೆ ಅರ್ಥವಾಗಲಿಲ್ಲ. ಹಾಗಾಗಿ ಪದಗಳ ಬಳಕೆ ಚೆನ್ನಾಗಿದೆ ಎಂದು ಹೇಳಬಲ್ಲೆ. ಸೂಲಗಿತ್ತಿ ಮಾಡಿಸುವ ಬಾಳಂತನ, ಬಾಳೆಗಿಡ, ಕೆರೆಯಮೇಲೆ ಕಮಲದ ಎಲೆ ಇವುಗಳ ಚಿತ್ರಣ ಮನಸ್ಸಿನಲ್ಲಿ ಮೂಡಿದ್ದು ಹೌದು ಎರಡನೇ ಬಾರಿ ಓದಿದಾಗ. ಆದರೆ ಅವುಸರಿಯೆ ಅವನ್ನು ಹೇಗೆ ಜೋಡಿಸಬೇಕು ಎಂದು ಕವನದಿಂದ ಮೇಲ್ನೋಟಕ್ಕೇನೋ ತಿಳಿಯಿಯಲಿಲ್ಲ.

sunaath said...

ಈಶ್ವರ ಭಟ್ಟರೆ,
‘ಪದ್ಮಪತ್ರದ ಮೇಲೆ ನನ್ನದೇ ಬೆವರ ಹನಿ!’ ಅರ್ಥಪೂರ್ಣ ಕವನ, ಬಿಗಿಯಾದ ಹೆಣಿಕೆ. ತುಂಬ ಇಷ್ಟವಾಯಿತು.

V.R.BHAT said...

ಈಶ್ವರ ಭಟ್ಟರೇ, ಹೊಸಕಾಲದ ಗತಿಯಲ್ಲಿ ಕಾವ್ಯದಲ್ಲಿ ಬಿಸುಪು ಕಂಡರೂ ಪ್ರಾಸ ಬದ್ಧ ಛಂದೋ ಬದ್ಧ ಭಾವ ಶುದ್ಧ ಹಾಡುಗಳನ್ನು ನಾನು ಇಷ್ಟಪಡೆಯುವ ವ್ಯಕ್ತಿ. ನಿಮ್ಮ ಈ ಪ್ರಯತ್ನದ ಜೊತೆಗೆ ಭಾವಗಳನ್ನು ಆ ದಿಸೆಯಲ್ಲೂ ನಡಸಿ ಬರೆದರೆ ನಾನು ಹೆಚ್ಚಿಗೆ ಬರೆಯಲಾದೀತು!

ಸುನಾಥರು ಹೇಳಿದಂತೇ ಅಲ್ಲೆಲ್ಲೋ ಪದ್ಮ ಪತ್ರದಿ ಕಾಣುವ ನನ್ನದೇ ಬೆವರ ಹನಿ ಎಂಬ ಒಕ್ಕಣೆ ಸುಂದರ ಅಂತ್ಯವನ್ನು ಕೊಟ್ಟಿದೆ ಎಂದಷ್ಟೇ ಹೇಳುತ್ತಿದ್ದೇನೆ.

ವೆಂಕಟೇಶ್ ಹೆಗಡೆ said...

ಬಾಳೆಯ ವ್ಯವಹಾರ ಸ್ವಾಮಿ!
ಸತ್ತು ಹುಟ್ತುವುದು ನನ್ನ ಪರಿ,
ಎಲ್ಲ ಹುಟ್ಟಿದ ಹಿಳ್ಳೆಗಳನ್ನು ಅವಳು ಪೊರೆಯುತ್ತಾಳೆ
ಆಳಕ್ಕೆ ಬೇರೂಡದೆಯೆ,
ಮತ್ತೆ ಕಾಡುತ್ತಾಳೆ ಗಮನ... nice

ಕಿರಣ ..ಪ್ರಬುದ್ದ ಕವನ ತುಂಬಾ ಅರ್ಥಪೂರ್ಣ ಅನ್ನಿಸ್ತು ..

