Thursday, January 23, 2014

ಸೀತಾ-ರಾಮ

ಜನಕನಾ ಪುರದೊಳಗೆ ಮಣ್ಣಣುಗಿ ಸಂಜೆಯೊಳು
ಉದ್ಯಾನದೊಳು ಬಂದು ನಿಂತಳಂತೆ;
ಊರ್ಮಿಳೆಯ ಕೈಪಿಡಿದು ಸಣ್ಣ ತೊರೆ ಹರಿವಲ್ಲಿ
ನೀರ್ಗಣ್ಣು ಚಂಚಲತೆ ಅವಳದಂತೆ!

ದೂರದಲಿ ಕಂಡದ್ದು ಬಾನುದ್ದ ರವಿಯಂದು
ಹತ್ತಿರದಿ ರವಿಕುಲದ ರಾಮನಂತೆ
ನಾಚಿಕೆಯ ಕೆಂಪಿಗೂ ಸಂಜೆ ಬಾನಂಗಳಕು
ವ್ಯತ್ಯಾಸವೇನೆಂದು ತಿಳಿಯದಂತೆ!

ಕಲ್ಲಾಗು ಶಿವಧನುವು ದಶಶಿರಗೆ ನಾಳೆಯೊಳ್
ಮಲ್ಲಿಗೆಯ ತೆರನಾಗು ರಾಮನಿಂಗೆ
ರಾಮಚಂದ್ರನ ಕನಸು ಲೋಪವಾಗದೆ ಇರಲಿ
ಬೇಡಿದಳು ಶಿವೆಯಲ್ಲಿ ಹರಿಸಿ ಗಂಗೆ!

ಲಂಕೆಗೆಳಸುವಳಲ್ಲ ಕೋಸಲೆಯ ಸೊಸೆ ತಾನು
ಕನಸು ನನಸಾಯಿತದೋ ಬೆಳಗಿನಲ್ಲಿ!
ಕೋಸಲಕೆ ಬಂದಿತೋ ಸಣ್ಣ ಮಲ್ಲಿಗೆ ಬಳ್ಳಿ
ಅರಳಿ ತುಂಬಿತು ಗಂಧ ಸೀತೆಯಲ್ಲಿ!

~
ವಿಷಕುಡಿದರೂ ತಾನು ಪೊಸದಾಗಿ ಮೈವೆತ್ತವನ
ಹೆಸರುಳ್ಳ ಸತ್ಕವಿಗೆ ಅರ್ಪಣೆ. 

7 comments:

Swarna said...

ಸುಂದರ ಕವಿತೆ.
"ದೂರದಲಿ ಕಂಡದ್ದು ಬಾನುದ್ದ ರವಿಯಂದು
ಹತ್ತಿರದಿ ರವಿಕುಲದ ರಾಮನಂತೆ
ನಾಚಿಕೆಯ ಕೆಂಪಿಗೂ ಸಂಜೆ ಬಾನಂಗಳಕು
ವ್ಯತ್ಯಾಸವೇನೆಂದು ತಿಳಿಯದಂತೆ!”
ತುಂಬಾ ಇಷ್ಟ ಆಯ್ತು

sunaath said...

ಸತ್ಕವಿಗೆ ನನ್ನ ನಮನ!

Badarinath Palavalli said...

ನಿಮ್ಮ ಅಧ್ಯಯನ ಆಸಕ್ತಿಯಿಂದ ಇಂತಹ ಮೇರು ಕವನಗಳು ಇನ್ನಷ್‍ಟು ಮೂಡಿಬರಲಿ.

Unknown said...

ಆಹಾ ಹೀಗೇ ರಾಮಾಯಣವನ್ನೂ ಬಣ್ಣಿಸಿ ಬರೀರಿ ಓದುತ್ತಾನೆ ಇರ್ತೀನಿ ನಾನು ದಯವಿಟ್ಟು.... ಓದಲು ಕೂತರೆ ಮನಸು ಮುದನಿಡುವುದು ನಿಮ್ಮ ಪದ ಜೋಡನೆ.. ಪಾಂಡಿತ್ಯಕ್ಕೊಂದು ಸಲಾಮ್ ಇಸ್ಟೊಂದು ವಿಷಯವ ಚನ್ದವಾಗಿ ಬನ್ನಿಸಿದ್ದಕ್ಕೆ

ಚಿನ್ಮಯ ಭಟ್ said...

"ನಾಚಿಕೆಯ ಕೆಂಪಿಗೂ ಸಂಜೆ ಬಾನಂಗಳಕು
ವ್ಯತ್ಯಾಸವೇನೆಂದು ತಿಳಿಯದಂತೆ!"

ಛಂದ...

Sandhya Bhat said...

ಈ ಹಾಡಿಗೆ ರಾಗ ಹಾಕಿದ್ದೇನೆ ಕಿರಣ... ಯಾವಾಗಲಾದರೂ ಕೇಳಿಸುತ್ತೇನೆ...

Sandhya Bhat said...

ಈ ಹಾಡಿಗೆ ರಾಗ ಹಾಕಿದ್ದೇನೆ ಕಿರಣ... ಯಾವಾಗಲಾದರೂ ಕೇಳಿಸುತ್ತೇನೆ...