Friday, November 2, 2012

ಹನಿಗವನಗಳು- ಒಂದು

"ಒಂದಿಷ್ಟು ನಗೆಯೆನಗೆ ಬಿಟ್ಟು ಹೋಗೇ ಗೆಳತಿ
ಸತ್ತಾಗ ಕಣ್ಣು ನೋಡದು, ಕಿವಿಯೂ ಇರದು
ಬರಿಯ ಎಲುಬು ಮತ್ತೆ ಹಲ್ಲುಗಳು ಉಳಿದೀತು!"
-----------------------------------------------------
"ಹಾರಿ ಹೋಯಿತು ಹಕ್ಕಿ
ಕೊಂಬೆಯ ಮೇಲೆ ಹಕ್ಕಿಯ ಗುರುತು ಇರಲಿಲ್ಲ.
ಮಂಗ ನೆಗೆಯಿತು,
ಕೊಂಬೆ ಮುರಿದು ತಣಿಯಿತು."
-----------------------------------------------------
ಕನ್ನಡಕ್ಕೆಂದು ನೀ ಕೊಲೆ ಮಾಡಬೇಕಿಲ್ಲ
ಕನ್ನಡವ ಕಂಡೊಡನೆ ನಲಿದಾಡು ಸಾಕು.
ಕನ್ನಡದಿ ಮಾತಾಡು, ಕನ್ನಡದಿ ನೀನಾಡು
ಕನ್ನಡವನುಳಿಸಲು ಬೇರೇನು ಬೇಕು?
-----------------------------------------------------
"ಯಾವತ್ತೂ ಹಿತವಾಗಿ
ರೋಮಾಂಚಿತನನ್ನಾಗಿಸಿ
ನಗುತ್ತಾ ಸ್ವಾಗತಿಸುವವಳು ಒಬ್ಬಳೇ
ನಿದ್ರಾದೇವಿ."
-----------------------------------------------------
"ಪ್ರತಿಪುಟದಲ್ಲೂ ಒಂದು
ವಿರಾಮ ಬೇಕೆಂದು ಬಯಸುತ್ತೇನೆ.
ವಿರಾಮದ ಮೊದಲು ಬರೆಯುವುದೇನು?
ತಿಳಿದಿಲ್ಲ!."
-----------------------------------------------------
"ಕೆಲವು ಬಣ್ಣಗಳು ಹೀಗೇ
ಗಾಢವಾಗುತ್ತಾ ಕಾಡುತ್ತವೆ.
ಕೊನೆಗೆ
ಕಪ್ಪು ಎಂದೇ ಅನಿಸುತ್ತದೆ."
-----------------------------------------------------
"ಸೋತು ಬರೆಯುವ ಚಟ ನಿನಗೆ
ಎಂದು ಜರೆಯದಿರು
ಗೆದ್ದಾಗ ಸಂಭ್ರಮಿಸುತ್ತೇನೆ
ಬರೆಯಲಾಗುವುದಿಲ್ಲ."
-----------------------------------------------------
"ಬರೆದರೆ ನೋವು ಮಾಯವಾಗುತ್ತದೆ ಎಂದು
ದೊಡ್ಡ ಅಕ್ಷರದಲ್ಲಿ ನೋವು ಎಂದು ಬರೆದ.
ಕಣ್ಣಾಲಿಗಳಲ್ಲಿ ತುಂಬಿದ್ದ ನೀರು ಬಿದ್ದು
ಅಕ್ಷರ ಅಳಿಸಿದಂತೆ ಭಾಸ."
-----------------------------------------------------
"ಸಖೀ,
ನೀ ಬಂದ ದಾರಿ ಬೇರೆ
ನನ್ನ ದಾರಿಯೂ ಬೇರೆ
ಎಂದಾದರೂ ದಾರಿಗಳು ಸೇರಿದರೆ
ಜೊತೆಯಾಗಿ ಸಾಗೋಣ
ಇಲ್ಲವೇ
ಹೀಗೆಯೇ ಹೋಗೋಣ."
-----------------------------------------------------
"ಹತ್ತು ಕಡೆ ಕಣ್ಣು ಹಾಯಿಸಿದರೂ
ನಗುವವರು ಸಿಕ್ಕಿಲ್ಲ.
ನಾನು ನಗುತ್ತಿದ್ದೆ
ನಗದವರೆಲ್ಲ ಸೇರಿಕೊಂಡು
ನನ್ನನ್ನು ಹುಚ್ಚ ಎಂದರು."
-----------------------------------------------------
"ಚುಕ್ಕಿಯಿಟ್ಟದ್ದನ್ನು
ನೇರ ನೋಡಲಿಲ್ಲ
ಬಿದ್ದು, ವಿಮರ್ಶೆ ಮಾಡುತ್ತಾ ನೋಡಿದೆ