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಮೊದಲೇ ಬರೆಯುವೆವು.. ಈ ಕವನ ಅತೀ ಒಳಾರ್ಥಗಳ ಸಮ್ಮಿಲನದ ಅವತಾರವಾಗಿ ನಿಂತಿದೆ.. ಎಷ್ಟೋ ಕಲ್ಪನೆಗಳಲ್ಲಿ ಸುತ್ತಿ ಸುತ್ತಿ ಓದಿದಾಗ ಸಿಕ್ಕ ಭಾವನೆಗಳು.. ಸುಲಭ ಅನ್ನಿಸಿದರೂ ಸಹ ಪದಗಳ ಜೋಡಣೆಯಲ್ಲಿ ವಿಶಿಷ್ಟ ಮತ್ತು ವಿಚಿತ್ರ ಅರ್ಥಗಳ ಹೊಮ್ಮಿಸುವ ಕವನ.. ಮಾನವ ಜೀವನದಲ್ಲಿ ನಡೆಯುವ ಘಟನೆಗಳು ಇಲ್ಲಿ ಸಾಲುಗಳ ಉದ್ದಕ್ಕೂ ಒಂದು ಕಥೆಯನ್ನು ಹೇಳುತ್ತಿದೆ.. ವಿಚಾರ ಏನೆಂದರೆ ನಿಮ್ಮ ಈ ಕವನ ಕಬ್ಬಿಣದ ಉಂಡೆಯಂತೆ ಓದಿದಾಗ ಬಲು ಗಟ್ಟಿ .. ಆ ಉಂಡೆಯನ್ನು ತಿನ್ನಲು , ರುಚಿಯನ್ನು ಅನುಭವಿಸಲು ಕಷ್ಟ.. ಆದರೆ ಕೈಯಲ್ಲಿ ಹಿಡಿದು ನೋಡಬಹುದು.. ಅದರ ತೂಕವನ್ನು ಸಹ ಊಹೆ ಮಾಡಬಹುದು.. ನಿಮ್ಮ ಆಲೋಚನೆ ಇಲ್ಲಿ ಏನಿದೆಯೋ ಅದು ಅರ್ಥಗರ್ಭಿತ.. ಮೊದಲು ಓದಿದಾಗ ಅರ್ಥಗಳು ಕವಲುದಾರಿಯಂತೆ ಕಂಡವು.. ಯಾವ ದಾರಿಯಲ್ಲಿ ಹೋಗೋಣ ಅಂತ ಯೋಚಿಸಲು ಸರಿಯಾದ ಬಿಡುವಿನ ಸಮಯ ಬೇಕಿತ್ತು.. ಹಾಗು ಈಗ ನಮ್ಮ ಕಲ್ಪನೆಯಲ್ಲಿ ಈ ಕವನ.. ಒಬ್ಬ ಗಂಡಿನ ಜೀವನದಲ್ಲಿ ಹೆಣ್ಣು ಹೊನ್ನು ಮಣ್ಣು ಯಾವ ರೀತಿ ಬದಲಾಗುತ್ತದೆ.. ಅದಕ್ಕೆ ಬರುವ ಕಾರಣಗಳು.. ಅದನ್ನು ಅರಿತುಕೊಳ್ಳಲು ಆ ಮನುಷ್ಯ ಮಾಡುವ ಚಿಂತನೆಗಳು..


ದಿಕ್ಕು ತಪ್ಪಿಸುವ
...ಕಡೆಗೊಮ್ಮೆ ಗಮನ ಸುಳಿವ ಹೆಣ್ಣು.
ತಪ್ಪಿದ್ದೇ ಗುರಿ, ಎಚ್ಚರದ ಚಲನೆಯ ಕಣ್ಣು.

ಅಂದರೆ ಒಬ್ಬ ಗಂಡು ತನ್ನವಳು ಎಂದುಕೊಂಡು ಹೆಣ್ಣನ್ನು ಕೆಲವು ಕ್ಷಣ ಮರೆತು.. ಬೇರೊಂದು ಹೆಣ್ಣಿನ ಮೋಹದ ಬಲೆಯಲ್ಲಿ ... ದಿಕ್ಕು ತಪ್ಪಾಗಿ ದಾರಿಯು ಬೇರಾದರೂ ಸಹ ಮತ್ತೆ ಎಚ್ಚರ ಸ್ವಂತ ಹೆಂಡತಿಯ ಕಡೆಯಲ್ಲಿ .. ಅದು ನಮ್ಮ ದೇಶದ ಸಂಪ್ರದಾಯವನ್ನು ಸೂಚಿಸುತ್ತದೆ.. ಬೇರೆ ಕೆಲವು ದೇಶಗಳಲ್ಲಿ ಆ ರೀತಿ ಇಲ್ಲ..

