Thursday, December 19, 2013

ಮದುವೆಯಲ್ಲಿ ಸಿಕ್ಕಿದವಳಿಗೆ!

ಯಾರದೋ ಮದುವೆಯಲಿ ರಾಶಿಯಿದ್ದವು ಹೆಣ್ಣು
ಮೀಸಲಾಗಿದ್ದವಳು ಕಣ್ಣುಗಳಿಗೆ;
ಮಳೆಗೆದ್ದ ಲತೆಯಂತೆ ಬಳುಕಿಯಾಡುತಲಿರಲು
ಆಸೆಯಾದಳು ಮನಕೆ, ಒಂದೆ ಕ್ಷಣಕೆ.

ಮದುವೆಯಾಗುವ ಸಖಿಯ ಬಳಿಯಿದ್ದು ಮನಗೆದ್ದು
ಏನನೋ ಹೇಳುವೊಲು ಕಣ್ಣು ತಿರುಗಿ
ನನ್ನ ನೋಡುತ ಹೀಗೆ ಮಾತನಾಡುವೆಯಲ್ಲ
ಈ ಚಂದ ಮುಚ್ಚುಮರೆ ಏಕೆ ಹುಡುಗಿ?

ಮುತ್ತು ಪೋಣಿಸಿ ನಿಂತ ನಿನ್ನ ಹಲ್ಲಿನ ಸಾಲು
ನಕ್ಕಂತೆ ಕರೆದಂತೆ ಕಂಡೆಯೇನ?
ಮಾತುಗಳನಾಡಲು ಕಾತರದ ಜೊತೆ ಭಯಕೆ
ಬೆಳಕು ಬೀರುವ ಜ್ಯೋತಿ ಕೂಡ ಮೌನ.

ಮದುವೆ ಮುಗಿಯಿತು ಇಂದು, ನಾನು ಮರೆವೆನೆ ನಿನ್ನ
ಅಂತರಂಗದ ಭಾವ ದಾಟಿದವಳೆ!
ಇನ್ನೆಲ್ಲೋ ಜೊತೆಬಂದು, ಪ್ರಶ್ನೆಗುತ್ತರವಾಗಿ
ನೀನು ಬರೆಯಲೆ ಬೇಕು ಸೊಗಸಿನವಳೆ.

2 comments:

sunaath said...

ಯಾರು ಯಾರದೋ ಮದುವೆ
ಸಾಕಿನ್ನು ಹೋಗುವುದು;
ಪರಿಣಾಮ ತಿಳಿಯುವುದು ಸಾಧ್ಯವಿಲ್ಲ!
ನೀವೆ ಆದರೆ ಮದುವೆ
ಯಾವ ತೊಂದರೆ ಇಲ್ಲ;
ಕನ್ನೆಯರ ಕಣ್ಬಾಣ ಬರುವುದಿಲ್ಲ!

Badarinath Palavalli said...

ಆಹಾ ಅವಿವಾಹಿತನ ಪಾಡೇ! ಬೇಗ ಮದುವೆಯಾಗಬಾರದೇ ಕವಿವರ್ಯ.