Friday, April 26, 2013

ಮಲ್ಲಿಗೆಯ ಸ್ವಗತ!


ಗೋಣಿಚೀಲದ ಒಳಗೆ ತುಂಬಿ ತುರುಕಿದರೆನ್ನ
ಬಸ್ಸುಗಳ ಮೇಲುಗಡೆ ಪೇರಿಸಿದರು;
ಬಂತು ಬೆಂಗಳೂರೆಂದು ಎತ್ತಿ ರಸ್ತೆಗೆ ಹಾಕಿ
ಮಲ್ಲಿಗೆಗೆ ರೇಟೆಸ್ಟು ಎನ್ನುತಿಹರು

ನೂರು ಗೋಣಿಗೆ ಕೊಡು; ಇಪ್ಪತ್ತು ನಿನಗೆ
ಎಂದೊಂದು ವ್ಯವಹಾರ ಕುದುರಿಸಿದರು
ದರದರನೆ ಎಳದೆನ್ನ ಸಂತೆಪೇಟೆಗೆ ತಂದು
ಕೇಜಿಗಿನ್ನೂರೆಂದು ಕೂಗುತಿಹರು.

ಸಣ್ಣ ಹುಡುಗಿಯು ತನ್ನ ಮೃದುವಾದ ಕೈಯ್ಯಲ್ಲಿ
ಎತ್ತಿ ನನ್ನನು ಚುಚ್ಚಿ ಬಂಧಿಸಿದರು
ಮೊಳಕೆ ಮೂವತ್ತಂದು ಹದಿನಾರು ಕಂಠದಲಿ
ಕೂಗಿ ನನ್ನನು ಮಾರಿ ಖುಷಿಪಟ್ಟರು.

ನನ್ನ ಸಂಬಂಧಿಕರು ದೇವರಿಗೆ ಮುಡಿಪಂತೆ
ನಾನಿರುವೆ ಮಂಚದಲಿ ಸುಖಿಪರಾರು?
ಇನ್ನೆಷ್ಟು ಗಳಿಗೆಯೋ ನನ್ನ ಜೀವನಯಾತ್ರೆ
ನನ್ನ ಕನಸನು ಅರಿತ ಜೀವನಾರು?

Tuesday, April 9, 2013

ಬೆಟ್ಟ ಕಣಿವೆಯ ನಡುವೆ ಪುಟ್ಟ ದಿಬ್ಬದ ಬಳಿ


ಬೆಟ್ಟ ಕಣಿವೆಯ ನಡುವೆ ಪುಟ್ಟ ದಿಬ್ಬದ ಬಳಿಯೆ
ಚಿಕ್ಕ ಕಲ್ಲಿನ ರಾಶಿ ಏಕೆ ಗೊತ್ತೇ?
ಅವಳ ನಾ ಕಾದಿರುವ ಗುರುತನ್ನೇ ಇಟ್ಟಿರುವೆ
ಕಲ್ಲು ಹೆಚ್ಚಾದಂತೆ ಹೆಚ್ಚು ಮುತ್ತೆ!

ನಾ ದಿನವು ವೇಗದಲಿ ಬೆಟ್ಟ ದಿಬ್ಬದಿ ಕುಳಿತು
ಕಾಯುವುದು ಅವಳಿಗೆ ತಿಳಿದಂತಿದೆ
ಮುತ್ತ ಹೆಕ್ಕುವ ನೆಪದಿ ತಡವಾಗಿಯೇ ಬಂದು
ಕಲ್ಲುಗಳ ಎಣಿಸುವಳು ಮುತ್ತನಿಕ್ಕಿ!

ಒಂದೊಮ್ಮೆ ಬಾರದಿರೆ ಮೊದಲ ಹನಿ ಬಿದ್ದಂತೆ
ದಿಬ್ಬ ಮಣ್ಣಿನ ಮೇಲೆ ನೋಡಿ ಗುರುತು
ಮಾರನೆಯ ದಿನದಲ್ಲಿ ಅಳುವ ಮುಖಮಾಡುವಳು
ಮತ್ತೆ ಕರಗುವೆ ನಾನು; ಲೆಕ್ಕ ಮುತ್ತು!

ಈ ಬೆಟ್ಟ ಈ ದಿಬ್ಬ ಈ ಎರಡು ಮನಸುಗಳ
ಮುತ್ತನ್ನೆ ತುಂಬಿರುವ ಈ ಕಲ್ಗಳು
ನಾಳೆಯಾ ಬಣ್ಣಗಳ ಆಸೆಗಳ ಹೊತ್ತಿರುವ
ಗುಟ್ಟು ಹೇಳದೆ ಉಳಿವ ಆ ಕಂಗಳು!

ಪ್ರಕೃತಿಗೂ ಪುರುಷನಿಗು ಈ ನೆಪಗಳು
ಅವಳು ನಾನೇ ಆಗಿ ನಾನು ಅವಳು!

ಪುಟ್ಟನ ಹಾಡು


ಬಾನಲಿ ಏರುತ ಮೋಡದಿ ಅಡುಗುತ
ಆಡುವ ಚಂದಿರ ನನಗಿಷ್ಟ
ಏತಕೆ ಸುಮ್ಮನೆ ಮಂಜಿಗೆ ತಿರುಗುವೆ
ಎಂದೆನೆ ಹೇಳಿದ ನಂ ಪುಟ್ಟ!

