Wednesday, February 11, 2015

ಇನ್ಯಾವಳೂ ಅವಳಲ್ಲ.

ಮೆಲ್ಲ ನಕ್ಕಳು ಸಂಜೆ; ಕಾಲ್ದಾರಿಯಂಚಿನಲಿ
ನೋಡಿದಳೆ? ಕೆಣಕಿದಳೆ? ನನ್ನ ಹೀಗೆ
ಯಾವುದೋ ಧ್ಯಾನದಲಿ ಕಣ್ಣುಗಳು ಜೊತೆ ಸೇರಿ
ಅವಳ ಹೆಜ್ಜೆಯ ಹಿಡಿದು ಬೆಸೆವ ಬೇಗೆ.

ಇದುವರೆಗೆ ನಿಶ್ಚಲವು ಕೆಂಪು ಹೂವಿನ ಮರವು
ಅವಳ ನಗು ಕಂಡೊಡನೆ ಹೂವು ಚೆಲ್ಲಿ;
ಗಂಟಲೊಣಗಿದ ಹಕ್ಕಿ ಸುಮ್ಮನುಳಿಯುವುದೇನು
ನನ್ನ ಭ್ರಮೆಯೊಂದಿಗೇ ಹಾಡಿತಲ್ಲಿ.

ಹೂವ ಮಾರುವ ಅಜ್ಜಿ ಯಾವುದೋ ನೆನಪಿನಲಿ
ಕೊಡುವ ಮಲ್ಲಿಗೆಗೇನು ಗಂಧವಿರದೆ?
ಅವಳ ನಗುವಿನ ಹಿಂದೆ ನಾನು ಇರದಿರೆ ಸೋಲೆ?
ಪ್ರೀತಿ ನಗುವಲಿ ಬದುಕಿ ಬಾಳದಿಹುದೆ?

ಬಾಗಿಲನು ಅರೆತೆರೆದು ಮುಡಿಯ ಬೈತಲೆ ತೆಗೆದು
ನನ್ನವಳು ನನಗಾಗಿ ಕಾಯುತಿಹಳು.
ಮಲ್ಲಿಗೆಯ ಜೊತೆಯಿರುವ ತುಳಸಿ ಹೂ ನಗುತಲಿದೆ
ಅವಳ ಕನಸಲಿ ಹೀಗೆ ಬೆಳಕಿನಿರುಳು.

Sunday, February 8, 2015

ಪ್ರೇಮಪತ್ರ ಸಿಕ್ಕು!

ಕಾಲುದಾರಿಯ ನಾನು ಮರೆತು ಹೋಗುವನಲ್ಲ
ದಾರಿಯುದ್ಧಕು ನೋಡಿ ನಡೆಯುವವನು
ನಿನ್ನೆ ನಡೆಯುತಲಿರಲು ದಾರಿಯಲಿ ಕಂಡೆನಾ
ಮುದುಡಿದ್ದ ಕಾಗದದಿ ಪ್ರೀತಿಯನ್ನು

ಒಲವು ತುಂಬಿದ ಶಾಯಿ ಕುಶಲವನು ಕೇಳಿತ್ತು
ಕಳಕಳಿಯ ಕಾಳಜಿಯ ಗೇಯವಿತ್ತು
ಅವನದೊ ಅವಳದೋ ಎನುವ ಮಾತುಗಳಿರದೆ
ಎರಡು ಎದೆಗಳ ಮಾತು ಕನಸುತಿತ್ತು

ಅವನು ಅವಳಿಗೆ ಕೊಟ್ಟ ಅವಳು ಅವನಿಗೆ ಕೊಟ್ಟ
ಮಾತುಗಳ ಮುತ್ತುಗಳ ವಿವರದೊಳಗೆ
ಸಂಜೆಯಾಗಲು ಬರುವೆ ರಾತ್ರಿ ಕನಸಲಿ ಕರೆವೆ
ಪ್ರೇಮಸೌಭಾಗ್ಯವದು ಕಹಿಯೆ ಕೊನೆಗೆ?

