Monday, June 25, 2012

ಅನ್ನದಾತನ ನೆನೆಯುತ್ತಾ!

ಅನ್ನದಾತನ ದಿನವು ನೆನೆಯಿರಿ, ನೆನೆಯುತ್ತಾ ಇರಿ
ಬರೀ ನೆನೆದರೆ ಸಾಕು! ಜಪಿಸುತ್ತಿರಿ ಆಗಾಗ 
ಒಂದು ಹೊತ್ತಿನ ಊಟ, ಅಲ್ಲ ಹನಿ ನೀರು 
ಕೊಟ್ಟು ಬಿಡಬೇಡಿ ಬಳಿಗೆ ಬಂದಾಗ.

ಬಸ್ಸು ಟ್ರೈನುಗಳ ಹತ್ತಿಯಾರಿವರು !
ನೋಡಿಕೊಳ್ಳಿ ನಿಮ್ಮ ಬಿಳಿ ಷರಟು ಪ್ಯಾಂಟು!
ಕೊಳೆಯಾಗದಂತೆ ದೂರ ತಳ್ಳಿಬಿಡಿ,
ಹಿಡಿದುಕೊಳ್ಳಿ ಕಿಟಿಕಿಯ ಬದಿ ಸೀಟು !

ರಸ್ತೆಯಲ್ಲಿ ಉಗುಳಬೇಡಿ, ಸಿಪ್ಪೆಯ ಎಸೆಯಬೇಡಿ
ಎನ್ನಿ. ಅವರೇನು ನಾಗರಿಕರೇ ? ಅಲ್ಲ !
ನಿಮ್ಮ ಪ್ಲಾಸ್ಟಿಕ್, ಕಂಪ್ಯೂಟರುಗಳ ಗ್ರಹಿಸರು
ನಮ್ಮಿಂದ ಉದ್ದಾರ ತಾನೆ ಎಲ್ಲ !

ಎತ್ತರಕಟ್ಟಿದ ಮಹಲಿನ ಮೇಲಿಂದ ಬೆಟ್ಟಗುಡ್ಡಗಳ ಹಿಡಿದು
ನೀರು ಹರಿವಲ್ಲೆಲ್ಲಾ ಕ್ಯಾಮೆರದಲಿ ಬಡಿದು
ಬಗ್ಗಿದ ರೈತನ ಹೊಗಳಲೋಸುಗ ಬಾಯಿ ಮುಚ್ಚಿಸಿ
ಕೆಂಪು ಹಲ್ಲು, ಕಂಡೀತೆಂದು ಬಾಯಿಯೊಡೆದು !

ಛೇ, ನೀನೇ ಬೆಳೆಯಬೇಕೆಂದಿಲ್ಲ ಗೋಧಿ. ಇದೆ ದಾಸ್ತಾನು
ವೀರ್ಯದ ಲೆಕ್ಕವೂ ಇದೆ ನನ್ನಲ್ಲಿ, ಎಷ್ಟು ಹುಟ್ಟಿಸಬೇಕು?
ಮುಕ್ಕಾಲು ಪಟ್ಟಣದೊಳಗೆ ,ಕಾಲು ಗದ್ದೆಗೆ ಇಹುದು
ಕಾಲು ಬೆಳೆಸಲು ಬೇಕು ! ಉಳಿದ ಪರಾಕು !

6 comments:

ಪುಷ್ಪರಾಜ್ ಚೌಟ said...

ಬಹುಪರಾಕು, ಕವಿತೆ ಮತ್ತು ಅದರೊಳಗೆ ನೂರು ಭಾವ ಹುಟ್ಟಿಸುವ ನಿಮ್ಮ ಪ್ರತಿಭೆಗೆ.

ಶರತ್ ಚಕ್ರವರ್ತಿ. said...

ಆಳವಾದ ಕವಿತೆ, ವಿಡಂಬನಾನ್ಮಕವಾಗಿ ತೆರೆದುಕೊಂಡಿದೆ. ಓದಿ ಸಂತೋಷವೂ ಆಯಿತು, ಬೇಸರ ಕೂಡ.

Badarinath Palavalli said...

ಅತ್ಯುತ್ತಮ ಹಂದರವನ್ನು ಹೊಂದಿರುವ ಕಾವ್ಯ ಸೃಷ್ಟಿ.

ಅನ್ನದಾತನನ್ನು ಕಡೆಗಣಿಸಿ ನಾವು ಯಾವ ಕಾಲವಾಯಿತೋ, ಅವನು ಗೊಬ್ಬರಕ್ಕೋ ಬೀಜಕ್ಕೋ ಬಂದಾಗ ಲಾಟಿ ಬೀಸಿ ಗುಂಡು ಹಾರಿಸಿದಾಗಲೋ ಇಲ್ಲಾ ಸಾಲ ಶೂಲೆಗೆ ಸಿಕ್ಕು ಆತ ಕೀಟನಾಶಕ ಕುಡಿದು ಮನೆಯಂಗಳದಲ್ಲಿ ಹೆಣವಾಗಿ ಅಡ್ಡಡ್ಡ ಮಲಗಿದಾಗಲಷ್ಟೇ ಮಾಧ್ಯಮಗಳಲ್ಲಿ ಅವನ ಮುಖ ದರ್ಶನವಾಗಿ, ಅವನ ಬಗ್ಗೆ ಭರಪೂರ ಅನುಕಂಪದ ಲೊಚಗುಟ್ಟಿ ಮತ್ತೆ ಮರೆತು ಬಿಡುತ್ತೇವೆ.

ಇಲ್ಲಿ ನೀವು ಕಟ್ಟಿಕೊಟ್ಟ ರೀತಿಯೇ ಅನನ್ಯ.

ಕಾವ್ಯಾ ಕಾಶ್ಯಪ್ said...

awesome KiNNa...!!

sunaath said...

Excellent poem.

Anitha Naresh Manchi said...

wah .. Kinna..kavanada negilu choopiddu..