Monday, January 28, 2013

ಮಲ್ಲಿಗೆಯ ಜೊತೆಗೆ


ನಿಶೆಯ ಮಂಪರಿನೊಳಗೆ ಬಿದ್ದ ಸೂರ್ಯನ ಕಣಕೆ
ಮಲ್ಲೆ ಮೈಮುರಿದೆದ್ದು ಅರಳಿತೇನು?
ಅರಳಿ ಹೊರಳಿದ ಮಲ್ಲೆ ನನ್ನವಳ ಕರೆದಂತೆ
ಎದ್ದು ಹೊರಟಲು ಅವಳು ಯಾಕೊ ಏನೊ!

ಅಚ್ಚಬಿಳಿಯದು ಚೆಲುವು ಪಚ್ಚೆಲತೆಯೊಳು ಬಳುಕಿ
ಮುತ್ತಿಟ್ಟು ನಿಂತಿತ್ತು ಒಂದು ಘಳಿಗೆ!
ನನ್ನವಳು ಬಂದವಳು ಹೂ ಕಂಡು ನಕ್ಕವಳು
ತಲೆಯ ತುರುಬನು ನೋಡಿ ಬಂದಳೊಳಗೆ.

ಇಂದೇಕೋ ಮಲ್ಲೆ ಹೂ ಮುಡಿಸಿಲ್ಲ ಎಂದೆನುತ
ನನ್ನವಳು ಮುನಿಸನ್ನು ತೋರಬೇಕು
ಮಲ್ಲಿಗೆಯ ಹೂಗಳನು ಪ್ರೀತಿದಾರಕೆ ಹೆಣೆದು
ಅವಳ ಬಳಿ ಕರೆದು, ನಾ ಮುಡಿಸಬೇಕು,

ಒಂದು ದಿನದಲಿ ಅರಳಿ ನನ್ನವಳ ಜೊತೆಮಾಡಿ
ಪ್ರೇಮ ಹೂವಾದಂತೆ ಅಲ್ಲವೇನು?
ಅದೆ ಸಂಜೆ ಬಾಡಿತ್ತು; ಬದುಕು ಮುಪ್ಪಡರಿತ್ತು
ರಾತ್ರಿ ತಾರೆಯತೇರು ಸೇರಿತೇನು?

೨೮-೦೧-೨೦೧೩

5 comments:

Apoorva Udupi said...

thumba ishta aathu.... lovely poem :)

Badarinath Palavalli said...

ಮಲ್ಲಿಗೆಗೆ ಬದುಕು ಸಮೀಕರಿಸಿ ನೋಡುವ ಪರಿ ಮೆಚ್ಚುಗೆಯಾಯ್ತು. ಒಲುಮೆ ಸಾಕ್ಷಾತ್ಕಾರ ಇರಲಿ ಅನುಕ್ಷಣ....

ಗಿರೀಶ್.ಎಸ್ said...

ಆಹಾ ಮಲ್ಲಿಗೆಯ ಪರಿಮಳ ಚೆನ್ನಾಗಿದೆ...

ಚಿನ್ಮಯ ಭಟ್ said...

ಅಹ್..ಚೆನಾಗಿದೆ ಅಣ್ಣಾ...
ಮಲ್ಲೆ ಅನ್ನುವ ಪದವೇ ಗೊತ್ತಿರಲಿಲ್ಲ ನನಗೆ...ಅದನ್ನು ಅದೆಷ್ಟು ಅಂದವಾಗಿ ನಿರೂಪಿಸಿದ್ದೀರಿ...ಸುಂದರ ಸಾಲುಗಳು...ಇಷ್ಟವಾಯ್ತು...
ಹಾಂ ನಿಮ್ಮ ಮಲ್ಲಿಗೆಯ ಕವನ ನೋಡಿ ಕೆ.ಎಸ್.ನರಸಿಂಹಸ್ವಾಮಿಯವರ ನೆನಪಾಯ್ತು...ಅವ್ರು ಪ್ರತೀದಿನ ಹೆಂಡತಿಗೆ ಮಲ್ಲಿಗೆಯನ್ನು ಒಯ್ಯುತ್ತಿದ್ದರಂತೆ!!!..

ಹಾಂ ಅಲ್ಲಿ ನಾಲ್ಕನೇ ಸಾಲಿನಲ್ಲಿ ಅದು "ಹೊರಟಳು" ಆಗಬೇಕೇ ಅಥವಾ "ಹೊರಟಳು"ಗೇ ಏನಾದರೂ ವಿಶೇಷ ಅರ್ಥವಿದೆಯೇ ಗೊತ್ತಾಗುತ್ತಿಲ್ಲ...
ಹಮ್...ಓದುವುದೊಂದೇ ನಮ್ ಕೆಲ್ಸಾ..ಬರೆಯುತ್ತಿರಿ..
ನಮಸ್ತೆ

Harisha - ಹರೀಶ said...

ಚೆನ್ನಾಗಿದ್ದು :)