Tuesday, July 3, 2012

ಬಾರೋ ಬೇಗ ಬಾರೋ


ಬಾರೋ ಬೇಗ ಬಾರೋ ಇಳೆಗಿಳಿವಾ ಮಳೆಯ ಹಾಗೆ
ಸೇರೋ ಈಗ ಸೇರೋ ನಿನ್ನ ಸೆಳೆವೆ ನನ್ನ ಕಡೆಗೆ.

ಈಟಿಯಂತೆ ದಾಟಿ ಬಾರೊ ಅಂತರಂಗ ಕುಲುಮೆಯ
ಮೀಟುವಂತ ನೋವಿನೊಳಗೆ ಬೆಳಗು ಪ್ರೇಮಜ್ವಾಲೆಯ
ಕೂಟವಾಗೆ ಮೆರೆದು ಪೂರ್ಣ ಫಲವ ಧರಿಪ ಇಳೆಯೊಲು
ಸಾಟಿಯಹುದೆ ಈ ಸೃಷ್ಟಿಗೆ ನಾನು ನೀನು ಬೆರೆಯಲು!

ಹರಿದು ಧಮನಿಯೊಡೆದು ಬರಲಿ ನಿನ್ನಾವೇಶ ಮೀರೆ
ಇಳಿದು ಸೆಳೆತಪಡೆದು ಕರಗಿ ನಿನ್ನ ಒಲವ ಧಾರೆ
ಮಿಂಚು ಬೆಳಕಿನಾಟದಂತೆ ಸಿಡಿದ ಪ್ರೇಮ ಮಾಲೆ
ಪಡೆದು ನಾನು ಹಡೆವೆ ಚಿಗುರ ನಿನ್ನಕರುಣೆ ಲೀಲೆ

ಹಳೆಯ ಗುಣವು ಜಾರಿ ಹೋದರೇನು ಜಾವದಂತೆಯೆ
ಹೊಸತು ಸೃಷ್ಟಿ ಸೃಜಿಸಿ ಮೆರೆವ ವೇಳೆ ಮೀರದಂತೆಯೆ
ಬಾರೊ ಬೇಗ ಬಾರೋ ನಾವು ಜಗಕೆ ಮೊದಲ ದೇವರು
ಸೇರೊ ಒಲಿದು ಸೇರೋ ನಾವೆ ಇದಕು ಅದಕು ಜೀವರು!

೦೩-೦೭-೨೦೧೨

3 comments:

Badarinath Palavalli said...

ಸಂಗಮದ ಈ ಅಮಿತ ನಿರೀಕ್ಷೆ ಶುಭಪ್ರದವೇ.

ಉತ್ತಮ ಪ್ರಾಸಬದ್ಧ ಲಾಲಿತ್ಯ ರಚನೆ.

Swarna said...

ಅವ ಬೇಗ ಬರಲಿ
ನಿಮ್ಮ ರಚನೆ ಹೀಗೆ ಸಾಗಲಿ :)
ಸ್ವರ್ಣಾ

ಕಾವ್ಯಾ ಕಾಶ್ಯಪ್ said...

hmm KiNNa... sooper....!!