Thursday, October 10, 2013

ಸಂಜೆಯ ಹಾಡು.

ಸಂಜೆಬಾನಂಗಳದಿ ಕೆಂಪು ಏರುತ್ತಲಿದೆ
ನಿನ್ನನ್ನೇ ನೆನೆಯುತ್ತ ದಿನವು ಸಖಿಯೆ,
ಯಾವುದೋ ನೋಟಕನ ಉಪಮೆಗೂ ಆಹಾರ
ನಿನ್ನ ಕೆನ್ನೆಯ ಬಣ್ಣ ಸೂರ್ಯನೆರೆಯೆ!

ಬಂದ ತಂಗಾಳಿಯೂ ಒಂದಿಷ್ಟು ತಂಪೆರೆದು
ನೀನಿರದ ಅಸಹನೆ ತುಂಬುತಿಹುದು
ಯಾವುದೋ ರಸಿಕನಾ ಎದೆಕಿಚ್ಚು ಹೆಚ್ಚುವುದು
ನಿನ್ನ ಸಾಮೀಪ್ಯವನು ಹಾಡುತಿಹುದು

ಮಲ್ಲಿಗೆಯ ಪೇಟೆಯಲಿ ನೀರ್ತಳಿದ ಹೂವುಗಳು
ನಿನ್ನ ಮುಡಿಗೇ ಎಂದು ಮರುಗುವಂತೆ
ಯಾವುದೋ ವರ್ತಕನ ನಿರೀಕ್ಷೆ ಮೀರುತಿದೆ
ನಿನ್ನೆ ಉಳಿದಿಹ ಮಲ್ಲೆ ಇಂದಿಗಂತೆ.

ರಾತ್ರಿಯಾಣತಿಯಾಯ್ತು ಇನ್ನೆಷ್ಟು ಹೊತ್ತಿಹುದೊ
ನಿನ್ನ ಕಾಯುವ ನಾನು ಹೀಗೆ ನೆನೆದು
ಯಾವುದೋ ಹಾಡಿಗೆ ನಿನ್ನ ನೆನಪಿನ ಸಾಲು
ನೀ ಬರುವ ಹಾದಿಯಲಿ ಕಣ್ಣು ಹಿರಿದು.

2 comments:

sunaath said...

ಹಾಡು-ಮೊಲ್ಲೆಯ ಕಂಪು ಹರಡುತಿದೆ ಮನದಲ್ಲಿ
ಕವಿಗೆ ಹೇಳಲೆ ಬೇಕು ಧನ್ಯವಾದ!

Dileep Hegde said...

ಸುಂದರ ಕವಿತೆ..

ಯಾವುದೋ ಹಾಡಿಗೆ ನಿನ್ನ ನೆನಪಿನ ಸಾಲು
ನೀ ಬರುವ ದಾರಿಯಲಿ ಕಣ್ಣು ಹಿರಿದು..

ತುಂಬಾ ಇಷ್ಟವಾಯ್ತು