ಓ ಹಿರಿಯ ಕವಿವರ್ಯ; ನೀನು ಮಲ್ಲಿಗೆ ತಂದೆ
ಅದನೆ ನಂಬುತ್ತಿರುವೆ ನಾನು ಇಂದು
ಕೋಲು ಕಹಳೆಗಳಲಿ ನನಗೆ ಪ್ರೀತಿಯೆ ಇಲ್ಲ
ಬಾಳಪ್ರೀತಿಯೆ ಕವನ ನನಗೆ ಎಂದೂ!
ನೀನೆ ಬೆಳೆಸಿದ ಗಿಡದಿ ಹೂವ ಕೊಯ್ಯಲು ಬಂದೆ
ನೀ ಕೊಟ್ಟ ಮಲ್ಲಿಗೆಗೆ ಸಾಟಿಯಲ್ಲ!
ನೀನೆ ಬೆಳೆದುಕೊ ಎಂದು ಗದರದಿರಿ ನನ್ನನ್ನು
ನಾನೇನು ನಿನ್ನಂತ ಮೇಟಿಯಲ್ಲ.
ನಿನ್ನ ಮಲ್ಲಿಗೆ ಗುರುವೆ, ಮೈಸೂರ ಪೇಟೆಯದು
ನಾನು ನೋಡುವ ಮಲ್ಲೆ ಕಾಡುಗಳದು
ನಾಡುಮಲ್ಲಿಗೆಗಿಂತ ಕಾಡುಮಲ್ಲಿಗೆ ದಂಟು!
ಪರಿಮಳವು ಅತಿಯಲ್ಲ; ಗಟ್ಟಿಯೆಂದು!
ಸುಣ್ಣದುಂಡೆಗಳಂತೆ ಮಲ್ಲಿಗೆಯು ಎಂದವರು
ಬೆಣ್ಣೆಯನು ಮೊದಲೆಂದೂ ಕಾಣಲಿಲ್ಲ!
ಬಣ್ಣಮಾತುಗಳಲ್ಲಿ ಅವರ ಹೊಗಳುವುದಿಲ್ಲ
ಅಣ್ಣ ನೀ ಸರಿ ಎಂದು ಕಾಲ್ಗೆರಗುವೆ.
ನೀ ಬೆಳೆದ ಕಾಲದಲಿ; ಮಲ್ಲಿಗೆಯು ಬಹುಚಂದ
ಈಗ ಬೆಳೆಯುವುದೇನು ಕಷ್ಟ ಬಹಳ
ಗೊಬ್ಬರವನಿಡಬೇಕು; ಬರಬೆಂದ ಮಡಿಲಲ್ಲಿ
ಗಿಡ ಬಾಳಿ ಬದುಕುವುದು ತುಂಬ ವಿರಳ.
ನಿನ್ನ ಕಾಲದಿ ಜನರು ಮಲ್ಲಿಗೆಯ ಕೊಂಡವರು
ಸುಮದ ಚಂದವ ನೋಡಿ ಹೊಗಳಿದವರು.
ಈಗಲೂ ಇದ್ದಾರೆ ವಿಜ್ಞಾನ ಬುದ್ಧಿಯಲಿ
ಎಸಳು ತೆಳುವಾಯ್ತೆಂದು ಹಲಬುವವರು.
ಹಾರೈಕೆ ನಿನದಿರಲಿ; ಚೇತನವು ನನದಿರಲಿ
ಮಲ್ಲೆ ಹೂಗಳು ಎಂದು ಬಾಡದಿರಲಿ
ನನ್ನ ಜೀವನದಲ್ಲು ಹೂವ ನಗೆ ಶಾಶ್ವತವು
ನಿನ್ನ ಕನಸಿನ ತೋಟ ಅಳಿಯದಿರಲಿ.
೨೬-೦೧-೨೦೧೩
2 comments:
Super Kavana.. No words to say.... Hats off.... :)
ಬದುಕಿನ ಎಲ್ಲ ಮಜಲುಗಳಿಗಾಗಿ ಚೆಂದದ ಕವನಗಳನ್ನು ಕಟ್ಟಿಕೊಟ್ಟ, ಪ್ರಶಸ್ತಿಗಳಿಂದ ವಂಚಿತರಾದ ಕೆ.ಎಸ್.ನ ಬಗೆಗೆ ಅತ್ಯುತ್ತಮ ನುಡಿ ನಮನವಿದು. ಭೇಷ್...
Post a Comment