ಗಿಡದಲ್ಲಿ ಹೂವಿಲ್ಲ, ಹಣ್ಣಿಲ್ಲ ಎಂದೆಲ್ಲ ಮರುಗಿದವ
ಬಂದಿಲ್ಲಿ ನೀರೆರೆದ ನೆನಪು ಇಲ್ಲ!
ಅದಕೆ ಕಟ್ಟೆಯ ಕಟ್ಟಿ ಪೂಜೆ ಮಾಡಿದ ಮಂದಿ
ಹೇಳಿದರು ಆ ಗಿಡಕೆ ಯೋಗವಿಲ್ಲ!
ಮಳೆಗಾಲದೊಳು ಮಳೆಗೆ ಚಿಗುರುಕಟ್ಟಿದ್ದಕ್ಕೆ
ಹರುಷಗೊಂಡರು ಜನರು, ಚಿವುಟಿ ಚಿಗುರ!
ಕಂಡೀತು ಮತ್ತೇನೋ ಎಂದೆನುತ ಕೆರೆಕೆರೆದು
ಹಿರಿದು ಹಿಗ್ಗಿದವರು ಮೆರೆದು ಪೊಗರ!
ನೀರೆರೆಯ ಬಾರೆಂದು ಗೋಗರೆದ ಜನಕೆಲ್ಲ
ಬಿಸಿಲು ಕಾಲದಿ ತೋರೆ ಖಾಲಿ ಕೊಡವು!
ಅದರ ಮಧ್ಯದಿ ನರಕದೊಳು ಹೊಳಲುತಿದೆ
ಗಿಡಕೆ ಸಾವಿನ ಸುಖದ ಬೆವರಿನೊಲವು.
ಗಿಡವು ಹೀಗೆಯೆ ಸ್ವಾಮಿ, ಹೂವಾಗಲಾಗದೆಯೆ
ಹಣ್ಣಾಯಿತು ಹೇಗೋ ಹಿಚುಕಿದಂತೆ!
ನೆತ್ತರನೆ ಒಣಗಿಸಿ, ಅದಕೆ ಗೊಬ್ಬರ ಹೆಸರು!
ಮಾತಲ್ಲಿ ಬದುಕಿತು ನಾಳೆಗಂತೆ!!
4 comments:
ಹುಚ್ಚಾ ಹುರುಳಿ ಬಿತ್ತಿ ಕಿತ್ತು ಕಿತ್ತು ನೋಡಿದಂತೆ...ಆದರ, ಅನಾದರ ಎರಡು ಬೆಳವಣಿಗೆಗೆ ಮಾರಕ...ಅರಿಯದೆ ಮರುಗುವ ತೊಳಲಾಟದ ದನಿಗಳು ಎಷ್ಟು ಸುಂದರವಾಗಿ ಮೂಡಿಬಂದಿವೆ..! ಸುಂದರ ಸಾಲುಗಳು
ಕಟು ವಾಸ್ತವದ ಸುಪ್ತ ಗಾಮಿನಿಯಂತಹ ಕವನ.
ಬೆಳೆವಣಿಗೆ ಪ್ರಾಕೃತಿಕವಾದಾಗಲೇ ಅದಕೂ ಧನ್ಯತೆ! ಒಳ್ಳೆಯ ಹೂರಣ.
ಆಹ್..ಸುಂದರ ಸಾಲುಗಳು ಅಣ್ಣಾ..
ಹೊಳಲುತಿದೆ ಎಂಬ ಪದ ಇಷ್ಟವಾಯ್ತು :)..
Nice lines...
Post a Comment