ಅದುವೇ
ನಮ್ಮಿಬ್ಬರ ನಡುವೆ ಗೆರೆಯಂತಿದೆ ಈಗ."
-----------------------------------------------------
"ನಿನ್ನ ನೆನೆಯುತ್ತಾ
ನಿದ್ದೆಗೆ ಜಾರುವಾಸೆ ನನ್ನದು
ಎಚ್ಚರವಾಗದಿರಲಿ ನಾಳೆ
ಎಂದು ಹಾರೈಸಿಬಿಡು."
-----------------------------------------------------
"ಹುಣ್ಣಿಮೆಯನ್ನು ಅವ ದ್ವೇಷಿಸುತ್ತಾ ಕಳೆದ!
ಕಳೆದ ಹುಡುಗಿಯ ಮುಖ
ನೆನಪಾಗುವುದೆಂದು,
ಚಂದ್ರನನ್ನು ಪೂರ್ಣ ನೋಡಲಾರೆ ಎಂದ."
-----------------------------------------------------
"ನಿದ್ದೆಗೆ ಜಾರುವಾಗ ಮತ್ತು ಬೆಳಗ್ಗೆ ಏಳುವಾಗಷ್ಟೇ
ಕೆಂಪಾಗಲು ನಾ ಸೂರ್ಯನಲ್ಲ!
ನೋವಿಗೂ ನಲಿವಿಗೂ ಕೆಂಪಾದೀತು ಕಣ್ಣು."
-----------------------------------------------------
"ಸಂಪಿಗೆ ಗಿಡ ನೆಟ್ಟದ್ದಕ್ಕೆ ಹೂವಾದೀತು
ಮಲ್ಲಿಗೆ ಬಳ್ಳಿ ಊರಿದ್ದಕ್ಕೆ ಹೂವಾದೀತು
ನಿನ್ನೊಲವಿನ ದಾರಿಯಲ್ಲೇ ಕಾದಿದ್ದೇನೆ
ಖಂಡಿತ ಬರದಿದ್ದರೆ ನೋವಾದೀತು!"
-----------------------------------------------------
"ಕಣ್ಣು ತೋರಿದ್ದಕ್ಕೆಲ್ಲಾ ಸರಿ ಎನ್ನಲಾರೆ!
ಸುಣ್ಣ ಕಂಡಿತು; ಹಚ್ಚಿದೆ
ಹೆಣ್ಣು ಕಂಡಿತು; ಮೆಚ್ಚಿದೆ
ಮಣ್ಣು ಕಂಡಿತು ಈಗ ಬೆಚ್ಚಿದ್ದೇನೆ."
-----------------------------------------------------
"ನಿನ್ನ ನೆನಪುಗಳೆಲ್ಲ ನನಗೆ ಗೌಣ
ಎಂದಾಗ ಕೋಪಿಸಬೇಡ,
ಲೆಕ್ಕಿಸದಿದ್ದಾಗಲೇ
ನೋವು ವಿಪರೀತ ಕಣಾ!"
-----------------------------------------------------
"ಮಳೆ ಹನಿ ಬಂತೆಂದು ಖುಷಿಗೊಂಡು
ತಲೆ ಎತ್ತಿದ!
ಮಳೆ ನಿಂತಿತು,
ತಲೆ ತಗ್ಗಿಸಿದ."
-----------------------------------------------------
"ಹಸಿ ಹಸಿ ಗಾಯ
ಕೆರೆದ ಮೇಲೆ
ನಾಳೆ,
ಪುನಃ ತೊಗಟೆ ಕೆರೆಯಬೇಕು
ಎನ್ನುವ ವಿಚಿತ್ರ ಸಮಾಧಾನ."
-----------------------------------------------------
"ಸಂಪೂರ್ಣ ಖಾಲಿಯಾಗಿದ್ದೇನೆ
ಬಂದು ತುಂಬಿಕೊಳ್ಳುವುದು.
ಏಕೆಂದರೆ, ಖಾಲಿಯಾದಾಗ
ನೋವು ತಬ್ಬಿಕೊಳ್ಳುವುದು."
-----------------------------------------------------
"ನಾನು ಕಬ್ಬನ್ನು ತಿಂದೆ
ಸಿಹಿಯಾಗುತ್ತಿದ್ದೇನೆ.
ಅಗಿದು ಉಗುಳಿದ ಸಿಪ್ಪೆ
ಮೂದಲಿಸುತ್ತಿದೆ
ನಾಳೆ ಒಣಗುತ್ತೇನೆಂದು."
-----------------------------------------------------
"ಶಿಕಾರಿಗೆ ಹೊರಟವನಿಗೆ ಸಿಕ್ಕಿದ್ದು