ಪ್ರೀತಿ ಮುದುಡಿತು ಎಂದು ನಿಟ್ಟುಸಿರು ಬಿಡಲಾಗಿ
ನನ್ನವಳು ಕಂಡಳದೊ ದೂರದಲ್ಲಿ
ಹೆಸರು ಹೇಳದ ಪತ್ರ ಒಲವಿಗಾಗಿಯೆ ಮುಡಿಪು
ಕೊಟ್ಟೆನವಳಿಗೆ ನನ್ನ ಪ್ರೀತಿಯಲ್ಲಿ.

ಕಾಣೆಯಾಗಿದೆ : ಬಾಲ್ಯದ ಚಿತ್ರ.

ನನ್ನ ಬಾಲ್ಯದ ಚಿತ್ರ ಕಾಣೆಯಾಗಿದೆ
ಹುಡುಕಿಕೊಟ್ಟವರಿಗುಂಟು
ಪೆಪ್ಪರಮೆಂಟು.

ಮೀಸೆಯಿಲ್ಲದ ಮುಖವು,
ಬಿಳಿಯಿರದ ತಲೆಕಸವು
ಮೇದು ಕಪ್ಪಾಗಿರುವ ಹಲ್ಲುಕುಳಿಯು
ಜೇಬು ಹರಿದಿಹ ಚಡ್ಡಿ
ಅದಲು ಬದಲಿನ ಗುಂಡಿ
ಕಡ್ಡಿಮೀರಿದ ಹೊದಿಕೆ ಇರುವ ಕೊಡೆಯು

ಕವಚ ಕಳೆದಿಹ ಬಾಲು
ಬುಡವು ಸವೆದಿಹ ಬ್ಯಾಟು
ಜಾರುವುದಕೇ ಇರುವ ಪಾದರಕ್ಷೆ
ಓದದಿದ್ದರು ಬರೆವ
ಬರೆಯದಿದ್ದರು ಬೆಳೆವ
ಆ ಕತೆಯ ಈ ಕತೆಯ ಪಾಠ ಶಿಕ್ಷೆ!

ಬೇಸಿಗೆಯ ಆಟದಲಿ
ಗೇರು,ಮಾವನ ಹೊಸಕಿ
ತೆಂಗು ಕಂಗಿನ ಮರಕೆ ಹತ್ತಿ ಹಾರಿ;
ಯಾವುದೋ ಕಾಲಕ್ಕೆ
ಮರೆತು ಇಟ್ಟಿಹೆನೆಲ್ಲೋ
ನನ್ನ ಬಾಲ್ಯದ ಚಿತ್ರ ಹುಡುಕಿ ಕೊಡಿರಿ.

ಹೇಳಲೇನೇ ಸಖಿಯೇ..

ಹೇಳಲೇನೇ ಸಖಿಯೇ ಒಲವನು
ಹೇಳಲೇನೇ ಸಖಿಯೇ,

ಏನು ಹೇಳುವೆನೆಂದು ಕಾತರಗೊಂಡಿಲ್ಲ
ಹೇಳು ಎನುತ ನನ್ನ ಕಾಡುವುದಿಲ್ಲ
ಆತುರದಿಂದಲಿ ಹೇಳುವಾಸೆಗೆ ಬಂದೆ
ಕೇಳುವ ಕಿವಿಗಳು ಹತ್ತಿರ ಬಂದಿಲ್ಲ.

