Friday, December 20, 2013

ನಾವಿಬ್ಬರೊಂದಾಗಿ ಸಾಗಿ ದೂರಕೆ ಬಂದು

ನಾವಿಬ್ಬರೊಂದಾಗಿ ಸಾಗಿ ದೂರಕೆ ಬಂದು
ಇಲ್ಲೆಲ್ಲೋ ಬಚ್ಚಿಟ್ಟ ಮಾತುಗಳನು
ಬೇರಾರೂ ಬಯಸದೆಯೆ ನಕ್ಕು ತಲೆದೂಗುವರು
ಓ ಕವಿಯೆ ಕೇಳುತಿಹೆ ಯಾಕೆ ನೀನು?

ಮೊದಲ ಮಾತುಗಳೆಲ್ಲ ಆ ಹೊಳೆಯ ಸ್ಪರ್ಧಿಗಳು
ತೆರೆಯ ಮೇಲಿನ ತಾನ ಅದರ ಬಿರುಸು
ಹಾಲ್ನೊರೆಗೆ ಎದೆಹಿಗ್ಗಿ ಏರಿ ಬರುತಲ್ಲಿತ್ತೋ
ಅದರಾಚೆಗೆ ಇನ್ನೂ ಏರು ಕನಸು

ಅಂದೊಂದು ದಿನ ಮೌನ ಬಿಸಿಲಗಾಲದ ನದಿಯು
ಕಾದ ಮರಳಿಗೆ ಬಿತ್ತು ಕಣ್ಣನೀರು
ಯಾವುದೋ ಹೂವಿಂದ ಬರುವ ಗಂಧದ ಗಾಳಿ
ಮತ್ತೆ ಬೆರೆಸುತ್ತಿತ್ತು ನಮ್ಮ ಉಸಿರು.

ನಿನ್ನೆ ಬಂದವಳಿನ್ನು ಬರದೆ ಹೋದಾಳೆಂದು
ಈ ಹೊಳೆಯ ಹರಿವಿಗೂ ಅರಿದಂತಿದೆ
ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ ದಂಡೆ
ನಲ್ಲ ನಲ್ಲೆಯ ಪ್ರೇಮ ಸುಳಿಯಲ್ಲಿದೆ.

ಬಚ್ಚಿಟ್ಟ ಮಾತುಗಳ ಹೂತುಬಿಡು ಓ ಕವಿಯೆ
ಇಂತ ಮಾತುಗಳನ್ನು ಹಾಡಬೇಡ
ಅವಳನ್ನು ತಲುಪಿದರೆ ಈ ನೋವು ಮೆರವಣಿಗೆ
ನನ್ನ ಸೇರುವಳವಳು ; ಕೊಲ್ಲಬೇಡ.

5 comments:

sunaath said...

ಬಚ್ಚಿಟ್ಟ ಮಾತುಗಳ
ಬಿಚ್ಚಿ ಇಡು ಓ ಕವಿಯೆ,
ಮೂಕ ಪ್ರೇಮಿಗು ನೀನು
ದನಿಯಾಗುವೆ!

Badarinath Palavalli said...

ಮನಸಿನ ಅಳಲನು ಕುದಿ ಕುದಿಸಿ ಬಸಿದು ಕೊಡುವನು ಮನೋಙ್ಞ ಕವಿ. ಅಂತ ಕವಿಯೋತ್ತಮ ತಾವು.

https://m.facebook.com/groups/191375717613653?view=permalink&id=435285689889320&__user=100001033741098

Nanjunda D said...

ಅತ್ಯುತ್ತಮ ಕವಿತ್ವ.ಅಭಿನಂದನೆಗಳು

Unknown said...

ಭಟ್ರೇ, ಸೊಗಸಾದ ರಚನೆ

ಮಂಜಿನ ಹನಿ said...

ಕಿರಣಣ್ಣ ಎಂಥ ಬರೀತೀರಿ ಮಾರಾಯ್ರೆ! ಆ ನೋವ ಮೆರವಣಿಗೆಯಲ್ಲಿ ನನ್ನನ್ನೂ ದಬ್ಬಿಕೊಂಡಂತಹ ಭಾವ ಕೊಡ್ತು. ಒಂಥರದ ಆಪ್ತತೆ, ಜೊತೆಗೆ ಅಸೂಹೆ ತುಂಬಿಕೊಂಡು ಕಾವ್ಯದ ಬಟ್ಟಲಿಗೆ ಸುರಿದೆ! :-D

- ಪ್ರಸಾದ್.ಡಿ.ವಿ.