ಅನುಭವ ಹೆಚ್ಚಿದಂತೆಲ್ಲಾ ಸಿಗುವ ಜೀವನದ ಕೆಲ ಅರ್ಥಗಳು ಹಿಂದಿನ ಸುಂದರ ಜೀವನದ ನೆನಪನ್ನು ಮನದಲ್ಲಿ ಕೆಲವು ಸಿಹಿ ಕ್ಷಣಗಳ ಜೊತೆಯಲ್ಲಿ ಆನಂದಿಸುವಂತೆ ಮಾಡುತ್ತದೆ.. ಎನೆಲಾ ಇದ್ದರೂ ಅದು ಯಾವುದು ಶಾಶ್ವತವಲ್ಲ ಅನ್ನುವ ಮಾತನ್ನು ಸಹ ಈ ಕವನದಲ್ಲಿ ಕಾಣಬಹುದು..

ಮುಗಿಬಿತ್ತು ದೃಷ್ಟಿ, ಅನಾಮತ್ತಾಗಿ
ತೊಡೆಯ ಮೇಲಿರಿಸಿಕೊಂಡಳು,
ಇನ್ನೂ ಹೀರಬಹುದೇ ?
ಮಧುವಿನಮಲು ಹೆಚ್ಚಾಗಿ
ಅವಳನ್ನು ಮುದುಕಿ ಎಂದೆನೇ?

ಎಂಬ ಈ ಸಾಲುಗಳು.. ಇನ್ನೂ ಮುಂದಿನ ನಮ್ಮ ಕಲ್ಪನೆಯನ್ನು ಹೇಳಲು .. ಅದರಲ್ಲಿ ವಿಶೇಷ ವಿಶ್ಲೇಷಣೆ ಏನೂ ಇಲ್ಲ.. ಆದರೆ ಜೀವನ ಕವನ.. ಅಥವಾ ಜೀವನ ಕಥೆ ಎನ್ನಬಹುದು.. ಕೊನೆಯಲ್ಲಿ ಬರೆದ ನೆನಪುಗಳ ಸಾಲುಗಳು.. ತುಂಬಾ ಹಿಡಿಸಿದವು..

ವಿರಾಮದ ಕಾಲಕ್ಕೊಮ್ಮೆ
ಹೆರಳು, ಇಷ್ಟಗಲ ಬಿಂದಿ, ಮೂಗಿನ ನತ್ತು
ನೆನಪಾಗುವುದುಂಟು,
ಕೂಡೆ ಕನಿಕರಿಸಿದ ಕಣ್ಣುಗಳನ್ನೂ!
ಚಿತ್ತಕ್ಕೆ ನಿಲುಕದ ಅವಳ
ಪದ್ಮಪತ್ರದ ಭಂಗಿ,
ಅಲ್ಲೆಲ್ಲೋ ನನ್ನದೇ ಹೊಳೆವ ಬೆವರು !

ಇದರ ಪರಿಚಯ ಈ ಕವನ ಓದುವ ಮೊದಲೇ ನಿಮ್ಮ ಒಂದು ಪ್ರತಿಕ್ರಿಯೆಯಲ್ಲಿ ಓದಿದ ನೆನಪಿದೆ.. ಮತ್ತೊಮೆ ಬಿಡುವಿನ ಸಮಯ ಸಿಕ್ಕಾಗ .. ಪುನಃ ಓದಿ ಬೇರೇನಾದರೂ ಕಲ್ಪನೆಗಳನ್ನು ಇದಕ್ಕೆ ಹೋಲಿಸಬಹುದೇ ಎಂದು ಚಿಂತಿಸಿ.. ಅದನ್ನು ಸಹ ಇಲ್ಲಿ ಹಂಚಿಕೊಳ್ಳುತ್ತೇವೆ.. ತುಂಬಾ ಅರ್ಥಪೂರ್ಣ ಕವನ.. ಜನರ ಜೀವನಶೈಲಿಗೊಂದು ಸಂದೇಶ ಅಡಗಿದೆ ಇದರಲ್ಲಿ... ಆ ಸಂದೇಶ ಸೊಗಸಾಗಿದೆ.. :)

Mohan V Kollegal said...

ಬಾಳೆ ಸಾಯುವಾಗ ಹಿಳ್ಳೆಗಳಿಗೆ ಜೀವ ಊರಿ ಸಾಯುತ್ತದೆ. ಒಂದು ಅನುಭೂತಿ ಮತ್ತೆ ಮತ್ತೆ ಆ ರೀತಿ ಕಾಡುವಾಗ, ಮುದುಕಿಯಾದ ಒಂದು ಚೈತನ್ಯ ಮತ್ತೆ ಮತ್ತೆ ಯವ್ವನವಾಗಿ ಮೊಳಕೆಯೊಡೆದಾಗ, ಆಳಕ್ಕೆ ಬೇರೂರದೆ ಮತ್ತೆ ಒಂದು ಶಿಥಿಲಾವಸ್ಥೆಗೆ ತಲುಪಿದಾಗ ದಿಕ್ಕು ತಪ್ಪದೆ ಮತ್ತೇನು? ಎಲ್ಲೋ ಕಟ್ಟಿಕೊಂಡ ಸಂಸಾರ ಸುಳ್ಳಾಗದೆ ಮತ್ತೆ? ಚೆನ್ನಾಗಿದೆ ಈಶ್ವರಣ್ಣ... ಒಂದು ಸೂಕ್ಷ್ಮ ಭಾವದ ನಿಜ ತಾಕಲಾಟ ಈ ಕವಿತೆ....

