ನನ್ನಿಂದ ದೂರಾಗಿ ಹೋದವರು ಯಾರಿಲ್ಲ
ನಾನಾಗಿ ದೂರಕ್ಕೆ ನಡೆದು ದಣಿದೆ.
ಬಂದ ದಾರಿಯ ಮತ್ತೆ ನೋಡಲಾಗುವುದಿಲ್ಲ
ನೆನಪುಗಳ, ನೋವುಗಳ ತುಳಿದು ಬಂದೆ.
ಕರೆಯದಿರಿ ನನ್ನನ್ನು ನಿಮ್ಮ ಹಿರಿತನದೊಳಗೆ
ನನ್ನ ಸಣ್ಣನೆ ಬದುಕು ತುಂಬದಲ್ಲಿ!
ಬೆಳಕಾದರೂ ನೀವು, ನನಗೆ ಕತ್ತಲೆ ಬೇಕು
ಬದುಕು ಸುಖಿಸಲಿ ನಿಮ್ಮ ಬೆಳಕಿನಲ್ಲಿ
ಜಗವು ಕಲಿಸಿದೆ ನನಗೆ ನೋವುಗಳ ನಗಿಸಲು
ನಕ್ಕು ಉಗುಳಲು ದ್ವೇಷ ಕಿಚ್ಚುಗಳನು
ಎಲ್ಲಿಯೋ ಕಾಣುವುದು ನನ್ನ ಬಾಳಿನ ಒಲುಮೆ
ಯಾವುದೊ ಲತೆಗಳಲಿ ಹೂವುಗಳನು
ಆ ದಿನಕೆ ಕಾಯುವೆನು ಹೊಣೆಯ ಬೆನ್ ಬಾಗಿದರು
ಹಿಡಿಯಲಾರೆನು ಮುಳ್ಳು ಊರುಗೋಲು!
ಎದೆಯ ಒಳಗಡೆ ಉರಿವ ಆ ಆತ್ಮವಿಶ್ವಾಸ
ಬರಿಸಲಾರದು ನನಗೆ ಎಂದು ಸೋಲು.
3 comments:
ಈ ಆತ್ಮವಿಶ್ವಾಸಕ್ಕೆ ಶಹಭಾಸ್!
ಆ ದಿನಕೆ ಕಾಯುವೆನು ಹೊಣೆಯ ಬೆನ್ ಬಾಗಿದರು
ಹಿಡಿಯಲಾರೆನು ಮುಳ್ಳು ಊರುಗೋಲು!
ಎದೆಯ ಒಳಗಡೆ ಉರಿವ ಆ ಆತ್ಮವಿಶ್ವಾಸ
ಬರಿಸಲಾರದು ನನಗೆ ಎಂದು ಸೋಲು.
ಸೂಪರ್ ಕಿಣ್ಣಾ :-)
ಚಂದಿದ್ದು.. ಸೇಮ್ ಬಂತು ನೋಡು :-) :-)
Post a Comment