ಕೇಳುವಾಸೆಗೆ ನೀನು ಕಿವಿಯ ಹತ್ತಿರ ತರಲು
ನಿನ್ನೆಯ ತೆರದಂತೆ ಕಚ್ಚುವುದಿಲ್ಲ;
ಯಾರದೋ ಕತೆಹೇಳಿ ಯಾವುದೋ ಗೋಳುಗಳ
ಮುನಿಸು ಮಾತುಗಳಿಂದ ಚುಚ್ಚುವುದಿಲ್ಲ

ಎಷ್ಟಾದರೂ ದೂರ ಇರಬಾರದು ನೀನು
ಪಿಸುಮಾತು ಬಲುದೂರ ತಲುಪುವುದೇ?
ಹೇಳಲೇನೇ ನಿನಗೆ ಎನುವ ಮಾತುಗಳಲ್ಲಿ
ನನ್ನ ಪ್ರೀತಿಯ ಮಾತು ಕಾಣಿಸದೇ?

ಕನಸಿನ ಲೋಕ.

ಸಂಜೆಯಲಿ ಕಂಡು ಮಾತಿಂಗೆ ಸಿಕ್ಕಿ ಒಲವಾಯ್ತು ಎಂದುಕೊಂಡೆ
ಮರುದಿನದ ಬೆಳಗು ಕಾದಿತ್ತು ಬಿಸಿಲು ಮುದುಡಿತ್ತು ಮಲ್ಲೆದಂಡೆ
ಕಣ್ಣೀರ ಹನಿಯು ಉದುರಿತ್ತು ಹೀಗೆ ಮಾಡಿತ್ತು ಕೊಳವನೊಂದು
ಆ ಕೊಳದ ತುಂಬ ಕರಿಬಿಳಿಯ ಹಂಸ; ನನಗದುವೆ ಆತ್ಮಬಂಧು.

ರಾತ್ರಿಯಲಿ ಹೀಗೆ ಹುಣ್ಣಿಮೆಯ ಕೂಡೆ ಹಂಸಗಳು ಮಾತನಾಡಿ
ನನ ಕಣ್ಣ ಎವೆಗಳನು ಮುಚ್ಚಲೆಳೆಸುವುದು ಹಗಲ ಚಿಂತೆದೂಡಿ
ಬಂದೀತು ಬರವು ಕಾದಿರಿಸು ನೀರ, ಎಂದಾವು ಕಿವಿಯ ಬಳಿಯು
ಆ ಅವಳ ನಲಿವು ನನ್ನೊಲವ ನೋವ ಗಾಯಕ್ಕೆ ಬಿದ್ದ ಬರೆಯು!

ಅಲೆಯಲ್ಲಿ ತೇಲಿ ಬರುವಂತ ಕಸವ ತುತ್ತೆನುವ ಆಸೆಯಲ್ಲಿ
ಕಚ್ಚಿದರೆ ಹೀಗೆ ಒಸಡುಗಳ ಬೇನೆ, ಊಟಕ್ಕೆ ದಾರಿಯೆಲ್ಲಿ?
ಬಾತುಗಳ ಮಾತು ಕಣ್ಣಾಚೆ ಬಂದು ನಗುವಾಯ್ತು ನನ್ನ ತುಟಿಗೆ
ಹಾಡಾಗಿ ಬಂತು ಕೊನೆ ಮುಗಿಯದಂತ ಜೇನಾಯ್ತು ಒಲವು ಹೀಗೆ

ಬೆಳಗಿನಲಿ ಎದ್ದು ನೋಡಿದರೆ ನಾನು ಕಣ್ಣಲ್ಲಿ ಕೊಳವು ಮಾಯ
ಸಾಲಾಗಿ ನಡೆವ ಹಂಸಗಳ ಕಂಡು ಮೂಡಿತ್ತು ಒಂದುಪಾಯ
ವಿರಹಿಗಳನು ಹೆರುವಂತ ಜಗಕೆ ಅವುಗಳನು ಕಳಿಸಬೇಕು
ಎದೆಯೊಳಗೆ ಉಳಿವ ನೆನಪನ್ನು ಮರೆಸಿ,ಹಂಸಗಳು ನಲಿಯಬೇಕು.