Friday, December 31, 2010

ಬಾಲಿಶ ಕವನಗಳು !! 11 ಭಗ್ನ ಪ್ರೇಮಿಗೆ !!

ಅವಳೊಲವು ಕಡಲಲ್ಲ ಬರೆ ಹರಿವ ನೀರು
ಮರೆತು ಬಿಡು ನೀನೆಳೆದ ಪ್ರೇಮದಾ ತೇರು
 
ಮಾವು ಪ್ರೀತಿಯ ಕರೆಗೆ ಬೇವು ಬೆರಸಿದೆ ವಿರಸ
ಹರಿಸಿದೆಯ ಕಣ್ಣೀರ ಕೋಡಿ ಮಳೆಯ .
ಇಲ್ಲಿ ಒಲವೀಗಿಲ್ಲ, ಮರೆಸುವುದು ಸಿಹಿ ಬೆಲ್ಲ
ಏಕೆ ಕಾಯುವೆ ನೀನು ಎಲ್ಲ ಸಮಯ ?

ಮನಸು ಕನ್ನಡಿ ಹಾಗೆ, ಒಡೆದು ಹೋಗಿದೆ ಬಿಂಬ
ಯಾಕಿಟ್ಟೆ ಎದೆಗೂಡ ಚಿಪ್ಪಿನೊಳಗೆ ?
ನಿನ್ನೊಲವ ಹಾದಿಯನು ಅವಳೆ ಮರೆತಿಹ ಮೇಲೆ
ಹಿತವಿಹುದೆ ಕಾಯುವಾ ಪ್ರೀತಿಯೊಳಗೆ ?

ಹಗಲು ಅರಳಿದ ಹೂವು ಅದೆ ಸಂಜೆ ಬಾಡುವುದು
ಪ್ರೇಮ ಅಮರವೆ ಹೇಳು ಬಾಳಿನಲ್ಲಿ ?
ನಿನ್ನ ನಲಿವನೆ ಕಿತ್ತು ನೋವ ಮುಳ್ಳಿರಿಸಿದ
ಆ ಪ್ರೇಮ ಮರೆತುಬಿಡು ನೋವಿನಲ್ಲಿ .

ಹರಿವ ನೀರದು ಮತ್ತೆ ಸಾಗರವ ಸೇರುವುದು
ಪ್ರೀತಿ ಬದುಕಿನ ಬದುಕು , ಪ್ರೀತಿಯೊಂದೇ.
ನಿನ್ನ ಕಾಯುವ ಕನಸು ವ್ಯರ್ಥವಾಗದೆ ಇರಲಿ
ಫಲಿಸಲಿ ನನ್ನೆದೆಯ ಹರಕೆಯಿಂದೇ .


ISHWARA BHAT K
೩೧-೦೧-೨೦೦೫

2 comments:

ಪ್ರತಾಪ್ ಬ್ರಹ್ಮಾವರ್ said...

ಬಾಲಿಶ ಕವಿತೆಯೊಳಗೂ , ನೈಜ ವಿಷಯಗಳು ಕಿರಣ್ ಸರ್... ಸುಂದರ ಸಾಲುಗಳು , ಹಿತವಾದ ಅನುಭವಾ :)

Badarinath Palavalli said...

ಇವು ಬಾಲಿಶ ಕವನಗಳಲ್ಲ ಪ್ರೇಮ ಬಾಲಕನ ಕವನಗಳು.

ವಸ್ತು ರೀತ್ಯಾ, ಭಾವ ಸಂಚಯದಲ್ಲೂ, ಲಯ ಸಾಹಿತ್ಯದಲ್ಲೂ ಉತ್ಕೃಷ್ಟ ಕವನ.