Friday, December 31, 2010

ಬಾಲಿಶ ಕವನಗಳು !! 12 ಒಂದು ನೀರವ ಸಂಜೆ

ಒಂದು ನೀರವ ಸಂಜೆ
ಮೋಡ ಚದುರಿದ ಗಗನ
ಕತ್ತಲೆಯ ಛಾಯೆಯಿದೆ ಬೆಳಕ ಹಿಂದೆ
ಮರದ ಗೂಡುಗಳಿಂದ
ಹಕ್ಕಿಗಳ ಉಲಿಯಿಲ್ಲ
ಬೇಸರದ ಭಾವವಿದೆ ಮನದ ಮುಂದೆ
 
ಎಲ್ಲೋ ಮಿಂಚಿನ ಬೆಳಕು
ಎಲ್ಲೋ ಮನಸಿನ ಅಳುಕು
ಬಾರನೇ ಶಶಿ ಇರುಳು ಸಂಜೆ ದೂಡಿ
ಕಾಯುತಿಹೆ ಪ್ರತಿ ದಿನವು
ನೆನಪೆಂಬ ಜಿನಿ ಮಳೆಗೆ
ಮನಸಿನೊಳ ಬಯಕೆ ರಾಡಿ
 
ಹಳೆಯ ಪುಟಗಳ ನಡುವೆ
ಹೊಸದೊಂದು ಅಧ್ಯಾಯ
ಈಗ ನಾ ಬರೆಯಲಾರೆ
ನಿನಗಾಗಿ ಹಂಬಲಿಸೋ
ಈ ಹುಚ್ಚು ಮನಸಿಗೆ
ನಾ ಬೇಡಿ ತೊಡಿಸಲಾರೆ
 
 
ISHWARA BHAT K
08.12.2004

ನನ್ನ ಹಾಡು ..

ಅಚಾನಕ್ಕಾಗಿ ಭೂಮಿಗೆ ಬಿದ್ದ ಬೀಜ..
ಪ್ರೀತಿ ತುಂಬಿದ ಕಪ್ಪು ಮಣ್ಣಿನ ಕಂಪು
ರೋಷ ತುಂಬಿದ ಮುಗಿಲಿಗೆ ತಂಪು ಗಾಳಿಯ ತೀಡಿ 
ಬರಸೆಳೆದು, ನನ್ನನ್ನು ಇಲ್ಲಿಯೇ ಬಚ್ಚಿಟ್ಟಿತು.
ನಾನಾದೆ ಮೂಕ , ಪ್ರೀತಿಯಪ್ಪುಗೆಗೆ ಸಿಲುಕಿ 
ಆ ಮಣ್ಣ ಕಂಪಲ್ಲಿ ಆ ಮುಗಿಲ ಕೆಂಪಿಂದ
ಉಸಿರೊಡೆದೆನು, ಹಾಗೆಯೇ ಹಸಿರೊಡೆದೆನು.

ಅದೆ ಮಣ್ಣು ಅದೆ ಮುಗಿಲು ಮತ್ತೆಯೂ ನನ್ನನ್ನು
ಪ್ರೀತಿಸಿತು ಬದುಕಿಸಿತು ಬೆಳೆಯಲಂತೆ.
ಬಾಗಿದರೆ ಸಣ್ಣ ಕೋಲೆತ್ತಿ ನಿಲಿಸಿದಳು 
ಪ್ರೀತಿ ತುಂಬಿದ ಗೀತೆ ಮತ್ತೆ ಮತ್ತೆ .


ಬಂದ ಬೇರುಗಳೆಲ್ಲ ಅಮ್ಮನಾ ಎದೆಯೊಳಗೆ 
ಆಳದಾಳಕೆ ಇಳಿದು ಸೇರಿಬಿಟ್ಟೆ .
ಕಾಂಡ ಬಲಿಯಿತು , ಹಳೆಯ ಕೊಳೆಗಳ ತೊಳೆದೆ 
ಮತ್ತೆ ಮುಗಿಲಿನ ಕಡೆಗೆ ನೋಟವಿಟ್ಟೆ.


ಬೇರು ಮಣ್ಣಲೇ ಬಿಟ್ಟು ಮೇಲೇಳುತಿಹೆ ನೋಡು 
ಅಲ್ಲೇ ಇರಬೇಕೆನ್ನ ಮುಂದಿನ ಮರೆ.
ಗಾಳಿ ಹೊಯ್ದಾಡಿದರೆ ನಾನು ಹೊಯ್ದಾಡುವೆನು
ಕೇಳಲಾರೆನು ಮತ್ತೆ ಕೋಲಿನ ಸೆರೆ .


