Tuesday, December 21, 2010

ಬಾಲಿಶ ಕವನಗಳು !! 2

ನಿನ್ನ ನೆನಪದು ಬಂದು ಮಂದಹಾಸದಿ ಮಿಂದು
ತೆರಳುವುದು ತಾವರೆಯ ತೇರಿನಲ್ಲಿ
ಸವಿಗನಸು ನೆನಪಲ್ಲಿ ಸಾಗರವೇ ಕಾಣುವುದು
ಮರೆಯುವುದು ನಸುಬೆಳಗ ಜಾವದಲ್ಲಿ !!

ಮೇಲೆ ಚಿಮ್ಮುವ ಮುಗಿಲು ಕಾಣದಿಹ ನಭದಾಚೆ
ಮೂಡಿಸಿದೆ ಈ ಕಿರಣ ಹೊಳೆವ ಬಿಲ್ಲು
ಹಾಡಿಸಿದೆ ಹಕ್ಕಿಗಳ ಕೊರಳಿಗಿ೦ಪಿನ ಗಾನ
ತೂಗಿಸಿದೆ ಮರ ಮರದ ಹೂವು ಗೆಲ್ಲು

ಮುನಿವ ಬಿಸಿಲಿನ ಜಳಕೆ ಆರಿ ಮುತ್ತಿನ ಮಂಜು
ಹೀರಿ ಸಾಗಿದೆ ನನ್ನ ಪ್ರೀತಿ ನುಡಿಯ
ಮರಳಿ ಹೂ ಅರಳಿದೆ ನೀ ನೆಟ್ಟ ಗಿಡದಲ್ಲಿ
ಸಿಂಗರಿಸುತಿಹುದಿಂದು ನಿನ್ನ ಮುಡಿಯ

ಹೂವು ಅರಳುವ ಮುನ್ನ ಚಿವುಟದಿರು ಮೊಗ್ಗನ್ನ
ಪ್ರೀತಿ ಗಂಧವ ಚೆಲ್ಲಿ ಬೆಳೆಸು
ಹೂವಿನೆದೆ ಕಾಯಾಗಿ ಆಗಲದು ಸಿಹಿಮಾಗಿ
ಒಲವು ಗೆಲ್ಲಲಿ ಹಾಡಿ ಹರಸು 

೦೧/೦೩/೨೦೦೫

ಬಾಲಿಶ ಕವನಗಳು !! 1

ಅಂದೆಂದೋ ನೀ ಕೊಟ್ಟ ಮಾತು ಮುದ್ರಿಕೆಯಂತೆ
ಅನುರಣಿತವೀ ನನ್ನ ಎದೆಯ ಒಳಗೆ
ನಿನ್ನ ಪ್ರೇಮದ ಮಾತು ಕಾಯುವುದು ನಾನೀಗ
ಬಾರೆಯಾ ನೀನೀಗ ನನ್ನ ಬಳಿಗೆ

ಎಲ್ಲ ಜೀವದ ಭಾಷೆ ಪ್ರೀತಿಯೇ ಧರೆಯೊಳಗೆ
ಕಲ್ಲಂತೆ ಒಲವಿರದ ಎದೆಗೋಪುರ !
ನೀನೆ ನನ್ನೊಲ ಜೀವ ನಿನ್ನುಸಿರೆ ನನ್ನುಸಿರು
ಈಗಿಲ್ಲ ನೀನಿರದೆ ಬಲು ಬೇಸರ

ನಿನ್ನ ಒದನಾಟವನು ಕಾತರಿಸುತಿಹೆನಿಂದು
ನಿನ್ನ ನೆನಪಿನ ಮಳೆಯ ಧಾರೆಯಲ್ಲಿ
ನೆನಪಿರಲಿ ನಿನಗೆಂದೂ ಈ ಪ್ರೀತಿ ನುಡಿಯೆಲ್ಲ
ಕಣ್ಣಂಚು ಮುತ್ತುಗಳೇ ಮಾಲೆಯಿಲ್ಲಿ

ಎಂದೋ ಅರಳಿದ ಹೂವು ಬಾಡದಿದೆ ಎದೆಯಲ್ಲಿ 
ಅಳುವಿನಲ್ಲಿ ನಗು ಹೊಮ್ಮಿಸೋ ಪ್ರೇಮವೇ
ನಗುವಿನೊಳನಗುವಾಗಿ ಹೂವಿನೊಳಮನಸಾಗಿ
ನೀ ಬಾರೋ ಅಳಿಸದಿರು ಓ ಜೀವವೇ

