"ನಿನ್ನೆ ಹಂಪಿಯ ಬಳಿಯ ರಸ್ತೆಯಲ್ಲಿ
ಆಲದಾ ಮರದ ಬಳಿ ಜೊಂಪಿನಲ್ಲಿ.
ಬಿಳಲು ಹೇಳುವ ಕತೆಯ ಕೇಳುತಿದ್ದೆ
ಮೋಹ ಬಿಟ್ಟೆನು ಅಲ್ಲೆ, ಬೆವರಿ ಒದ್ದೆ!
ನನಗೋ ವಯಸಿಷ್ಟು ಹೇಳಲಾರೆ
ಬುಡದಲ್ಲಿ ಏನುಂಟೋ ತಿಳಿಯಲಾರೆ
ಜೊತೆಗೆ ಬಂದವರೆಲ್ಲ ಹೋದರೆಂದೋ!
ನಾನು ನಿಂತಿದ್ದೇನೆ, ಸಾಯಲಾರೆನೆಂದೋ?
ಈನಾಡನಾಳಿದವ ಇಲ್ಲೆ ಇದ್ದ
ಬಾಲ್ಯದಲಿ ಇದೆ ಬಿಳಲ ಎಳೆಯುತಿದ್ದ
ಕತ್ತಿ ಕೈಯ್ಯಲಿ ಕರೆಯೆ, ನನ್ನ ಬಿಟ್ಟೋಡುತಲೆ
ಬಂದ ಕಣ್ಣೀರನ್ನು ಒರೆಸಿ ನಡೆದ.
ಹತ್ತೋ ಹದಿನೈದೋ ಅವಗೆ, ರಾಜ್ಯವಿತ್ತು
ಹೂ, ಫಲವ ಬಿಡದುದಕೆ ಬಂತು ಕುತ್ತು!
ಸುಭೀಕ್ಷವೆಂದದರ ಕರೆದರೆಲ್ಲಾ
ನಾನೆಂತೋ ಬದುಕುಳಿದೆ! ಸಾಯಲಿಲ್ಲ!!
ಹೀಗಿರಲು ಒಂದೊಮ್ಮೆ ಯುದ್ಧವಂತೆ
ಇಲ್ಲಿಗೂ ಅಲ್ಲಿಗೂ ಕತ್ತಿ ಬಾಣ ಸಂತೆ
ಕೋಟೆ ಒಡೆದರು;ಇರಲಿಲ್ಲವಂತೆ ಸಂಧಿ
ಉಳಿದದ್ದು ಬರಿ ಅಂತಃಪುರದ ಮಂದಿ.
ಏನಾಯ್ತು ಗೊತ್ತೇನು ಬೆಳಗು ಜಾವದಲ್ಲಿ
ಕತ್ತಿಯೇಟಿಗೆ ಬಿದ್ದ ಕೊರಳು ಇಲ್ಲಿ,
ನೀ ಜೋತು ಬಿದ್ದಂತ ಬಿಳಲು ಗೂಡು
ಇನ್ನು ನೆತ್ತರು ಕಲೆಯು ಇಹುದು ನೋಡು.
ಹೀಗೆ ಹೇಳಿದ ಕತೆಯ ಕೇಳಿದವರು
ಕಡಿದರೆನ್ನಯ ಬಿಳಲು, ಕ್ರಾಂತಿಯವರು
ನೀನು ಕಡಿವೆಯ ಹೇಳು ನನ್ನ ಬಿಳಲು?
ಬಿಳಿಯ ಮೇಣವೆ ಸಾಕ್ಷಿಗೆನ್ನ ಅಳಲು!"
ಕವನವನ್ನು ಮೀರಿದ ಚಿತ್ರ: ವೆಂಕಟ್ ಕೋಟೂರು.
http://www.facebook.com/venkat.raj.184
2 comments:
ಭಟ್ಟರೆ,
ತುಂಬ ಸುಂದರವಾದ ಕವನ. ಚಿತ್ರವೂ ಸಹ ಅಷ್ಟೇ ಚೆನ್ನಾಗಿದೆ. ಕವಿ ಹಾಗು ಚಿತ್ರಕಾರ ಇವರಿಗೆ ಅಭಿನಂದನೆಗಳು.
ಒಂದು ಮರ ಹಲ ಶತಮಾನಗಳಿಗೆ ಸಾಕ್ಷಿಯಾಗುತ್ತದೆ ನಿಜ. ಒಳ್ಳೆಯ ವಸ್ತುವನ್ನು ಅತ್ಯುತ್ತಮವಾಗಿ ಅರಳಿಸುವ ಪರಿ ನಿಮಗೆ ಸಿದ್ಧಿಸಿದೆ.
ಮುಂದೆ ನಮಗೆಲ್ಲ ದಾರಿ ದೀಪವಾಗುವ ಸಾಹಿತಿಗಳ ಗುಂಪಿನಲ್ಲಿ ನಿಮ್ಮ ಪ್ರತಿಭೆಯು ಎದ್ದು ಕಾಣುತ್ತದೆ.
Post a Comment