ಮಣ್ಣು ಬಯಸಿತು ಪ್ರೀತಿ ಮುಗಿಲಂತೆ ಮಳೆಯಂತೆ 
ಈ ಮರವು ನನಗಿನ್ನು ನೆರಳಾಗಲಿ.
ನನ್ನ ಸತ್ವದ ಫಲವ ಬೇರುಗಳ ಮೂಲಕವೇ
ಹೀರಿದುದು ಸಾಕಿನ್ನು ಕೊನೆಯಾಗಲಿ. 


ನನಗೋ ಬೆಳೆಯುವ ಆಸೆ ಮಣ್ಣೇನು ಮುಗಿಲೇನು 
ನಾನು ಬೆಳೆಯುವೆ ನಿಮ್ಮ ಹೀರಿಕೊಂಡೇ.
ನನಗೊಂದು ಕನಸುಂಟು ಆ ಮುಗಿಲ ಧರೆಗೆಳೆದು 
ಇರಿಸುವೇನು ಇಲ್ಲಿಯೇ ಓಡದಂತೆ.


ನನಗೀಗ ಹೊಸ ಹುರುಪು ತುಂಬೆಲ್ಲ ಹೊಸ ಚಿಗುರು 
ಮತ್ತೆಯೋ ನಾಳೆಯೋ ಹೊಸ ಹೂಗಳು .
ಕಾಯಿಗಳ ಹಣ್ಣುಗಳ ಉದುರಿಸುವೆ ನಿನಗಾಗಿ 
ನೀ ಬೆಳೆಸು, ಮತ್ತೆ ಕರೆ ಪ್ರೀತಿ ಮುಗಿಲು .


ನೀ ಕೊಟ್ಟೆ ನಾ ಬೆಳೆದೆ, ನಾ ಕೊಡದೆ ನೀ ಬೆಳೆವೆ 
ನಿನಗೇನೂ ಹೊರೆಯಲ್ಲ ಈ ನೊಗಗಳು
ಮತ್ತೆ ಚಕ್ರವ ತಿರುಗಿ, ಮತ್ತೆ ಪ್ರೀತಿಗೆ ಕರಗಿ 
ನಾ ಬಾರೆ ನಿನ್ನಲ್ಲಿ ಮಗುವಾಗಲು ..
ನಾ ಬಾರೆ ನಿನ್ನಲ್ಲಿ ಮಗುವಾಗಲು ..     


ISHWARA BHAT K
18 - 06- 2007

ಬಾಲಿಶ ಕವನಗಳು !! 11 ಭಗ್ನ ಪ್ರೇಮಿಗೆ !!

ಅವಳೊಲವು ಕಡಲಲ್ಲ ಬರೆ ಹರಿವ ನೀರು
ಮರೆತು ಬಿಡು ನೀನೆಳೆದ ಪ್ರೇಮದಾ ತೇರು
 
ಮಾವು ಪ್ರೀತಿಯ ಕರೆಗೆ ಬೇವು ಬೆರಸಿದೆ ವಿರಸ
ಹರಿಸಿದೆಯ ಕಣ್ಣೀರ ಕೋಡಿ ಮಳೆಯ .
ಇಲ್ಲಿ ಒಲವೀಗಿಲ್ಲ, ಮರೆಸುವುದು ಸಿಹಿ ಬೆಲ್ಲ
ಏಕೆ ಕಾಯುವೆ ನೀನು ಎಲ್ಲ ಸಮಯ ?

ಮನಸು ಕನ್ನಡಿ ಹಾಗೆ, ಒಡೆದು ಹೋಗಿದೆ ಬಿಂಬ
ಯಾಕಿಟ್ಟೆ ಎದೆಗೂಡ ಚಿಪ್ಪಿನೊಳಗೆ ?
ನಿನ್ನೊಲವ ಹಾದಿಯನು ಅವಳೆ ಮರೆತಿಹ ಮೇಲೆ
ಹಿತವಿಹುದೆ ಕಾಯುವಾ ಪ್ರೀತಿಯೊಳಗೆ ?

ಹಗಲು ಅರಳಿದ ಹೂವು ಅದೆ ಸಂಜೆ ಬಾಡುವುದು
ಪ್ರೇಮ ಅಮರವೆ ಹೇಳು ಬಾಳಿನಲ್ಲಿ ?
ನಿನ್ನ ನಲಿವನೆ ಕಿತ್ತು ನೋವ ಮುಳ್ಳಿರಿಸಿದ
ಆ ಪ್ರೇಮ ಮರೆತುಬಿಡು ನೋವಿನಲ್ಲಿ .