ಅವನದೇ ಪೂರ್ವಜರ ತಲೆಬುರುಡೆ
ಹಾಗೆಯೇ
ಬರೆದವನಿಗೆ ಸಿಕ್ಕಿದ್ದು
ಬೇರೆಯವರು ಬರೆದುದುದರಲ್ಲಿ
ಹೇಳಲಾಗದೆ ಉಳಿಸಿದ್ದು."
-----------------------------------------------------
"ಸಿಗರೇಟು ಸೇದಿದ,
ಕೆಮ್ಮಿದ,
ಉಗುಳಿದ.
ಎಂಜಲು ಹೃದಯದಾಕಾರದಲ್ಲಿ ಬಿದ್ದಿತ್ತು!"
-----------------------------------------------------
"ಬುಗುರಿ ಮರ ಕಂಡಾಗ,
ಬೆಳಗ್ಗೆ ನೋಡಿದ ಹುಡುಗಿಯ ನೆನಪು!
ಬುಗುರಿ ಮರದಲ್ಲೂ ಹಾಗೇ
ಬೆಳಗ್ಗಿನ ಹಳದಿ ಹೂ
ಸಂಜೆ ಕೆಂಪಾಗಿತ್ತು!"
-----------------------------------------------------
"ನೋವು ನಲಿವು ಬೇರೆಯಲ್ಲ
ನೋವನ್ನು ಬಿಡಿಸುತ್ತಾ ಹೋದಂತೆ ನಲಿವು
ಕಣ್ಣೀರನ್ನು ಒರಸುತ್ತಾ
ಮುಖಕೆ ಕನ್ನಡಿಯ ಹೊಳಪು!"
-----------------------------------------------------
"ನಿನ್ನನ್ನು ಎತ್ತರಿಸುತ್ತಾ ಸಾಗುವಾಗ
ನನ್ನ ನೆರಳು
ಉದ್ದವಾಗುತ್ತಿದೆಯೆಂದು ನಂಬಿಕೆ.
ನಾನಲ್ಲ ಉದ್ದವಾಗುವುದು,
ವಾಸ್ತವ."
-----------------------------------------------------
"ಅಮ್ಮಾ ಕತ್ತಲಾಯಿತು,
ಬೆಳಗ್ಗಿನ ತಂಪಿನ, ಮಧ್ಯಾಹ್ನದುರಿಯ, ಸಂಜೆಯ ಕೆಂಪಿನ
ಆಹಾರ
ಕತ್ತಲ ಹಸಿವೆಯಲ್ಲಿ ಸವೆದು ಹೋಯಿತು!
-ತಗೋ ಮಗನೇ
ತಿಂಗಳ ರೊಟ್ಟಿ."
-----------------------------------------------------
"ರಾಮನನ್ನು ಕಾಡಿಗಟ್ಟು
ರಾಜ್ಯವಾಳುವಾಸೆಯಿಟ್ಟು
ಎಂದ ಮಂಥರೆ
ಮಾತುಗಳನ್ನು ನಡೆಸಿದ್ದಕ್ಕೆ
ಭರತ ಖತಿಗೊಂಡು, ಅವಳ ಹೊರಗಟ್ಟಿದ.
ಇಲ್ಲಿ ಮಹಿಳೆಯ ಶೋಷಣೆಯೆಂದು
ಪರವೂರಿನ ಮಹಿಳೆಯರು
ಸೇರಿದ್ದಾರೆ.
ಭರತನಿಗೂ ರಾಜ್ಯವಿಲ್ಲ
ರಾಮ ರಾಜ್ಯದಲ್ಲೇ ಇಲ್ಲ
ಬೆನ್ನುಬಾಗಿದ ಮಂಥರೆಯ ಪ್ರತಿಮೆ
ಇಡಬೇಕೆಂದು ಆಗ್ರಹಿಸಿದ್ದಾರೆ."
-----------------------------------------------------
"ಕಪ್ಪು?.. ನೀಲ
ಮುರಳೀಲೋಲ
ಹಗಲು ಗೊಲ್ಲ
ರಾತ್ರಿ ನಲ್ಲ!"
-----------------------------------------------------
"ನಿಶೆಯೇರಿ ಹೋದಂತೆ,
ಮಳೆಹನಿ ಮೆಲ್ಲನೆ ಚುಚ್ಚುವಂತೆ,
ಅವಳು!
ಕಪ್ಪಾಗುತ್ತಾ ತಂಪೀಯುವಳು!"
-----------------------------------------------------

1 comment:

Badarinath Palavalli said...

ಹನಿಗಳ ಸಂಗ್ರಹ ಇಷ್ಟವಾಯಿತು. ಆದರೆ ಭಟ್ಟರೆ ಜಡಿ ಮಳೆಗಿಂತ ಹನಿ ಮಳೆ ನನಗೆ ಮೆಚ್ಚುಗೆ. ದಿನಕ್ಕೊಂದರಂತೆ ಹನಿ ಪೋಸ್ಟ್ ಮಾಡಿದರೆ ಚೆನ್ನ ಅಲ್ಲವೇ?