ನಡೆಯುತ್ತಾ ನಡೆಯುತ್ತಾ ಓಡುವುದ ಕಲಿತ
ಓಡುತ್ತಾ ಹೀಗಿರಲು ದಾರಿಯನೆ ಮರೆತ.
ವೇದಾಂತ ಓದದೆಯೆ ಗೊಡ್ಡೆಂದು ಜರೆದ
ತಲೆಕೆರೆದು ಚಿಂತಿಸಿದ;ಬಾಳ್ವೆಯನೆ ಹಳಿದ
ಮೂರುದಾರಿಯ ಬಲ್ಮೆ ನಿಂಬೆಮಂತ್ರದ ಮಾಟ
ಸೇರು ತುಪ್ಪದ ತೇಗು; ಕಾಲ್ದಾರಿ ಬೇಟ
ಇಷ್ಟೆಲ್ಲ ದೊರೆತಂದು; ಕಳೆದ ಧಾತುವಿನೊಳಗೆ
ಮತ್ಸರವ ತಾಳಿದನು;ಇತ್ತು ಅರೆಘಳಿಗೆ.
ಹಿಡಿಚೂರು;ಬಿಟ್ಟು ಬಿಡು, ದಾರಬಿಚ್ಚಿಡು ಮಗನೆ
ಬಡಿಮೆಲ್ಲ! ಓಡದೆಯೆ ಹರೆಯಲದು ಕೀಟ.
ತುಂಡರಿಸಿ ರೆಕ್ಕೆಯನು;ನಿನ್ನ ಬಲದಲಿ ಮೇಲ-
ಕ್ಕೇರಿಸುತ ಸಹಕರಿಸು,ಕೊಟ್ಟು ಕಾಟ
ಬೊಮ್ಮನಿಗೊ ಅಮ್ಮನಿಗೊ ಲಲಾಟಬರಹಕ್ಕೂ
ಸುಮ್ಮನೇ ಕಿವಿತುಂಬಿಸಿದ ಗುಗ್ಗುತುರಿಕೆ!
ಕದ್ದ ಮಾತುಗಳಿಗೆಲ್ಲ ಬಿಳಿಯ ಬಣ್ಣವನಿಟ್ಟು
ಮಾರುವುದು ತಾನ್ ಆತ್ಮದುದ್ದಾರಕೆ.
ಭಲೇ ಭೇಷ್ ಎನ್ನುತಲೆ ಬೆನ್ನಿಗಿಟ್ಟರು ಭಾರ
ಸ್ವಂತ ಚಿಂತೆಯ ಮರೆತ ಲೋಕದುದ್ಧಾರ
ನೆರೆಮನೆಯವನ ನರಸತ್ತುದಕೆ ಮದ್ಧು
ಹುಡುಕಿ ಸುಸ್ತಾದದ್ದೆ ಇವನ ಲಾಭ.
ಓಡಿದವ ಸುಸ್ತಾದನೆಂದು ಕೊಟ್ಟರು ನೀರು
ಇತ್ತರವನಿಗೆ ಸುರೆಯ; ವೀರನಾಗು!
ಮತ್ತೆ ಬೈದರು ಹಿಂದೆ ಓಡುತ್ತಿರಲಿ ಮುಂದೆ
ಬಳಲಿದೆಯೋ ಮಗನೆ? ದಾಸನಾಗು.
ಬೊಚ್ಚುಬಾಯಿಗಳಲ್ಲಿ ಅಣಕಿಸಿದ ತುಟಿಗಳಿಗೆ
ಬೆಂಕಿ ಹಚ್ಚುವೆನೆಂದು ಮಾತನಿತ್ತ
ಹಿಂತಿರುಗಿ ಬರಲಾರ, ದೂರದಡವಿಗೆ ಬಂದ
ಸುತ್ತ ಕತ್ತಲೆ ತುಂಬಿ ಮನೆಯ ನೆನೆದ.
ದೊಡ್ಡನೆಯ ಕೆಂಪು ಹಚ್ಚಿದ್ದ ಹಣೆಗಣ್ಣು
ಕರೆದಂತೆ ಕೇಳಿಸಿತು ಅಮ್ಮನೊಲವು
ಕೆನ್ನೆಯಾ ಅರಿಷಿಣಕೆ ರವಿಯು ತೆರೆಸರಿದಂತೆ
ಮಣ್ಣಾಯಿತು ಆಸೆ, ಜೀವ ಕಣವು.
೧೮-೧-೨೦೧೩
1 comment:
ಏನೋ ಸಾಧಿಸಿದೆವು, ಜಗವನೇ ಗೆದ್ದೆವು ಎನ್ನುತ ಬೀಗುವ ಆಸಾಮಿಗಳು ಕೂಡಲೇ ಓದಲೇ ಬೇಕಾದ ಕವನವಿದು. ಅಹಂ ಕವಿಯುವ ಮುನ್ನ ಎಚ್ಚರವಾದರೆ ತಮಗೂ ಸುತ್ತಲಿನವರಿಗೂ ಇದೆ ಸುಖವೂ...
Post a Comment