Friday, December 31, 2010

ನನ್ನ ಹಾಡು ..

ಅಚಾನಕ್ಕಾಗಿ ಭೂಮಿಗೆ ಬಿದ್ದ ಬೀಜ..
ಪ್ರೀತಿ ತುಂಬಿದ ಕಪ್ಪು ಮಣ್ಣಿನ ಕಂಪು
ರೋಷ ತುಂಬಿದ ಮುಗಿಲಿಗೆ ತಂಪು ಗಾಳಿಯ ತೀಡಿ 
ಬರಸೆಳೆದು, ನನ್ನನ್ನು ಇಲ್ಲಿಯೇ ಬಚ್ಚಿಟ್ಟಿತು.
ನಾನಾದೆ ಮೂಕ , ಪ್ರೀತಿಯಪ್ಪುಗೆಗೆ ಸಿಲುಕಿ 
ಆ ಮಣ್ಣ ಕಂಪಲ್ಲಿ ಆ ಮುಗಿಲ ಕೆಂಪಿಂದ
ಉಸಿರೊಡೆದೆನು, ಹಾಗೆಯೇ ಹಸಿರೊಡೆದೆನು.

ಅದೆ ಮಣ್ಣು ಅದೆ ಮುಗಿಲು ಮತ್ತೆಯೂ ನನ್ನನ್ನು
ಪ್ರೀತಿಸಿತು ಬದುಕಿಸಿತು ಬೆಳೆಯಲಂತೆ.
ಬಾಗಿದರೆ ಸಣ್ಣ ಕೋಲೆತ್ತಿ ನಿಲಿಸಿದಳು 
ಪ್ರೀತಿ ತುಂಬಿದ ಗೀತೆ ಮತ್ತೆ ಮತ್ತೆ .


ಬಂದ ಬೇರುಗಳೆಲ್ಲ ಅಮ್ಮನಾ ಎದೆಯೊಳಗೆ 
ಆಳದಾಳಕೆ ಇಳಿದು ಸೇರಿಬಿಟ್ಟೆ .
ಕಾಂಡ ಬಲಿಯಿತು , ಹಳೆಯ ಕೊಳೆಗಳ ತೊಳೆದೆ 
ಮತ್ತೆ ಮುಗಿಲಿನ ಕಡೆಗೆ ನೋಟವಿಟ್ಟೆ.


ಬೇರು ಮಣ್ಣಲೇ ಬಿಟ್ಟು ಮೇಲೇಳುತಿಹೆ ನೋಡು 
ಅಲ್ಲೇ ಇರಬೇಕೆನ್ನ ಮುಂದಿನ ಮರೆ.
ಗಾಳಿ ಹೊಯ್ದಾಡಿದರೆ ನಾನು ಹೊಯ್ದಾಡುವೆನು
ಕೇಳಲಾರೆನು ಮತ್ತೆ ಕೋಲಿನ ಸೆರೆ .


ಮಣ್ಣು ಬಯಸಿತು ಪ್ರೀತಿ ಮುಗಿಲಂತೆ ಮಳೆಯಂತೆ 
ಈ ಮರವು ನನಗಿನ್ನು ನೆರಳಾಗಲಿ.
ನನ್ನ ಸತ್ವದ ಫಲವ ಬೇರುಗಳ ಮೂಲಕವೇ
ಹೀರಿದುದು ಸಾಕಿನ್ನು ಕೊನೆಯಾಗಲಿ. 


ನನಗೋ ಬೆಳೆಯುವ ಆಸೆ ಮಣ್ಣೇನು ಮುಗಿಲೇನು 
ನಾನು ಬೆಳೆಯುವೆ ನಿಮ್ಮ ಹೀರಿಕೊಂಡೇ.
ನನಗೊಂದು ಕನಸುಂಟು ಆ ಮುಗಿಲ ಧರೆಗೆಳೆದು 
ಇರಿಸುವೇನು ಇಲ್ಲಿಯೇ ಓಡದಂತೆ.


ನನಗೀಗ ಹೊಸ ಹುರುಪು ತುಂಬೆಲ್ಲ ಹೊಸ ಚಿಗುರು 
ಮತ್ತೆಯೋ ನಾಳೆಯೋ ಹೊಸ ಹೂಗಳು .
ಕಾಯಿಗಳ ಹಣ್ಣುಗಳ ಉದುರಿಸುವೆ ನಿನಗಾಗಿ 
ನೀ ಬೆಳೆಸು, ಮತ್ತೆ ಕರೆ ಪ್ರೀತಿ ಮುಗಿಲು .


ನೀ ಕೊಟ್ಟೆ ನಾ ಬೆಳೆದೆ, ನಾ ಕೊಡದೆ ನೀ ಬೆಳೆವೆ 
ನಿನಗೇನೂ ಹೊರೆಯಲ್ಲ ಈ ನೊಗಗಳು
ಮತ್ತೆ ಚಕ್ರವ ತಿರುಗಿ, ಮತ್ತೆ ಪ್ರೀತಿಗೆ ಕರಗಿ 
ನಾ ಬಾರೆ ನಿನ್ನಲ್ಲಿ ಮಗುವಾಗಲು ..
ನಾ ಬಾರೆ ನಿನ್ನಲ್ಲಿ ಮಗುವಾಗಲು ..     


ISHWARA BHAT K
18 - 06- 2007

2 comments:

kavitha said...

Padavillada kavite....
Koneyillada kate....

Badarinath Palavalli said...

ಇತ್ತೀಚೆಗೆ ನಾನು ಭಟ್ಟರಲ್ಲಿ ಓದಿಕೊಂಡ ಕವನಗಳಲೆಲ್ಲ ನನ್ನನ್ನು ಹಿಡಿದು ಹಾಕಿದ ಕವನ ಈ ನನ್ನ ಹಾಡು.

ಭೂಮಿ ಮತ್ತು ಮರ ಕೊಟ್ಟು ಪಡೆದುಕೊಳ್ಳುವ ಸಚಿತ್ರ ವರ್ಣನೆ ಇಲ್ಲಿದೆ.

ನೀ ಕೊಟ್ಟೆ ನಾ ಬೆಳೆದೆ
ನಾ ಕೊಡದೆ ನೀ ಬೆಳೆದೆ

ಎನ್ನುವ ಭಾವದಲ್ಲೇ ಅರ್ಪಣೆ ಮತ್ತು ನಿಸ್ವಾರ್ಥತೆಯು ಕಾಣಬಹುದು.

ಉತ್ತಮ ಕ್ವನ ಮೆಲಕು ಹಾಕುವ ಅವಕಾಶಕೊಟ್ಟ ನಿಮಗೆ ಧನ್ಯವಾದ.