Sunday, December 29, 2013

ನಾಯಿಯಿದೆ ಎಚ್ಚರಿಕೆ.

ನಮ್ಮೂರ ಓಣಿಯಲಿ ಇತ್ತು ದಾಂಡಿಗ ನಾಯಿ
ಪರವೂರ ಗಲಭೆಗೇ ಬೊಗಳುತಿತ್ತು;
ಸ್ವಂತ ಓಣಿಯ ಜಗಳ ಇದರ ಪರಿಧಿಯದಲ್ಲ
ಎಂದೆನುತ ಪರಜನರ ಮೂಸುತಿತ್ತು.

ದೂರದೂರಲಿ ಸತ್ತ ಕಾಗೆ ನರಿಗಳ ಹೆಣವ
ಅಗೆದಗೆದು ಊಳಿಡುತ ಸಾರುತಿತ್ತು
ಸ್ವಂತ ಓಣಿಯಲಿರುವ ಯಜಮಾನ ಸತ್ತರೂ
ಮೂಲೆಯೊಳು ಮುದುರಿ ತಾ ಮಲಗುತಿತ್ತು.

ಹಿಂದೊಮ್ಮೆ ಪರವೂರ ನಾಯಿಗಳ ಓಲೈಸಿ
ಓಣಿಯಲಿ ಕ್ರಾಂತಿಯೆನೆ ಬೊಗಳಿ ರಾಗ;
ತನ್ನ ಕಜ್ಜಿಯ ತುರಿಕೆ ಸಾರ್ವಜನಿಕರಿಗೆಂದು
ಕರೆಕರೆದು ತೋರುವುದು ತನ್ನ ರೋಗ.

ಇಂತ ನಾಯಿಯ ಚಿತ್ರ ಮಾಧ್ಯಮದ ತುಂಬೆಲ್ಲ
ಪರರ ಕಾಳಜಿ ಚಿಂತೆ ನಾಯಿಗೆಂದು
ಪ್ರತಿಯೊಂದು ಸನ್ಮಾನ ಪಾರಿತೋಷಕ ಕೊಟ್ಟು
ದೊಡ್ಡ ಪೀಠವ ಬಿಟ್ಟು ಕೊಟ್ಟರಿಂದು.

ಪರರನ್ನು ಹೊಗಳುವುದು ತಮ್ಮವರ ಬೊಗಳುವುದು
ಈ ನಾಯಿ ವ್ಯವಹಾರ ತಿಳಿಯಲಿಲ್ಲ;
ನಾಯಿ ಕಚ್ಚುವ ದಿನಕೆ ಆಸ್ಪತ್ರೆ ಹುಡುಕಿದರು
ರೋಗ ಮಾಡಿದ ಕೇಡು ಗ್ರಹಿಸಲಿಲ್ಲ.

6 comments:

sunaath said...

ಅಬ್ಬಾ! ಎಂಥಾ ವಿಕಟ ವಿಡಂಬನೆ!

Badarinath Palavalli said...

ಇಂದಿನ ಸಮಾಜದ ದುಸ್ಥಿತಿಯ ಕೈಗನ್ನಡಿಯಂತಹ ಕವನ.
ತನ್ನ ಸುತ್ತಲಿನ ಗಲೀಜನೇ ಚೊಕ್ಕಟಮಾಡದ ಮನಸುಗಳು ಗುಡಿಸಲು ಹೊರಡುತ್ತಾವೆ ಊರ ಕಸವ!

vijayraj said...

good one

Rj said...

ಚತುರ ವಿಡಂಬನೆ ಭಟ್ರೇ..
ಚೆನ್ನಾಗಿದೆ.
-Rj

vasanth kumar said...

ನಾಯಿಗಳಿಗೆ ಹೀಗೆ ಅವಮಾನ ಮಾಡಿದರೆ ಹೇಗೆ?
ಪಾಪ :-)

Thirumala Raya Halemane said...

idarallina poetic imagination bahaLa chennaagide. indina saamaajika paristhithiyannu, halavara guNa naDathe gaLige, kannaDi thOrisi bhaava chithravannu sulabhadalli manadattaaguvanthe thOrisiddeeri, very intelligent and effective creation. mahaa kaviyaaguva prathibhe nimmalli aDagide. keep it up. all the best.