ಪುಟ್ಟನಿಗೇಕೋ ಚಂದಿರ ಕಾಣದೆ
ಹೋದರೆ ರಾತ್ರಿಗೆ ಹಸಿವಿಲ್ಲ
ಬೆಳಗಿನ ಜಾವದಿ ಬೇಗನೆ ಏಳುವ
ಸೂರ್ಯನ ಪ್ರೀತಿ ಸಾಲಲ್ಲ

ದಿನ ದಿನ ಹಿಗ್ಗುವ ಚಂದಿರ ಬೇಕು
ಕುಗ್ಗುವ ಚಂದಿರ ಬೇಡದವ!
ಸಿಟ್ಟದು ಬರುವುದು ಮೂಗಿನ ಮೇಲೆ
ತಿಂದರೆ ಚಂದ್ರನ ಮೋಡದವ.

ಪುಟ್ಟನ ಸುತ್ತಲೂ ಚಂದ್ರನು ಸುತ್ತುವ
ಪುಟ್ಟನ ಕಣ್ಣಲೆ ನಕ್ಷತ್ರ!
ಪುಟ್ಟನೆ ಭೂಮಿಯು ಆ ಚಂದಿರನಿಗೆ
ಪುಟ್ಟನು ಚಂದಿರನಾ ಮಿತ್ರ.

ಮನೆಗೆ ಮಲ್ಲಿಗೆ ಬಂತು


ಅಂಗಳದ ತುಂಬಾ ನಗುತಿದ್ದ ನಕ್ಷತ್ರ
ಬೆವರಿ ಬಿದ್ದಂತಿತ್ತು ಬೆಳಗಿನಲ್ಲೆ
ಈ ಕಾಡು ಮಲ್ಲಿಗೆಯ ಹೂವುಗಳು ಇಲ್ಲೇಕೆ
ಬಂತೆಂದು ಕೇಳಿದಳು ನನ್ನ ಮಲ್ಲೆ

ಕಾಲುದಾರಿಯ ಹಿಡಿದು ಮನೆಯಿಂದ ಹೊರಟರೆ
ಮೈಲುಗಳ ನಡೆಯಲಿದೆ ಕಾಡಿನಲ್ಲಿ
ಬೆಟ್ಟಗುಡ್ಡವ ಇಳಿದು ಸುತ್ತುತ್ತ ಹೋದರೆ
ಏನು ಸಿಕ್ಕಿತು ಹೇಳು ನಡಿಗೆಯಲ್ಲಿ?

ಕಾಡಿನಾ ಹಾದಿಗಳ ಈ ಮಲ್ಲೆ ಮರೆಸೀತು
ಯಾರಿಡದ ಗೊಬ್ಬರಕೆ ಮುಷ್ಟಿ ಹೂವು
ನಡೆಯುವುದ ಕಲಿಸೀತು; ಕಾಡನ್ನೆ ಉಳಿಸೀತು
ಮರೆಯಬಹುದೇ ಹೀಗೆ ಕಾಲುನೋವು!

ಹೀಗೆ ನಡೆಯುತ ಬರಲು; ತಂದೆ ನಾ ಈ ಲತೆಯ
ಕಾಡಿಂದ ಮನೆವರೆಗೆ ಬಂದಳವಳು
ನಾಡಿನಲು ಸೊಕ್ಕಿದಳು; ಸೊಕ್ಕಿ ಸಿಂಗರದಿಂದ
ಬೆಳಗು ಹೂವರಳಿಸಿ ನಕ್ಕಳವಳು!

ನಾಡು ಕಾಡೇನಿಲ್ಲ ಹೂಗಳಿಗೆ; ಪರಿಮಳಕೆ
ಬೇಲಿ ಕಟ್ಟುವುದೇಕೆ ಈ ಪ್ರೇಮಕೆ?
ನಿನ್ನ ಹಾಗೆಯೆ ನಗುವ ಈ ಪುಟ್ಟ ಮಲ್ಲೆ ಹೂ
ನಗುತಲಿರುವಳು ಹೀಗೆ; ನುಡಿ ಕೋರಿಕೆ.

ಶಿವರಾತ್ರಿಯ ಹಾಡು.


ನಿಲುವನೋ ಮನದೊಳಗೆ ಹರ-ತಾ
ಗೆಲುವನೋ ಜಗದೊಲವನು
ಚೆಲುವೆ ಗಿರಿಜೆಯ ಮನವ ಕದ್ದವ
ಬಿಲ್ವಕೇ ನಮಗೊಲಿವನು!

ನಂದಿವಾಹನನೀತನನು ಆ-
ನಂದದಿಂದಲಿ ಭಜಿಸಲು
ಬಂದು ಕಳೆಯುವ ಮನದ ಕ್ಷೇಷವ
ಇಂದಿನಾ ದಿನ ಹಾಡಲು

ನಾದದುಂದುಭಿ ಮೊಳಗುವೆಡೆಯಲಿ
ಮೋದದಿಂದಲಿ ಕುಣಿವನು
ಕಾಯ್ದು ಕರುಣದಿ ಪೊರೆವನೈ-ಕ
ಲ್ಲಾದ ರೂಪದಿ ತೋರ್ಪನು.

ಶಿವನು ಚರ್ಮಾಂಬರನು ಸಕಲರ
ಭವದ ಬಂಧನ ಕಳೆಯುಲಿ
ಶಿವನ ನುತಿಸುತ ದಿನವ ಕಳೆಯಲು
ಭುವನ ಅನುದಿನ ಬೆಳಗಲಿ.