ಮಂಜಿನ ಹನಿ said...

ಈಶ್ವರಣ್ಣ ನಿಮ್ಮ ಕಾವ್ಯ ಪ್ರೌಢಿಮೆಗೆ ಹಿಗೋ ನನ್ನ ಸಾಸ್ಟಾಂಗ ನಮನಗಳು.. ಭಾವಗಳನ್ನು ಕತ್ತಿಯಲುಗಿನ ಇಕ್ಕಳಗಳಲ್ಲಿ ಸಿಕ್ಕಿಸಿಕೊಂಡಂತೆ ತುಂಬಾ ನಾಜೂಕಾಗಿ ಮನದೊಳಕ್ಕೆ ಕವಿತೆಯನ್ನಿಳಿಸುತ್ತೀರಿ.. ವಿಷಯ ವಸ್ತುಗಳು ಎಷ್ಟೇ ಸೂಕ್ಷ್ಮವಿರಲಿ, ನಿಮ್ಮ ನಿರೂಪಣೆಗೆ ಸಿಕ್ಕಿದ ಮೇಲೆ ತಿದ್ದಿ ತೀಡಿ ಹದಕ್ಕೆ ತಂದುಬಿಡುತ್ತೀರಿ.. ಒಂದು ಉತ್ಕೃಷ್ಟವಾದ ಕವಿತೆಯಿದು, ಮನಸ್ಸಿನಲ್ಲಿ ತುಂಬಾ ಭಾವಗಳನ್ನು ಒಮ್ಮೆಯೇ ಸೃಷ್ಟಿಸಿಬಿಡುತ್ತದೆ..
ಅದೆಂತದೋ ಸುಳ್ಳು ಸಂಸಾರ !
ತುಟಿಗೆ ತುಟಿಯಂತೆ ,ಹೆಗಲಿಗೆ ಹೆಗಲಂತೆ
ನೆತ್ತರ ಹೀರುವ ಅವಕಾಶ ಕೊಡಲಿಲ್ಲವದು
....ಕಕ್ಕುವುದನ್ನೂ.
ಈ ಸಾಲುಗಳು ನನ್ನನ್ನ ಬಹುವಾಗಿ ಕಾಡುತ್ತಿವೆ.. ಒಂದು ಅದ್ಭುತವಾದ ಕವಿತೆ..

ಹರೀಶ್ ಶೆಟ್ಟಿ, ಶಿರ್ವ said...

ಅನೇಕ ಭಾವಗಳ ಸಿಂಚನೆ ನಿಮ್ಮ ಈ ಕವನ , ಸತ್ಯತೆಯನ್ನು ಕಾವ್ಯ ರೂಪದಲ್ಲಿ ಹೆಣೆದು ಹೇಳುವ ಈ ಪರಿ ನನಗೆ ತುಂಬಾ ಇಷ್ಟವಾಯಿತು, ಲಯಬದ್ದವಾದ ಸಾಲುಗಳು ಪದೇ ಪದೇ ಓದಬೇಕೆಂದು ಆಸೆಯಾಗುತ್ತದೆ , ಅಭಿನಂದನೆಗಳು

Banavasi Somashekhar.ಬನವಾಸಿ ಮಾತು said...

ಹೆಣ್ಣೊಡಲಿಗೆ ಭಾವವಾಗಿದ್ದೀರಿ.ಇಡೀ ಕವಿತೆ ಅವಳ ಜೀವನದ ನೈಜ ಸ್ಥಿತಿಯನ್ನು ಅನಾವರಣಗೊಳಿಸಿದೆ.

