Sunday, February 8, 2015

ಕನಸಿನ ಲೋಕ.

ಸಂಜೆಯಲಿ ಕಂಡು ಮಾತಿಂಗೆ ಸಿಕ್ಕಿ ಒಲವಾಯ್ತು ಎಂದುಕೊಂಡೆ
ಮರುದಿನದ ಬೆಳಗು ಕಾದಿತ್ತು ಬಿಸಿಲು ಮುದುಡಿತ್ತು ಮಲ್ಲೆದಂಡೆ
ಕಣ್ಣೀರ ಹನಿಯು ಉದುರಿತ್ತು ಹೀಗೆ ಮಾಡಿತ್ತು ಕೊಳವನೊಂದು
ಆ ಕೊಳದ ತುಂಬ ಕರಿಬಿಳಿಯ ಹಂಸ; ನನಗದುವೆ ಆತ್ಮಬಂಧು.

ರಾತ್ರಿಯಲಿ ಹೀಗೆ ಹುಣ್ಣಿಮೆಯ ಕೂಡೆ ಹಂಸಗಳು ಮಾತನಾಡಿ
ನನ ಕಣ್ಣ ಎವೆಗಳನು ಮುಚ್ಚಲೆಳೆಸುವುದು ಹಗಲ ಚಿಂತೆದೂಡಿ
ಬಂದೀತು ಬರವು ಕಾದಿರಿಸು ನೀರ, ಎಂದಾವು ಕಿವಿಯ ಬಳಿಯು
ಆ ಅವಳ ನಲಿವು ನನ್ನೊಲವ ನೋವ ಗಾಯಕ್ಕೆ ಬಿದ್ದ ಬರೆಯು!

ಅಲೆಯಲ್ಲಿ ತೇಲಿ ಬರುವಂತ ಕಸವ ತುತ್ತೆನುವ ಆಸೆಯಲ್ಲಿ
ಕಚ್ಚಿದರೆ ಹೀಗೆ ಒಸಡುಗಳ ಬೇನೆ, ಊಟಕ್ಕೆ ದಾರಿಯೆಲ್ಲಿ?
ಬಾತುಗಳ ಮಾತು ಕಣ್ಣಾಚೆ ಬಂದು ನಗುವಾಯ್ತು ನನ್ನ ತುಟಿಗೆ
ಹಾಡಾಗಿ ಬಂತು ಕೊನೆ ಮುಗಿಯದಂತ ಜೇನಾಯ್ತು ಒಲವು ಹೀಗೆ

ಬೆಳಗಿನಲಿ ಎದ್ದು ನೋಡಿದರೆ ನಾನು ಕಣ್ಣಲ್ಲಿ ಕೊಳವು ಮಾಯ
ಸಾಲಾಗಿ ನಡೆವ ಹಂಸಗಳ ಕಂಡು ಮೂಡಿತ್ತು ಒಂದುಪಾಯ
ವಿರಹಿಗಳನು ಹೆರುವಂತ ಜಗಕೆ ಅವುಗಳನು ಕಳಿಸಬೇಕು
ಎದೆಯೊಳಗೆ ಉಳಿವ ನೆನಪನ್ನು ಮರೆಸಿ,ಹಂಸಗಳು ನಲಿಯಬೇಕು.

2 comments:

Badarinath Palavalli said...

ಅಂತ ಹಂಸಗಳು ಪ್ರತಿ ವಿರಹಿಗಳ ಕನಸಲೂ ತೇಲುತಲೇ ಇರಲಿ.

sunaath said...

ಕವನದ ಭಾವವು ಓದುಗನಲ್ಲೂ ಉಕ್ಕೇರುವಂತೆ ಮಾಡುತ್ತಿದೆ ನಿಮ್ಮ ಈ ಕವನ.