Sunday, February 8, 2015

ಪ್ರೇಮಪತ್ರ ಸಿಕ್ಕು!

ಕಾಲುದಾರಿಯ ನಾನು ಮರೆತು ಹೋಗುವನಲ್ಲ
ದಾರಿಯುದ್ಧಕು ನೋಡಿ ನಡೆಯುವವನು
ನಿನ್ನೆ ನಡೆಯುತಲಿರಲು ದಾರಿಯಲಿ ಕಂಡೆನಾ
ಮುದುಡಿದ್ದ ಕಾಗದದಿ ಪ್ರೀತಿಯನ್ನು

ಒಲವು ತುಂಬಿದ ಶಾಯಿ ಕುಶಲವನು ಕೇಳಿತ್ತು
ಕಳಕಳಿಯ ಕಾಳಜಿಯ ಗೇಯವಿತ್ತು
ಅವನದೊ ಅವಳದೋ ಎನುವ ಮಾತುಗಳಿರದೆ
ಎರಡು ಎದೆಗಳ ಮಾತು ಕನಸುತಿತ್ತು

ಅವನು ಅವಳಿಗೆ ಕೊಟ್ಟ ಅವಳು ಅವನಿಗೆ ಕೊಟ್ಟ
ಮಾತುಗಳ ಮುತ್ತುಗಳ ವಿವರದೊಳಗೆ
ಸಂಜೆಯಾಗಲು ಬರುವೆ ರಾತ್ರಿ ಕನಸಲಿ ಕರೆವೆ
ಪ್ರೇಮಸೌಭಾಗ್ಯವದು ಕಹಿಯೆ ಕೊನೆಗೆ?

ಪ್ರೀತಿ ಮುದುಡಿತು ಎಂದು ನಿಟ್ಟುಸಿರು ಬಿಡಲಾಗಿ
ನನ್ನವಳು ಕಂಡಳದೊ ದೂರದಲ್ಲಿ
ಹೆಸರು ಹೇಳದ ಪತ್ರ ಒಲವಿಗಾಗಿಯೆ ಮುಡಿಪು
ಕೊಟ್ಟೆನವಳಿಗೆ ನನ್ನ ಪ್ರೀತಿಯಲ್ಲಿ.

3 comments:

Badarinath Palavalli said...

ಸಿಕ್ಕು? ಅದು ಸಿಕ್ಕು? ಸಿಕ್ಕುಗಳು?
ಚಮತ್ಕಾರದ ಕವಿ, ಸಿಕ್ಕಾಕಿಸಿ ನಮ್ಮನೂ ಗತ ಪ್ರೇಮ ಪತ್ರಗಳೆಡೆಗೆ ನೆನಪ ಉತ್ಖಲನಕೀಡು ಮಾಡೋ ಪ್ರಯತ್ನವಿದು.

sunaath said...

ಇದು ಪ್ರೇಮಸಾಮ್ರಾಜ್ಯ,
ಇಲ್ಲಿ ನೀವೇ ರಾಜ,
ನಿಮ್ಮ ಒಲವಿನ ಹುಡುಗಿ ರಾಣಿಯಾಗಿಹಳು.
ನಿಮ್ಮ ಒಲವಿನ ಆಟ,
ನಿಮ್ಮ ಒಲವಿನ ಬೇಟ,
ಪ್ರಕೃತಿಯಲಿ ಸಂತಸವ ತುಂಬುತಿಹುದು.

ಕಾವ್ಯಾ ಕಾಶ್ಯಪ್ said...

ಒಲವು ತುಂಬಿದ ಶಾಯಿ....... ಎದೆಗಳ ಮಾತು ಕನಸುತಿತ್ತು. ತುಂಬಾ ಇಷ್ಟವಾಯ್ತು.
ಅಂದ ಹಾಗೆ ಕಿಣ್ಣಾ ಒಂದು ಪ್ರೇಮ ಪತ್ರ ಬರಿ ನಿನ್ ಮಲ್ಲಿಗೆ ಹುಡುಗಿಗೆ ನೋಡನ ... :)