ಮುಗಿಬಿತ್ತು ದೃಷ್ಟಿ, ಅನಾಮತ್ತಾಗಿ
ತೊಡೆಯ ಮೇಲಿರಿಸಿಕೊಂಡಳು,
ಇನ್ನೂ ಹೀರಬಹುದೇ ?
ಮಧುವಿನಮಲು ಹೆಚ್ಚಾಗಿ
ಅವಳನ್ನು ಮುದುಕಿ ಎಂದೆನೇ?
ಈ ಸಾಲುಗಳು ಹೆಣ್ಣಿಗೊದಗಿ ಬರುವ ಕಾಮವಾಸನೆಯ ವಿವಿಧ ಮಜಲುಗಳನ್ನು ವಿವರಿಸುತ್ತಾ ವಿಚಾರಕ್ಕೆ ನಮ್ಮನ್ನು ಕೊಂಡೊಯ್ಯುವದು.ಕೊನೆಗೆ ಅವಳನ್ನು ಮುದುಕಿ ಎಂದೆನೇ ಎನ್ನುವಾಗ ಅವಳೀಗ ಮಧುಹೀರಿ ಹಿಪ್ಪೆಯಾಗಿರುವ ಸಿಪ್ಪೆಯಾಗಿದ್ದಾಳೆನ್ನುವುದನ್ನು ತಿಳಿಸಿ ಬೇಸರಮೂಡಿಸುವುದು.

ಬಾಳೆಯ ವ್ಯವಹಾರ ಸ್ವಾಮಿ!
ಸತ್ತು ಹುಟ್ತುವುದು ನನ್ನ ಪರಿ,
ಎಲ್ಲ ಹುಟ್ಟಿದ ಹಿಳ್ಳೆಗಳನ್ನು ಅವಳು ಪೊರೆಯುತ್ತಾಳೆ
ಆಳಕ್ಕೆ ಬೇರೂಡದೆಯೆ,
ಮತ್ತೆ ಕಾಡುತ್ತಾಳೆ ಗಮನ
....ಚಿಂತೆಗೆ ಹಚ್ಚುವ ಸಾಲುಗಳು ಕವಿ ಮನಸಿನ ಮಧುರ ಸಂವೇದನೆಗಳನ್ನು ತಿಳಿಸುತ್ತಾ ಹೆಣ್ಣಿನಿಂದಾಗುವ ವಿವಿಧ ಮಜಲುಗಳನ್ನೂ ಅವಳ ನೈಜ ಸ್ಥಿತಿಯನ್ನೂ ಚಿತ್ರಿಸಿದೆ.ಹೆಣ್ಣು ತಾಯಿ ಮೇಲೆ ಕವಿಗಿರುವ ಮುದ್ಧಾದ ಭಾವ ಈ ಕವನ ರಚನೆಗೆ ಸಾಕ್ಷಿಯಾಗಿ ನಿಂತಿದೆ.ಏನೇ ಆದರೂ ಕವನದ ಪ್ರತಿಮೆಯನ್ನು,ಅದರ ಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟಸಾಧ್ಯವೆನಿಸಿತು.ಇನ್ನು ಕವಿಯೇ ತಿಳಿಸಬೇಕೇನೋ ಅನಿಸುವುದು.ನನಗೆ ಅನಿಸಿದ್ದಿಷ್ಟು.ಅರ್ಥಮಾಡಿಕೊಳ್ಳಲು ಎಡವಿರಲೂಬಹುದು.ಕವಿ ಭಾವಕ್ಕೆ ನಾ ತೀರಾ ಚಿಕ್ಕವನು.ಅಭಿನಂದನೆಗಳು.

ಮೌನರಾಗ said...

ಗುಟ್ಟು ಬಿಟ್ಟು ಕೊಡದ ಗಟ್ಟಿ ಕವಿತೆ..

Nice...

ಜಲನಯನ said...

ಈಶ್ವರ್, ಭಾವಗಳ ಸುಳಿ ಪದಗಳ ಬಳುವಳಿ..ಅರ್ಥೈಸಿಕೊಳ್ಳೋದು ನಿಮಗೆ ಬಿಟ್ಟದ್ದು ಎನ್ನುವಂತೆ..ಓಪನ್ ಟಿಕೆಟ್ ಥರ ನಿಮ್ಮ ಕವನ.. ಭೂಮಿಯಂತೂ ಒಂದು ನಿಟ್ಟಿನಲ್ಲಿ ಅನ್ವಯ ಅನ್ನಿಸುತ್ತೆ...ಇಷ್ಟಾಯ್ತು...

ಸೀತಾರಾಮ. ಕೆ. / SITARAM.K said...

ಅದ್ಭುತ್ ಕವನ. ಅರ್ಥಗಳೆಲ್ಲಾ ಪ್ರತಿಕ್ರಿಯೆಯಲ್ಲಿ ಆಗಲೇ ಅನಾವರಣಗೊಂಡಿರುವದರಿಂದ ಹೇಳಲು ಉಳಿದಿಲ್ಲಾ...

Anonymous said...

Nice Blog

Jayadev