ಸಿಗ್ಗಿನಲಿ ಬಂದನದೋ ಚಂದ್ರ ಆಗಸದಲ್ಲಿ
ನಿನ್ನ ಮೊಗದಲಿ ಕೆಂಪು ಏರಿತೇನು?
ತಂಗದಿರ ಕಿರಣಗಳ ಕಂಪು ಮೈಮನವೇರೆ
ಸಿಂಗರದ ನತ್ತಾಗಿ ಹೊಳೆಯಿತೇನು?
ಆ ತಾರೆ ಅರಿಷಿಣದ ಲೇಪನವ ಮಾಡಿದಳೆ?
ಚಂದ್ರ ತುಂಬಿದ ಬಣ್ಣದೋಕುಳಿಯಲಿ
ಪ್ರೀತಿ ಹೆಚ್ಚಾದಂತೆ ಚಂದ್ರನೋ ಬಹುಬಿರುಸು!
ಹಿಗ್ಗಿ ನಡೆಯುವ ಮುಗಿಲ ಸಾಲುಗಳಲಿ
ಕಣ್ಣಂಚು ಜಿನುಗಿತೆ, ಕಾಣಿಸದು ಕತ್ತಲೆಗೆ
ಇನ್ನೆಂದು ಬಹನವನು? ಕೇಳು ನೀನು.
ಇಷ್ಟೊಂದು ಬೇಯುವೆಯೆ ಎನ್ನುತಲಿ ಕನಿಕರದಿ
ಇದ್ದು ಹೋದಾನವನು ಸಂಜೆಗೂನು!
ತೀರದದು ಆಸೆಗಳು, ಮಿತಿಮೀರಿ ಸಾಗುವುದು
ಉಬ್ಬರವು ಸಾಗರದಿ ಚಂದ್ರ ಬರಲು!
ನಿಶೆಯು ಕಳೆದಂತೆಲ್ಲಾ, ನಿದ್ದೆಗಣ್ಣಲಿ ಉರಿಯೆ
ಶಾಂತಾವಾದೀತು ಇದು ಮೊರೆವ ಕಡಲು.
೨-೧೨-೧೨
3 comments:
ತೀರದದು ಆಸೆಗಳು, ಮಿತಿಮೀರಿ ಸಾಗುವುದು
ಉಬ್ಬರವು ಸಾಗರದಿ ಚಂದ್ರ ಬರಲು!
ಇಂತ ಸಾಲುಗಳನು ಅದೆಲ್ಲಿಂದ ಪೋಣಿಸುತ್ತೀರಿ ಕಿರಣರೇ?
ವಾವ್ ನಾನಿನ್ನೂ ಕಲಿಯಬೇಕಿದೆ.
ಗುರುಗಳೇ, ನೀವು ರಾಮನ್ ಎಫೆಕ್ಟ್ ಬಗ್ಗೆ ಆಳ ಅಧ್ಯಯನ ನದೆಸಿದ್ದೀರೆ ??
ಬಣ್ಣಗಳ ಬದಲು ಮಾಡಿಯೇ ಇಷ್ಟೊಂದು ಕಾವ್ಯದಾಟ ಆಡುತ್ತೀರಲ್ಲ.. ಮನಮೋಹಕ..!!!
[ ಅಲಂಕಾರಿಕ ಪದಪ್ರಯೋಗಗಳಲ್ಲಿ ನಾನು ಮೆಚ್ಚುವ ಮೆರುಸಾಹಿತಿ ನೀವು. ]
ಪ್ರೀತಿ ಹೆಚ್ಚಾದಂತೆ ಚಂದ್ರನೋ ಬಹುಬಿರುಸು!
ಹಿಗ್ಗಿ ನಡೆಯುವ ಮುಗಿಲ ಸಾಲುಗಳಲಿ
- ಆಹಾ! ಸೂಪರ್ ಕಿಣ್ಣ :)
Post a Comment