ಹರಿವ ನೀರದು ಮತ್ತೆ ಸಾಗರವ ಸೇರುವುದು
ಪ್ರೀತಿ ಬದುಕಿನ ಬದುಕು , ಪ್ರೀತಿಯೊಂದೇ.
ನಿನ್ನ ಕಾಯುವ ಕನಸು ವ್ಯರ್ಥವಾಗದೆ ಇರಲಿ
ಫಲಿಸಲಿ ನನ್ನೆದೆಯ ಹರಕೆಯಿಂದೇ .


ISHWARA BHAT K
೩೧-೦೧-೨೦೦೫

Thursday, December 30, 2010

ಬಾಲಿಶ ಕವನಗಳು !! 10 ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ
ಸುತ್ತುವರಿಯುತ ಅವಳ ಕಾಣಿಸುವುದು
ಅವಳೆದುರು ಬಂದಾಗ ಮಾತಿರದೆ ಮೌನದಲಿ
ಕಣ್ಣ ನೀಲಿಯೇ ನನ್ನ ಮೀಯಿಸುವುದು


ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ
ಮರೆತು ಹೋಗುವುದೆನ್ನ ಕನಸ ಬುತ್ತಿ
ಬೇಸರವೇ ಜಾರುವುದು ಅವಳ ಸಾಮೀಪ್ಯದಲಿ
ಮತ್ತೆ ಬರುವುದು ಕನಸು ಸುತ್ತಿ ಸುತ್ತಿ


ನಿಜವಾದ ಚೆಲುವನ್ನು ಹೊಗಳಲಾರದೆ ನಾನು
ಮರುಗುವೆನು ಅವಳಿರುವ ಎಲ್ಲಾ ಕ್ಷಣವು
ಜಲದ ನಾದದ ದನಿಯು ನನ್ನೆದುರು ಕುಣಿವಾಗ
ಎಲ್ಲಿಯೋ ಅಡಗುವುದು ನನ್ನ ಸ್ವರವು


ಹಾದಿಯಲಿ ನಡೆವಾಗ ಅವಳ ಹೆಜ್ಜೆಯ ಹುಡುಕಿ
ಹೋಗುವುದು ಅವಳಿರದ ವೇಳೆಯಲ್ಲಿ
ಜೊತೆಯಲ್ಲಿ ಇರುವಾಗ ಹೇಗೆ ನಡೆಯಲಿ ನಾನು
ಹಿಂದೆ ನಡೆವೆನು ಸೋತ ಭಾವದಲ್ಲಿ 


Ishwara Bhat (Kirana)

ಬಾಲಿಶ ಕವನಗಳು !! 9 ನಾನು ಮತ್ತು ಗಿಳಿ !!


ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ
ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ 
ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು 
ಈ ಹಕ್ಕಿ ಎಸ್ಟೊಂದು ಚೆನ್ನ
ಪ್ರಕೃತಿದೇವಿಗೆ ನನ್ನದೊಂದು ನಮನ


ಅಷ್ಟು ಸ್ನೇಹಿಯೇ ನಾನು ?
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕಿ
ಹೆದರದೇ ಕುಳಿತಿದೆಯಲ್ಲ
ಸವಿಯ ಭಾವವ ತುಂಬಿ ಹರಸುತ್ತಿದ್ದೇನೆ !!

                       ೨
ಸರಿಯಾಗಿ ನೋಡಿದರೆ 
ಸಣ್ಣ ಮೆಣಸಿನ ಬೀಜ ಕೊಕ್ಕಂಚಿನಲ್ಲಿ 
ನಾನು ಸಾಕಿದ ಗಿಡದ್ದೇ ಇರಬೇಕು .!
ಹಾಳು ಹಕ್ಕಿ ! ಬಿಡಲೇಬಾರದು ಇದನು
ಕೈಗೆ ಸಿಕ್ಕಿದ್ದನ್ನೆಸೆದೆ .

ಹಾರಿಹೋಯಿತೆ ಗಿಳಿ ಛೆ !?
ಸರಿಯಾಗಿ ಬೀಳಬೇಕಿತ್ತು ಪೆಟ್ಟು 
ಇನ್ನೊಮ್ಮೆ ಬರಲಿ ಎಂದು 
ಕಲ್ಲು ಕೈಯೊಳಗಿಟ್ಟು ಕಾಯುತ್ತಿದ್ದೇನೆ !!


ISHWARA BHAT K
೨೦-೦೨-೨೦೦೫