೨೮ / ೦೨ / 2005

Wednesday, July 14, 2010

ಹೊಸ ಹಾಡು

ಇಂದೇ ಕಂಡೆ ಕನ್ನಡಿಯಲಿ ನಾಳಿನಾ ಮುಖ
ಎಂದೂ ತೊರೆದು ಹೋಗದಂತ ತೀರದಾ ದುಃಖ
ಕೃಷ್ಣನೊಲುಮೆ ಕಾದಂತೆ ಚೆಲುವೆ ರಾಧಿಕ
ನಾನೂ ಕಾಯುತಿರುವೆ ನಲಿವಿನಮೃಥದಾ ಸುಖ !!

Monday, July 12, 2010

ನೀನು ದೂರಾದಾಗ ನಾನೇನು ಅಳುತಿಲ್ಲ !!

ನೀನು ದೂರಾದಾಗ ನಾನೇನು ಅಳುತಿಲ್ಲ
ಹೆಪ್ಪುಗಟ್ಟಿದೆಯಿಲ್ಲಿ ಕಣ್ಣ ನೀರು 
ಮತ್ತೆ ಜಾರಿದೆ ಧರೆಗೆ ನಳನಳಿಸುತಿಹ ಮರವು 
ಕಡಿದೆಯಲ್ಲೇ ಅದರ ತಾಯಿಬೇರು 


ಅಂದು ನೀ ಬಂದಾಗ ಬಂಧಗಳ ಬೆಸೆದಾಗ 
ನನ್ನ ನೋವಿನ ಗಿಡಕೆ ಪ್ರೀತಿ ಹೂವು 
ಎಲ್ಲೋ ಮರುಗಿದ ದನಿಯು ನಿನ್ನ ಸಾಮೀಪ್ಯದಲಿ 
ಗಾನವಾಯಿತು ಮರೆತು ಎಲ್ಲ ನೋವು 


ಸಾಯಲಾರದೆ ನೆನಪು ; ಮತ್ತೆ ಮರುಕಳಿಸುವುದು 
ಕಾಡುವುದು ಎಲ್ಲ ಕಡೆ ನಿನ್ನ ನೆನೆದು 
ಮರೆಯಲಾರದೆ ನಿನ್ನ ಸೇರಲಾರದೆ ನಿನ್ನ 
ಹೇಳಲಾರೆನು ಮನಕೆ ; ಮಾತೆ ಬರದು 


ನೀ ಕೊಟ್ಟ ಸ್ನೇಹವನು ಇಟ್ಟಿರುವೆ ಎದೆಯೊಳಗೆ 
ಕಾಯುತಿಹೆ ನಾನದನು ಹಿಂದೆ ಕೊಡಲು 
ನೀನದನು ಪಡೆದುಕೋ ಮತ್ತೆ ಹೋದರು ಸರಿಯೇ 
ಸ್ವೀಕರಿಸಲೇಬೇಕು ; ನಾನು ಮತ್ತೆ ನಗಲು 


ಕೆ ಈಶ್ವರ ಕಿರಣ 
೧೬.೦೮.೨೦೦೫ 

Wednesday, May 26, 2010

ನಾನೊಂದು ಮುತ್ತಲ್ಲ ಬರಿ ಹೊಳೆವ ಕಲ್ಲು !


ನಾನೊಂದು ಮುತ್ತಲ್ಲ  ಬರಿ ಹೊಳೆವ ಕಲ್ಲು !

ಸಾವಿರ ಸಾವಿರ ಮುತ್ತು ಸಿಗುವುದು ಸಾಗರದಾಳದಲ್ಲಿ
ನನ್ನೇ ಏಕೆ ಆರಿಸಿದೆ ಮೋಹದ ಆತುರದಲ್ಲಿ ?

ಹೊಸ ಮುತ್ತ ಹುಡುಕಿನ್ನು ಹಳೆ ಕಲ್ಲ ಕಳೆದು
ಆಗದೀ ಸಾಗರವು ಎಂದಿಗೂ ಬರಿದು

ಹುಡುಕಾಡಿ ದಣಿದರೇ ಬಾ ಎನ್ನ ಕಡೆಗೆ
ಕಲ್ಲಾಗಿ ಇರಲಾರೆ ನಾ ಕೊನೆಯವರೆಗೆ

Ishwara Bhat K
Date : 20-05-2010, Thursday